ಭಾನುವಾರ, ಆಗಸ್ಟ್ 1, 2021
27 °C
ಕೋವಿಡ್‌ ಅಲೆಗೆ ಸಿಲುಕಿ ನಲುಗಿರುವ ತಯಾರಕರು, ಮಾರಾಟಗಾರರು

ಸಂಕಷ್ಟದಲ್ಲಿ ಚನ್ನಪಟ್ಟಣ ಗೊಂಬೆ ಉದ್ಯಮ

ಎಚ್.ಎಂ. ರಮೇಶ್ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ವಿಶ್ವವಿಖ್ಯಾತ ಚನ್ನಪಟ್ಟಣದ ಗೊಂಬೆ ಉದ್ಯಮದ ಮೇಲೆ ಕೊರೊನಾ ದುಷ್ಪರಿಣಾಮ ಬೀರಿದ್ದು, ಕಳೆದ 15 ತಿಂಗಳುಗಳಿಂದ ಗೊಂಬೆ ತಯಾರಿಕರು, ಮಾರಾಟ ಮಾಡುವವರು ಕೊರೊನಾ ಸಂಕಷ್ಟಕ್ಕೆ ಸಿಲುಕಿ ನಲುಗಿ ಹೋಗಿದ್ದಾರೆ.

ಕೊರೊನಾದಿಂದ ಗೊಂಬೆ ಉದ್ಯಮಕ್ಕೆ ಪೆಟ್ಟು ಬಿದ್ದಿದ್ದು, ಗೊಂಬೆ ಮಾರಾಟವು ಸಹ ಕಳೆಗುಂದಿದೆ. ಗೊಂಬೆ ತಯಾರಿಕೆಗೆ ಬಳಸುವ ಕಚ್ಛಾ ಪದಾರ್ಥಗಳಾದ ಮರ, ಬಣ್ಣ ಮುಂತಾದ ವಸ್ತುಗಳ ಬೆಲೆಯಲ್ಲಿ ಭಾರಿ ಏರಿಕೆ ಕಂಡಿರುವುದರಿಂದ ಬೆಲೆಯೂ ಏರಿಕೆಯಾಗಿ ಗೊಂಬೆಗಳನ್ನು ಕೇಳುವವರೆ ಇಲ್ಲದಂತಾಗಿದೆ.

ಚೀನಾ ಗೊಂಬೆಗಳ ಪೈಪೋಟಿಯ ನಡುವೆಯೂ ಚನ್ನಪಟ್ಟಣ ಗೊಂಬೆಗಳಿಗೆ ಭಾರಿ ಬೇಡಿಕೆ ಇತ್ತು. ಗುಣಮಟ್ಟ, ಬಾಳಿಕೆ ವಿಚಾರದಲ್ಲಿ ಚನ್ನಪಟ್ಟಣ ಗೊಂಬೆಗಳಿಗೆ ಸರಿಸಾಟಿ ಇಲ್ಲ. ಅಮೆರಿಕಾದ ಶ್ವೇತಭವನದಲ್ಲಿ ಚನ್ನಪಟ್ಟಣದ ಗೊಂಬೆಗಳು ಸ್ಥಾನ ಪಡೆದಿವೆ. ಭಾರತ ಪ್ರವಾಸ ಮಾಡಿದ್ದ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಪತ್ನಿ ಮಿಶೇಲ್ ಒಬಾಮ ಕೂಡ ಚನ್ನಪಟ್ಟಣ ಗೊಂಬೆಗಳ ಸೌಂದರ್ಯಕ್ಕೆ ಸೋತು ದೆಹಲಿಯಲ್ಲಿ ಗೊಂಬೆಗಳನ್ನು ಖರೀದಿಸಿದ್ದರು.

‘ಇಂತಹ ಗೊಂಬೆಗಳ ಉದ್ಯಮಕ್ಕೆ ಕೊರೊನಾದಿಂದ ಹೊಡೆತ ಬಿದ್ದಿರುವುದಂತೂ ಸತ್ಯ. ಒಂದು ಕಡೆ ಸರ್ಕಾರದ ಜಿ.ಎಸ್.ಟಿ. ನಿಯಮದ ಕಷ್ಟ, ಇನ್ನೊಂದೆಡೆ ಕೊಳ್ಳುವವರ ಸಂಖ್ಯೆಯಲ್ಲಿ ಗಣನೀಯ ಇಳಕೆಯಾಗಿರುವುದು ಗೊಂಬೆ ಉದ್ಯಮವನ್ನು ಸಂಕಷ್ಟಕ್ಕೆ ಈಡು ಮಾಡಿದೆ. ಸರ್ಕಾರವು ಗೊಂಬೆಗಳ ಮೇಲೆ ಶೇ 12ರಿಂದ ಶೇ 28ರವರೆಗೆ ತೆರಿಗೆ ವಿಧಿಸುತ್ತಿದೆ. ತೆರಿಗೆ ಹೆಚ್ಚಾದಂತೆಲ್ಲಾ ಗೊಂಬೆಗಳ ಬೆಲೆಯೂ ಏರಿಕೆಯಾಗುವುದರಿಂದ ಬೇಡಿಕೆ ಕಡಿಮೆಯಾಗುತ್ತಿದೆ’ ಎಂದು ಪಟ್ಟಣದ ಗೊಂಬೆ ವ್ಯಾಪಾರಿ ಮನುಕುಮಾರ್ ಅಳಲು ತೋಡಿಕೊಳ್ಳುತ್ತಾರೆ.

‘ಒಂದು ದಿನಕ್ಕೆ ₹400ರಿಂದ 500 ಸಂಪಾದನೆ ಮಾಡುವ ಬಡ ಕೂಲಿ ಕಾರ್ಮಿಕರ ಹೊಟ್ಟೆಯ ಮೇಲೆ ಕೊರೊನಾ ಬರೆ ಎಳೆದಿದೆ. ಗೊಂಬೆ ಬೇಡಿಕೆ ಕುಸಿದ

ಕಾರಣ ಈಗ ಕೂಲಿ ಕಾರ್ಮಿಕರಿಗೆ ಕೆಲಸವೂ ಇಲ್ಲದೆ, ಸಣ್ಣಪುಟ್ಟ ಗುಡಿ ಕೈಗಾರಿಕೆಗಳೆಲ್ಲವೂ
ಅರ್ಧದಿನ ಮಾತ್ರ ಕಾರ್ಯನಿರ್ವಹಿಸುವಂತಾಗಿದೆ. ಲಾಕ್ ಡೌನ್ ವೇಳೆ ಭಾಗಶಃ ಮುಚ್ಚಿದ್ದ ಗೊಂಬೆ ಗುಡಿ ಕೈಗಾರಿಕೆಗಳು ಈಗ ಕಾರ್ಯನಿರ್ವಹಿಸಲು ಆರಂಭಿಸಿದ್ದರೂ ಬೇಡಿಕೆ ಇಲ್ಲದೆ ಕಂಗೆಟ್ಟಿವೆ’ ಎಂದು ಗೊಂಬೆ ತಯಾರಕರಾದ ಸುನೀಲ್, ರವಿ ನೋವಿನಿಂದ ಹೇಳುತ್ತಾರೆ.

‘ತಿಂಗಳೊಂದಕ್ಕೆ ಚನ್ನಪಟ್ಟಣ ಗೊಂಬೆ ಉದ್ಯಮ ಕನಿಷ್ಠ ₹1.50 ಕೋಟಿ ವಹಿವಾಟು ನಡೆಸುತ್ತಿತ್ತು. ಈಗ ಇದು ಗಣನೀಯ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಗೊಂಬೆ ಉದ್ಯಮದಲ್ಲಿ ತೊಡಗಿರುವ ತಾಲ್ಲೂಕಿನ ಕರಿಯಪ್ಪನದೊಡ್ಡಿ, ಎಲೆಕೇರಿ, ಕೋಟೆ, ಸುಣ್ಣಘಟ್ಟ, ನೀಲಸಂದ್ರ, ಪಟ್ಟಣದ ವಿವಿಧೆಡೆ ಇರುವ ಕೂಲಿ ಕಾರ್ಮಿಕರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊರೊನಾ ಹಾಗೂ ಬೆಲೆ ಏರಿಕೆಯಿಂದಾಗಿ ಗೊಂಬೆಗಳಿಗೆ ಬೇಡಿಕೆ ಕಡಿಮೆಯಾಗಿರುವುದರಿಂದ ಕೆಲವರು ಗೊಂಬೆ ಉದ್ಯಮ ನಿಲ್ಲಿಸುವ ಸ್ಥಿತಿ ತಲುಪಿದ್ದಾರೆ’ ಎಂದು ಮತ್ತೊಬ್ಬ ಉದ್ಯಮಿ ಸುನೀಲ್ ಹೇಳುತ್ತಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗೊಂಬೆ ಉದ್ಯಮ ಉಳಿಸಿ, ಬೆಳೆಸಲು ಯೋಜನೆಗಳನ್ನು ರೂಪಿಸಬೇಕು. ಮಧ್ಯವರ್ತಿಗಳ ಹಾವಳಿಯಿಲ್ಲದೆ ಗೊಂಬೆಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಸೌಲಭ್ಯವನ್ನು ಜಾರಿಗೆ ತರಬೇಕು. ತಲತಲಾಂತರದಿಂದ ನಡೆಸಿಕೊಂಡು ಬಂದಿರುವ ಗೊಂಬೆ ತಯಾರಿಕೆಯ ಕಲೆಯನ್ನು, ಕಲೆಗಾರರನ್ನು ಕಷ್ಟದಿಂದ ದೂರ ಮಾಡಬೇಕು ಎನ್ನುವುದು ಗೊಂಬೆ ತಯಾರಕರ ಒತ್ತಾಯವಾಗಿದೆ.

ವಿದೇಶಗಳಿಂದಲೂ ಬೇಡಿಕೆ ಇಲ್ಲ

ಚನ್ನಪಟ್ಟಣದ ಗೊಂಬೆಗಳನ್ನು ಗ್ರಾಹಕರಿಗೆ ನೇರ ಮಾರಾಟ ಮಾಡಲು ಕೇಂದ್ರ ಸರ್ಕಾರವು ಅಂಚೆ ಇಲಾಖೆ ಮೂಲಕ ‘ಗೊಂಬೆ ಪಾರ್ಸೆಲ್ ಬುಕ್ಕಿಂಗ್ ಕೇಂದ್ರ’ ತೆರೆದಿದೆಯಾದರೂ ವಿದೇಶಗಳ ಗ್ರಾಹಕರಿಂದ ಹೇಳಿಕೊಳ್ಳುವಂತಹ ಬೇಡಿಕೆಯೆ ಬರುತ್ತಿಲ್ಲ.

ಚನ್ನಪಟ್ಟಣವು ಗೊಂಬೆ ಹಾಗೂ ಮಕ್ಕಳ ಆಟಿಕೆ ತಯಾರಿಕೆಯಲ್ಲಿ ವಿಶ್ವ ವಿಖ್ಯಾತಿ ಪಡೆದಿರುವ ಹಿನ್ನೆಲೆಯಲ್ಲಿ ತಯಾರಕರ ಸಂಕಷ್ಟವನ್ನು ಅರಿತು ಅಂಚೆ ಇಲಾಖೆಯು ಈ ಸೇವೆಯನ್ನು ಆರಂಭಿಸಿದೆ. ಗೊಂಬೆ ತಯಾರಕರು ನೇರವಾಗಿ ದೇಶ ವಿದೇಶಗಳ ಗ್ರಾಹಕರಿಗೆ ತಮ್ಮ ಉತ್ಪನ್ನಗಳನ್ನು ಯಾವುದೇ ಹೆಚ್ಚಿನ ಸುಂಕವಿಲ್ಲದೆ ತಲುಪಿಸುವ ಯೋಜನೆ ಇದಾಗಿದೆ. ಬೊಂಬೆಗಳನ್ನು ಕೊಳ್ಳಲು ಇಚ್ಛಿಸುವ ಅಂತರರಾಷ್ಟ್ರೀಯ ವ್ಯಾಪಾರಸ್ಥರು, ಗ್ರಾಹಕರು, ತಯಾರಿಕರ ಇ ಮೇಲ್ ವಿಳಾಸಕ್ಕೆ ತಮ್ಮ ಬೇಡಿಕೆಯನ್ನು ಕಳಿಸಿದರೆ ಅದರಂತೆ ಗೊಂಬೆಗಳನ್ನು ಅಂಚೆ ಇಲಾಖೆಯ ಮೂಲಕ ಅವರ ವಿಳಾಸಕ್ಕೆ ಪಾರ್ಸಲ್ ಮಾಡಲಾಗುತ್ತದೆ.

‘ಅಂತರರಾಷ್ಟ್ರೀಯ ವ್ಯಾಪಾರಸ್ಥರು, ಗ್ರಾಹಕರು ಗೊಂಬೆಗಳ ಪಾರ್ಸೆಲ್ ವಿಚಾರದಲ್ಲಿ
ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ. ಆರಂಭದಲ್ಲಿ ಸ್ವಲ್ಪಮಟ್ಟಿಗೆ ಈ ಯೋಜನೆಯಿಂದ ಗೊಂಬೆ ತಯಾರಿಕರಿಗೆ ಅನುಕೂಲವಾಗಿತ್ತು. ಆದರೆ ಕೊರೊನಾ ವೇಳೆ ಅದು ಸಂಪೂರ್ಣ ಕುಸಿದಿದೆ’ ಎಂದು ಗೊಂಬೆ ತಯಾರಕ ನಾಗರಾಜು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ದಸರಾ ಗೊಂಬೆ ಮಾರಾಟವೂ ಇಲ್ಲ!

‘ದಸರಾ ವೇಳೆಯಲ್ಲಿ ಎಲ್ಲೆಡೆ ಗೊಂಬೆ ಪ್ರದರ್ಶನ ನಡೆಯುತ್ತಿತ್ತು. ಆಗ ಚನ್ನಪಟ್ಟಣ ಗೊಂಬೆಗಳಿಗೆ ಬೇಡಿಕೆ ಹೆಚ್ಚಾಗಿ ಇರುತ್ತಿತ್ತು. ಆದರೆ ಈ ಬಾರಿ ಕೊರೊನಾದಿಂದ ದಸರಾ ಗೊಂಬೆ ಪ್ರದರ್ಶನವೂ ಇಲ್ಲವಾಯಿತು. ಈ ಬಾರಿಯೂ ದಸರಾ ನಡೆಯುತ್ತದೆ ಎನ್ನುವ ನಂಬಿಕೆ ಇಲ್ಲ. ಇದೆಲ್ಲದರ ಕಾರಣ ಹಾಗೂ ಬೆಲೆ ಏರಿಕೆಯಿಂದಾಗಿ ಗೊಂಬೆ ಮಾರಾಟ ಇಳಿಮುಖವಾಗಿದೆ’ ಎಂಬುದು ಪಟ್ಟಣದ ಗೊಂಬೆ ಅಂಗಡಿಯ ವ್ಯವಸ್ಥಾಪಕ ವೆಂಕಟೇಶ್ ಅಭಿಪ್ರಾಯವಾಗಿದೆ.

‘ಚನ್ನಪಟ್ಟಣ ಗೊಂಬೆಗಳು ಚೀನಾ ದೇಶದ ಗೊಂಬೆಗಳ ನಡುವೆ ಪೈಪೋಟಿ ನಡೆಸಬೇಕು. ಚೀನಾ ಗೊಂಬೆಗಳಿಗೆ ಬೆಲೆ ಕಡಿಮೆ ಇದ್ದರೂ ಚನ್ನಪಟ್ಟಣ ಗೊಂಬೆಗಳಿಗೆ ಬೇಡಿಕೆ ಇತ್ತು. ಆದರೆ ಕೊರೊನಾ ವೇಳೆ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆ, ಲಾಕ್ ಡೌನ್, ಮುಚ್ಚಿದ ಅಂಗಡಿಗಳು, ಇದೆಲ್ಲಾ ಕಾರಣದಿಂದ ಗೊಂಬೆ ಉದ್ಯಮದ ಮೇಲೆ ಕರಿನೆರಳು ಬಿದ್ದಿತು’ ಎಂದು ಕರಿಯಪ್ಪನದೊಡ್ಡಿಯ ಗೊಂಬೆ ತಯಾರಿಕಾ ಘಟಕದ ಚಂದ್ರು ಅಳಲು ತೋಡಿಕೊಳ್ಳುತ್ತಾರೆ.

ವಿಶೇಷ ಯೋಜನೆ ಅಗತ್ಯ

ಚನ್ನಪಟ್ಟಣದ ಗೊಂಬೆಗಳ ಅಂದಚಂದಕ್ಕೆ ಮನಸೋತವರು ಬಹಳ ಮಂದಿ. ಇಂತಹ ಗೊಂಬೆಗಳ ತಯಾರಿಕೆಯ ಮೇಲೆ ಬೀರುತ್ತಿರುವ ದುಷ್ಪರಿಣಾಮವನ್ನು ಅರಿತು ಸರ್ಕಾರಗಳು ಗೊಂಬೆ ಉದ್ಯಮ, ಗೊಂಬೆ ತಯಾರಿಕಾ ಕಾರ್ಮಿಕರಿಗೆ ವಿಶೇಷ ಯೋಜನೆಗಳನ್ನು ರೂಪಿಸಿ ಗೊಂಬೆ ಕಲೆಯನ್ನು ಉಳಿಸಲು ಮುಂದಾಗಬೇಕು.

-ಶ್ರೀನಿವಾಸ್, ಗೊಂಬೆ ತಯಾರಕ, ಮುನಿಯಪ್ಪನದೊಡ್ಡಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು