ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಕೊಟ್ಟ ವೈ–ಫೈ: ರೈತರ ಆಕ್ರೋಶ

ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಘಟನೆ: ಅಧಿಕಾರಿಗಳೊಂದಿಗೆ ವಾಗ್ವಾದ
Last Updated 26 ಜುಲೈ 2019, 12:51 IST
ಅಕ್ಷರ ಗಾತ್ರ

ರಾಮನಗರ: ಇಲ್ಲಿನ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಶುಕ್ರವಾರ ಬೆಳಿಗ್ಗೆ ಕೆಲ ಹೊತ್ತು ವೈಫೈ ಕೈಕೊಟ್ಟಿದ್ದು, ಘಟನೆ ಖಂಡಿಸಿ ಬೆಳೆಗಾರರು ಪ್ರತಿಭಟನೆ ನಡೆಸಿದರು.

ಮಾರುಕಟ್ಟೆಯಲ್ಲಿ ಬೆಳಿಗ್ಗೆ ರೇಷ್ಮೆಗೂಡು ಹರಾಜು ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಕೆಲ ಕಾಲ ವೈ–ಫೈ ಸೇವೆಯು ಸ್ಥಗಿತಗೊಂಡಿತು. ಇದರಿಂದಾಗಿ ಗೂಡು ಹರಾಜು ಪ್ರಕ್ರಿಯೆಗೆ ಅಡ್ಡಿಯಾಯಿತು. ಕೆಲ ಹೊತ್ತಿನ ಬಳಿಕ ಮತ್ತೆ ವೈ–ಫೈ ಸೇವೆ ದೊರೆತು ಇ–ಹರಾಜು ಆರಂಭಗೊಂಡಿತು.

‘ಹರಾಜು ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಅಧಿಕಾರಿಗಳು ಬೇಕೆಂತಲೇ ಮಾರುಕಟ್ಟೆಯ ವೈ–ಫೈ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ದಲ್ಲಾಳಿಗಳು ಅಧಿಕ ಮೌಲ್ಯಕ್ಕೆ ಹರಾಜಾಗುವ ಗೂಡನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವಂತೆ ರೈತರನ್ನು ಒತ್ತಾಯಿಸುತ್ತಿದ್ದಾರೆ’ ಎಂದು ಸ್ಥಳದಲ್ಲಿದ್ದ ರೈತ ಮುಖಂಡರು ದೂರಿದರು.

‘₹ 350ಕ್ಕಿಂತ ಹೆಚ್ಚಿನ ದರಕ್ಕೆ ಹರಾಜು ಆಗಬೇಕಾದ ಗೂಡನ್ನು ಮಾರುಕಟ್ಟೆಯಲ್ಲಿ ₹ 210ಕ್ಕೆ ಮಾರಾಟ ಮಾಡಲಾಗುತ್ತಿದೆ. ಒಂದು ಕೆ.ಜಿ. ಗೂಡು ಉತ್ಪಾದನೆಗೆ ₹ 300 ಖರ್ಚಾಗುತ್ತದೆ. ಹೀಗಿರುವಾಗ ಖರ್ಚಾದ ಹಣವೂ ರೈತರಿಗೆ ಸಿಗದೇ ಹೋದರೆ ಹೇಗೆ?’ ಎಂದು ಬೆಳೆಗಾರರು ಪ್ರಶ್ನಿಸಿದರು.

‘ವೈ–ಫೈ ಸಂಪರ್ಕ ಕಡಿತಗೊಂಡ ಬಳಿಕ ಅಧಿಕಾರಿಗಳು ಈ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತಿಲ್ಲ. ಪ್ರತಿನಿತ್ಯ ರೈತರಿಗೆ ಇದೇ ರೀತಿ ಅನ್ಯಾಯ ಆಗುತ್ತಿದೆ’ ಎಂದು ದೂರಿದರು.

ಅಧಿಕಾರಿಗಳ ಸ್ಪಷ್ಟನೆ: ಈ ಕುರಿತು ಮಾರುಕಟ್ಟೆಯ ಉಪನಿರ್ದೇಶಕ ಮುನ್ಶಿಬಸಯ್ಯ ಪ್ರತಿಕ್ರಿಯಿಸಿ ‘ನಗರದಲ್ಲಿ ಎರಡು ದಿನದಿಂದ ಮೋಡ ಕವಿದ ವಾತಾವರಣ ಇದೆ. ಈ ವ್ಯತ್ಯಾಸದಿಂದಾಗಿ ಒಂದೆರಡು ನಿಮಿಷ ವೈ–ಫೈ ಸೇವೆಯಲ್ಲಿ ವ್ಯತ್ಯಾಸವಾಗಿದೆ. ನಂತರದಲ್ಲಿ ವ್ಯವಸ್ಥೆ ಸರಿಹೋಯಿತು’ ಎಂದು ಸ್ಪಷ್ಟನೆ ನೀಡಿದರು.

‘ಹರಾಜು ಪ್ರಕ್ರಿಯೆ ಆರಂಭದ ಬಳಿಕ ಮಾರುಕಟ್ಟೆ ಸುತ್ತು ಹಾಕಿದ್ದೇನೆ. ಯಾವ ರೈತರಿಗೂ ತೊಂದರೆ ಆಗಿಲ್ಲ’ ಎಂದು ಹೇಳಿದರು.

**

ವಾತಾವರಣದಲ್ಲಿನ ವ್ಯತ್ಯಾಸದ ಕಾರಣ ಬೆಳಗ್ಗೆ ಒಂದೆರಡು ನಿಮಿಷ ವೈ–ಫೈ ಸೇವೆ ಸ್ಥಗಿತಗೊಂಡಿತು. ಇದರಿಂದ ಹರಾಜು ಪ್ರಕ್ರಿಯೆಗೆ ಹೆಚ್ಚಿನ ತೊಂದರೆ ಆಗಿಲ್ಲ.
-ಮುನ್ಶಿಬಸಯ್ಯ,
ಉಪನಿರ್ದೇಶಕ, ರಾಮನಗರ ರೇಷ್ಮೆಗೂಡು ಮಾರುಕಟ್ಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT