ಮಂಗಳವಾರ, ಸೆಪ್ಟೆಂಬರ್ 21, 2021
22 °C
ಬೂತ್ ಮಟ್ಟದಲ್ಲಿ ಕಾರ್ಯಕ್ರಮಕ್ಕೆ ಸಿದ್ಧತೆ

ಮಾಗಡಿ: ಹಳ್ಳಿಗಳತ್ತ ಕಾಂಗ್ರೆಸ್ ಚಿತ್ತ: 15ರಿಂದ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ‘ಹಳ್ಳಿಗಳತ್ತ ಕಾಂಗ್ರೆಸ್ ಚಿತ್ತ ಕಾರ್ಯಕ್ರಮವನ್ನು ಆ. 15ರ ನಂತರ ಬೂತ್ ಮಟ್ಟದಲ್ಲಿ ಆರಂಭಿಸಲಾಗುವುದು’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ್ ತಿಳಿಸಿದರು.

ತಿಪ್ಪಸಂದ್ರ ಹೋಬಳಿಯ ಚಿಗಳೂರು ತೋಟದ ಮನೆಯಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕೊರೊನಾ ಸಂಕಟದಲ್ಲಿ ಜನಸಾಮಾನ್ಯರ ನೆರವಿಗೆ ಮುಂದಾಗಲಿಲ್ಲ. ಬಿಜೆಪಿ ಎಲ್ಲಾ ರಂಗದಲ್ಲಿ ವಿಫಲವಾಗಿದೆ. ಜನಪರ ಕೆಲಸಗಳಿಗೆ ತಿಲಾಂಜಲಿ ನೀಡಿ ಉದ್ಯಮಪತಿಗಳಿಗೆ ಅನುಕೂಲ ಮಾಡಿದೆ ಎಂದರು.

ಕೇಂದ್ರದಲ್ಲಿ ಮನಮೋಹನ ಸಿಂಗ್ ಪ್ರಧಾನಿಯಾಗಿದ್ದಾಗ ಮತ್ತು ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ರಾಜ್ಯದ ಸಮಸ್ತ ಸಮುದಾಯಗಳಿಗೆ ಅನುಕೂಲಕರ ಯೋಜನೆ ಜಾರಿಗೊಳಿಸಿದ್ದರು. ಬಿಜೆಪಿ ಜನವಿರೋಧಿ ನೀಡಿ ಅನುಸರಿಸುತ್ತಿದ್ದು, ಜನತೆಯ ಮೇಲೆ ತೆರಿಗೆಯ ಭಾರ ವಿಧಿಸಿದೆ ಎಂದರು.

ತಿಪ್ಪಸಂದ್ರ ಜಿ.ಪಂ. ಕ್ಷೇತ್ರದಿಂದ ಹೈಕಮಾಂಡ್ ತೀರ್ಮಾನದಂತೆ ಸ್ಥಳೀಯರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗುವುದು ಎಂದು ತಿಳಿಸಿದರು.

ಅಹಿಂದ ವರ್ಗಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 20 ವರ್ಷಗಳಿಂದಲೂ ಮಾಗಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿಲ್ಲ. ಸಚಿವರಾಗಿದ್ದ ಎಚ್.ಎಂ. ರೇವಣ್ಣ ನಂತರ ಕಾಂಗ್ರೆಸ್ ಪಕ್ಷದ ಶಾಸಕರು ಆಯ್ಕೆಯಾಗಿಲ್ಲ. 2023ರ ಚುನಾವಣೆಯಲ್ಲಿ ಎಚ್.ಸಿ. ಬಾಲಕೃಷ್ಣ ಅವರನ್ನು ಕಾಂಗ್ರೆಸ್ ಪಕ್ಷದ ಶಾಸಕರನ್ನಾಗಿ ಆಯ್ಕೆ ಮಾಡಲು ಸಕಲ ಸಿದ್ಧತೆ ನಡೆಸಲಾಗಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಬಿ.ಎಸ್. ಕುಮಾರ್ ಮಾತನಾಡಿ, ‘ತಿಪ್ಪಸಂದ್ರ ಜಿ.ಪಂ. ಕ್ಷೇತ್ರದಿಂದ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದೇನೆ. ಹೈಕಮಾಂಡ್ ತೀರ್ಮಾನದಂತೆ ಚುನಾವಣೆ ನಡೆಸುತ್ತೇವೆ. ಬಿಜೆಪಿ ತೊಲಗಿಸಿ, ದೇಶ ಉಳಿಸಿ ಜನಾಂದೋಲನ ಆರಂಭಿಸಲಿದ್ದೇವೆ’ ಎಂದು ಹೇಳಿದರು.

ಹೇಮಾವತಿ ನದಿ ನೀರನ್ನು ತಾಲ್ಲೂಕಿನ ಕೆರೆಗಳಿಗೆ ಹರಿಸುವಂತೆ ಹೋರಾಟ ಆರಂಭಿಸಿದೆವು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಾಜಿ ಸಚಿವ ರೇವಣ್ಣ, ಸಂಸದ ಡಿ.ಕೆ. ಸುರೇಶ್ ಅವರ ಬದ್ಧತೆಯಿಂದ ಹಣ ಮಂಜೂರಾಗಿತ್ತು. ಇಂದಿನ ಶಾಸಕರು ಹೇಮಾವತಿ ನದಿ ನೀರು ಹರಿಸುವ ಬಗ್ಗೆ ನಿರ್ಲಕ್ಷ್ಯವಹಿಸಿದ್ದಾರೆ ಎಂದು ದೂರಿದರು.

ಕಾಂಗ್ರೆಸ್ ಮುಖಂಡ ನೇರಳೆಕೆರೆ ಗಜೇಂದ್ರ ಮಾತನಾಡಿ, ಎತ್ತಿನಹೊಳೆ ನೀರಾವರಿ ಯೋಜನೆಯಿಂದ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ನೀರು ತುಂಬಿಸುವ ಯೋಜನೆ ಬಗ್ಗೆ ಶಾಸಕ ಎ. ಮಂಜುನಾಥ್ ಮಾತನಾಡುತ್ತಿಲ್ಲ. ಹೇಮಾವತಿ ನದಿ ನೀರು ಹರಿಸುವ ಯೋಜನೆ ಜಾರಿಗೆ ಹೋರಾಟ ಮಾಡಲಿದ್ದೇವೆ. ಕಾಂಗ್ರೆಸ್ ಸಂಘಟನೆಗೆ ಒತ್ತು ನೀಡಲಾಗಿದೆ ಎಂದರು.

ಕಾಂಗ್ರೆಸ್ ಮುಖಂಡ ಶೌಕತ್ ಸಾಬ್ ಮಾತನಾಡಿ, ‘ತಿಪ್ಪಸಂದ್ರ ಜಿ.ಪಂ. ಕ್ಷೇತ್ರದ ವ್ಯಾಪ್ತಿಯಲ್ಲಿ ಮುಸ್ಲಿಂಮರು ಅಧಿಕವಾಗಿದ್ದಾರೆ. 30 ವರ್ಷಗಳಿಂದಲೂ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇನೆ. ನಾನು ಈ ಜಿ.ಪಂ. ಕ್ಷೇತ್ರದ ಆಕಾಂಕ್ಷಿಯಾಗಿದ್ದೇನೆ’ ಎಂದು ಹೇಳಿದರು.

ಜಿ.ಪಂ. ಮಾಜಿ ಸದಸ್ಯೆ ದಿವ್ಯಾ ಗಂಗಾಧರ್ ಮಾತನಾಡಿ, ಕೆಪಿಟಿಸಿಎಲ್ ಖಾಸಗೀಕರಣ ಬೇಡ. ರೈತರ ಪಂಪ್‌ಸೆಟ್‌ಗಳಿಗೆ ಮೋಟಾರ್ ಅಳವಡಿಕೆ ಬೇಡವೇ ಬೇಡ. ಗುತ್ತಿಗೆದಾರರಿಗೆ ಅನುಕೂಲ ಮಾಡಲು ಮೋದಿ ಸಂಕಲ್ಪ ಮಾಡಿದ್ದಾರೆ ಎಂದರು.

ಕಾಂಗ್ರೆಸ್ ಮುಖಂಡರಾದ ನೂರುಲ್ಲಾ ಖಾನ್, ಬೀಸಲಹಳ್ಳಿ ಬಸವರಾಜು, ಜಯಣ್ಣ, ದಂಡೇನಹಳ್ಳಿ ರಾಮಕೃಷ್ಣಯ್ಯ, ಕೃಷ್ಣಪ್ಪ, ಹಬೀಬುಲ್ಲಾ, ಕಲ್ಕೆರೆ ಮಧು, ಅನಂತಯ್ಯ, ಹೊಸಪಾಳ್ಯ ಗಂಗಣ್ಣ, ಶಿವಣ್ಣ, ಚಂದ್ರಣ್ಣ ಮಾತನಾಡಿದರು. ಪಾಳ್ಯದಹಳ್ಳಿ ದಾಸಪ್ಪ, ಸೂರಿ, ಸುಧಾ, ಶೌಕತ್ ಸಾಬ್, ದೌಲತ್‌ ಸಾಬ್, ಸಂತೋಷ್‌ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.