ಶನಿವಾರ, ಜುಲೈ 24, 2021
22 °C
ಕಾಂಗ್ರೆಸ್‌ ಮುಖಂಡರಿಂದ ಕೃಷ್ಣರಾಜಪುರದಲ್ಲಿ ಆಹಾರದ ಕಿಟ್‌ ವಿತರಣೆ

ಬಿಜೆಪಿ ನಡೆ ಇತರ ಪಕ್ಷಗಳಿಗೆ ಮಾದರಿ: ಎಚ್‌.ಸಿ. ಬಾಲಕೃಷ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಬಿಜೆಪಿಯು ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ರಾಜ್ಯಸಭೆಗೆ ಟಿಕೆಟ್ ನೀಡುವ ಮೂಲಕ ಮಾದರಿಯಾಗಿದೆ. ಇತರ ಪಕ್ಷಗಳೂ ಇದನ್ನು ಅನುಸರಿಸಬೇಕು ಎಂದು ಕಾಂಗ್ರೆಸ್ ಮುಖಂಡ ಎಚ್‌.ಸಿ. ಬಾಲಕೃಷ್ಣ ಹೇಳಿದರು.

ತಾಲ್ಲೂಕಿನ ಕೃಷ್ಣರಾಜಪುರದಲ್ಲಿ ಮಂಗಳವಾರ ಸ್ಥಳೀಯ ನಿವಾಸಿಗಳಿಗೆ ಆಹಾರದ ಕಿಟ್ ವಿತರಿಸಿದ ಸಂದರ್ಭ ಅವರು ಪತ್ರಕರ್ತರ ಜೊತೆ ಮಾತನಾಡಿದರು. ಈವರೆಗೆ ಕೇವಲ ಅವರ ಕುಟುಂಬದವರು ಇಲ್ಲವೇ ಹಿಂಬಾಲಕರಿಗೆ ಮಣೆ ಹಾಕುವುದನ್ನು ನಾವು ನೋಡಿದ್ದೆವು. ಆದರೆ ಬಿಜೆಪಿಯಲ್ಲಿ ಇಂದು ಯಾರು ಪ್ರಾಮಾಣಿಕವಾಗಿ ಪಕ್ಷಕ್ಕೆ ದುಡಿದಿದ್ದಾರೋ ಅಂತಹವರನ್ನು ಗುರುತಿಸಿರುವುದು ಶ್ಲಾಘನೀಯ. ಇದು ಎಲ್ಲ ಪಕ್ಷಗಳಲ್ಲೂ ಮುಂದುವರಿಯಬೇಕು. ಕೇವಲ ಹಿಂದೆ ಮುಂದೆ ಬಕೆಟ್ ಹಿಡಿಯುವವರಿಗೆ ಅವಕಾಶ ನೀಡುವುದು ನಿಲ್ಲಬೇಕು. ಪ್ರಾಮಾಣಿಕ ಕಾರ್ಯಕರ್ತರನ್ನು ಎಲ್ಲ ಪಕ್ಷಗಳು ಗುರುತಿಸಬೇಕು ಎಂದು ಹೇಳಿದರು.

ರಾಜ್ಯಸಭೆಗೆ ದೇವೇಗೌಡರು ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಆಯ್ಕೆ ಪ್ರಶ್ನಾತೀತ. ಈ ಇಬ್ಬರೂ ನಾಯಕರ ಅಗತ್ಯ ರಾಜ್ಯ ಮತ್ತು ರಾಷ್ಟ್ರಕ್ಕೆ ಇದೆ. ವಿರೋಧ ಪಕ್ಷವಾಗಿ ಕೆಲಸ ಮಾಡುವ ಸಂದರ್ಭ ಧ್ವನಿ ಎತ್ತಲು ಇಂತಹ ಹಿರಿಯರ ಅಗತ್ಯ ಇದೆ. ದೇವೇಗೌಡರು ಈಚೆಗೆ ನಡೆದ ಚುನಾವಣೆಯಲ್ಲಿ ಸೋತಿದ್ದರು. ಆದರೆ ರಾಜ್ಯ ಹಾಗೂ ದೇಶಕ್ಕೆ ಅವರ ಅವಶ್ಯಕತೆ ಇದೆ ಎನ್ನುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಬೆಂಬಲ ನೀಡಿದೆ ಎಂದರು.

ಕೋವಿಡ್‌-19 ಸೋಂಕಿತ ಇದ್ದ ಕಾರಣಕ್ಕೆ ಕೃಷ್ಣರಾಜಪುರವನ್ನು ಸೀಲ್‌ಡೌನ್ ಮಾಡಲಾಗಿದೆ. ಈ ಜನರ ನೆರವಿಗಾಗಿ ಪ್ರತಿ ಮನೆಗೆ ಎರಡೆರಡು ಮಾಸ್ಕ್‌ ನೀಡಿದ್ದೇವೆ. ಹಾಲನ್ನು ಡೇರಿಯವರು ತೆಗೆದುಕೊಳ್ಳುತ್ತಿಲ್ಲ. ಸೀಲ್‌ಡೌನ್‌ ಮುಗಿಯುವವರೆಗೆ ಅರ್ಧ ಹಣವನ್ನು ಡೇರಿ ಕಡೆಯಿಂದಲೇ ನೀಡಲಾಗುವುದು. ಇಡೀ ಊರನ್ನು ಸೀಲ್‌ಡೌನ್‌ ಮಾಡುವುದು ಅಷ್ಟು ಸೂಕ್ತ ಅಲ್ಲ. ಆ ಮನೆಯನ್ನು ಬ್ಲಾಕ್‌ ಮಾಡಿದರೆ ಸಾಕು. ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು. 14 ದಿನ ಪೂರೈಸಿದ ನಂತರ ಹಾಲನ್ನು ತೆಗೆದುಕೊಳ್ಳುವಂತೆ ಬಮುಲ್‌ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಭದ್ರಯ್ಯ, ಸದಸ್ಯರಾದ ಗಾಣಕಲ್‌ ನಟರಾಜು, ಜಗದೀಶ್‌, ಮುಖಂಡರಾದ ಕೆ. ರಮೇಶ್‌, ಕಾಂತರಾಜ್‌ ಪಟೇಲ್‌, ಕೂಟಗಲ್ ನಟರಾಜು, ಎಸ್‌.ಟಿ. ಪ್ರೇಮಕುಮಾರ್‌ ಮತ್ತಿತರರು ಇದ್ದರು.

*
ಕೆಲವರು ಹಣಕ್ಕಾಗಿ ರಾಜ್ಯಸಭೆ, ವಿಧಾನ ಪರಿಷತ್‌ ಸೀಟುಗಳನ್ನು ಮಾರಿಕೊಳ್ಳುತ್ತಾರೆ. ಅಂತಹ ಕಾರ್ಯಗಳು ನಿಲ್ಲಬೇಕು.
-ಎಚ್‌.ಸಿ. ಬಾಲಕೃಷ್ಣ, ಕಾಂಗ್ರೆಸ್ ಮುಖಂಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು