ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ಳಿ ರಕ್ತ ನಿಧಿ ಕೇಂದ್ರಕ್ಕೆ ಚಾಲನೆ

ತುರ್ತು ಚಿಕಿತ್ಸೆ ಸಂದರ್ಭ ರೋಗಿಗಳಿಗೆ ನೆರವಾಗುವ ಉದ್ದೇಶ
Last Updated 22 ಏಪ್ರಿಲ್ 2019, 13:22 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯಲ್ಲಿ ರೋಗಿಗಳಿಗೆ ಎದುರಾಗಬಹುದಾದ ರಕ್ತದ ಕೊರತೆಯನ್ನು ನೀಗಿಸಿ ಅಮೂಲ್ಯ ಜೀವವನ್ನು ಉಳಿಸುವ ನಿಟ್ಟಿನಲ್ಲಿ ಬೆಳ್ಳಿ ರಕ್ತ ನಿಧಿ ಕೇಂದ್ರ ಸೋಮವಾರದಿಂದ ಪ್ರಾರಂಭವಾಗಿದೆ.

ಇಲ್ಲಿನ ಬೆಂಗಳೂರು–-ಮೈಸೂರು ಹೆದ್ದಾರಿ ಪಕ್ಕ, ರಾಮಕೃಷ್ಣ ಆಸ್ಪತ್ರೆಯ ಬಳಿ ರಕ್ತ ನಿಧಿ ಕೇಂದ್ರ ಪ್ರಾರಂಭಗೊಂಡಿದ್ದು, ಬೆಳ್ಳಿ ಆರೋಗ್ಯ ಮತ್ತು ಸಾಮಾಜಿಕ ಸೇವಾ ಫೌಂಡೇಷನ್ ಹಾಗೂ ಲೈಫ್ ಕೇರ್ ಫೌಂಡೇಷನ್ ಸಹಯೋಗದಲ್ಲಿ ಕಾರ್ಯ ನಿರ್ವಹಿಸಲಿದೆ.

ಈಗಾಗಲೇ ರೆಡ್ ಕ್ರಾಸ್ ಸಂಸ್ಥೆ ನೇತೃತ್ವದಲ್ಲಿ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಕ್ತ ಸಂಗ್ರಹ ಕೇಂದ್ರದಲ್ಲಿ ಹೆಚ್ಚಿನ ಪ್ರಮಾಣದ ರಕ್ತವನ್ನು ಸಂಗ್ರಹಿಸಿಡಲು ಸಾಧ್ಯವಿಲ್ಲ. ಇದು ನಿರ್ವಹಣೆ ಕೊರತೆಯಿಂದ ಹೆಚ್ಚಿನ ಸೇವೆಯನ್ನು ಒದಗಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಕ್ತವನ್ನು ಬೆಂಗಳೂರಿನಿಂದ ತರಿಸುವ ಪರಿಪಾಠ ಮುಂದುವರೆದಿದೆ.

ಇದೀಗ ಕಾರ್ಯರಂಭ ಮಾಡಿರುವ ಬೆಳ್ಳಿ ರಕ್ತ ನಿಧಿ ಕೇಂದ್ರ ಎಲ್ಲಾ ಸೌಲಭ್ಯಗಳನ್ನು ಹೊಂದಿದೆ. ಹೆಚ್ಚಿನ ಪ್ರಮಾಣ ರಕ್ತವನ್ನು ಇಲ್ಲಿ ಸುರಕ್ಷಿತವಾಗಿ ಸಂಗ್ರಹಿಸಿಡಬಹುದು. ಬೆಂಗಳೂರಿಗೆ ಕೊಂಡೊಯ್ಯುವ ಹಾಗೂ ಅಲ್ಲಿಂದ ಇಲ್ಲಿನ ಆಸ್ಪತ್ರೆಗಳಿಗೆ ತರಿಸಿಕೊಳ್ಳುವ ಅವಶ್ಯಕತೆ ಇಲ್ಲ. ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲಿದೆ. ಅಲ್ಲದೆ ಇದೇ ಮೊದಲ ಬಾರಿಗೆ ರಾಮನಗರದಲ್ಲಿ ರಕ್ತದಲ್ಲಿನ ಬಿಳಿ ರಕ್ತ ಕಣ, ಕೆಂಪುರಕ್ತ ಕಣ, ಪ್ಲಾಸ್ಮಾವನ್ನು ವಿಭಜಿಸಿ ಸಂಗ್ರಹಿಸುವ ಸೌಲಭ್ಯ ಈ ಕೇಂದ್ರದಲ್ಲಿದೆ.

ಬಿಳಿ ರಕ್ತ ಕಣಗಳನ್ನು ಬೆಂಗಳೂರಿನಿಂದ ತರುವ ಅವಶ್ಯಕತೆ ಇರುವುದಿಲ್ಲ. ಇಲ್ಲೇ ಬಿಳಿ ರಕ್ತ ಕಣಗಳು ದೊರೆಯುವಂತೆ ಈ ಕೇಂದ್ರ ಕಾರ್ಯ ನಿರ್ವಹಿಸಲಿದೆ.

‘ಜಿಲ್ಲೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಜೀವಗಳು ಪ್ರಸ್ತುತ ರಕ್ತದ ಕೊರತೆಯನ್ನು ಎದುರಿಸುತ್ತಿವೆ. ಕೆಲ ತುರ್ತು ಸಂದರ್ಭದಲ್ಲಿ ಅನಿವಾರ್ಯವಾಗಿ ದೂರದ ಬೆಂಗಳೂರು ಹಾಗೂ ಮಂಡ್ಯದಿಂದ ರಕ್ತವನ್ನು ಪಡೆದುಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸುಸಜ್ಜಿತ ರಕ್ತ ನಿಧಿ ಕೇಂದ್ರವನ್ನು ಜಿಲ್ಲಾ ಕೇಂದ್ರ ರಾಮನಗರದಲ್ಲಿ ಆರಂಭಿಸಿದ್ದೇವೆ’ ಎಂದು ಫೌಂಡೇಷನ್ ಅಧ್ಯಕ್ಷ ವಿನೋದ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಇತ್ತೀಚಿನ ವರ್ಷಗಳಲ್ಲಿ ರಕ್ತದಾನ ಶಿಬಿರಗಳು ಹೆಚ್ಚಿನ ಪ್ರಮಾಣದಲ್ಲಿ ಆಯೋಜನೆಯಾಗುತ್ತಿರುವುದು ಸ್ವಾಗತಾರ್ಹ. ಯುವಕರು ರಕ್ತದಾನಕ್ಕೆ ಉತ್ಸುಕರಾಗುತ್ತಿದ್ದಾರೆ. ಶಿಬಿರಗಳಲ್ಲಿ ಸಂಗ್ರಹಿಸುವ ರಕ್ತವನ್ನು ಬೆಂಗಳೂರಿಗೆ ಕಳುಹಿಸಬೇಕಾಗಿದೆ. ರಾಮನಗರದಲ್ಲಿ ಸಂರಕ್ಷಿಸಿ, ಸಂಗ್ರಹಿಸಿಡಬಹುದಾದ ಸುಸಜ್ಜಿತ ಕೇಂದ್ರ ಇಷ್ಟು ದಿನ ಇರಲಿಲ್ಲ. ಇದೀಗ ಬೆಳ್ಳಿ ರಕ್ತ ನಿಧಿ ಕೇಂದ್ರ ಹೆಚ್ಚಿನ ಪ್ರಮಾಣದ ರಕ್ತವನ್ನು ಸಂಗ್ರಹಿಸಿಡಲಿದೆ’ ಎಂದರು.

ರಕ್ತದ ದರದಲ್ಲೂ ಯಾವುದೇ ವ್ಯತ್ಯಾಸವಿಲ್ಲ. ಸರ್ಕಾರದ ನಿಯಮಾವಳಿಗಳ ಪ್ರಕಾರವೇ ಇಲ್ಲಿ ₨850 ಕ್ಕೆ ಒಂದು ಯೂನಿಟ್ ರಕ್ತ ದೊರೆಯಲಿದೆ. ಸಂಗ್ರಹಿಸಿದ ರಕ್ತವನ್ನು ರೋಗಿಗೆ ನೀಡುವ ಮೊದಲು ವಿವಿಧ ರೀತಿಯ ಪರೀಕ್ಷೆಗಳಿಗೆ ರಕ್ತವನ್ನು ಒಳಪಡಿಸಿ ಸುರಕ್ಷಿತವಾಗಿ ಸಂರಕ್ಷಿಸಿಡುವ ಸಲುವಾಗಿ ಅದಕ್ಕೆ ತಗಲುವ ವೆಚ್ಚವನ್ನಷ್ಟೇ ಪಡೆಯುತ್ತೇವೆ ಎಂದು ಮಾಹಿತಿ ನೀಡಿದರು.

‘ರಕ್ತವನ್ನು ವಿಶೇಷ ರೆಫ್ರಿಜರೇಟರ್ ನಲ್ಲಿ ಸಂಗ್ರಹಿಸಬೇಕು. ಆದರೆ ಸರ್ಕಾರಿ ಆಸ್ಪತ್ರೆಯಲ್ಲಿ ಗೃಹ ಬಳಕೆಯ ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿಡಲಾಗುತ್ತದೆ. ಇದರಿಂದ ರಕ್ತ ದೊರೆತರು ಅದನ್ನು ತುರ್ತಾಗಿ ಬಳಸಲು ಸಾಧ್ಯವಾಗುವುದಿಲ್ಲ. ಬೆಳ್ಳಿ ರಕ್ತ ನಿಧಿ ಕೇಂದ್ರದಲ್ಲಿ ವಿಶೇಷ ರೆಫ್ರಿಜರೇಟರ್ ನಲ್ಲಿ ರಕ್ತವನ್ನು ಸಂಗ್ರಹಿಸಿಡಲಾಗುತ್ತದೆ’ ಎಂದು ತಿಳಿಸಿದರು.

ರಕ್ತದಾನ ಶಿಬಿರ ಆಯೋಜಿಸುವ ಸಂಘ-ಸಂಸ್ಥೆಗಳು ಸಹಕಾರಕ್ಕಾಗಿ ದೂ.ಸಂ. 080–-29782345, ಮೊ: 9845235648, 7892215917ಕ್ಕೆ ಸಂಪರ್ಕಿಸಬಹುದು ಎಂದು ತಿಳಿಸಿದರು.

ಡಾ.ಅನುಪಮಾ, ರಾಮಲಿಂಗಯ್ಯ, ರೋಟರಿ ಸಿಲ್ಕ್ ಸಿಟಿ ಕ್ಲಬ್ ಅಧ್ಯಕ್ಷ ರಾಘವೇಂದ್ರ ಇದ್ದರು.

*ರಕ್ತನಿಧಿ ಕೇಂದ್ರವು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಲಿದೆ. ಸರ್ಕಾರ ನಿಗದಿಪಡಿಸಿದ ದರದಲ್ಲಿ ರೋಗಿಗಳಿಗೆ ರಕ್ತ ವಿತರಿಸಲಾಗುವುದು
-ವಿನೋದ್‌
ಅಧ್ಯಕ್ಷ, ಬೆಳ್ಳಿ ಆರೋಗ್ಯ ಮತ್ತು ಸಾಮಾಜಿಕ ಸೇವಾ ಫೌಂಡೇಷನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT