ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ಸರ್ಕಲ್‌ನಲ್ಲಿ ರಸ್ತೆ ಉಬ್ಬು ನಿರ್ಮಿಸಿ

ನಾಲ್ಕು ರಸ್ತೆಗಳು ಸೇರುತ್ತಿದ್ದು ಅಪಘಾತ ಹೆಚ್ಚಳ: ದೂರು
Last Updated 20 ಜೂನ್ 2018, 13:04 IST
ಅಕ್ಷರ ಗಾತ್ರ

ಮಾಗಡಿ: ಪಟ್ಟಣದ ಒಂದನೇ ವಾರ್ಡ್‌ನಲ್ಲಿ ಇರುವ ಗಾಂಧಿ ಸರ್ಕಲ್‌ನಲ್ಲಿ ನಾಲ್ಕು ರಸ್ತೆಗಳು ಸೇರುತ್ತವೆ. ಇಲ್ಲಿ ಅಪಘಾತಗಳು ಸಂಭವಿಸುತ್ತಿವೆ. ವೃತ್ತದಲ್ಲಿ ಸಿಗ್ನಲ್‌ ದೀಪ ಅಳವಡಿಸಿ ಇಲ್ಲವೇ ರಸ್ತೆ ಉಬ್ಬು ನಿರ್ಮಿಸಿ ಎಂದು ಕಲಾವಿದ ಲೋಕೇಶ್‌ ಒತ್ತಾಯಿಸಿದರು.

ಗಾಂಧಿ ಸರ್ಕಲ್‌ ಮೂಲಕ ಶಾಲಾ ಕಾಲೇಜುಗಳಿಗೆ ಸಾವಿರಾರು ವಿದ್ಯಾರ್ಥಿಗಳು ಸಂಚರಿಸುತ್ತಿದ್ದಾರೆ. ದಾಬಸ್‌ ಪೇಟೆಯಿಂದ ಶಿವಗಂಗೆ, ಗುಡೇಮಾರನ ಹಳ್ಳಿ ಮಾರ್ಗವಾಗಿ ರಾಮನಗರದ ಮೂಲಕ ಮೈಸೂರಿನತ್ತ ತೆರಳುವ ಲಾರಿಗಳು, ಖಾಸಗಿ ಮತ್ತು ಸರ್ಕಾರಿ ಬಸ್‌ಗಳು, ಕ್ರಷರ್‌ ಕಂಪನಿಗಳ ಟ್ರಕ್‌ಗಳು ನಿತ್ಯ ಸಂಚರಿಸುತ್ತಿವೆ.

‘ಗಾಂಧಿ ಸರ್ಕಲ್‌ನಲ್ಲಿ ಸಿಗ್ನಲ್‌ ಅಥವಾ ರಸ್ತೆ ಉಬ್ಬುಗಳು ಇಲ್ಲದ ಕಾರಣ ನಿತ್ಯ ಅಪಘಾತಗಳು ಸಂಭವಿಸಿ ಅಮಾಯಕರು ಬಲಿಯಾಗುತ್ತಿದ್ದಾರೆ’ ಎಂದು ಅವರು ತಿಳಿಸಿದರು.

‘ದ್ವಿಮುಖ ರಸ್ತೆ ನಿರ್ಮಿಸಿದ ಕೇಶಿಪ್‌ ಕಂಪನಿ ಸಮರ್ಪಕವಾಗಿ ಕೆಲಸ ಮಾಡಿಲ್ಲ. ಗಾಂಧಿನಗರ ಯುವಕರ ಸಂಘದ ವತಿಯಿಂದ ರಸ್ತೆ ಉಬ್ಬು ನಿರ್ಮಿಸುವಂತೆ ಹೋರಾಟ ನಡೆಸಿ ರಸ್ತೆ ತಡೆ ನಡೆಸಿದ್ದೆವು. ಒಂದು ವಾರದೊಳಗೆ ರಸ್ತೆ ಉಬ್ಬುಗಳನ್ನು ನಿರ್ಮಿಸಿಕೊಡುವುದಾಗಿ ತಿಳಿಸಿದ್ದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಇತ್ತ ಗಮನಿಸಿಲ್ಲ. ರಸ್ತೆ ಉಬ್ಬು ಅಥವಾ ಸಿಗ್ನಲ್‌ ದೀಪಗಳನ್ನು ಅಳವಡಿಸಿಕೊಡುವಂತೆ ಮತ್ತೊಮ್ಮೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಅವರು ಕ್ರಮ ಕೈಗೊಳ್ಳದಿದ್ದರೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುತ್ತೇವೆ’ ಎಂದು ತಿಳಿಸಿದರು.

ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ಕಮಲೇಶ್‌ ಮಾತನಾಡಿ, ‘ಶಿವಗಂಗೆ, ಗುಡೇಮಾರನ ಹಳ್ಳಿ, ಬಾಣವಾಡಿ ಎಲ್ಲ ಗ್ರಾಮಗಳ ಬಳಿ ಎರಡು ಎರಡು ರಸ್ತೆ ಉಬ್ಬು ನಿರ್ಮಿಸಿರುವ ಕೇಶಿಪ್‌ ಕಂಪನಿಯವರು, ಗಾಂಧಿ ವೃತ್ತದಲ್ಲಿಯ ಪ್ರತಿಮೆಯನ್ನು ತೆಗೆದು ಹಾಕಿದರು. ರಸ್ತೆ ಕಾಮಗಾರಿ ಮುಗಿದ ನಂತರ ಪುತ್ಥಳಿ ನಿರ್ಮಿಸಿ ಕೊಡುವುದಾಗಿ ತಿಳಿಸಿದ್ದ ಅಧಿಕಾರಿಗಳು ಮೌನಕ್ಕೆ ಶರಣಾಗಿರುವುದು ಅನುಮಾನಕ್ಕೆ ಎಡೆ ಮಾಡಿದೆ’ ಎಂದರು.

‘ರಸ್ತೆ ಉಬ್ಬು ನಿರ್ಮಿಸದಿದ್ದರೆ ಶಾಲಾ ಮಕ್ಕಳು ಅಪಘಾತಕ್ಕೆ ಸಿಲುಕಿ ಕೈಕಾಲು ಮುರಿದುಕೊಳ್ಳುವುದಕ್ಕೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು’ ಎಂದರು.

ಗಾಂಧಿ ನಗರದ ಮುಖಂಡರಾದ ನರಸಿಂಹ ಶೆಟ್ಟಿ, ರವೀಶ್‌, ವಕೀಲರಾದ ಡಿ.ಎಚ್‌. ಮಲ್ಲಿಕಾರ್ಜುನಯ್ಯ, ಮೋಹನ್‌ ಕುಮಾರ್‌, ಹೇಮಾಮಾಲಿನಿ, ಗುತ್ತಿಗೆದಾರ ವೆಂಕಟೇಶ್‌, ಬಡಗಿ ಹನುಮಂತಯ್ಯ, ಸಿದ್ದಲಿಂಗೇಶ್ವರ್‌, ಬಾಳೇನ ಹಳ್ಳಿ ಜಮೀನ್ದಾರ್‌ ನರಸಿಂಹಯ್ಯ, ನಿವೃತ್ತ ಮುಖ್ಯಶಿಕ್ಷಕರಾದ ರಂಗನಾಥ್‌, ವೀರಲಿಂಗಯ್ಯ, ಎಲ್‌.ನಂಜಯ್ಯ, ಜಯರಾಮಯ್ಯ, ಸರ್ಕಲ್‌ ನಲ್ಲಿ ಸಿಗ್ನಲ್‌ ದೀ‍ಪ ಅಥವಾ ರಸ್ತೆ ಉಬ್ಬು ನಿರ್ಮಿಸುವಂತೆ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT