ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರ | ಆಸ್ತಿ ಇ–ಖಾತೆ: ನಗರಸಭೆ ಪೌರಾಯುಕ್ತರ ಹೆಸರಲ್ಲಿ ₹1.50 ಲಕ್ಷ ವಂಚನೆ

Published 8 ಫೆಬ್ರುವರಿ 2024, 4:50 IST
Last Updated 8 ಫೆಬ್ರುವರಿ 2024, 4:50 IST
ಅಕ್ಷರ ಗಾತ್ರ

ಕನಕಪುರ: ಕನಕಪುರ ನಗರಸಭೆ ಪೌರಾಯುಕ್ತರ ಹೆಸರು ಬಳಸಿಕೊಂಡ ವಂಚಕನೊಬ್ಬ ಇ-ಖಾತೆ ಮಾಡಿಕೊಡಿಸಿಕೊಡುವುದಾಗಿ ನಂಬಿಸಿ ಮೂವರಿಂದ ₹1.50 ಲಕ್ಷ ಹಣ ಪಡೆದು ವಂಚಿಸಿದ್ದಾನೆ. ನಗರಸಭೆ ಪೌರಾಯುಕ್ತ ಬುಧವಾರ ಪುರ ಪೊಲೀಸ್‌ಠಾಣೆಗೆ ದೂರು ನೀಡಿದ್ದಾರೆ. 

ಬೆಂಗಳೂರಿನ ಬನಶಂಕರಿಯ 2ನೇ ಹಂತದ ಟೀಚರ್ಸ್ ಕಾಲೋನಿ ಎಸ್‌. ಹೊನ್ನಮ್ಮ, ಡಾ. ಕೆ.ಎಲ್‌.ಶಿವಪ್ರಸಾದ್‌ ಹಾಗೂ ಯಡಿಯೂರಿನ ನಿವಾಸಿ ನಂಜಮ್ಮಣ್ಣಿ ಎಂಬುವರು ವಂಚನೆಗೊಳಗಾದವರು.

ಮೂವರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ಕನಕಪುರದಲ್ಲಿರುವ ತಮ್ಮ ಕುಟುಂಬದ ಆಸ್ತಿಗೆ ಸಂಬಂಧಿಸಿದಂತೆ ಇ– ಖಾತೆ ಮಾಡಿಸಲು ಫೆ. 5ರಂದು ಕನಕಪುರಕ್ಕೆ ಬಂದಿದ್ದರು.

ನಗರಸಭೆಯಲ್ಲಿ ಇ–ಖಾತೆ ಕುರಿತು ವಿಚಾರಿಸುತ್ತಿದ್ದಾಗ ಅವರ ಬಳಿಗೆ ಬಂದ ಹರೀಶ್ ಎಂಬಾತ ತಾನು ನಗರಸಭೆ ಪೌರಾಯುಕ್ತರ ಪರಿಚಯ ಹೇಳಿದ್ದಾನೆ. ಆಸ್ತಿಯ ಇ-ಖಾತೆ ಮಾಡಿಸಿಕೊಡುವುದಾಗಿ ಭರವಸೆ ನೀಡಿ, ಅದರ ಶುಲ್ಕವಾಗಿ ₹1.50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾನೆ.

ನಗರಸಭೆಯ ಪೌರಾಯುಕ್ತ ಎಂದು ಹೇಳಿ ಶಿವಪ್ರಸಾದ್ ಅವರ ಮೊಬೈಲ್‌ಗೆ ವ್ಯಕ್ತಿಯೊಬ್ಬನಿಂದ ಹರೀಶ್‌ ಕರೆ ಮಾಡಿಸಿದ್ದಾನೆ. ನಿಮ್ಮ ಇ–ಖಾತೆ ಕೆಲಸಕ್ಕೆ ಹರೀಶ್‌ಗೆ ₹1.43 ಲಕ್ಷ ಕೊಡುವಂತೆ ಹೇಳಿದ್ದಾನೆ. ಹೊನ್ನಮ್ಮ ತಮ್ಮ ಬಳಿ ಇದ್ದ ₹9 ಸಾವಿರ ಹಣವನ್ನು ಹರೀಶನಿಗೆ  ನೀಡಿದ್ದಾರೆ. 

