ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಅಧಿಕಾರಕ್ಕೆ ಬರದು–ಡಿಕೆಶಿ

ಕನಕಪುರ ಕ್ಷೇತ್ರದ ಮತದಾರರು, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರಿಗೆ ಕೃತಜ್ಞತೆ
Last Updated 15 ಜೂನ್ 2019, 16:15 IST
ಅಕ್ಷರ ಗಾತ್ರ

ಕನಕಪುರ: ‘ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳೂ ಅಲ್ಲ, ಶಾಶ್ವತ ಮಿತ್ರರೂ ಅಲ್ಲ. ನಾನು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರು ರಾಜಕೀಯವಾಗಿ ಪರಸ್ಪರ ಹೋರಾಟ ಮಾಡಿದ್ದೇವೆ; ಜಗಳವಾಡಿದ್ದೇವೆ. ಇಂದು ಒಟ್ಟಿಗೆ ಸರ್ಕಾರವನ್ನು ಮಾಡಿದ್ದೇವೆ. ಅದರಂತೆ ಎರಡೂ ಪಕ್ಷದವರು ಒಟ್ಟಾಗಿ ಇರಬೇಕು’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು.

ನಗರದ ಹೊರ ವಲಯದಲ್ಲಿ, ಕನಕಪುರ ವಿಧಾನಸಭಾ ಕ್ಷೇತ್ರದ ಮತದಾರರು, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರು ಮುಖಂಡರಿಗೆ ಶನಿವಾರ ಏರ್ಪಡಿಸಿದ್ದ ಅಭಿನಂದನೆ ಹಾಗೂ ಕೃತಜ್ಞತಾ ಸಮಾರಂಭದಲ್ಲಿ ಮಾತನಾಡಿದರು.

‘ರಾಜ್ಯದಲ್ಲಿ ಅನಿವಾರ್ಯ ಪರಿಸ್ಥಿತಿಯಲ್ಲಿ ಎರಡೂ ಪಕ್ಷದವರು ಸೇರಿ ಸಮ್ಮಿಶ್ರ ಸರ್ಕಾರವನ್ನು ರಚನೆ ಮಾಡಿ ಉತ್ತಮ ಆಡಳಿತ ನಡೆಸುತ್ತಿದ್ದೇವೆ. ಸಮ್ಮಿಶ್ರ ಸರ್ಕಾರವನ್ನು ಕೆಡವಲು ಬಿಜೆಪಿಯವರು ನಮ್ಮ ಶಾಸಕರಿಗೆ ಚಾಕಲೇಟ್‌ ಹಾಕುತ್ತಿದ್ದಾರೆ’ ಎಂದು ಟೀಕಿಸಿದರು.

‘ಬಿಜೆಪಿಯವರ ಆಮಿಷಗಳಿಗೆ ಎಂಎಲ್‌ಎ ಗಳು ಅವರಂತೆ ಆಡುತ್ತಿದ್ದಾರೆ. ಅವರನ್ನು ನಿಯಂತ್ರಿಸಿ ಸರಿಪಡಿಸುವ ಕಾರ್ಯದಿಂದ ಇಷ್ಟು ದಿನ ನಿಮ್ಮನ್ನು ನೋಡಲು ನಿಮಗೆ ಕೃತಜ್ಙತೆ, ಅಭಿನಂದನೆ ತಿಳಿಸಲು ಸಾಧ್ಯವಾಗಲಿಲ್ಲ. ಕ್ಷಮೆ ಇರಲಿ. ರಾಜ್ಯದಲ್ಲಿ ಬಿಜೆಪಿ ಏನೇ ಮಾಡಿದರು ಅಧಿಕಾರಕ್ಕೆ ಬರುವುದಿಲ್ಲ’ ಎಂದು ಹೇಳಿದರು.

‘ಒಂದು ವರ್ಷದಿಂದ ಚಾಕಲೇಟ್‌ ತೋರಿಸಿ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದ ಬಿಜೆಪಿಗರು ಇಂದು ಗಾಂಧಿ ಪ್ರತಿಮೆ ಬಳಿ ಮಲಗಿದ್ದಾರೆ. ಅವರಿಗೆ ಅಧಿಕಾರ ಬೇಕು; ಅದಕ್ಕಾಗಿ ಅಲ್ಲಿಯೇ ಮಲಗಿರಲಿ’ ಎಂದರು.

‘ನಮ್ಮನ್ನು ಜಿಂದಾಲ್‌ ಕಂಪನಿಗೆ ಭೂಮಿ ಕೊಡುವುದು ಬೇಡವೆಂದು ಅವರು ಹೇಳುತ್ತಾರೆ. ದೇಶದಲ್ಲಿ ಪ್ರಧಾನಿ ಮೋದಿ ಅವರಿಂದಲೂ ನಿರುದ್ಯೋಗ ಸಮಸ್ಯೆಯನ್ನು ನೀಗಿಸಲು ಸಾಧ್ಯವಾಗಲಿಲ್ಲ. ನಮ್ಮನ್ನೂ ಕೆಲಸ ಮಾಡಲು ಬಿಡುವುದಿಲ್ಲ. ಇನ್ನು ನಿರುದ್ಯೋಗ ಸಮಸ್ಯೆ ಹೇಗೆ ಪರಿಹಾರವಾಗುತ್ತದೆ, ರೈತರು ಟ್ಯಾಕ್ಸ್‌ ಕಟ್ಟುತ್ತಾರೆಯೇ, ಅಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆಯೇ’ ಎಂದು ಪ್ರಶ್ನಿಸಿದರು.

‘ರಾಜ್ಯದಲ್ಲಿ ಏನೇ ಆಗಲಿ, ನಾವು ಇಲ್ಲಿ ಒಟ್ಟಾಗಿ ಹೋರಾಟ ಮಾಡುತ್ತಿದ್ದೇವೆ, ಒಟ್ಟಾಗೆ ಇದ್ದೇವೆ, ಇದನ್ನು ಈಗೆ ಮುಂದುವರಿಸಿಕೊಂಡು ಹೋಗೋಣ, ತಾಲ್ಲೂಕಿನಲ್ಲಿ ಸುಮಾರು ವರ್ಷಗಳಿಂದ ಜೆಡಿಎಸ್‌ನವರಿಗೆ ಸವಲತ್ತುಗಳು ಸಿಗಲಿಲ್ಲ, ಮುಂದಿನ ದಿನಗಳಲ್ಲಿ ಎಲ್ಲ ಸವಲತ್ತುಗಳನ್ನು ದೊರಕಿಸಿಕೊಡಬೇಕಿದೆ’ ಎಂದರು.

ಸಂಸದ ಡಿ.ಕೆ.ಸುರೇಶ್‌ ಮಾತನಾಡಿ, ಸಂಸತ್‌ನಲ್ಲಿ ರಾಜ್ಯದ ಧ್ವನಿಯಾಗಿದ್ದ ಎಚ್‌.ಡಿ.ದೇವೇಗೌಡರು ಮತ್ತು ಮಲ್ಲಿಕಾರ್ಜುನ್‌ ಖರ್ಗೆ ಅವರಂತ ಹಿರಿಯ ಮುತ್ಸದ್ಧಿಗಳನ್ನು ಸೋಲಿಸಿದ್ದಾರೆ. ಮತ್ತೆ ಅಂತಹ ನಾಯಕರನ್ನು ಹುಟ್ಟಿ ಹಾಕಲು ಸಾಧ್ಯವಿಲ್ಲ ಎಂದರು.

ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ, ಜೆಡಿಎಸ್‌ ಮುಖಂಡರಾದ ಡಿ.ಎಂ.ವಿಶ್ವನಾಥ್‌, ನಾರಾಯಣಗೌಡ ಮಾತನಾಡಿ, ‘ಬೆಂಗಳೂರು ಗ್ರಾಮಾಂತರ ಕ್ಷೇತ್ರದಂತೆ ರಾಜ್ಯದಲ್ಲಿ ಎಲ್ಲ ಕಡೆ ಎರಡೂ ಪಕ್ಷಗಳು ಒಟ್ಟಾಗಿ ಕೆಲಸ ಮಾಡಿದ್ದರೆ ನಮಗೆ ಹೆಚ್ಚಿನ ಸ್ಥಾನಗಳು ಗೆಲ್ಲಲು ಸಾಧ್ಯವಾಗುತ್ತಿತ್ತು’ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಎಸ್‌. ಧನಂಜಯ, ಉಪಾಧ್ಯಕ್ಷೆ ಸುಮಂಗಳ ಸುರೇಶ್‌, ಜೆಡಿಎಸ್‌ ಕಾಂಗ್ರೆಸ್‌ ಪಕ್ಷದ ಮುಖಂಡರುಗಳಾದ ಶ್ರೀಕಂಠು, ಆರ್‌.ಕೃಷ್ಣಮೂರ್ತಿ, ಎಂ.ಡಿ.ವಿಜಯದೇವು, ಇಕ್ಬಾಲ್‌ಹುಸೇನ್‌, ನಾಗರಾಜು, ಸಿದ್ದಮರೀಗೌಡ, ಚಿನ್ನಸ್ವಾಮಿ, ಕಬ್ಬಾಳೇಗೌಡ, ಕೆ.ಎನ್‌.ದಿಲೀಪ್‌ ತಮ್ಮಣ್ಣಗೌಡ, ಬಿ.ಆರ್‌. ಗಣೇಶ್‌ ಸೇರಿದಂತೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ತಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT