ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌಸಿಯಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶಿಬಿರ: 204 ಯುನಿಟ್ ರಕ್ತ ಸಂಗ್ರಹ

‘ರಕ್ತದ ಕೊರತೆ ನೀಗಿಸುವ ಪ್ರಯತ್ನವಾಗಲಿ’
Last Updated 16 ಅಕ್ಟೋಬರ್ 2018, 12:26 IST
ಅಕ್ಷರ ಗಾತ್ರ

ರಾಮನಗರ: ರಕ್ತದ ಕೊರತೆ ನೀಗುಸುವಲ್ಲಿ ಯುವ ಸಮುದಾಯವು ಪ್ರಮುಖ ಪಾತ್ರ ವಹಿಸಬೇಕು ಎಂದು ಗೌಸಿಯಾ ಎಂಜಿನಿಯರಿಂಗ್‌ ಕಾಲೇಜಿನ ಪ್ರಾಚಾರ್ಯ ಡಾ. ಮಹಮ್ಮದ್ ಹನೀಫ್‌ ಹೇಳಿದರು.

ಇಲ್ಲಿನ ಗೌಸಿಯಾ ಎಂಜಿನಿಯರಿಂಗ್ ಕಾಲೇಜಿನಲ್ಲಿ ರೋಟರಿ ಸಿಲ್ಕ್‌ ಸಿಟಿ ಕ್ಲಬ್‌ ಹಾಗೂ ಬೆಂಗಳೂರಿನ ಜೀವ ರಕ್ಷ ವಾಲೆಂಟರಿ ಬ್ಲಡ್‌ ಬ್ಯಾಂಕಿನ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಅಪಘಾತಗಳು ಸಂಭವಿಸಿದಾಗ ಹಾಗೂ ಹೆರಿಗೆ ಸಂದರ್ಭಗಳಲ್ಲಿ ಅಗತ್ಯವಾದ ರಕ್ತ ಲಭ್ಯವಾಗದ ಕಾರಣ ಅನಾಹುತಗಳು ಉಂಟಾಗುತ್ತಿದ್ದು, ಅದನ್ನು ತಡೆಗಟ್ಟಲು ರಕ್ತದಾನ ನೆರವಾಗಲಿದೆ ಎಂದರು.

ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದರೊಂದಿಗೆ ದಾನಿಗಳಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಗೊಳ್ಳಲು ಸಹಕಾರಿಯಾಗುವ ಬಗ್ಗೆ ಮನವರಿಕೆ ಮಾಡಬೇಕು. ಸಾಮಾಜಿಕ ಉಪಯುಕ್ತ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಎಲ್ಲರನ್ನೂ ಪ್ರೇರೇಪಿಸಬೇಕು ಎಂದರು.

ರೋಟರಿ ಸಿಲ್ಕ್‌ ಸಿಟಿ ಕ್ಲಬ್‌ ಅಧ್ಯಕ್ಷ ರಾಘವೇಂದ್ರ ಮಾತನಾಡಿ, ರಕ್ತದಾನ ಮಾಡಿದರೆ ಆರೋಗ್ಯ ಕೆಡುತ್ತದೆ ಎಂಬ ತಪ್ಪು ಕಲ್ಪನೆ ನಮ್ಮಲ್ಲಿದೆ. ರಕ್ತದಾನದಿಂದ ಯಾವುದೇ ಹಾನಿ ಇಲ್ಲ. ಕೆಲವೇ ದಿನಗಳಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ ಎಂದು ತಿಳಿಸಿದರು.

ನಾವು ಕೊಡುವ ರಕ್ತದಿಂದ ಒಂದು ಜೀವ ಉಳಿಯುತ್ತದೆ. ರಕ್ತದಾನ ಮಾಡಿದರೆ ಸಮಾಜದಲ್ಲಿ ಉತ್ತಮ ಕೆಲಸ ಮಾಡಿದ ನೆನಪು ನಿಮ್ಮದಾಗುತ್ತದೆ ಎಂದು ಅವರು ಹೇಳಿದರು.

ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಸಮಾಜಘಾತಕ ಕೃತ್ಯಗಳಲ್ಲಿ ತೊಡಗಿಕೊಂಡು ಸಮಾಜಕ್ಕೆ ಹಾಗೂ ಕುಟುಂಬಕ್ಕೆ ಹಾನಿಮಾಡುತ್ತಿದ್ದಾರೆ. ಮಾದಕ ವಸ್ತುಗಳಿಗೆ ಬಲಿಯಾದರೆ ಮತ್ತೆ ಆರೋಗ್ಯ ಸರಿ ಮಾಡಲು ಆಗುವುದಿಲ್ಲ ಎಂದು ತಿಳಿಸಿದರು.

ಒಟ್ಟು 204 ಯೂನಿಟ್‌ ರಕ್ತ ಸಂಗ್ರಹವಾಯಿತು. ಚನ್ನಪಟ್ಟಣದ ದೃಷ್ಟಿ ಕಣ್ಣಿನ ಆಸ್ಪತ್ರೆ ವತಿಯಿಂದ ಉಚಿತ ಕಣ್ಣಿನ ತಪಾಸಣೆಯನ್ನು ಮಾಡಲಾಯಿತು.

ಗೌಸಿಯಾ ಎಂಜಿನಿಯರಿಂಗ್‌ ಕಾಲೇಜಿನ ಎನ್‌ಎಸ್‌ಎಸ್‌ ಸಂಯೋಜಕ ಬಿ.ಎಸ್. ಮಹೇಶ್, ಅಧ್ಯಾಪಕರಾದ ಡಾ. ಮುನೀರ್ ಬಾಷಾ, ಡಾ. ಹರೀಶ್, ಸುರೇಶ್‌ಬಾಬು, ಮಹದೇವ್‌, ಅಶೋಕ್‌ಕುಮಾರ್, ಜ್ಯೋತಿ, ಜಾರಾ ಅಮರಿನ್‌, ಶೊಯೆಬ್‌, ರೋಟರಿ ಸಿಲ್ಕ್‌ ಸಿಟಿ ಕ್ಲಬ್‌ ಕಾರ್ಯದರ್ಶಿ ಅನುರಾಧ, ಲತಾ ಗೋಪಾಲ್, ರವಿಕುಮಾರ್, ಜೀವರಕ್ಷ ವಾಲೆಂಟರಿ ಬ್ಲಡ್‌ ಬ್ಯಾಂಕಿನ ರಘುಕುಮಾರ್, ದೃಷ್ಟಿ ಕಣ್ಣಿನ ಆಸ್ಪತ್ರೆಯ ನವೀನ್ ಇದ್ದರು.

*ರಕ್ತದಾನವು ಮಾನವೀಯ ಕಾರ್ಯವಾಗಿದ್ದು ಆಪತ್ಕಾಲದಲ್ಲಿ ಇನ್ನೊಬ್ಬರ ಜೀವ ಉಳಿಸುತ್ತದೆ
-ಡಾ. ಮಹಮ್ಮದ್ ಹನೀಫ್‌,ಪ್ರಾಚಾರ್ಯ, ಗೌಸಿಯಾ ಕಾಲೇಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT