ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುದ್ದೆ ಹಂಚಿಕೆಯಲ್ಲಿ ತಾರತಮ್ಯ | ಒಕ್ಕಲಿಗರಿಗೆ ಮಣೆ; ಉಳಿದವರ ಕಡೆಗಣನೆ

ಕಾಂಗ್ರೆಸ್‌ನೊಳಗೆ ಅಸಮಾಧಾನದ ಹೊಗೆ
Published 11 ಮಾರ್ಚ್ 2024, 4:36 IST
Last Updated 11 ಮಾರ್ಚ್ 2024, 4:36 IST
ಅಕ್ಷರ ಗಾತ್ರ

ರಾಮನಗರ: ಲೋಕಸಭಾ ಚುನಾವಣೆ ಹತ್ತಿರಕ್ಕೆ ಬರುತ್ತಿದ್ದಂತೆ ಪ್ರಾಧಿಕಾರ, ನಿಗಮ ಹಾಗೂ ಮಂಡಳಿಗಳಿಗೆ ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರ ನೇಮಕ ಮಾಡಿದೆ. ಶಾಸಕರ ಜೊತೆಗೆ ಪಕ್ಷವನ್ನು ಅಧಿಕಾರಕ್ಕೆ ತರಲು ದುಡಿದ ಮುಖಂಡರು ಮತ್ತು ಕಾರ್ಯಕರ್ತರಿಗೂ ಅಧಿಕಾರದ ಉಡುಗೊರೆ ನೀಡಿದೆ. ಇದರ ಬೆನ್ನಲ್ಲೇ, ಕಾರ್ಯಕರ್ತರಿಗೆ ಅಧಿಕಾರ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂಬ ಕೂಗು ಕೇಳಿ ಬಂದಿದೆ.

ರಾಮನಗರ ಜಿಲ್ಲೆಯಲ್ಲಿ ನಾಲ್ಕು ಪ್ರಾಧಿಕಾರಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿದ್ದು, ಎಲ್ಲರೂ ಒಕ್ಕಲಿಗ ಸಮುದಾಯಕ್ಕೆ ಸೇರಿದವರೇ ಆಗಿದ್ದಾರೆ. ಉಳಿದ ಸಮುದಾಯಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂಬ ಅಸಮಾಧಾನದ ಹೊಗೆ ಜಿಲ್ಲಾ ಕಾಂಗ್ರೆಸ್‌ನಲ್ಲಿ ಎದ್ದಿದೆ. ಈ ಬಗ್ಗೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ತಮ್ಮ ನಾಯಕರ ವಿರುದ್ಧ ಅಸಮಾಧಾನ ತೋಡಿಕೊಳ್ಳುತ್ತಿದ್ದಾರೆ.

ಜಿಲ್ಲೆಯ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷರಾಗಿ ನೇಮಕವಾಗಿರುವ ಗಾಣಕಲ್ಲು ನಟರಾಜು, ಕನಕಪುರ ಯೋಜನಾ ಪ್ರಾಧಿಕಾರದ ಆರ್. ಕೃಷ್ಣಮೂರ್ತಿ, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಎಸ್.ಆರ್. ಪ್ರಮೋದ್, ಮಾಗಡಿ ಯೋಜನಾ ಪ್ರಾಧಿಕಾರದ ಕೆಂಚೇಗೌಡ ಹಾಗೂ ಬೆಂಗಳೂರು –ಮೈಸೂರು ಇನ್ಪ್ರಾಸ್ಟ್ರಕ್ಚರ್ ಕಾರಿಡಾರ್ ಪ್ರದೇಶ ಯೋಜನೆ ಪ್ರಾಧಿಕಾರದ ಅಧ್ಯಕ್ಷ ರಘುನಂದನ್ ರಾಮಣ್ಣ ಕೂಡ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ.

ಕೆಲಸಕ್ಕಷ್ಟೇ ನಾವು ಎಂಬಂತಾಗಿದೆ: ‘ಜಿಲ್ಲೆಯಲ್ಲಿ ನಡೆದಿರುವ ನೇಮಕಾತಿಯು ತಾರತಮ್ಯದಿಂದ ಕೂಡಿರುವುದರಲ್ಲಿ ಎರಡು ಮಾತಿಲ್ಲ. ನಾಲ್ಕು ಕ್ಷೇತ್ರಗಳಲ್ಲಿ ಮೂರು ಕಡೆ ಪಕ್ಷವು ಅಧಿಕಾರಕ್ಕೆ ಬರುವಲ್ಲಿ ಕೇವಲ ಒಂದು ಸಮುದಾಯವಷ್ಟೇ ಅಲ್ಲದೆ, ಎಲ್ಲಾ ಸಮುದಾಯಗಳು ಕೈ ಜೋಡಿಸಿವೆ. ಹೀಗಿರುವಾಗ ಸಾಮಾಜಿಕ ನ್ಯಾಯ ತತ್ವದಡಿ ಅಧಿಕಾರ ಹಂಚಿಕೆ ಮಾಡಬೇಕು. ಒಂದು ಸಮುದಾಯಕ್ಕೆ ಬೆಣ್ಣೆ, ಉಳಿದವರಿಗೆ ಸುಣ್ಣ ಹಚ್ಚುವ ಕೆಲಸ ಮಾಡಬಾರದು. ಇದು ಲೋಕಸಭಾ ಚುನಾವಣೆ ಮೇಲೂ ಪರಿಣಾಮ ಬೀರಲಿದೆ’ ಎಂದು ಹೆಸರು ಹೇಳಲಿಚ್ಛಿಸದ ಕಾಂಗ್ರೆಸ್ ಮುಖಂಡರೊಬ್ಬರು ‘ಪ್ರಜಾವಾಣಿ’ಯೊಂದಿಗೆ ಬೇಸರ ತೋಡಿಕೊಂಡರು.

‘ಅಧಿಕಾರ ಹಂಚಿಕೆಯಲ್ಲಿ ಸಮುದಾಯವಾರು ಪ್ರಾತಿನಿಧ್ಯ ನೀಡಬೇಕು. ಅಧಿಕಾರ ಹಂಚಿಕೆಯಲ್ಲಾಗಿರುವ ತಾರತಮ್ಯದ ಕುರಿತು ಜಿಲ್ಲೆಯ ನಾಯಕರಾದ ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಸಂಸದ ಡಿ.ಕೆ. ಸುರೇಶ್ ಅವರು ಗಮನ ಹರಿಸಬೇಕು. ಎಲ್ಲಾ ಸಮುದಾಯವರಿಗೂ ಅಧಿಕಾರ ಹಂಚಿಕೆ ಮಾಡಿ, ಮುಂದಕ್ಕೆ ಕೊಂಡೊಯ್ಯಬೇಕು’ ಎಂದು ಮತ್ತೊಬ್ಬ ಮುಖಂಡ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT