ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ಜೀವನದ ಸದುಪಯೋಗವಾಗಲಿ: ವೀರೇಶಾನಂದ ಸರಸ್ವತಿ ಸ್ವಾಮೀಜಿ

ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭ
Last Updated 13 ಮೇ 2019, 13:09 IST
ಅಕ್ಷರ ಗಾತ್ರ

ರಾಮನಗರ: ‘ವಿದ್ಯಾರ್ಥಿ ಜೀವನವನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು. ತಂದೆ ತಾಯಿ ಹೆಮ್ಮೆ ಪಡುವ ರೀತಿಯಲ್ಲಿ ಸಾಧನೆ ಮಾಡಬೇಕು’ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ವೀರೇಶಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ನಡೆದ 2018–-19ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಮಕ್ಕಳ ಸಾಧನೆ ಪೋಷಕರಿಗೆ ಹೆಮ್ಮೆಯ ಸಂಗತಿ. ಅವರ ಸಾತ್ವಿಕ ಬಯಕೆಯನ್ನು ಸಾರ್ಥಕ ರೀತಿಯಲ್ಲಿ ನೆರವೇರಿಸಿಕೊಡುವುದು ವಿದ್ಯಾರ್ಥಿಗಳ ಜವಾಬ್ದಾರಿಯಾಗಿದೆ. ಎಲ್ಲಾ ತಂದೆತಾಯಿ ಹಾಗೂ ಗುರುಗಳು ತಮ್ಮಿಂದ ತಮ್ಮ ಮಕ್ಕಳು ಗುರುತಿಸಲ್ಪಡುವುದಕ್ಕಿಂತ ತಮ್ಮ ಮಕ್ಕಳಿಂದಲೇ ತಾವು ಗುರುತಿಸಲ್ಪಡುವುದನ್ನು ಹೆಚ್ಚು ಇಷ್ಟ ಪಡುತ್ತಾರೆ ಎಂದರು.

ಜೀವನದಲ್ಲಿ ಗುರಿ ಮುಖ್ಯ. ಗುರಿ ಮುಟ್ಟುವ ದಾರಿಯೂ ಮುಖ್ಯ. ಶ್ರಮವಿಲ್ಲದೆ ಫಲವಿಲ್ಲ. ಶ್ರಮಕ್ಕೆ ಪರ್ಯಾಯ ಮಾರ್ಗವಿಲ್ಲ. ಜೀವನ ಸಿದ್ಧತೆ ಬೇರೆ. ಪರೀಕ್ಷಾ ಸಿದ್ಧತೆಯೇ ಬೇರೆ. ವಿದ್ಯಾರ್ಥಿಗಳು ನೊಣಗಳಾಗಬಾರದು. ಜೇನು ನೊಣಗಳಾಗಬೇಕು. ಈ ನಿಟ್ಟಿನಲ್ಲಿ ಏಕಾಗ್ರತೆಯನ್ನು ಬೆಳೆಸಿಕೊಂಡು ಸಾಧನೆಯತ್ತ ಹೆಜ್ಜೆ ಇಡಬೇಕು. ಸಾಧಿಸುವುದು ಇನ್ನು ಇದೇ ಎಂಬ ಚಿಂತನೆ ನಿಮ್ಮನ್ನು ಕ್ರಿಯಾಶೀಲರನ್ನಾಗಿಸುತ್ತದೆ. ಸಾಧನೆಗೆ ಶ್ರಮ, ಆತ್ಮವಿಶ್ವಾಸ, ಭರವಸೆ, ನಂಬಿಕೆಯೇ ಮೂಲವಾಗಿದೆ ಎಂದರು.

ಅಧ್ಯಾಪಕರಲ್ಲಿ ಸಕಾರಾತ್ಮಕ ಆಲೋಚನೆ ಇರಬೇಕು. ವಿದ್ಯಾರ್ಥಿಗಳೊಂದಿಗೆ ಭಾವನಾತ್ಮಕ ಸಂಬಂಧಗಳನ್ನು ಹೊಂದಿರಬೇಕು. ಕಲಿಯುವ ಆಸಕ್ತಿ ಇರುವವರೇ ಕಲಿಸಲು ಯೋಗ್ಯರಾಗಿರುತ್ತಾರೆ. ಮಕ್ಕಳಿಗೆ ಶಿಕ್ಷಕರೇ ತಂದೆ, ತಾಯಿ, ದೇವರು ಸರ್ವವೂ ಆಗಿರುತ್ತಾರೆ. ಶಿಕ್ಷಕರು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಯಾವುದು ಲಭ್ಯವಾಗಿಲ್ಲ ಎಂದೆನಿಸುತ್ತದೆಯೋ ಅದನ್ನು ಮಕ್ಕಳಿಗೆ ನೀಡಬೇಕು. ವಿದ್ಯಾರ್ಥಿಗಳಲ್ಲಿನ ಉತ್ತಮ ಗುಣಗಳನ್ನು ಪ್ರೋತ್ಸಾಹಿಸಬೇಕು. ಕೆಟ್ಟ ಗುಣಗಳನ್ನು ತಿದ್ದುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ವಾಲಿಬಾಲ್ ಕ್ರೀಡಾಪಟು ಕೆ.ಆರ್. ಲಕ್ಷ್ಮೀನಾರಾಯಣ ಮಾತನಾಡಿ ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಳ್ಳಬೇಕು. ಕ್ರೀಡಾ ಕ್ಷೇತ್ರದಲ್ಲಿಯೂ ಸಾಕಷ್ಟು ಅವಕಾಶಗಳಿವೆ. ಅವುಗಳನ್ನು ಸರಿಯಾಗಿ ಬಳಸಿಕೊಂಡು ಯಶಸ್ಸು ಗಳಿಸಬೇಕು ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ಕಾಲೇಜಿನ ಪ್ರಾಚಾರ್ಯ ಪ್ರೊ.ಡಿ. ರಂಗಸ್ವಾಮಿಗೌಡ, ಸಾಂಸ್ಕೃತಿಕ ಸಂಚಾಲಕಿ ಬಿ. ರಾಧಿಕಾ, ಎನ್‌ಸಿಸಿ ಅಧಿಕಾರಿ ಕ್ಯಾಪ್ಟನ್ ಆರ್. ರಾಘವೇಂದ್ರ ರಾವ್, ರೋವರ್ಸ್ ಮತ್ತು ರೇಂಜರ್ಸ್ ಸಂಚಾಲಕರಾದ ಡಾ.ಎಸ್. ಮಂಜುಳಾ, ಡಿ.ಎಚ್. ಮುನಿರಾಜು, ಕ್ರೀಡಾ ಮತ್ತು ಎನ್‌ಎಸ್ಎಸ್ ಸಮಿತಿ ಸಂಚಾಲಕರಾದ ಡಾ. ಮಂಜುನಾಥ್, ಎಚ್.ಆರ್. ಅನುರಾಧ, ರೆಡ್‌ ಕ್ರಾಸ್ ಸಮಿತಿ ಸಂಚಾಲಕಿ ಡಿ.ಜಿ. ಸುಮಾ ಇದ್ದರು.
ವಿದ್ಯಾರ್ಥಿನಿ ಸಲ್ಮಾಬಾನು ಪ್ರಾರ್ಥಿಸಿದರು. ಭವ್ಯಶ್ರೀ ಸ್ವಾಗತಿಸಿದರು. ಕಾವ್ಯಾ, ಮಧುಶ್ರೀ ಅತಿಥಿಗಳನ್ನು ಪರಿಚಯಿಸಿದರು. ಸುಶ್ಮಿತಾ, ಭಾಸ್ಕರ್ ನಿರೂಪಿಸಿದರು. ಅಭಿಷೇಕ್ ವಂದಿಸಿದರು.

ಸಚಿವರ ಹೇಳಿಕೆಗೆ ಬೇಸರ

‘ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಒಬ್ಬೊಬ್ಬರು ಒಂದೊಂದು ರೀತಿ ವ್ಯಾಖ್ಯಾನ ಮಾಡುತ್ತಿದ್ದಾರೆ. ಉಡುಪಿ ಜಿಲ್ಲೆಯು ಫಲಿತಾಂಶದಲ್ಲಿ ಐದನೇ ಸ್ಥಾನವನ್ನು ಪಡೆದಿರುವುದಕ್ಕೆ ರಾಜಕಾರಣಿಯೊಬ್ಬರು ಬೃಹಸ್ಪತಿಯಂತೆ ಹೇಳಿಕೊಟ್ಟಿರುವುದು ಅವರಲ್ಲಿ ಮೆದುಳು ಕೆಲಸ ಮಾಡುತ್ತಿಲ್ಲ ಎಂಬುದನ್ನು ತೋರಿಸುತ್ತದೆ. ಮೌಢ್ಯ ನಿಷೇಧ ಕಾಯಿದೆಯನ್ನು ಜಾರಿಗೆ ತರುತ್ತೇವೆಂದು ಹೇಳಿ ಅಧಿಕಾರಕ್ಕೆ ಬಂದ ಚುನಾಯಿತ ಪ್ರತಿನಿಧಿಗಳು ಈಗ ಜ್ಯೋತಿಷಿಗಳ ಬಳಿ ಸಲಹೆ ಪಡೆದು ಸರ್ಕಾರ ನಡೆಸುತ್ತಿದ್ದಾರೆ’ ಎಂದು ವೀರೇಶಾನಂದ ಸರಸ್ವತಿ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT