ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಡಾ ಹಗರಣ: ಬಿಜೆಪಿ–ಜೆಡಿಎಸ್ ಪಾದಯಾತ್ರೆಯಲ್ಲಿ ಅಪ್ಪ–ಮಕ್ಕಳ ಜುಗಲ್‌ಬಂದಿ!

ವಾರುಸುದಾರರ ನೇತೃತ್ವದ ಹೋರಾಟಕ್ಕೆ ಶಕ್ತಿ ತುಂಬುತ್ತಿರುವ ಮಾಜಿ ಮುಖ್ಯಮಂತ್ರಿಗಳು
Published : 5 ಆಗಸ್ಟ್ 2024, 4:21 IST
Last Updated : 5 ಆಗಸ್ಟ್ 2024, 4:21 IST
ಫಾಲೋ ಮಾಡಿ
Comments

ರಾಮನಗರ: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ–ಜೆಡಿಎಸ್ ಮೈತ್ರಿಕೂಟ ಬೆಂಗಳೂರಿನಿಂದ ಮೈಸೂರಿನವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಯು ಎರಡೂ ಪಕ್ಷಗಳ ಅಪ್ಪ–ಮಕ್ಕಳ ಜುಗಲ್‌ಬಂದಿಗೂ ಕಾರಣವಾಗಿದೆ.

ಇಬ್ಬರು ಮಾಜಿ ಮುಖ್ಯಮಂತ್ರಿಗಳು ಮತ್ತು ಅವರ ಮಕ್ಕಳು ಸರ್ಕಾರದ ವಿರುದ್ಧ ಹೋರಾಟಕ್ಕೆ ಇಳಿಯಲು ಈ ಪಾದಯಾತ್ರೆ ವೇದಿಕೆ ಒದಗಿಸಿದೆ.

ಒಂದೆಡೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಪುತ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಮತ್ತೊಂದೆಡೆ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಮತ್ತು ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಜೋಡೆತ್ತುಗಳಂತೆ ಪಾದಯಾತ್ರೆ ಮುನ್ನಡೆಸುತ್ತಿದ್ದಾರೆ.

ರಾಜ್ಯದಲ್ಲಿ ಎರಡೆರಡು ಸಲ ಮುಖ್ಯಮಂತ್ರಿ ಹುದ್ದೆಗೇರಿದ ಬಿಎಸ್‌ವೈ ಮತ್ತು ಎಚ್‌ಡಿಕೆ ಇಬ್ಬರೂ ಐದು ವರ್ಷ ಅವಧಿ ಪೂರ್ಣಗೊಳಿಸಲಾಗದೆ ಅನಿವಾರ್ಯ ಕಾರಣಕ್ಕೆ ಕೆಳಗಿಳಿದವರು. ಒಮ್ಮೆ ಇಬ್ಬರೂ ಸೇರಿ ಸರ್ಕಾರ ರಚಿಸಿ ಕಿತ್ತಾಡಿಕೊಂಡು ಬೇರೆಯಾಗಿ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ತಮ್ಮ ಅಸ್ತಿತ್ವಕ್ಕೆ ಒಂದಾಗಿದ್ದಾರೆ.

ಹಳೆಯದೆಲ್ಲವನ್ನು ಮರೆತಂತಿರುವ ಇಬ್ಬರೂ ತಮ್ಮ ರಾಜಕೀಯ ವಾರಸುದಾರರಾಗಿರುವ ಪುತ್ರರನ್ನು ನಾಯಕರನ್ನಾಗಿ ಪ್ರತಿಷ್ಠಾಪಿಸಿ ದಡ ಸೇರಿಸುವುದಕ್ಕೆ ಪಣ ತೊಟ್ಟಿದ್ದಾರೆ. ಮಕ್ಕಳ ನೇತೃತ್ವದಲ್ಲಿ ನಡೆಯುತ್ತಿರುವ ಸರ್ಕಾರದ ವಿರುದ್ಧದ ಪಾದಯಾತ್ರೆಯಲ್ಲಿ ಕಾಣಿಸಿಕೊಳ್ಳುತ್ತಾ, ಅವರ ನಾಯಕತ್ವಕ್ಕಾಗಿ ತಮ್ಮೆಲ್ಲಾ ಶಕ್ತಿಯನ್ನು ಧಾರೆ ಎರೆಯುತ್ತಿದ್ದಾರೆ.

ಪಾದಯಾತ್ರೆ ಮಾರ್ಗದಲ್ಲಿ ಭಾಷಣ ಮಾಡುವಾಗ ಬಿಎಸ್‌ವೈ ಮತ್ತು ಎಚ್‌ಡಿಕೆ ಒಬ್ಬರನ್ನೊಬ್ಬರು ಹೊಗಳಿಕೊಳ್ಳುತ್ತಲೇ, ತಮ್ಮ ಮಕ್ಕಳಿಗೆ ಮತ್ತು ಅವರ ನೇತೃತ್ವದ ಪಾದಯಾತ್ರೆಯನ್ನು ಬಾಯ್ತುಂಬಾ ಹೊಗಳುತ್ತಿದ್ದಾರೆ.

ಉಭಯ ನಾಯಕರ ವಾರುಸುದಾರರು ಸಹ ತಮ್ಮ ತಂದೆಯ ಹೋರಾಟ ಮತ್ತು ಸಾಧನೆಗಳನ್ನು ಮೆಲುಕು ಹಾಕುತ್ತಾ ಅದರಡಿ ತಮ್ಮ ನಾಯಕತ್ವ ಪ್ರತಿಷ್ಠಾಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

‘ರಾಜ್ಯದ ರಥ ಎಳೆಯುವ ಜೋಡಿ’

ವಿಜಯೇಂದ್ರ ಮತ್ತು ನಿಖಿಲ್ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆ ಭಾನುವಾರ ರಾಮನಗರ ತಲುಪಿದಾಗ ಮಾತನಾಡಿದ ಕುಮಾರಸ್ವಾಮಿ ‘ಮುಂದೆ ಕರ್ನಾಟಕದ ರಥ ಎಳೆಯುವ ಅಶ್ವಮೇಧಕ್ಕೆ ವಿಜಯೇಂದ್ರ ಮತ್ತು ನಿಖಿಲ್ ನೇತೃತ್ವದಲ್ಲಿ ಚಾಲನೆ ಕೊಟ್ಟಿದ್ದೇವೆ. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ಇಬ್ಬರ ನಾಯಕತ್ವಕ್ಕೆ ಸ್ಫೂರ್ತಿ ತುಂಬುವ ಮಾತುಗಳನ್ನಾಡಿದ್ದಾರೆ.  ಹಳೆ ಬೇರು ಹೊಸ ಚಿಗುರಿನ ರಾಜಕಾರಣ ರಾಜ್ಯದಲ್ಲೀಗ ಹಳೆ ಬೇರು ಮತ್ತು ಹೊಸ ಚಿಗುರಿನ ರಾಜಕಾರಣ ಶುರುವಾಗಿದೆ. ಹಿರಿಯ ರಾಜಕಾರಣಿಗಳಾದ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ರಾಜ್ಯದಲ್ಲಿ ಉನ್ನತ ಅಧಿಕಾರ ಅನುಭವಿಸಿದವರು. ಪಕ್ಷದೊಳಗೆ ತಮ್ಮದೇ ಹಿಡಿತ ಹೊಂದಿರುವ ಇಬ್ಬರೂ ಪ್ರಬಲ ಸಮುದಾಯಗಳಿಗೆ ಸೇರಿರುವ ಜನಪ್ರಿಯ ನಾಯಕರು. ಒಬ್ಬರು ವೀರಶೈವ ಲಿಂಗಾಯತ ನಾಯಕರಾದರೆ ಮತ್ತೊಬ್ಬರು ಒಕ್ಕಲಿಗರ ನಾಯಕ. ಇದೀಗ ಅವರ ಮಕ್ಕಳನ್ನು ಸಹ ಅದೇ ಹಾದಿಯಲ್ಲಿ ಬೆಳೆಸಲು ಪ್ರಯತ್ನಿಸುತ್ತಿದ್ದಾರೆ. ಜನ ಅವರನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT