ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಿಷ್ಠ ಕೂಲಿಗಾಗಿ ಕೋಟಿ ಸಹಿ ಸಂಗ್ರಹ ಅಭಿಯಾನ

ಅಂಗನವಾಡಿ ನೌಕರರ ಸಂಘದ ಸಭೆಯಲ್ಲಿ ಸಿಐಟಿಯು ಅಧ್ಯಕ್ಷೆ ಎಸ್. ವರಲಕ್ಷ್ಮಿ
Published 3 ಜನವರಿ 2024, 14:46 IST
Last Updated 3 ಜನವರಿ 2024, 14:46 IST
ಅಕ್ಷರ ಗಾತ್ರ

ರಾಮನಗರ: ‘ಅಂಗನವಾಡಿ ನೌಕರರಿಗೆ ನ್ಯಾಯಯುತವಾಗಿ ಸಿಗಬೇಕಾದ ಕನಿಷ್ಠ ಕೂಲಿ ಮತ್ತು ಗ್ರಾಚ್ಯುಯಿಟಿ ಸಿಗಬೇಕಾದರೆ ನಾವು ಹೋರಾಟ ಮಾಡಬೇಕು. ಅದಕ್ಕಾಗಿ, ಜ. 12ರಿಂದ ಜಿಲ್ಲಾ ಮಟ್ಟದಲ್ಲಿ ಬೇಡಿಕೆ ಈಡೇರಿಕೆಗಾಗಿ ಕೋಟಿ ಸಹಿ ಸಂಗ್ರಹ ಅಭಿಯಾನ ಮಾಡಲಾಗುವುದು’ ಎಂದು ಅಂಗನವಾಡಿ ನೌಕರರ ಸಂಘ ಹಾಗೂ ಸಿಐಟಿಯು ರಾಜ್ಯ ಘಟಕದ ಅಧ್ಯಕ್ಷೆ ಎಸ್. ವರಲಕ್ಷ್ಮಿ ಹೇಳಿದರು.

ನಗರದ ಗುರುಭವನದಲ್ಲಿ ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಮನಗರ ಜಿಲ್ಲಾ ಸಮಿತಿಯ ಸರ್ವಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ‘ಅಭಿಯಾನದ ಭಾಗವಾಗಿ ಜಿಲ್ಲಾ ಮಟ್ಟದ ಜಾಥಾಗಳನ್ನು ನಡೆಸಿ ಜಾಗೃತಿ ಮೂಡಿಸಲಾಗುವುದು’ ಎಂದರು.

‘ಅಂಗನವಾಡಿಗಳಿಗೆ ಹಿಂದೆ ಕೇಂದ್ರ ಸರ್ಕಾರವೇ ಶೇ 100ರಷ್ಟು ಅನುದಾನ ನೀಡುತ್ತಿತ್ತು. ಆದರೆ, 2014ರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿಯು ಅನುದಾನವನ್ನು ಶೇ 60ಕ್ಕೆ ಇಳಿಸಿತು. ಇದರಿಂದಾಗಿ ಉಳಿದ ಹಣವನ್ನು ರಾಜ್ಯ ಸರ್ಕಾರಗಳೇ ಭರಿಸಬೇಕಾಗಿದೆ. ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡಿದ್ದರಿಂದ, ಸ್ಥಳೀಯ ಸರ್ಕಾರಗಳಿಗೆ ಹೊರೆಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಭೆ ಉದ್ಘಾಟಿಸಿ ಮಾತನಾಡಿದ ಸಿಐಟಿಯು ರಾಜ್ಯ ಕಾರ್ಯದರ್ಶಿ ಬಿ.ಬಿ. ರಾಘವೇಂದ್ರ, ‘ಅಂಗನವಾಡಿ ನೌಕರರನ್ನು ಖಾಯಂ ಮಾಡಬೇಕು. ಅವರಿಗೆ ಕನಿಷ್ಠ ಕೂಲಿ ನೀಡದೆ ಅವರಿಂದ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಗ್ರಾಚ್ಯುಯಿಟಿ ಕೊಡಬೇಕೆಂದು ಆದೇಶವಾಗಿದ್ದರೂ, ಅಗತ್ಯ ಹಣವನ್ನು ಮೀಸಲಿಡುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕೇಂದ್ರ ಸರ್ಕಾರವು ಯೋಜನಾ ಆಯೋಗವನ್ನು ರದ್ದುಪಡಿಸಿ, ನೀತಿ ಆಯೋಗವನ್ನು ರಚಿಸಿದ್ದರಿಂದಾಗಿ ಹಲವು ಯೋಜನೆಗಳಿಗೆ ಸಿಗಬೇಕಾದ ಅನುದಾನ ಸರಿಯಾಗಿ ಸಿಗುತ್ತಿಲ್ಲ. ಇದರಿಂದಾಗಿ, ಹಲವು ಕಲ್ಯಾಣ ಯೋಜನೆಗಳು ಇದ್ದೂ ಇಲ್ಲದಂತಿವೆ’ ಎಂದರು.

ವರದಿ ಮಂಡಿಸಿದ ಸಂಘದ ಜಿಲ್ಲಾ ಕಾರ್ಯದರ್ಶಿ ಸಿ. ಜಯಲಕ್ಷ್ಮಮ್ಮ, ‘ಅಂಗನವಾಡಿ ನೌಕರರ ಸಂಘಟನೆಯನ್ನು RR ಇಡೀ ಜಿಲ್ಲೆಗೆ ವಿಸ್ತರಣೆ ಮಾಡುವುದರ ಜೊತೆಗೆ, ತಳಮಟ್ಟದಿಂದ ಬಲಪಡಿಸಬೇಕು’ ಎಂದು ಸಲಹೆ ನೀಡಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಪುಷ್ಪಲತಾ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಸಂಘದ ಖಜಾಂಚಿ ಶಾರದಾ, ಸಾವಿತ್ರಿ, ಶಿವಮ್ಮ, ಹೇಮಾ, ಭಾಗ್ಯ, ಪರ್ವೀನ್, ಮುಮ್ತಾಜ್, ಗೌರಮ್ಮ, ನಾಗಮ್ಮ, ಗೀತಾ, ರಾಮಕ್ಕ, ನಾಗರತ್ನ, ನಾಗರತ್ನ ಹಾಗೂ ಇತರರ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT