ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಶಾ ಯೋಗೇಶ್ವರ್‌ಗೆ ಟಿಕೆಟ್‌: ಕಾರ್ಯಕರ್ತರ ವಿರೋಧ

ಯಡಿಯೂರಪ್ಪರನ್ನು ಭೇಟಿ ಮಾಡಿ ಅಹವಾಲು ಸಲ್ಲಿಕೆ
Last Updated 23 ಮಾರ್ಚ್ 2019, 13:54 IST
ಅಕ್ಷರ ಗಾತ್ರ

ರಾಮನಗರ: ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸಿ.ಪಿ. ಯೋಗೇಶ್ವರ್‌ ಪುತ್ರಿ ನಿಶಾಗೆ ಬಿಜೆಪಿ ಟಿಕೆಟ್‌ ನೀಡುವುದಕ್ಕೆ ಸ್ಥಳೀಯ ಕಾರ್ಯಕರ್ತರಿಂದ ವಿರೋಧ ವ್ಯಕ್ತವಾಗಿದೆ.

ಶನಿವಾರ ಬೆಂಗಳೂರಿನ ನಿವಾಸದಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ರಾಮನಗರದ ಬಿಜೆಪಿ ಕಾರ್ಯಕರ್ತರು ‘ಯಾವುದೇ ಕಾರಣಕ್ಕೂ ನಿಶಾಗೆ ಟಿಕೆಟ್ ನೀಡಬಾರದು. ಇದರಿಂದ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆ ಆಗಲಿದೆ’ ಎಂದು ಮನವಿ ಮಾಡಿದರು.

‘ಈ ಹಿಂದೆ ತೀರ್ಮಾನವಾದಂತೆ ಯೋಗೇಶ್ವರ್‌ ಅವರನ್ನೇ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಬೇಕು. ಇದರಿಂದ ಕ್ಷೇತ್ರದಲ್ಲಿ ಗೆಲುವು ಸಾಧ್ಯವಾಗುತ್ತದೆ. ಅದಕ್ಕೆ ಅವರು ಒಪ್ಪದಿದ್ದರೆ ಪಕ್ಷದ ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷ ಎಂ. ರುದ್ರೇಶ್‌ ಅವರಿಗೆ ಅವಕಾಶ ನೀಡಬೇಕು’ ಎಂದು ಕಾರ್ಯಕರ್ತರು ಆಗ್ರಹಿಸಿದರು.

‘ನಿಶಾ ಯೋಗೇಶ್ವರ್‌ ಪುತ್ರಿ ಎನ್ನುವುದನ್ನು ಬಿಟ್ಟರೆ ಆಕೆಗೆ ಬೇರೆ ಯಾವುದೇ ವರ್ಚಸ್ಸು ಇಲ್ಲ. ಪಕ್ಷದ ಸಕ್ರಿಯ ಸದಸ್ಯೆಯೂ ಅಲ್ಲ. ಹೀಗಿರುವಾಗ ಏಕಾಏಕಿ ಅವರನ್ನು ಅಭ್ಯರ್ಥಿಯಾಗಿಸಿದರೆ ಮತದಾರರನ್ನು ಸೆಳೆಯುವುದು ಕಷ್ಟ’ ಎಂದು ವಾದಿಸಿದರು.

‘ಕಳೆದ ರಾಮನಗರ ವಿಧಾನಸಭೆ ಉಪ ಚುನಾವಣೆಯ ಸಂದರ್ಭ ಹೊಸಬರಿಗೆ ಮಣೆ ಹಾಕಿ ಬಿಜೆಪಿ ಮುಖಭಂಗ ಅನುಭವಿಸಿದೆ. ಈ ಬಾರಿ ಅಂತಹ ಯಾವುದೇ ಕಾರ್ಯಕ್ಕೆ ಆಸ್ಪದ ಮಾಡಿಕೊಡಬಾರದು’ ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ‘ರಾಜ್ಯ ಘಟಕದಿಂದ ಈಗಾಗಲೇ ಇಬ್ಬರ ಹೆಸರನ್ನು ಹೈಕಮಾಂಡ್‌ಗೆ ಶಿಫಾರಸು ಮಾಡಲಾಗಿದೆ. ಪಕ್ಷದ ವರಿಷ್ಠರು ಭಾನುವಾರ ಸಂಜೆ ನಿರ್ಧಾರ ಪ್ರಕಟಿಸಲಿದ್ದಾರೆ’ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಎಸ್‌.ಆರ್. ನಾಗರಾಜು, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ವರದರಾಜು, ರಾಮನಗರ ತಾಲ್ಲೂಕು ಘಟಕದ ಅಧ್ಯಕ್ಷ ಪ್ರವೀಣ್‌ ಗೌಡ ಸೇರಿದಂತೆ 30ಕ್ಕೂ ಹೆಚ್ಚು ಕಾರ್ಯಕರ್ತರು ಯಡಿಯೂರಪ್ಪರನ್ನು ಭೇಟಿಯಾಗಿದ್ದರು.

ರುದ್ರೇಶ್‌ ಲಾಬಿ?

ಯೋಗೇಶ್ವರ್‌ಗೆ ಸ್ಪರ್ಧಿಸುವ ಮನಸ್ಸಿಲ್ಲ ಎಂದು ಅರಿತಿರುವ ಎಂ. ರುದ್ರೇಶ್‌ ತಮಗೇ ಟಿಕೆಟ್ ನೀಡುವಂತೆ ಕಾರ್ಯಕರ್ತರ ಮೂಲಕ ಲಾಬಿ ನಡೆಸಿದ್ದಾರೆ ಎನ್ನಲಾಗಿದೆ.

ತಾನೂ ಟಿಕೆಟ್‌ ಆಕಾಂಕ್ಷಿ ಎಂದು ಅವರು ಬಹಿರಂಗವಾಗಿ ಹೇಳಿಕೊಳ್ಳುತ್ತಲೇ ಬಂದಿದ್ದಾರೆ. ಕಳೆದ ರಾಮನಗರ ವಿಧಾನಸಭೆ ಉಪ ಚುನಾವಣೆಯ ಸಂದರ್ಭ ಅವರು ಪಕ್ಷದ ಟಿಕೆಟ್‌ ಆಕಾಂಕ್ಷಿ ಆಗಿದ್ದರು. ಆದರೆ ಕಡೆಯ ಕ್ಷಣದಲ್ಲಿ ಯೋಗೇಶ್ವರ್‌ ಕಾಂಗ್ರೆಸ್‌ನಿಂದ ಚಂದ್ರಶೇಖರ್‌ರನ್ನು ಕರೆತಂದು ಅವರಿಗೆ ಟಿಕೆಟ್ ಕೊಡಿಸಿದ್ದರು.

ಸಿಪಿವೈ ಬಗ್ಗೆಯೇ ಒಲವು

ಬಿಜೆಪಿ ಹೈಕಮಾಂಡ್‌ ಹಾಗೂ ಯಡಿಯೂರಪ್ಪ ಯೋಗೇಶ್ವರ್‌ ಸ್ಪರ್ಧೆ ಬಗ್ಗೆ ಒಲವು ತೋರಿದ್ದಾರೆ. ಆದರೆ ಸಿಪಿವೈ ಅದಕ್ಕೆ ಸೂಕ್ತವಾಗಿ ಸ್ಪಂದಿಸಿಲ್ಲ. ರಾಜ್ಯ ರಾಜಕಾರಣದ ನೆಪವೊಡ್ಡಿ ಮಗಳಿಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದಾರೆ. ನಿಶಾಗೆ ಟಿಕೆಟ್ ಕೊಟ್ಟರೆ ತಾನೇ ಅಭ್ಯರ್ಥಿ ಎಂಬಂತೆ ಕೆಲಸ ಮಾಡುವುದಾಗಿಯೂ ಅವರು ಬಿಎಸ್‌ವೈ ಮೇಲೆ ಒತ್ತಡ ಹೇರುತ್ತಿದ್ದಾರೆ. ಇತ್ತ ಕಾರ್ಯಕರ್ತರಿಂದ ನಿಶಾ ಸ್ಪರ್ಧೆಗೆ ವಿರೋಧ ವ್ಯಕ್ತವಾಗಿರುವ ಕಾರಣ ಬಿಜೆಪಿ ನಾಯಕರು ಇಕ್ಕಟ್ಟಿಗೆ ಸಿಲುಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT