ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರತನಾಟ್ಯ ಸಂಸ್ಕೃತಿಯ ದ್ಯೋತಕ: ಚನ್ನಪಟ್ಟಣದಲ್ಲಿ ನೃತ್ಯ ರಂಜನ ಕಾರ್ಯಕ್ರಮ

Last Updated 19 ಏಪ್ರಿಲ್ 2021, 3:44 IST
ಅಕ್ಷರ ಗಾತ್ರ

ಚನ್ನಪಟ್ಟಣ: ಭರತನಾಟ್ಯ ಕಲೆಯು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದ್ದು, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ರಮೇಶ್ ಗೌಡ ಕರೆ ನೀಡಿದರು.

ಪಟ್ಟಣದ ಶತಮಾನೋತ್ಸವ ಭವನದಲ್ಲಿ ಮಂಗಳವಾರಪೇಟೆಯ ಶ್ರೀಭವಾನಿ ಕಲಾನಿಕೇತನ ಸಂಸ್ಥೆಯ ಎಡರನೇ ವಾರ್ಷಿಕೋತ್ಸವದ ಅಂಗವಾಗಿ ಶನಿವಾರ ಆಯೋಜಿಸಿದ್ದ ‘ನೃತ್ಯ ರಂಜನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭರತನಾಟ್ಯ ಎಂಬುದು ಕೇವಲ ಒಂದು ನೃತ್ಯ ಕಲೆಯಲ್ಲ. ಅದೊಂದು ದಿವ್ಯವಾದ ಸಮಗ್ರ ಅಭಿವ್ಯಕ್ತಿ. ಈ ಕಲಾ ಪ್ರಕಾರವನ್ನು ಉಳಿಸಿ, ಬೆಳೆಸುವ ಮಹತ್ವರವಾದ ಜವಾಬ್ದಾರಿ ನಮ್ಮ ಮೇಲಿದೆ. ಭಾರತ ಕಲೆ, ಸಂಸ್ಕೃತಿ, ಪರಂಪರೆಗಳ ನಾಡು. ಅಂತಹ ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಎಲ್ಲರ ಪ್ರಯತ್ನ ಅವಶ್ಯಕ. ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವಿನಯ್ ಕುಮಾರ್ ಮಾತನಾಡಿ, ಭಾರತೀಯ ಸಂಸ್ಕೃತಿ ಹಾಗೂ ಕಲಾ ಪ್ರಕಾರಗಳಿಗೆ ವಿಶ್ವದೆಲ್ಲೆಡೆ ಮಾನ್ಯತೆ ಇದೆ. ಇಂದು ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವದಿಂದ ನಮ್ಮ ಪುರಾತನ ಪರಂಪರೆಯನ್ನು ಮೂಲೆಗುಂಪು ಮಾಡುತ್ತಿರುವುದು ಸರಿಯಲ್ಲ. ಭರತನಾಟ್ಯ ಕಲೆಯನ್ನು ಹೆಚ್ಚಿನ ಮಟ್ಟದಲ್ಲಿ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.

ಸಾಹಿತಿ ವಿಜಯ್ ರಾಂಪುರ ಮಾತನಾಡಿ, ಸೃಜನಶೀಲತೆಗೆ ತಕ್ಕಂತೆ ಮಕ್ಕಳ ಕಲೆಗಳನ್ನು ಪೋಷಕರು ಪ್ರೋತ್ಸಾಹಿಸಬೇಕು. ಭರತನಾಟ್ಯ ಮಕ್ಕಳ ಬೌದ್ಧಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ. ಮಕ್ಕಳಿಗೆ ಕಟ್ಟುಪಾಡು ವಿಧಿಸದೇ ಅವರ ಮನಸ್ಸನ್ನು ಅರಿತು ಕಲೆ ಕಲಿಯಲು ಅವಕಾಶ ನೀಡಬೇಕು ಎಂದರು.

ಒಕ್ಕಲಿಗರ ಸಾರ್ವಜನಿಕ ವಿದ್ಯಾಸಂಸ್ಥೆಯ ನಿರ್ದೇಶಕಿ ಎಂ.ಎ. ಮಾಲಿನಿ ರಮೇಶ್, ಭಾರತ್ ವಿಕಾಸ್ ಪರಿಷತ್‌ನ ಬಿ.ಎನ್. ಕಾಡಯ್ಯ, ಗೋವಿಂದಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಕ ಎಂ. ರಾಜು, ಸಂಸ್ಥೆಯ ಅಧ್ಯಕ್ಷೆ ಮಧುರಾ, ಕಾರ್ಯದರ್ಶಿ ಮಧುಸೂದನ್, ಟ್ರಸ್ಟಿಗಳಾದ ರಾಧಮ್ಮ, ಚಿಕ್ಕರಾಜು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT