ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ: ಕೆಎಸ್‌ಆರ್‌ಟಿಸಿಗೆ ನಿತ್ಯ 20 ಲಕ್ಷ ನಷ್ಟ!

ಇನ್ನೂ ಚೇತರಿಕೆ ಕಾಣದ ಸಾರಿಗೆ ಸೇವೆ: ಗ್ರಾಮೀಣ ಭಾಗಗಳಲ್ಲಿ ಹಿನ್ನಡೆ
Last Updated 24 ಸೆಪ್ಟೆಂಬರ್ 2020, 19:45 IST
ಅಕ್ಷರ ಗಾತ್ರ

ರಾಮನಗರ: ಕೋವಿಡ್ ಲಾಕ್‌ಡೌನ್‌ ಜಾರಿಯಾಗಿ ಆರು ತಿಂಗಳು ಕಳೆದರೂ ಕೆಎಸ್‌ಆರ್‌ಟಿಸಿ ಇನ್ನೂ ನಷ್ಟದಿಂದ ಹೊರಬರಲು ಸಾಧ್ಯವಾಗಿಲ್ಲ. ಬಸ್‌ಗಳ ಓಡಾಟ ಹೆಚ್ಚಿದ್ದರೂ ಆದಾಯ ಮಾತ್ರ ಅರ್ಧದಷ್ಟು ಕುಸಿದಿದೆ.

ಲಾಕ್‌ಡೌನ್‌ನಿಂದಾಗಿ ಸುಮಾರು ಎರಡು ತಿಂಗಳ ಕಾಲ ಬಸ್ ಸಂಚಾರ ಸ್ಥಗಿತಗೊಂಡಿದ್ದು, ನಂತರದಲ್ಲಿ ಹಂತಹಂತವಾಗಿ ವಾಹನಗಳ ಓಡಾಟಕ್ಕೆ ಅನುಮತಿ ನೀಡಿತ್ತು. ಕೆಎಸ್‌ಆರ್‌ಟಿಸಿ ರಾಮನಗರ ವಿಭಾಗದಲ್ಲಿ ಲಾಕ್‌ಡೌನ್‌ಗೆ ಮುನ್ನ ನಿತ್ಯ 49–50 ಲಕ್ಷದಷ್ಟಿದ್ದ ಆದಾಯ ಸಂಪೂರ್ಣ ಕುಸಿದಿತ್ತು. ಈಗ ನಿತ್ಯ 30 ಲಕ್ಷದಷ್ಟು ಆದಾಯ ಸಂಗ್ರಹ ಆಗುತ್ತಿದ್ದು, ದಿನಕ್ಕೆ ಇನ್ನೂ 20 ಲಕ್ಷದಷ್ಟು ಆದಾಯ ಕೈ ತಪ್ಪುತ್ತಿರುವುದಾಗಿ ಅಧಿಕಾರಿಗಳು ಹೇಳುತ್ತಾರೆ.

ರಾಮನಗರ ಘಟಕದ ವ್ಯಾಪ್ತಿಯಲ್ಲಿ ರಾಮನಗರ, ಚನ್ನಪಟ್ಟಣ. ಮಾಗಡಿ, ಕನಕಪುರ, ಆನೇಕಲ್‌ ಸೇರಿದಂತೆ ಒಟ್ಟು ಆರು ಡಿಪೊಗಳಿವೆ. ಲಾಕ್‌ಡೌನ್‌ಗೆ ಮುನ್ನ ಇವುಗಳಲ್ಲಿ ನಿತ್ಯ 500 ಬಸ್‌ಗಳು ಸಂಚರಿಸುತ್ತಿದ್ದವು. ದಿನವೊಂದಕ್ಕೆ ಸರಾಸರಿ 2.10 ಲಕ್ಷ ಮಂದಿ ಪ್ರಯಾಣಿಸುತ್ತಿದ್ದರು. ಈಗ ಕೇವಲ 360 ಬಸ್‌ಗಳು ಮಾತ್ರ ಪ್ರತಿ ದಿನ ರಸ್ತೆಗೆ ಇಳಿಯುತ್ತಿವೆ. ಇನ್ನೂ 140 ಬಸ‌ಗಳು ಡಿಪೊನಲ್ಲೇ ಉಳಿದಿವೆ.

'ಸದ್ಯ ಮೈಸೂರು-ಬೆಂಗಳೂರು ಮಾರ್ಗದಲ್ಲಿ ಪ್ರಮಾಣಿಕರ ಸಂಖ್ಯೆ ಹೆಚ್ಚಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಬಸ್‌ಗಳು ಸಂಚಾರ ನಡೆಸಿವೆ. ಆದರೆ ಉಳಿದ ಭಾಗಗಳಲ್ಲಿ ಪರಿಸ್ಥಿತಿ ಬೇರೆಯಾಗಿದೆ. ಕನಕಪುರ, ಮಾಗಡಿ, ರಾಮನಗರ ಗ್ರಾಮೀಣ ಪ್ರದೇಶಗಳಲ್ಲಿ ಸಾರಿಗೆ ಸೇವೆಗೆ ಬೇಡಿಕೆ ಕಡಿಮೆಯಾಗಿದೆ’ ಎನ್ನುತ್ತಾರೆ ಕೆಎಸ್‌ಆರ್‌ಟಿಸಿ ರಾಮನಗರ ವಿಭಾಗೀಯ ನಿಯಂತ್ರಣಾಧಿಕಾರಿ ರಾಜ್‌ಕುಮಾರ್‍.

ಸಿಬ್ಬಂದಿ ಹಾಜರು: ಸಾರಿಗೆ ಸಂಸ್ಥೆಯ ಶೇ 85 ರಷ್ಟು ಸಿಬ್ಬಂದಿ ಈಗಾಗಲೇ ಸೇವೆಗೆ ಮರಳಿದ್ದಾರೆ. ಅವರಿಗೆ ಪಾಳಿ ಆಧಾರದಲ್ಲಿ ಕರ್ತವ್ಯ ನಿಯೋಜಿಸಲಾಗುತ್ತಿದೆ. ಉತ್ತರ ಕರ್ನಾಟಕ ಭಾಗದ ಒಂದಿಷ್ಟು ಮಂದಿ ಮಾತ್ರ ಬರಬೇಕಿದೆ. ರಜೆಯಲ್ಲಿ ತೆರಳಿದವರು ಸೇವೆಗೆ ಮರಳುವ ಮುನ್ನ ಕೋವಿಡ್‌ ಪರೀಕ್ಷೆ ಪ್ರಮಾಣಪತ್ರ ತರುವುದನ್ನು ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಮೂರ್ನಾಲ್ಕು ದಿನದ ಬಳಿಕಷ್ಟೇ ಅಂತಹವರು ಕೆಲಸಕ್ಕೆ ಬರುತ್ತಿದ್ದಾರೆ ಎನ್ನುತ್ತಾರೆ ಅಧಿಕಾರಿಗಳು.

ಗ್ರಾಮೀಣದಲ್ಲಿ ಹಿನ್ನಡೆ:'ಗ್ರಾಮೀಣ ಪ್ರದೇಶಗಳಲ್ಲಿ ಸಾರಿಗೆ ಸೇವೆಗೆ ಮೊದಲಿನಂತೆ ಬೇಡಿಕೆ ಇಲ್ಲ. ಒಂದು ರೂಟ್‌ನಲ್ಲಿ ಕೆಲವೊಮ್ಮೆ 4-5 ಪ್ರಯಾಣಿಕರಷ್ಟೇ ಇರುತ್ತಾರೆ. ಇಂತಹ ಕಡೆಗಳಲ್ಲಿ ಸಮರ್ಪಕ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ ರಾಜ್‌ಕುಮಾರ್‍.

'ಹಳ್ಳಿಗಳಲ್ಲಿ ಇನ್ನೂ ಕೋವಿಡ್‌ ಭಯ ದೂರವಾಗಿಲ್ಲ. ಜನರು ಬಸ್‌ಗಳಲ್ಲಿ ಓಡಾಡಲು ಹಿಂಜರಿಯುತ್ತಿದ್ದಾರೆ. ಹೀಗಾಗಿ ಎಕ್ಸ್‌ಪ್ರೆಸ್‌ ಮಾರ್ಗಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ಅದೇ ಪರಿಸ್ಥಿತಿ ಇದೆ'ಎನ್ನುತ್ತಾರೆ ಅವರು.

ಗಡಿಭಾಗದಲ್ಲಿ ಪ್ರಯಾಣ ನಿರ್ಬಂಧ

ಹೊರರಾಜ್ಯಗಳ ಗಡಿ ಭಾಗಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರಕ್ಕೆ ಕೆಲವು ಕಡೆ ನಿರ್ಬಂಧ ಮುಂದುವರಿದಿರುವುದು ಸಂಸ್ಥೆಯ ಆದಾಯ ಕುಸಿಯಲು ಕಾರಣವಾಗಿದೆ.

ರಾಮನಗರ ವಿಭಾಗದಿಂದ ಒಟ್ಟು 88 ಶೆಡ್ಯುಲ್‌ಗಳಲ್ಲಿ ಹೊರ ರಾಜ್ಯಗಳಿಗೆ ಬಸ್‌ಗಳು ಸಂಚರಿಸುತ್ತವೆ. ಈ ಪೈಕಿ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿನ ಕೆಲವು ಭಾಗಗಳಿಗೆ ಓಡಾಟಕ್ಕೆ ಇನ್ನೂ ಅನುಮತಿ ಸಿಕ್ಕಿಲ್ಲ. ತಮಿಳುನಾಡಿನ ಹೊಸೂರು ಗಡಿ ಇನ್ನೂ ಸಂಚಾರಕ್ಕೆ ಮುಕ್ತವಾಗಿಲ್ಲ. ಸದ್ಯ ಕೇವಲ ಅತ್ತಿಬೆಲೆವರೆಗೆ ಸಂಚರಿಸಿ ಬಸ್‌ಗಳು ವಾಪಸ್‌ ಆಗುತ್ತಿವೆ ಎನ್ನುತ್ತಾರೆ ಸಾರಿಗೆ ಅಧಿಕಾರಿಗಳು.

'ಸದ್ಯ ದಿನವೊಂದಕ್ಕೆ 30 ಲಕ್ಷದಷ್ಟು ಆದಾಯ ಬರುತ್ತಿದೆ. ಶೇ 65ರಷ್ಟು ಬಸ್‌ಗಳು ಮಾತ್ರ ನಮ್ಮಲ್ಲಿ ನಿತ್ಯ ಸಂಚರಿಸುತ್ತಿವೆ' ಎಂದು ವಿಭಾಗೀಯ ನಿಯಂತ್ರಕರಾಜ್‌ಕುಮಾರ್ ಪ್ರತಿಕ್ರಿಯಿಸಿದರು.

ಅಂಕಿಅಂಶ

6- ಕೆಎಸ್‌ಆರ್‌ಟಿಸಿ ರಾಮನಗರ ಘಟಕ ವ್ಯಾಪ್ತಿಯ ಬಸ್ ಡಿಪೊಗಳು
500- ಡಿಪೊ ವ್ಯಾಪ್ತಿಯಲ್ಲಿನ ಬಸ್‌ಗಳು
360- ಸದ್ಯ ನಿತ್ಯ ಸಂಚಾರ ಕೈಗೊಂಡಿರುವ ಬಸ್‌ಗಳು
ರೂ 50 ಲಕ್ಷ- ಲಾಕ್‌ಡೌನ್‌ಗೆ ಮುನ್ನ ದಿನವೊಂದರ ಸರಾಸರಿ ಗಳಿಕೆ
ರೂ 30 ಲಕ್ಷ- ಸದ್ಯದ ಸರಾಸರಿ ಗಳಿಕೆ
2250- ರಾಮನಗರ ಘಟಕ ವ್ಯಾಪ್ತಿಯಲ್ಲಿನ ಒಟ್ಟು ಸಿಬ್ಬಂದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT