ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಕ್ಕಳ ಹಕ್ಕುಗಳ ಜಾಗೃತಿ ಅಗತ್ಯ’

ಅಕ್ಕೂರು ಗ್ರಾಮ ಪಂಚಾಯಿತಿಯಲ್ಲಿ ಮಕ್ಕಳ ಗ್ರಾಮಸಭೆ
Published 16 ಡಿಸೆಂಬರ್ 2023, 7:40 IST
Last Updated 16 ಡಿಸೆಂಬರ್ 2023, 7:40 IST
ಅಕ್ಷರ ಗಾತ್ರ

ರಾಮನಗರ: ‘ಮಕ್ಕಳ ಹಕ್ಕುಗಳ ಕುರಿತು ಎಲ್ಲರೂ ಜಾಗೃತರಾಗುವ ಜೊತೆಗೆ, ಅವುಗಳ ರಕ್ಷಣೆಗೆ ಮುಂದಾಗಬೇಕು. ಶಿಕ್ಷಣ ಮೂಲಭೂತ ಹಕ್ಕಾಗಿದ್ದು, ಅದರಿಂದ ಮಕ್ಕಳು ವಂಚಿತರಾಗದಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಸಹ ಹಲವು ಕ್ರಮಗಳನ್ನು ಕೈಗೊಂಡಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗಯ್ಯ ಹೇಳಿದರು.

ತಾಲ್ಲೂಕಿನ ಅಕ್ಕೂರು ಗ್ರಾಮ ಪಂಚಾಯಿತಿಯಲ್ಲಿ ಬುಧವಾರ ನಡೆದ ಮಕ್ಕಳ ಗ್ರಾಮಸಭೆ ಉದ್ಘಾಟಿಸಿ ಮಾತನಾಡಿದ ಅವರು, ‘ಮಕ್ಕಳಿಗೆ ಹಾಗೂ ಶಾಲೆಗಳಿಗೆ ಬೇಕಾದ ಸೌಲಭ್ಯಗಳನ್ನು ಶಿಕ್ಷಣ ಇಲಾಖೆ ಒದಗಿಸುತ್ತಿದೆ. ಉಚಿತ ಸಮವಸ್ತ್ರ, ಶೂ, ಸಾಕ್ಸ್, ಬಿಸಿಯೂಟ, ಹಾಲು, ಬಾಳೆಹಣ್ಣು, ಚಿಕ್ಕಿ ವಿತರಣೆ ಮಾಡಲಾಗುತ್ತಿದೆ. ಮಕ್ಕಳನ್ನು ಶಾಲೆಯತ್ತ ಸೆಳೆಯಲು ಹಲವು ಕ್ರಮಗಳನ್ನು ಇಲಾಖೆ ಅನುಸರಿಸುತ್ತಿದೆ’ ಎಂದರು.

‘ಮಕ್ಕಳು ಉತ್ತಮ ಶಿಕ್ಷಣ ಪಡೆದುಕೊಂಡು ಈ ದೇಶದ ಪ್ರಬುದ್ಧ ವ್ಯಕ್ತಿಗಳಾಗಬೇಕು. ಮಕ್ಕಳ ಗ್ರಾಮಸಭೆಗಳು, ಅವರಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಎಲ್ಲಾ ಇಲಾಖೆಗಳ ಅಧಿಕಾರಿಗಳು ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ತಮ್ಮ ಇಲಾಖೆಗಳಲ್ಲಿರುವ ಸೌಲಭ್ಯಗಳನ್ನು ತಿಳಿಸಬೇಕು. ಆಗ ಮಾತ್ರ, ಇಂತಹ ಸಭೆಗಳು ಸಾರ್ಥಕವಾಗುತ್ತವೆ’ ಎಂದು ಅಭಿಪ್ರಾಯಪಟ್ಟರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಅಧ್ಯಕ್ಷ ಉಮೇಶ್ ದೊಡ್ಡಗಂಗವಾಡಿ, ‘ಮಕ್ಕಳ ಸಮಸ್ಯೆ ಹಾಗೂ ಹಕ್ಕುಗಳ ಕುರಿತು ಸ್ಥಳೀಯ ಸರ್ಕಾರಗಳು ಮತ್ತು ಸಂಬಂಧಿಸಿದ ಇಲಾಖೆಗಳು ಗಮನ ಹರಿಸಬೇಕು. ಎಸ್‌ಡಿಎಂಸಿಗಳು, ಪೋಷಕರು ಹಾಗೂ ಸ್ಥಳಿಯ ಜನಪ್ರತಿನಿದಿಗಳು ತಮ್ಮ ಜವಾಬ್ದಾರಿ ಅರಿತು ಮಕ್ಕಳ ಪೂರಕ ಬೆಳವಣಿಗೆಗೆ ಅಗತ್ಯ ವ್ಯವಸ್ಥೆ ಮಾಡಬೇಕು’ ಎಂದರು.

ವಲಯ ಅರಣ್ಯ ಅಧಿಕಾರಿ ಮಲ್ಲೇಶ್ ಮಾತನಾಡಿ, ‘ಮಕ್ಕಳಿರುವ ಪರಿಸರ ಹಾಗೂ ಶಾಲಾ ವಾತಾವರಣ ಮತ್ತು ಮಕ್ಕಳಿಗೆ ಪೂರಕವಾಗಿರಬೇಕು. ಆಗ ಮಾತ್ರ ಅವರಲ್ಲಿ ಕಲಿಕಾಸಕ್ತಿ ಹೆಚ್ಚಾಗುತ್ತದೆ. ಇದಕ್ಕೆ ಸ್ಥಳೀಯ ಆಡಳಿತದ ಜೊತೆಗೆ ಜನಪ್ರತಿನಿಧಿಗಳು ಹಾಗೂ ಪೋಷಕರ ಸಹಕಾರ ಅತ್ಯಗತ್ಯ’ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ವಿದ್ಯಾರ್ಥಿನಿಯರಾದ ಅಂಕಿತಾ ಹಾಗೂ ಪುಣ್ಯಶ್ರೀ ವಹಿಸಿದ್ದರು. ಪಂಚಾಯಿತಿ ಅಧ್ಯಕ್ಷ ಮಂಜುಳಾ ಬಿ.ಆರ್, ಉಪಾಧ್ಯಕ್ಷೆ ಗೌರಮ್ಮ, ಪಿಡಿಒ ಎಚ್. ಮಹೇಶ್ವರಯ್ಯ, ಕಾರ್ಯದರ್ಶಿ ಸಿ. ಶಾರದಮ್ಮ, ಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT