ಸೋಮವಾರ, ಆಗಸ್ಟ್ 2, 2021
26 °C
ಆಮರಣಾಂತ ಉಪವಾಸದ ಎಚ್ಚರಿಕೆ

ಭಾರ್ಗಾವತಿ ಕೆರೆ ಉಳಿವಿಗೆ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ಭಾರ್ಗಾವತಿ ಕೆರೆಗೆ ಹರಿಯುತ್ತಿರುವ ಒಳಚರಂಡಿ ಕಲುಷಿತವನ್ನು ಕೂಡಲೇ ನಿಲ್ಲಿಸಬೇಕು. ಆ. 2ರೊಳಗೆ ಮಲಿನಗೊಂಡಿರುವ ಕೆರೆಯಲ್ಲಿನ ಹೂಳು ತೆಗೆದು ಶುದ್ಧೀಕರಿಸಬೇಕು. ಇಲ್ಲವಾದರೆ ಆ. 3ರಂದು ತಹಶೀಲ್ದಾರ್ ಕಚೇರಿ ಮುಂದೆ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಕೆಂಪೇಗೌಡರ ಗುರುಮಠ ಜಡೇದೇವರ ಮಠಾಧ್ಯಕ್ಷ ಇಮ್ಮಡಿ ಬಸವರಾಜ ಸ್ವಾಮೀಜಿ ಎಚ್ಚರಿಸಿದರು.

ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ, ಭಾರ್ಗಾವತಿ ಕೆರೆ ಉಳಿಸಿ ಹೋರಾಟ ಸಮಿತಿ, ನೇತೇನಹಳ್ಳಿ, ಉಡುವೆಗೆರೆ, ಪುರ, ಪರಂಗಿಚಿಕ್ಕನಪಾಳ್ಯ, ಕೋಡಿಮಠದ ಅಚ್ಚುಕಟ್ಟುದಾರರು, ಬೆಸ್ತರ ಸಂಘ, ಕನ್ನಡ ಸಹೃದಯ ಬಳಗ, ಪತ್ರಕರ್ತರು, ಪರಿಸರವಾದಿಗಳ ಸಹಯೋಗದಲ್ಲಿ ಶನಿವಾರ ಕೆರೆ ವೀಕ್ಷಿಸಿ ಹೋರಾಟಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.

ಪಟ್ಟಣದ ಒಳಚರಂಡಿಯ ಕಲುಷಿತ 2014ರಿಂದಲೂ ಕೆರೆಗೆ ಹರಿಯುತ್ತಿದೆ. ಒಳಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿದೆ. ಸಕ್ಕಿಂಗ್ ಸೆಂಟರ್‌ನಿಂದ ಮಲಿನ ನೀರು ಶುದ್ಧೀಕರಣ ಘಟಕಕ್ಕೆ ಹರಿದಿಲ್ಲ. ಬದಲಾಗಿ ಕೆರೆಯ ಒಡಲು ಸೇರಿದೆ ಎಂದು ದೂರಿದರು.

ಜಲಮಾಲಿನ್ಯ ತಡೆಯದಿದ್ದರೆ ಬದುಕು ವ್ಯರ್ಥವಾಗಲಿದೆ. ಸರ್ಕಾರ ಮತ್ತು ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಂಡು ಕೆರೆಯ ಮಾಲಿನ್ಯ ತೊಳೆದು, ಮುಂದಿನ ಪೀಳಿಗೆಗೆ ಉಳಿಸಬೇಕು. ಜನಪ್ರತಿನಿಧಿಗಳು ಕೆರೆಯ ಪಾವಿತ್ರ್ಯ ಕಾಪಾಡಲು ಮುಂದಾಗಬೇಕು ಎಂದು ತಿಳಿಸಿದರು.

ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಹೊಸಪಾಳ್ಯ ಲೋಕೇಶ್ ಮಾತನಾಡಿ, ಕೆರೆ ಉಳಿಸಲು ಹಲವು ಹೋರಾಟ ನಡೆಸಿಕೊಂಡು ಬಂದಿದ್ದೇವೆ. ತಾಲ್ಲೂಕು ಆಡಳಿತ ಕಣ್ಣು ತೆರೆದಿಲ್ಲ. ಸ್ವಾಮೀಜಿ ಅವರ ನೇತೃತ್ವದಲ್ಲಿ ರೈತ ಸಂಘ ಮತ್ತು ಅಚ್ಚುಕಟ್ಟುದಾರರು ಆಮರಣಾಂತ ಉಪವಾಸ ಮಾಡುತ್ತೇವೆ ಎಂದರು.

ಬೆಸ್ತರ ಸಂಘದ ಶಿವಕುಮಾರ್ ಮಾತನಾಡಿ, ತೀರಾ ಕಡುಬಡತನದಲ್ಲಿ ಮೀನು ಮರಿ ಸಾಗಿ ಬದುಕು ಕಟ್ಟಿಕೊಂಡಿರುವ ಬೆಸ್ತರಿಗೆ ಈ ಕೆರೆ ತಾಯಿಯಂತಿದೆ. ಕೆರೆ ಉಳಿದರೆ ನಮ್ಮ ಬದುಕು ಉಳಿಯಲಿದೆ ಎಂದರು.

ಕನ್ನಡ ಸಹೃದಯ ಬಳಗದ ಪ್ರಧಾನ ಕಾರ್ಯದರ್ಶಿ ಬಿ.ಎಂ. ಮಾರಣ್ಣ, ನೇತೇನಹಳ್ಳಿ ಗ್ರಾ.ಪಂ. ಅಧ್ಯಕ್ಷ ಪುರುಷೋತ್ತಮ್ ಮಾತನಾಡಿದರು. ಬೆಸ್ತರ ಸಂಘದ ಯಾಲಕ್ಕಯ್ಯ, ಕೋಡಿ ಶನೇಶ್ವರಸ್ವಾಮಿ ದೇವಾಲಯದ ಮಾರಯ್ಯಸ್ವಾಮಿ, ರೈತ ಸಂಘದ ಜಿಲ್ಲಾ ಮುಖಂಡರಾದ ಪಟೇಲ್ ಹನುಮಂತಯ್ಯ, ಚಕ್ರಬಾವಿ ಗಿರೀಶ್, ತಾಲ್ಲೂಕು ಸಂಘದ ಪದಾಧಿಕಾರಿಗಳಾದ ಜಯಣ್ಣ, ಮುಖಂಡರಾದ ಬುಡೇನ್ ಸಾಬ್, ರವಿಕುಮಾರ್, ಕಾಂತರಾಜು, ರಂಗಸ್ವಾಮಯ್ಯ, ಸಿದ್ದಪ್ಪ, ವೆಂಕಟೇಶ್, ಸುರೇಶ್, ಪುನೀತ್, ಗಂಗಣ್ಣ, ರಮೇಶ್, ಗ್ರಾ.ಪಂ. ಸದಸ್ಯ ಶಿವಕುಮಾರ್ ಹಾಜರಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.