ಬುಧವಾರ, ಸೆಪ್ಟೆಂಬರ್ 18, 2019
21 °C
22ನೇ ರಾಜ್ಯ ಮಟ್ಟದ ಮಹಿಳಾ ಜನಜಾಗೃತಿ ತರಬೇತಿ ಶಿಬಿರ

‘ಸುಸಂಸ್ಕೃತ ಸ್ತ್ರೀಯರಿಂದ ಸಮಾಜದ ಏಳ್ಗೆ’

Published:
Updated:
Prajavani

ರಾಮನಗರ: ಸುಸಂಸ್ಕೃತ ಹೆಣ್ಣು ಮಕ್ಕಳಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಇಲ್ಲಿನ ಆದಿಚುಂಚನಗಿರಿ ಶಾಖಾ ಮಠದಲ್ಲಿ ಗುರುವಾರ 22 ನೇ ರಾಜ್ಯ ಮಟ್ಟದ ಮಹಿಳಾ ಜನಜಾಗೃತಿ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕುಟುಂಬದ ಅಭಿವೃದ್ಧಿಯಲ್ಲಿ ಹೆಣ್ಣು ಮಕ್ಕಳು ಪ್ರಮುಖ ಪಾತ್ರ ವಹಿಸುತ್ತಾರೆ. ಆದ್ದರಿಂದ ತಮ್ಮಲ್ಲಿರುವ ಕೀಳರಿಮೆ, ಸಂಕೋಚ ಸ್ವಭಾವವನ್ನು ಬಿಟ್ಟು ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಮಕ್ಕಳು ಹೆಣ್ಣಾಗಲಿ, ಗಂಡಾಗಲಿ ನಮ್ಮ ಸಂಸ್ಕೃತಿಯ ಅಂಶಗಳನ್ನು, ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿ ವಿಷಯವಾರು ಅಂಶಗಳಿಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಆದರೆ ವಿದ್ಯಾರ್ಥಿಗಳಲ್ಲಿ ನೈತಿಕತೆ, ನಿಸ್ವಾರ್ಥತೆ, ಪರೋಪಕಾರಿ ಗುಣಗಳನ್ನು ಬೆಳೆಸುವಂತಹ ಅಂಶಗಳು ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಶಾಲೆಗಳಲ್ಲಿ ಪಠ್ಯ ಪುಸ್ತಕದ ವಿಷಯಗಳನ್ನು ಕಲಿಸಲಾಗುತ್ತದೆ, ಗಣಿತದ ಸೂತ್ರಗಳನ್ನು, ವಿಜ್ಞಾನದ ಆವಿಷ್ಕಾರ ಗಳನ್ನು, ಇತಿಹಾಸದ ಪರಂಪರೆಯನ್ನು ಕಲಿಸಿ, ತಾವುಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಉದ್ಯೋಗ ಮಾಡಲು ಕಲಿಸಿಕೊಡಲಾಗುತ್ತದೆ. ಇದು ವಿದ್ಯಾವಂತರಾಗಲು ನೆರವಾದರೆ ಶಿಬಿರಗಳಲ್ಲಿ ಧಾರ್ಮಿಕ, ಆಧ್ಯಾತ್ಮಿಕ, ಯೋಗದಂತಹುಗಳನ್ನು ಹೇಳಿಕೊಡುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗಿ ಬೌದ್ಧಿಕ ಬೆಳವಣಿಗೆಗೆ ನೆರವಾಗಲಿದೆ ಎಂದರು.

ಮಹಿಳಾ ಜನ ಜಾಗೃತಿ ಶಿಬಿರದಲ್ಲಿ ಬದುಕನ್ನು ರೂಪಿಸುವ, ಜಗತ್ತನ್ನು ಅರ್ಥೈಸಿಕೊಳ್ಳುವ ಪಾಠಗಳನ್ನು ಅನುಭವಿ ಹಿರಿಯರಿಂದ, ಪೂಜ್ಯರಿಂದ, ಶಿಕ್ಷಕರಿಂದ ಕಲಿಸಿಕೊಡಲಾಗುತ್ತದೆ. ನಿಮ್ಮ ಭವಿಷ್ಯದ ಬದುಕು ಸಫಲಗೊಳ್ಳಲು ಇಂತಹ ಶಿಬಿರಗಳು ಸಹಕಾರಿಯಾಗುತ್ತವೆ ಎಂದು ಅವರು ಹೇಳಿದರು.

ಸಮಸ್ಯೆಗಳು ಹೊರಗಿನಿಂದ ಬರುವುದಿಲ್ಲ, ಅವು ನಮ್ಮೊಳಗೆ ಇರುತ್ತವೆ, ಸುಖದಲ್ಲಿ ಬೆಳೆದ ಮಕ್ಕಳು ನೆರಳಿನಲ್ಲಿ ಬೆಳೆದ ಸಸಿಗಳಂತೆ, ಅವುಗಳು ಬಿಸಿನಲ್ಲಿ ಇಟ್ಟಾಗ ಬೇಗನೆ ಸೊರಗುತ್ತವೆ, ಅದೇ ಬಿಸಿಲಿನಲ್ಲಿ ಬೆಳೆದ ಸಸಿಗಳು ಹೊಂದಿಕೊಳ್ಳುತ್ತವೆ, ಹಾಗೆಯೇ ಕಷ್ಟದಲ್ಲಿ ಬೆಳೆದ ಮಕ್ಕಳು ಎಲ್ಲಾ ವರ್ಗಕ್ಕೂ ಹೊಂದಿಕೊಳ್ಳುತ್ತಾರೆ, ಈ ಶಿಬಿರವೂ ಸಹ ನಿಮ್ಮ ಬೌದ್ಧಿಕ ಮಟ್ಟವನ್ನು ಹೆಚ್ಚಿಸುತ್ತದೆ ಎಂದರು.

ಬೆಂಗಳೂರಿನ ವಿಜಯನಗರ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ ಮಾತನಾಡಿ ಹೆಣ್ಣು ಮಕ್ಕಳ ಶಿಬಿರಗಳು ಮುಂದಿನ ಭವಿಷ್ಯ ರೂಪಿಸುವ ಕೇಂದ್ರಗಳಿದ್ದಂತೆ. ಇಲ್ಲಿ ಮುಂದಿನ ಶೈಕ್ಷಣಿಕ, ಉದ್ಯೋಗ, ಶಿಸ್ತು ಸಂಯಮಗಳನ್ನು ಕಲಿಸಿಕೊಡುತ್ತದೆ, ಈ ಶಿಬಿರದಲ್ಲಿ ನಡೆಯುವ ಎಲ್ಲಾ ಉಪನ್ಯಾಸಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಆದಿಚುಂಚನಗಿರಿ ಶಾಖಾ ಮಠದ ಕಾರ್ಯದರ್ಶಿ ಅನ್ನದಾನೇಶ್ವರನಾಥ ಸ್ವಾಮೀಜಿ ಮಾತನಾಡಿ ಮಹಿಳೆಯರನ್ನು ಸ್ವಾವಲಂಬಿ ಆಗಿಸಿ ಅವರ ವ್ಯಕ್ತಿತ್ವ ನಿರ್ಮಾಣ ಮಾಡುವ ಸಲುವಾಗಿ ಕಳೆದ 22 ವರ್ಷಗಳಿಂದ ಈ ಶಿಬಿರ ಆಯೋಜಿಸುತ್ತಾ ಬರಲಾಗಿದೆ. ಶಿಬಿರಾರ್ಥಿಗಳಿಗೆ ಉಚಿತ ಊಟ, ವಸತಿ ಜತೆಗೆ ಲೇಖನ ಸಾಮಗ್ರಿ ಹಾಗೂ ಸಮವಸ್ತ್ರಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಇದೇ 10 ರವರೆಗೆ ಶಿಬಿರ ನಡೆಯಲಿದೆ ಎಂದು ತಿಳಿಸಿದರು.

ಸಂಸ್ಕತಿ, ಪರಿಸರ ನೈರ್ಮಲ್ಯ, ದೈನಂದಿನ ವ್ಯಾಯಾಮ, ಆರೋಗ್ಯ ರಕ್ಷಣೆಯ ಅರಿವು, ಸದಾಚಾರ ಕುರಿತು ವಿಷಯ ತಜ್ಞರು ಶಿಬಿರದಲ್ಲಿ ಉಪನ್ಯಾಸ ನೀಡುವರು. ಯೋಗ, ಜೋತಿಷ್ಯ, ರಾಷ್ಟ್ರೀಯ ಭಾವೈಕ್ಯದ ಶಿಬಿರದಲ್ಲಿ ತಿಳಿಸಿಕೊಡಲಾಗುವುದು ಎಂದು ತಿಳಿಸಿದರು.

ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳನಾಥ ಸ್ವಾಮೀಜಿ, ಶಿಬಿರದ ಮುಖ್ಯ ಶಿಕ್ಷಕ ನರಸಿಂಹಯ್ಯ, ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಎ.ಟಿ. ಶಿವರಾಮೇಗೌಡ ಇದ್ದರು.

**
ಸುಖದಲ್ಲಿ ಬೆಳೆದ ಮಕ್ಕಳು ನೆರಳಲ್ಲಿ ಬೆಳೆದ ಸಸಿಗಳಂತೆ, ಬಿಸಿನಲ್ಲಿ ಇಟ್ಟಾಗ ಬೇಗನೆ ಸೊರಗುತ್ತವೆ, ಅದೇ ಬಿಸಿಲಿನಲ್ಲಿ ಬೆಳೆದ ಸಸಿಗಳು ಬೇಗ ಹೊಂದಿಕೊಳ್ಳುತ್ತವೆ.
-ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಪೀಠ

Post Comments (+)