ಉಳಿದ ಹಣವನ್ನು ಫೆ.5 ರಂದು ಬೆಂಗಳೂರಿನ ಬಿಬಿಎಂಪಿ ಕಚೇರಿಯ ಬಳಿ ಹರೀಶನಿಗೆ ನೀಡುವಂತೆ ನಕಲಿ ಪೌರಾಯುಕ್ತ ಸೂಚಿಸಿದ್ದಾನೆ. ಅದರಂತೆ ಉಳಿದ ₹1.34 ಲಕ್ಷವನ್ನು ಹರೀಶ್‌ಗೆ ತಲುಪಿಸಿದ್ದಾರೆ. ಖಾತೆ ಪತ್ರಗಳನ್ನು ತಾನೇ ಖುದ್ದಾಗಿ ಮನೆಗೆ ತಂದುಕೊಡುವುದಾಗಿ ಹೇಳಿದ ಹರೀಶ್ ಹಣದೊಂದಿಗೆ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಅನುಮಾನಗೊಂಡ ಮೂವರೂ ಮರುದಿನ ಕನಕಪುರ ಪೌರಾಯುಕ್ತರ ಬಳಿ ತೆರಳಿ ನಡೆದ ವಿಷಯ ತಿಳಿಸಿದಾಗ ತಾವು ಮೋಸ ಹೋಗಿರುವುದು ತಿಳಿದಿದೆ. ವಂಚನೆಗೊಳಗಾದ ಮೂವರು ಕನಕಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬೆಂಗಳೂರಿನ ಬಿಬಿಎಂಪಿ ಮತ್ತು ಕನಕಪುರ ನಗರಸಭೆಯ ಸಿಸಿಟಿವಿ ಕ್ಯಾಮೆರಾದಲ್ಲಿ ವಂಚಕ ಹರೀಶ್ ಚಿತ್ರ ಸ್ಪಷ್ಟವಾಗಿ ಸೆರೆಯಾಗಿದೆ. ಪೌರಾಯುಕ್ತರು ಸಿಸಿಟಿವಿ ದೃಶ್ಯವನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. 

ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಆರೋಪಿಯ ಚಿತ್ರ 
ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಆರೋಪಿಯ ಚಿತ್ರ 

ಹಣ ಕೊಡಬೇಡಿ

ನಗರಸಭೆಯಲ್ಲಿ ಕೆಲಸ ಮಾಡಿಸಲು ಹಣವನ್ನು ಯಾರಿಗೂ ಹಣ ಕೊಡಬೇಕಿಲ್ಲ ಸಾರ್ವಜನಿಕರ ಕೆಲಸವನ್ನು ಉಚಿತವಾಗಿ ಮಾಡಿಕೊಡಲಾಗುತ್ತದೆ ತಮ್ಮ ಅಥವಾ ಕಚೇರಿಯ ನೌಕರರ ಸಿಬ್ಬಂದಿಯಾಗಲೀ ಇಥವಾ ಯಾರೇ ಆಗಲಿ ನನ್ನ ಹೆಸರಿನಲ್ಲಿ ಅಥವಾ ಸಿಬ್ಬಂದಿಯ ಹೆಸರಿನಲ್ಲಿ  ಹಣ ಕೇಳಿದರೆ ಕೊಡಬೇಡಿ ಎಂದು ಕನಕಪುರ ನಗರಸಭೆಯ ಪೌರಾಯುಕ್ತ ಮಹದೇವ್ ತಿಳಿಸಿದ್ದಾರೆ. ಈ ಹಿಂದೆಯೂ ವಂಚನೆ ಪೌರಾಯುಕ್ತರ ಹೆಸರಿನಲ್ಲಿ ವಂಚಿಸಿರುವ ಹರೀಶ್ ಈ ಹಿಂದೆಯೂ ಎರಡು–ಮೂರು ಪ್ರಕರಣಗಳಲ್ಲಿ ಸಾರ್ವಜನಿಕರನ್ನು ವಂಚಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಜಾಗ ಹೋಗಿರುವುದಕ್ಕೆ ಹಣ ಪಡೆಯಲು ತನಗೆ ಎಸಿ ಗೊತ್ತಿದ್ದಾರೆ. ಅವರಿಗೆ ನೀವು ಹಣ ಕೊಟ್ಟರೆ ನಿಮ್ಮ ಕೆಲಸ ಆಗುತ್ತೆ ಎಂದು ಹಣ ಪಡೆದು ವಂಚಿಸಿದ್ದಾನೆ. ಅಂತೆಯೇ ಕೃಷಿ ಇಲಾಖೆಯಲ್ಲಿ ಸರ್ಕಾರದ ಸವಲತ್ತು ಸಹಾಯಧನ ಪಡೆಯಲು ಎಡಿ ಅವರಿಂದ ನಿಮ್ಮ ಕೆಲಸ ಮಾಡಿಸುತ್ತೇನೆ ಎಂದು ಹೇಳಿ ರೈತರೊಬ್ಬರನ್ನು ವಂಚಿಸಿದ್ದಾರೆ ಎನ್ನಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT