ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ರೈತರ ಪರೇಡ್‌ಗೆ ಸಿದ್ಧತೆ

ಟ್ರ್ಯಾಕ್ಟರ್‌ನಲ್ಲಿ ತೆರಳಲು ಪೊಲೀಸರಿಂದ ನಿರ್ಬಂಧ: ಅನ್ಯ ವಾಹನಗಳಿಗಷ್ಟೇ ಅನುಮತಿ
Last Updated 25 ಜನವರಿ 2021, 15:17 IST
ಅಕ್ಷರ ಗಾತ್ರ

ರಾಮನಗರ: ಬೆಂಗಳೂರಿನಲ್ಲಿ ಮಂಗಳವಾರ ನಡೆಯಲಿರುವ ರೈತರ ಟ್ರ್ಯಾಕ್ಟರ್‌ ಪರೇಡ್‍ನಲ್ಲಿ ಜಿಲ್ಲೆಯಿಂದಲೂ ರೈತರು ಪಾಲ್ಗೊಳ್ಳಲಿದ್ದಾರೆ. ಆದರೆ ಟ್ರ್ಯಾಕ್ಟರ್ ಪ್ರಯಾಣಕ್ಕೆ ಜಿಲ್ಲೆಯಲ್ಲಿ ಪೊಲೀಸರು ನಿರ್ಬಂಧ ಹೇರಿದ್ದಾರೆ.

ರಾಮನಗರ ಜಿಲ್ಲೆಯಿಂದ ನೂರಾರು ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಪ್ರತಿ ತಾಲೂಕಿನಲ್ಲಿ 100–200 ರೈತರು ಭಾಗವಹಿಸುವ ನಿರೀಕ್ಷೆ ಇದೆ. ಇದಕ್ಕಾಗಿಯೇ ಸಲಕ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ. ಹಳ್ಳಿಗಳಲ್ಲಿ ಪರೇಡ್ ಬೆಂಬಲಿಸುವ ಕರಪತ್ರ ಹಾಗೂ ಭಿತ್ತಿಪತ್ರಗಳನ್ನು ಹಂಚಲಾಗಿದೆ. ರೈತರು ತಮ್ಮ ಟ್ರ್ಯಾಕ್ಟರ್‌ಗಳನ್ನು ಸಿದ್ಧವಾಗಿಟ್ಟುಕೊಂಡಿದ್ದಾರೆ. ರೈತ ಸಂಘದ ವಿವಿಧ ಬಣಗಳು ಒಗ್ಗೂಡಿ ಈ ಪರೇಡ್‌ನಲ್ಲಿ ಪಾಲ್ಗೊಳ್ಳಲಿವೆ.

ಕಾರ್ಮಿಕರ ಬೆಂಬಲ: ರೈತರ ಟ್ರ್ಯಾಕ್ಟರ್ ಪರೇಡ್‍ಗೆ ಬಿಡದಿಯ ಟೊಯೊಟಾ ಸೇರಿದಂತೆ ವಿವಿಧ ಕಾರ್ಖಾನೆಗಳ ಕಾರ್ಮಿಕರು ಬೆಂಬಲ ಸೂಚಿಸಿದ್ದಾರೆ. ಕಾರ್ಮಿಕರೂ ನೂರಾರು ಸಂಖ್ಯೆಯಲ್ಲಿ ಬೆಂಗಳೂರಿನತ್ತ ತೆರಳುವ ನಿರೀಕ್ಷೆ ಇದೆ. ಜಿಲ್ಲೆಯ ಮುಸ್ಲಿಂ ಸಂಘಟನೆಗಳು ಸಹ ಹೋರಾಟ ಬೆಂಬಲಿಸಿವೆ. ಟ್ರ್ಯಾಕ್ಟರ್ ಹೊರತುಪಡಿಸಿ ಕಾರು, ಬಸ್, ಟೊಂಪೊ ಮೊದಲಾದ ವಾಹನಗಳ ಮೂಲಕವೂ ರಾಜಧಾನಿಗೆ ತೆರಳಲು ರೈತರು ವ್ಯವಸ್ಥೆ ಮಾಡಿಕೊಂಡಿದ್ದಾರೆ.

ತಡೆದರೆ ಪ್ರತಿಭಟನೆ: ಜಿಲ್ಲೆಯ ರೈತರ ಜೊತೆಗೆ ಅನ್ಯ ಜಿಲ್ಲೆಗಳಿಂದಲೂ ರೈತರು ಬೆಂಗಳೂರು–ಮೈಸೂರು, ಬೆಂಗಳೂರು–ಕನಕಪುರ ಹೆದ್ದಾರಿ ಮೂಲಕ ಪ್ರಯಾಣಿಸಲಿದ್ದಾರೆ. ಒಂದು ವೇಳೆ ಟ್ರ್ಯಾಕ್ಟರ್‌ ಮೂಲಕವೇ ಬೆಂಗಳೂರಿಗೆ ತೆರಳಬೇಕು ಎಂದು ರೈತರು ಪಟ್ಟು ಹಿಡಿದಲ್ಲಿ ಪೊಲೀಸರು ತಡೆ ಒಡ್ಡುವ ಸಾಧ್ಯತೆ ಇದೆ. ಹಾಗಾದಲ್ಲಿ ರೈತರು ತಾವಿರುವ ಸ್ಥಳದಿಂದಲೇ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ.

ಪೊಲೀಸ್ ಕಣ್ಗಾವಲು
ಟ್ರ್ಯಾಕ್ಟರ್ ಮೂಲಕ ಜಿಲ್ಲೆಯಿಂದ ಬೆಂಗಳೂರು ತಲುಪುವುದನ್ನು ಪೊಲೀಸರು ನಿರ್ಬಂಧಿಸಿದ್ದಾರೆ. ಉಳಿದ ವಾಹನಗಳಲ್ಲಿ ತೆರಳಿದಲ್ಲಿ ಮಾತ್ರ ಓಡಾಟಕ್ಕೆ ಅನುಮತಿ ಸಿಗಲಿದೆ. ಬೇರೆ ಜಿಲ್ಲೆಗಳಿಂದ ಬೆಂಗಳೂರು–ಮೈಸೂರು ಹೆದ್ದಾರಿ ಮೂಲಕ ಬರುವ ಟ್ರ್ಯಾಕ್ಟರ್‌ಗಳ ಎಂಜಿನ್‌ ಓಡಾಟಕ್ಕೆ ಅನುಮತಿ ಇದ್ದು, ಟ್ರಾಲಿಗಳನ್ನು ಬಳಸುವಂತಿಲ್ಲ ಎಂದು ಷರತ್ತು ವಿಧಿಸಲಾಗಿದೆ. ಜೊತೆಗೆ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

***

ಪರೇಡ್‌ಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಂದು ವೇಳೆ ನಮ್ಮನ್ನು ತಡೆದರೆ ರಸ್ತೆಯಲ್ಲೇ ಪ್ರತಿಭಟನೆ ಮಾಡುತ್ತೇವೆ.
-ಮಲ್ಲಯ್ಯ,ಜಿಲ್ಲಾ ಅಧ್ಯಕ್ಷ, ರೈತ ಸಂಘ

***

ಬೆಂಗಳೂರಿಗೆ ಟ್ರ್ಯಾಕ್ಟರ್ ಕೊಂಡೊಯ್ಯಲು ಅನುಮತಿ ಇಲ್ಲ. ರೈತರು ಬೇರೆ ವಾಹನಗಳಲ್ಲಿ ತೆರಳುವುದಕ್ಕೆ ನಮ್ಮ ಆಕ್ಷೇಪ ಇಲ್ಲ.
-ಗಿರೀಶ್,ಎಸ್ಪಿ, ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT