ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ | ಜಿ.ಪಂ. ಅಧ್ಯಕ್ಷರ ರಾಜೀನಾಮೆ ವದಂತಿ

ಕಡೆಯ ಅವಧಿ ಅಧಿಕಾರಕ್ಕೆ ತೀವ್ರ ಪೈಪೋಟಿ: ಆಕಾಂಕ್ಷಿಗಳಿಂದ ಒತ್ತಡ
Last Updated 10 ಆಗಸ್ಟ್ 2020, 13:16 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್‌. ಬಸಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಆ ಸ್ಥಾನಕ್ಕೆ ಹೊಸಬರ ನೇಮಕಕ್ಕೆ ಕಸರತ್ತು ನಡೆದಿದೆ ಎಂಬ ಸುದ್ದಿ ಹಬ್ಬಿದೆ. ಆದರೆ ಸ್ವತಃ ಬಸಪ್ಪ ಇದನ್ನು ನಿರಾಕರಿಸಿದ್ದು, "ನಾನು ರಾಜೀನಾಮೆಯನ್ನೇ ನೀಡಿಲ್ಲ’ ಎಂದಿದ್ದಾರೆ.

ಜಿಲ್ಲಾ ಪಂಚಾಯತಿಯ ಕಡೆಯ ಎರಡೂವರೆ ವರ್ಷದ ಅವಧಿಗೆ ಕಾಂಗ್ರೆಸ್ ನಾಯಕರ ನೇತೃತ್ವದಲ್ಲಿ ಅಧಿಕಾರ ಹಂಚಿಕೆ ಸೂತ್ರ ಏರ್ಪಟ್ಟಿದ್ದು, ಅದರಂತೆ ಮೊದಲಿಗೆ ಎಚ್‌. ಬಸಪ್ಪ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅವರ ಅವಧಿ ಮುಗಿಯುತ್ತಾ ಬಂದಿರುವ ಹಿನ್ನೆಲೆಯಲ್ಲಿ ರಾಜೀನಾಮೆ ನೀಡುವಂತೆ ನಾಯಕರು ಸೂಚಿಸಿದ್ದು, ಅದರಂತೆ ಬಸಪ್ಪ ಅಧ್ಯಕ್ಷ ಹುದ್ದೆಗೆ ರಾಜೀನಾಮೆಯನ್ನೂ ನೀಡಿದ್ದಾರೆ ಎಂಬ ಸಂಗತಿ ಸಾಮಾಜಿಕ ಜಾಲತಾಣಗಳ ಮೂಲಕ ಹರಿದಾಡುತ್ತಿದೆ. ಆದರೆ ಅಧ್ಯಕ್ಷರು ಈ ಸಂಗತಿಯನ್ನು ನಿರಾಕರಿಸಿದ್ದಾರೆ. "ಸದ್ಯಕ್ಕೆ ಆ ರೀತಿಯ ಯಾವ ತರಹದ ಬೆಳವಣಿಗೆಯೂ ಇಲ್ಲ. ಒಂದು ವೇಳೆ ಪಕ್ಷದ ಹೈಕಮಾಂಡ್‌ ರಾಜೀನಾಮೆ ಸಲ್ಲಿಸುವಂತೆ ಸೂಚಿಸಿದರೆ ಆಗ ನೀಡುತ್ತೇನೆ’ ಎಂದಿದ್ದಾರೆ.

ತೀವ್ರ ಪೈಪೋಟಿ: 2016ರಲ್ಲಿ ಜಿಲ್ಲಾ ಪಂಚಾಯಿತಿಗೆ ನೂತನ ಸದಸ್ಯರ ಆಯ್ಕೆ ಆಗಿತ್ತು. ಅವರ ಅಧಿಕಾರ ಅವಧಿ ಮುಕ್ತಾಯಕ್ಕೆ ಇನ್ನೂ 8-10 ತಿಂಗಳಷ್ಟೇ ಬಾಕಿ ಉಳಿದಿದೆ. ಹೀಗಾಗಿ ಕಡೆಯದೊಂದು ಅವಧಿಗೆ ಅಧಿಕಾರ ಏರಲು ಸದಸ್ಯರೊಳಗೆ ಮತ್ತೆ ಪೈಪೋಟಿ ಆರಂಭ ಆಗಿದೆ.

ಮೊದಲ ಅವಧಿಯಲ್ಲಿ ಚನ್ನಪಟ್ಟಣದ ಸಿ.ಪಿ. ರಾಜೇಶ್ ಎರಡೂವರೆ ವರ್ಷ ಕಾಲ ಅಧ್ಯಕ್ಷರಾಗಿ ಆಡಳಿತ ನಡೆಸಿದ್ದರು. ಅವರ ರಾಜೀನಾಮೆಯ ಬಳಿಕ ಎಂ.ಎನ್‌. ನಾಗರಾಜು ಅಧ್ಯಕ್ಷರಾಗಿ ವರ್ಷದ ಕಾಲ ಅಧಿಕಾರದಲ್ಲಿ ಇದ್ದರು. ಉಳಿದ ಅವಧಿಗೆ ಬಸಪ್ಪ ಆಯ್ಕೆಯಾಗಿದ್ದರು. ಇದೀಗ ಕಾಂಗ್ರೆಸ್‌ ಮುಖಂಡ ಎಚ್‌.ಸಿ. ಬಾಲಕೃಷ್ಣರ ಸಹೋದರ ಎಚ್‌.ಎನ್‌. ಅಶೋಕ್‌, ಕನಕಪುರದ ಸದಸ್ಯ ಡಿ.ಕೆ. ಶಿವಕುಮಾರ್‍ ಹೆಸರು ಚಾಲ್ತಿಯಲ್ಲಿದೆ. ಅದರಲ್ಲೂ ಅಶೋಕ್‌ ಕಡೆಯ ಕೆಲವು ತಿಂಗಳಿಗೆ ಆದರೂ ಅಧ್ಯಕ್ಷ ಗಾದಿಯನ್ನೇರುವ ಹಂಬಲದಲ್ಲಿ ಇದ್ದಾರೆ.

ಮತ್ತೊಂದೆಡೆ ಕಾಂಗ್ರೆಸ್‌ ನಾಯಕರೂ ಸಹ ಅಧ್ಯಕ್ಷ ಹುದ್ದೆ ಬದಲಾವಣೆಗೆ ಮುಂದಾಗಿದ್ದಾರೆ ಎನ್ನಲಾಗಿದ್ದು, ಮತ್ತೊಬ್ಬರಿಗೆ ಅವಕಾಶ ಮಾಡಿಕೊಡುವ ಪ್ರಯತ್ನದಲ್ಲಿ ಇದ್ದಾರೆ. ಈ ಬಾರಿ ಮಾಗಡಿ ವಿಧಾನಸಭಾ ಕ್ಷೇತ್ರಕ್ಕೆ ಅವಕಾಶ ದೊರೆಯುವ ಸಾಧ್ಯತೆ ಇದೆ. ಹಾಗೇನಾದರೂ ಆದಲ್ಲಿ ಜೆಡಿಎಸ್‌ನಿಂದ ಕಾಂಗ್ರೆಸ್‌ನತ್ತ ವಲಸೆ ಬಂದಿರುವ ಎಚ್‌.ಎನ್‌. ಅಶೋಕ್‌ಗೆ ಅವಕಾಶ ಸಿಗಲಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‍ ಅವರ ಕ್ಷೇತ್ರವಾದ ದೊಡ್ಡಾಲಹಳ್ಳಿಯನ್ನು ಪ್ರತಿನಿಧಿಸುವ ಶಿವಕುಮಾರ್‌ ಸಹ ಅವಕಾಶಕ್ಕಾಗಿ ಪ್ರಯತ್ನ ನಡೆಸಿದ್ದಾರೆ. ಅಂತಿಮವಾಗಿ ಡಿ.ಕೆ. ಸಹೋದರರು ಸಮ್ಮತಿಯ ಮುದ್ರೆ ಒತ್ತಬೇಕಿದೆ.

ಜಿಲ್ಲಾ ಪಂಚಾಯಿತಿಯಲ್ಲಿ ಒಟ್ಟು 22 ಸದಸ್ಯರಿದ್ದು, ಈ ಪೈಕಿ 16 ಮಂದಿ ಕಾಂಗ್ರೆಸ್‌ನಿಂದ ಹಾಗೂ 6 ಮಂದಿ ಜೆಡಿಎಸ್‌ನಿಂದ ಆಯ್ಕೆಯಾಗಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಸ್ಪಷ್ಟ ಬಹುಮತ ಹೊಂದಿದ್ದು, ಆ ಪಕ್ಷದವರೇ ಅಧ್ಯಕ್ಷರಾಗಿ ಆಯ್ಕೆ ಆಗುತ್ತ ಬಂದಿದ್ದಾರೆ. ಅಧ್ಯಕ್ಷ ಹುದ್ದೆಯು ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.

ಅಧ್ಯಕ್ಷ ಸ್ಥಾನಕ್ಕೆ ಈವರೆಗೆ ರಾಜೀನಾಮೆ ನೀಡಿಲ್ಲ. ಪಕ್ಷದ ನಾಯಕರು ಹೇಳಿದಲ್ಲಿ ರಾಜೀನಾಮೆ ಕೊಡುತ್ತೇನೆ ಎನ್ನುತ್ತಾರೆ ರಾಮನಗರ ಜಿ.ಪಂ. ಅಧ್ಯಕ್ಷ ಎಚ್‌. ಬಸಪ್ಪ.

ಅಧ್ಯಕ್ಷರು ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ತಿಳಿದಿದೆ. ಈ ಬಾರಿ ಆದರೂ ನನಗೆ ಅವಕಾಶ ಸಿಗುವ ನಿರೀಕ್ಷೆ ಇದೆ ಎಂದು ಜಿ.ಪಂ. ಸದಸ್ಯಎಚ್‌.ಎನ್‌. ಅಶೋಕ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT