ರಾಮನಗರ: ‘ಸಮಾಜದಲ್ಲಿ ತಾಂಡವಾಡುತ್ತಿರುವ ಭ್ರಷ್ಟಾಚಾರವನ್ನು ತೊಲಗಿಸಿ ಅಭಿವೃದ್ಧಿಗೆ ಕೈ ಜೋಡಿಸಲು ಎಲ್ಲರೂ ಪಣ ತೊಡಗಬೇಕು. ಧರ್ಮವನ್ನು ಯಾರು ರಕ್ಷಿಸುತ್ತಾರೋ ಅವರನ್ನು ಧರ್ಮ ರಕ್ಷಿಸುತ್ತದೆ’ ಎಂದು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅನಿತಾ ಎನ್.ಪಿ. ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ರಾಮನಗರ ಜಿಲ್ಲಾ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರದ ವಿರುದ್ಧ ಗುರುವಾರ ಹಮ್ಮಿಕೊಂಡಿದ್ದ ‘ಜಾಗೃತಿ ಅರಿವು ಸಪ್ತಾಪ-2023’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘2023ರ ಅಂಕಿಅಂಶಗಳ ಪ್ರಕಾರ, ವಿಶ್ವದ 180 ದೇಶಗಳ ಪೈಕಿ ಭಾರತವು ಭ್ರಷ್ಟಾಚಾರದಲ್ಲಿ 85ನೇ ಸ್ಥಾನದಲ್ಲಿದೆ. ಇದನ್ನು ಶೂನ್ಯಕ್ಕಿಳಿಸಬೇಕು. ಆ ನಿಟ್ಟಿನಲ್ಲಿ ಸರ್ಕಾರಿ ನೌಕರರು ಕಾನೂನಿಗೆ ಅನುಗುಣವಾಗಿ, ನಿಯಮ ಮೀರದಂತೆ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು. ವರ್ಷಾಂತ್ಯಕ್ಕೆ ಎಲ್ಲಾ ನೌಕರರು ತಮ್ಮ ಚರಾಸ್ತಿ ಮತ್ತು ಸ್ಥಿರಾಸ್ತಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು’ ಎಂದು ಸಲಹೆ ನೀಡಿದರು.
‘ಲೋಕಾಯುಕ್ತ ವ್ಯಾಪ್ತಿಗೆ ದೇಶದ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಗೌರವಧನ ಅಥವಾ ವೇತನ ಪಡೆಯುವ ಸಂಸ್ಥೆಗಳು, ರಾಜ್ಯಗಳಲ್ಲಿರುವ ಸಂಘ-ಸಂಸ್ಥೆಗಳು, ಇಲಾಖೆಗಳು, ಸರ್ಕಾರೇತರ ಸಂಸ್ಥೆಗಳು ಬರುತ್ತವೆ. ಎಲ್ಲಾ ಭ್ರಷ್ಟಾಚಾರ ಕಂಡುಬಂದರೆ, ಲೋಕಾಯುಕ್ತ ದಾಳಿ ನಡೆಸುತ್ತದೆ. ಸರ್ಕಾರದ ಕೆಲಸಕ್ಕೆ ಯಾರಾದರೂ ಲಂಚ ಕೇಳಿದರೆ ಸಾರ್ವಜನಿಕರು ದೂರು ನೀಡಬೇಕು’ ಎಂದರು.
‘ನಾವು ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ. ನಾವು ಹಿರಿಯರಿಂದ ಕಲಿತದ್ದನ್ನು ನಮ್ಮ ಮಕ್ಕಳಿಗೂ ಕಲಿಸಬೇಕು. ಮಕ್ಕಳಿಗೆ ನಮ್ಮ ದೇಶದ ಹೆಮ್ಮೆ ಮೂಡುವಂತೆ ಅವರನ್ನು ಬೆಳೆಸಬೇಕು. ಅವರ ಮನಸ್ಸು ಪರಿಶುದ್ಧವಾದ ಬಿಳಿಯ ಹಾಳೆಯಂತೆ. ನಾವು ಒಳ್ಳೆಯದ್ದನ್ನು ಬರೆದರೆ ಒಳ್ಳೆಯದಾಗಿರುತ್ತದೆ. ಅವರು ನಮ್ಮನ್ನು ಅನುಸರಿಸುತ್ತಾರೆ. ನಮ್ಮ ಮಕ್ಕಳು ನಮ್ಮ ರೀತಿ ಒಳ್ಳೆಯ ಗುಣಗಳನ್ನು ಕಲಿಯಬೇಕೆಂದರೆ, ಅವರ ಮನಸ್ಸಿನಲ್ಲಿ ಒಳ್ಳೆಯ ರೀತಿ ಇರಬೇಕು’ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಗ್ವಿಜಯ್ ಬೋಡ್ಕೆ ಮಾತನಾಡಿ, ‘ಸರ್ಕಾರಿ ನೌಕರರಾದ ನಮಗೆ ಸಾರ್ವಜನಿಕರ ಸೇವೆಯೇ ಮೊದಲ ಆದ್ಯತೆಯಾಗಬೇಕು. ಯಾರ ಮೇಲೂ ಅಧಿಕಾರ ಚಲಾಯಿಸದೆ, ಜನಸಾಮಾನ್ಯರ ಕೆಲಸಗಳನ್ನು ನಿಗದಿತ ಅವಧಿಯೊಳಗೆ ಮಾಡಿಕೊಡಬೇಕು. ನೌಕರರ ಮನಸ್ಥಿತಿ ಬದಲಾವಣೆಯಾದಾಗ ಸಮಾಜವೂ ಬದಲಾಗುತ್ತದೆ. ಅಧಿಕಾರಿಗಳು ಸಾರ್ವಜನಿಕರ ಬಳಿ ಹಣ ಪಡೆಯದೇ ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು’ ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಲೋಕಾಯುಕ್ತದ ವಿಶೇಷ ಅಭಿಯೋಜಕ ಬಿ.ಸಿ. ವೆಂಕಟೇಶ್ ಮಾತನಾಡಿ, ‘ಕೇಂದ್ರ ಸರ್ಕಾರದಿಂದ ಕೇಂದ್ರ ವಿಚಕ್ಷಣ ಆಯೋಗವು (ಸಿವಿಸಿ) ಸರ್ಕಾರದಲ್ಲಿ ನಡೆಯುವ ಭ್ರಷ್ಟಾಚಾರವು ತಡೆಗಟ್ಟುವ ನಿಟ್ಟಿನಲ್ಲಿ ಇರುವ ಸ್ವಾಯತ್ತ ಸಂಸ್ಥೆಯಾಗಿದೆ. ಭ್ರಷ್ಟಾಚಾರದ ವಿರುದ್ಧ ಹೋರಾಡುವುದಕ್ಕೆ ಹಲವಾರು ಕಾರ್ಯಕ್ರಮಗಳನ್ನು ಪ್ರತಿ ವರ್ಷ ಆಯೋಜಿಸುತ್ತಿದೆ’ ಎಂದರು.
‘ಭ್ರಷ್ಟಾಚಾರವನ್ನು ತಡೆಗಟ್ಟಲು ಕಚೇರಿಗಳಲ್ಲಿ ಆನ್‌ಲೈನ್ ಸೇವೆ ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ನ್ಯಾಯಾಲಯದಲ್ಲಿ ಭ್ರಷ್ಠ ಅಧಿಕಾರಿಗಳಿಗೆ ಹೆಚ್ಚಿನ ಶಿಕ್ಷೆ ಹಾಗೂ ಸಾರ್ವಜನಿಕರಿಗೆ ಭ್ರಷ್ಠಾಚಾರದ ಕುರಿತು ತಿಳಿವಳಿಕೆ ಮೂಡಿಸಬೇಕು. ಆಗ ಮಾತ್ರ ಭ್ರಷ್ಠಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯ. ಸರ್ಕಾರಿ ಅಧಿಕಾರಿಗಳು ತಾವು ಪಡೆಯುವ ವೇತನದಲ್ಲಿಯೇ ಉತ್ತಮ ಜೀವನ ನಡೆಸಬೇಕು. ಲಂಚಕ್ಕೆ ಕೈ ಚಾಚಬಾರದು’ ಎಂದು ಹೇಳಿದರು.
ಲೋಕಾಯುಕ್ತ ಉಪ ಪೊಲೀಸ್ ಅಧೀಕ್ಷಕ ಎಂ.ಆರ್. ಗೌತಮ್ ಅವರು ಭ್ರಷ್ಟಾಚಾರದ ವಿರುದ್ಧದ ಜಾಗೃತಿ ಸಪ್ತಾಹದ ಪ್ರತಿಜ್ಞಾ ವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚಿಕ್ಕ ಸುಬ್ಬಯ್ಯ, ಲೋಕಾಯುಕ್ತ ಡಿಎಸ್‌ಪಿ ಸುಧೀರ್, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.
ರಸ್ತೆಯಲ್ಲಿ ಜಾಗೃತಿ ಜಾಥಾ: ರಾಮನಗರದ ಐಜೂರು ವೃತ್ತದಲ್ಲಿ ರಾಮನಗರ ಜಿಲ್ಲಾ ಲೋಕಾಯುಕ್ತ ಮತ್ತು ಜಿಲ್ಲಾ ನ್ಯಾಯಾಲಯದ ವತಿಯಿಂದ ‘ಜಾಗೃತಿ ಅರಿವು ಸಪ್ತಾಹ– 2023’ ಅಂಗವಾಗಿ ರಸ್ತೆ ಜಾಥಾ ನಡೆಯಿತು. ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಎನ್.ಪಿ. ಕೋಪರ್ಡೆ ಮತ್ತು ಲೋಕಾಯುಕ್ತ ಅಧೀಕ್ಷಕ ಕ್ಯಾಪ್ಟನ್ ಅಯ್ಯಪ್ಪ ಜಾಥಾಗೆ ಚಾಲನೆ ನೀಡಿದರು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿ ಭ್ರಷ್ಟಾಚಾರ ವಿರೋಧಿ ಘೋಷಣೆಗಳನ್ನು ಕೂಗಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.