ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ‘ಜಲಮಿಷನ್‌’ ಹಣದೋಚುವ ಯೋಜನೆ

ಮಾಗಡಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಆರೋಪ
Last Updated 19 ಜನವರಿ 2020, 13:40 IST
ಅಕ್ಷರ ಗಾತ್ರ

ಮಾಗಡಿ: ‘ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಾರಿಗೆ ತಂದಿರುವ ಜಲಮಿಷನ್ ಯೋಜನೆ ಹಣ ದೋಚುವ ತಂತ್ರವೇ ಹೊರತು ರೈತರಿಗೆ ಕಿಂಚಿತ್ತೂ ಲಾಭವಿಲ್ಲ’ ಎಂದು ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ಇಲ್ಲಿನ ಸೋಮನಳ್ಳಮ್ಮದೇವಿ ಕುಂಬಾಭಿಷೇಕ ನೆರವೇರಿಸಿ ಅವರು ಮಾತನಾಡಿದರು.

‘ಸಾಲಮನ್ನಾ ಹಣ ಬಂದಿಲ್ಲದವರು ಗಾಬರಿಯಾಗುವುದು ಬೇಡ. ನಮ್ಮ ಮನೆಗೆ ದಾಖಲೆಗಳೊಂದಿಗೆ ಬನ್ನಿ. ಸಾಲಮನ್ನಾ ಮಾಡಿಸಿಕೊಡುತ್ತೇನೆ. ಹಳ್ಳಿಗಾಡಿನ ರೈತರನ್ನು ಮರೆಯುವುದಿಲ್ಲ. ರೈತ ಸಮಾಜದ ರಕ್ಷಣೆಗೆ ಬದ್ಧ’ ಎಂದು ಭರವಸೆ ನೀಡಿದರು.

‘ಮುಖ್ಯಮಂತ್ರಿಯಾಗಿದ್ದಾಗ ಯಾರಿಗೂ ಅನ್ಯಾಯ ಮಾಡಿಲ್ಲ. ಪ್ರಾಮಾಣಿಕವಾಗಿ ಸರ್ವರ ಏಳಿಗೆಗೆ ಶ್ರಮಿಸಿದ್ದೇನೆ. ಕೇಂದ್ರ ಸರ್ಕಾರದ ನಡವಳಿಕೆಯಿಂದಾಗಿ ಖಜಾನೆ ಖಾಲಿಯಾಗಿದೆ. ನಿರುದ್ಯೋಗ ನಿವಾರಣೆ‌ ತಾಂಡವವಾಡುತ್ತಿದೆ. ಸಿಎಎ, ಎನ್‌ಆರ್‌ಸಿ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದಿವಾಸಿಗಳು, ಅಲೆಮಾರಿಗಳು, ಬಡುಕಟ್ಟು, ದಲಿತರ ಬಳಿ ದಾಖಲೆಗಳಿಲ್ಲ. ಅವರೆಲ್ಲರೂ ಭಾರತೀಯರಲ್ಲವೆ’ ಎಂದು ಪ್ರಶ್ನಿಸಿದರು.

‘ಸಿಎಎ ಮತ್ತು ಎನ್ಆರ್‌ಸಿ ಕುರಿತು ಗೃಹಮಂತ್ರಿ ಅಮಿತ್ ಶಾ ಸುಳ್ಳು ಹೇಳುತ್ತಿದ್ದಾರೆ. ದಲಿತರ ಅಭಿವೃದ್ಧಿಗೆ ಕಿಂಚಿತ್ತೂ ಗಮನಿದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೇಶವಾಸಿಗಳ ಗಮನ ಬೇರಡೆ ಸೆಳೆಯಲು ಇಲ್ಲದ ಸುಳ್ಳು ಹೇಳುತ್ತಿದ್ದಾರೆ. ಮಹದಾಯಿ ನೀರಿನ ವಿಚಾರ ಮತ್ತು ಪ್ರವಾಹದಲ್ಲಿ ಬೀದಿಗೆ ಬಿದ್ದಿರುವ ರೈತರ ಬಗ್ಗೆ ಒಂದೂ ಮಾತನಾಡಿಲ್ಲ. ನನ್ನ ಅಧಿಕಾರದ ಅವಧಿಯಲ್ಲಿ ಬೆಳಗಾವಿ ಅಭಿವೃದ್ಧಿಗೆ ₹ 1,500 ಕೋಟಿ ಹಣ ನೀಡಿದ್ದೇನೆ’ ಎಂದು ತಿಳಿಸಿದರು.

‘ಮೊನ್ನೆ ನಡೆದ ಚುನಾವಣೆಯಲ್ಲಿ ಜಾತಿ ಹೆಸರಿನಲ್ಲಿ ಮತ ಚಲಾಯಿಸಿದರು. 17 ಜನ ಅನರ್ಹ ಶಾಸಕರ ಕ್ಷೇತ್ರಗಳ ಅಭಿವೃದ್ಧಿಗೆ ₹ 5,280 ಕೋಟಿ ಮಂಜೂರು ಮಾಡಿದ್ದೆ. ಆದರೆ ವಂಚನೆ ಮಾಡಿದರು. ನಾನು ಮಾಡಿದ ಜನಪರ ಕಾರ್ಯಗಳ ಬಗ್ಗೆ ಮಾದ್ಯಮಗಳು ಬೆಳಕು ಚೆಲ್ಲಲಿಲ್ಲ. ನದಿ ಮೂಲಕ ಎಲ್ಲ ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ಉದ್ದೇಶ ಇತ್ತು’ ಎಂದರು.

‘ಶಾಸಕ ಎ.ಮಂಜುನಾಥ ಗ್ರಾಮೀಣ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಜನರೇ ನಮ್ಮ ಆಸ್ತಿ. ನೀವು ನಮ್ಮ ಕುಟುಂಬದ ಮೇಲೆ ಇಟ್ಟಿರುವ ಪ್ರೀತಿ ಮತ್ತು ವಿಶ್ವಾಸ ಉಳಿಸಿಕೊಳ್ಳುತ್ತೇನೆ’ ಎಂದರು.

ಶಾಸಕ ಎ.ಮಂಜುನಾಥ, ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಕೆ.ಕೃಷ್ಣಮೂರ್ತಿ, ಜೆಡಿಎಸ್ ಮುಖಂಡರಾದ ಗಿರಿಯಪ್ಪ, ಬಗಿನಗೆರೆರಾಮಣ್ಣ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎಂ.ರಾಮಣ್ಣ, ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ, ಅಯ್ಯಂಡಹಳ್ಳಿ ರಂಗಸ್ವಾಮಿ, ಸಂಸ್ಕೃತ ವಿದ್ವಾಂಸ ಡಾ.ನಂಜುಂಡಯ್ಯ, ಡಾ.ರಾಮಚಂದ್ರ, ಜಿ.ಗಂಗಾಧರ್‌, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT