ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇ l ಬೈಕ್, ಆಟೊಗೆ ನಿಷೇಧಕ್ಕೆ ಆಕ್ರೋಶ

ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇ l ದೇಶದಲ್ಲೇ ಮೊದಲ ಪ್ರಯೋಗ
Last Updated 10 ಜನವರಿ 2023, 6:58 IST
ಅಕ್ಷರ ಗಾತ್ರ

ರಾಮನಗರ: ಹತ್ತು ಪಥಗಳ ಬೆಂಗಳೂರು–ಮೈಸೂರು ಹೆದ್ದಾರಿ ಕಾಮಗಾರಿ ಮುಕ್ತಾಯಗೊಂಡ ಬಳಿಕ ಎಕ್ಸ್‌ಪ್ರೆಸ್ ವೇನಲ್ಲಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳಿಗೆ ನಿಷೇಧ ಇರಲಿದ್ದು, ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಿಂದ ವಿರೋಧ ವ್ಯಕ್ತವಾಗುತ್ತಿದೆ.

ಹೆದ್ದಾರಿಯಲ್ಲಿನ ಮಧ್ಯದ ಆರು ಪಥಗಳು ಎಕ್ಸ್‌ಪ್ರೆಸ್‌ವೇಗೆ ಮೀಸಲಾಗಿವೆ. ಇಲ್ಲಿ ವಾಹನಗಳ ವೇಗ ಹೆಚ್ಚಳ ಹಾಗೂ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಸಲುವಾಗಿ ಬೈಕ್‌, ಆಟೊ, ಟ್ರ್ಯಾಕ್ಟರ್‌ ಮೊದಲಾದ ವಾಹನಗಳಿಗೆ ನಿರ್ಬಂಧ ಹೇರಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದ್ದು, ಇದಕ್ಕೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸಹ ಸಮ್ಮತಿ ಸೂಚಿಸಿದ್ದಾರೆ.

ಸದ್ಯ ಹೆದ್ದಾರಿಯಲ್ಲಿ ಅಲ್ಲಲ್ಲಿ ಇನ್ನೂ ಸರ್ವೀಸ್ ರಸ್ತೆ ಕಾಮಗಾರಿಗಳು ನಡೆದಿವೆ. ಈ ಎಲ್ಲ ಕಾಮಗಾರಿ ಮುಕ್ತಾಯಗೊಂಡ ಬಳಿಕವಷ್ಟೇ. ಈ ‘ನಿಷೇಧ’ ಆದೇಶವು ಜಾರಿಗೆ ಬರಲಿದೆ. ಈ ನಿರ್ಧಾರವು ಅನುಷ್ಠಾನಕ್ಕೆ ಬಂದಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಿಕೊಂಡ ದೇಶದ ಮೊದಲ ಹೆದ್ದಾರಿ ಇದಾಗಲಿದೆ.

ಜನಸಾಮಾನ್ಯರ ವಿರೋಧ: ಹೊಸ ಹೆದ್ದಾರಿಯಲ್ಲಿ ಒಂದು ವೇಳೆ ದ್ವಿಚಕ್ರ ವಾಹನಗಳ ಓಡಾಟಕ್ಕೆ ನಿಷೇಧ ಹೇರಿದಲ್ಲಿ ಅದು ಶ್ರೀಮಂತರ ಹೆದ್ದಾರಿ ಆಗಲಿದೆ. ಹೆದ್ದಾರಿ ಅಭಿವೃದ್ಧಿಯಿಂದ ಬಡಜನರಿಗೆ ಯಾವ ಉಪಯೋಗವೂ ಆಗದು ಎಂಬುದು ಸಾರ್ವಜನಿಕರ ಆಕ್ಷೇಪ.

‘ಈಗಾಗಲೇ ಹೆದ್ದಾರಿಗಾಗಿ ನಮ್ಮ ಊರಿನ ಜಮೀನು, ರಸ್ತೆ ಬದಿಯ ಮನೆಗಳನ್ನು ಕಳೆದುಕೊಂಡಿದ್ದೇವೆ. ಹೀಗಿರುವಾಗ ಸ್ಥಳೀಯರಿಗೆ ನಮ್ಮದೇ ಊರಿನ ಎಕ್ಸ್‌ಪ್ರೆಸ್‌ವೇನಲ್ಲಿ ಓಡಾಟಕ್ಕೆ ನಿಷೇಧ ಹೇರುವುದು ಸರಿಯಲ್ಲ. ಕೇವಲ ಶ್ರೀಮಂತರು– ಉದ್ಯಮಿಗಳ ಓಡಾಟಕ್ಕಾಗಿ ಜನರ ತೆರಿಗೆ ಹಣದಲ್ಲಿ ಈ ಹೆದ್ದಾರಿ ಕಟ್ಟಿಲ್ಲ ಎಂಬುದನ್ನು ಅಧಿಕಾರಿಗಳು ಅರ್ಥಮಾಡಿಕೊಳ್ಳಬೇಕು’ ಎನ್ನುತ್ತಾರೆ ರಾಮನಗರ ನಿವಾಸಿ ಕಿರಣ್.

ಬೆಂಗಳೂರಿನಿಂದ ರಾಮನಗರ, ಚನ್ನಪಟ್ಟಣ, ಮಂಡ್ಯಕ್ಕೆ ಬೈಕ್‌ಗಳಲ್ಲಿ ಸಾಕಷ್ಟು ಮಂದಿ ಓಡಾಡುತ್ತಾರೆ. ಅಂತಹವರ ಓಡಾಟಕ್ಕೆ ಎಕ್ಸ್‌ಪ್ರೆಸ್‌ವೇನಲ್ಲಿ ಅವಕಾಶ ನೀಡಬೇಕು. ಇತರೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇರುವಂತೆಯೇ ಇಲ್ಲಿಯೂ ಇಂತಹ ವಾಹನಗಳಿಗೆ ಟೋಲ್‌ ಮುಕ್ತ ಓಡಾಟಕ್ಕೆ ಅವಕಾಶ ನೀಡಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ.

ಪ್ರಾಧಿಕಾರದ ವಾದವೇನು?

ಹೆದ್ದಾರಿಗಳಲ್ಲಿ ಸಂಭವಿಸುವ ಅಪಫಾತಗಳ ಪೈಕಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳದ್ದು ಹೆಚ್ಚಿನ ಪಾಲು ಇದೆ.

ಈ ಮಾದರಿ ವಾಹನಗಳ ಸವಾರರು ಸರಿಯಾಗಿ ಲೇನ್‌ಗಳಲ್ಲಿ ಚಲಿಸುವುದಿಲ್ಲ. ಆಗಾಗ್ಗೆ ದೊಡ್ಡ ಮಾದರಿ ವಾಹನಗಳಿಗೆ ಅಡ್ಡಬರುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ಇದರಿಂದ ಉಳಿದ ವಾಹನಗಳ ವೇಗವೂ ಕಡಿಮೆ ಆಗಲಿದೆ. ಹೀಗಾಗಿ ಎಕ್ಸ್‌ಪ್ರೆಸ್‌ ವೇನಲ್ಲಿ ಇವುಗಳಿಗೆ ನಿಷೇಧ ಹೇರಿ, ಸರ್ವೀಸ್ ರಸ್ತೆಗಳಲ್ಲಿ ಮುಕ್ತ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು ಎನ್ನುತ್ತಾರೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT