ಬುಧವಾರ, ಜುಲೈ 28, 2021
28 °C
ಕೊರೊನಾ ಸೋಂಕಿಗೆ ತಂದೆ ಬಲಿ: 6 ಮಕ್ಕಳು ಅನಾಥ

ವಿಶ್ವ ಅಪ್ಪಂದಿರ ದಿನ: ಭೂಮಿ ತೂಕದಷ್ಟು ಅಪ್ಪನ ಪ್ರೀತಿ

ದೊಡ್ಡಬಾಣಗೆರೆ ಮಾರಣ್ಣ Updated:

ಅಕ್ಷರ ಗಾತ್ರ : | |

ಮಾಗಡಿ: ‘ತಂದೆ ಕಟ್ಟಡ ಕಾರ್ಮಿಕರಾಗಿದ್ದರೂ ಹೊಟ್ಟೆಬಟ್ಟೆಗೆ ತೊಂದರೆ ಮಾಡಿರಲಿಲ್ಲ. ಅಪ್ಪನ ಪ್ರೀತಿ ಭೂಮಿ ತೂಕದಷ್ಟು ವಿಶಾಲವಾಗಿತ್ತು. ಕಷ್ಟಪಟ್ಟು ಓದಿ ಎಂಜಿನಿಯರ್‌ ಅಥವಾ ಡಾಕ್ಟರ್‌ ಆಗಬೇಕು. ಕಟ್ಟಡ ಕಾರ್ಮಿಕನೊಬ್ಬನ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕು ಎಂಬ ಕನಸು ಅವರಲ್ಲಿತ್ತು’ ಎಂದು ಅ‍ಪ್ಪನನ್ನು ನೆನೆದು ಕಣ್ಣೀರಿಟ್ಟರು 14 ವರ್ಷದ ಜೀವಿಕಾ.

ಈಗ ಆಕೆ ಪಟ್ಟಣದ ರಂಗನಾಥಸ್ವಾಮಿ ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಾಳೆ. 

ತಾಲ್ಲೂಕಿನ ಬೈಚಾಪುರ ದಾಖಲೆ ಕರಗದಹಳ್ಳಿಯ ಪರಿಶಿಷ್ಟರ ಕಾಲೊನಿಯಲ್ಲಿ ಸೆಂಟ್ರಿಂಗ್‌ ಕೆಲಸ ಮಾಡಿಕೊಂಡು 5 ಬಾಲಕಿಯರು, ಒಬ್ಬ ಪುತ್ರ ಹಾಗೂ ಪತ್ನಿಯನ್ನು ಸಾಕುತ್ತಿದ್ದ ಕುಮಾರ್‌ (35) ಮೇ 19ರಂದು ಕೋವಿಡ್‌ ಸೋಂಕಿಗೆ ಬಲಿಯಾಗಿದ್ದಾರೆ. ಈಗ ಅವರ ಕುಟುಂಬ ತಬ್ಬಲಿಯಾಗಿದೆ. ಒಂದು ತಿಂಗಳಿನಿಂದ ಕಣ್ಣೀರ ಕಡಲಲ್ಲಿ ಜೀವನ ದೂಡುತ್ತಿದೆ.

‘ಸತತವಾಗಿ ಶ್ರಮಪಟ್ಟರೆ ದೊಡ್ಡವರಾಗಬಹುದು ಎಂದು ನಿತ್ಯ ಅಕ್ಕರೆಯ ಮಾತುಗಳನ್ನಾಡುತ್ತಿದ್ದರು. ಎಂದಿಗೂ ಮದ್ಯಪಾನ, ಧೂಮಪಾನ ಮಾಡಿದವರಲ್ಲ. ದುಡಿದು ನಮ್ಮನ್ನೆಲ್ಲ ಪ್ರೀತಿಯಿಂದ ಸಾಕುತ್ತಿದ್ದರು. ಅಪ್ಪ ನಮ್ಮನ್ನು ಬಿಟ್ಟುಹೋಗಿರುವುದನ್ನು ನೆನೆದರೆ ಹೃದಯ ಹಿಂಡಿದಂತಾಗುತ್ತದೆ. ಕೊರೊನಾ ಅಪ್ಪನನ್ನು ಬಲಿ ಪಡೆಯುವ ಬದಲು ನನ್ನನ್ನು ಬಲಿ ಪಡೆದಿದ್ದರೆ ಸಂಕಟದ ಸಮುದ್ರದಲ್ಲಿ ನಮ್ಮ ಕುಟುಂಬ ಮುಳುಗುವ ದುರಂತ ಬರುತ್ತಿರಲಿಲ್ಲ’ ಎಂದು ತಂದೆಯನ್ನು ನೆನೆದರು ಜೀವಿಕಾ.

‘ಮದುವೆಯಾಗಿ 15 ವರ್ಷ ಕಳೆದಿತ್ತು. ಸಂತಾನ ಮುಂದುವರಿಸಲು ಗಂಡು ಮಗು ಬೇಕು ಎಂದು 5 ಹೆಣ್ಣು ಮಕ್ಕಳಾದ ಮೇಲೆ ಒಂದು ಗಂಡು ಮಗುವಾಯಿತು. ಗಂಡ ಮೃತರಾದ ನಂತರ ಆಕಾಶ ಕಳಚಿ ತಲೆಯ ಮೇಲೆ ಬಿದ್ದಂತಾಗಿದೆ. ಚಿಕ್ಕಮಕ್ಕಳನ್ನು ಸಾಕುವ ಬಗೆ ತಿಳಿಯದೆ ನಿತ್ಯ ಕಂಬನಿ ಮಿಡಿಯುತ್ತಿದ್ದೇವೆ’ ಎಂದು ಪತಿಯನ್ನು ನೆನೆದು ಕಣ್ಣೀರಿಟ್ಟರು ಪತ್ನಿ ಕಲಾ. ಸದ್ಯ ಮಕ್ಕಳ ವಿದ್ಯಾಭ್ಯಾಸಕ್ಕೆ ಸ್ಥಿತಿವಂತರ ನೆರವನ್ನು ಅವರು ಎದುರು ನೋಡುತ್ತಿದ್ದಾರೆ.

ಬೆಳಗುಂಬದ ಪಾರಂಗ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿರುವ ತೇಜಶ್ವಿನಿ, ಬೈಚಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಪುಷ್ಪಲತಾ, 3ನೇ ತರಗತಿಯ ಶೈಲಜಾ, ಶಿಶುವಿಹಾರಕ್ಕೆ ಹೋಗುತ್ತಿರುವ ಜಯಶೀಲಾ ಹಾಗೂ ಹಿತೇಶ್‌ ಅವರಿಗೆ ಆರ್ಥಿಕ ನೆರವಿನ ಅಗತ್ಯವಿದೆ. ನೆರವಿಗಾಗಿ ಕಾಯುತ್ತಿರುವ ಕಟ್ಟಡ ಕಾರ್ಮಿಕನ ಕುಟುಂಬಕ್ಕೆ ಅನ್ನದ ಮಾರ್ಗ ತೋರಿಸುವ ಕೈಗಳು ಮುಂದಾಗಬೇಕಿದೆ (ಕಲಾ ಕುಮಾರ್‌ ಮೊಬೈಲ್ 63661 77054). 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು