ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ನಿಂದನೆ ಆರೋಪ: ಫೆ. 20ರಂದು ವಕೀಲರ ವಿರುದ್ಧ ತಮಟೆ ಚಳವಳಿ

Published 19 ಫೆಬ್ರುವರಿ 2024, 5:27 IST
Last Updated 19 ಫೆಬ್ರುವರಿ 2024, 5:27 IST
ಅಕ್ಷರ ಗಾತ್ರ

ರಾಮನಗರ: ವಕೀಲರ ಸಂಘಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ದಲಿತ ಮುಖಂಡರ ಮೇಲೆ ಕೆಲ ಪದಾಧಿಕಾರಿಗಳು ಜಾತಿ ನಿಂದನೆ ಮಾಡಿ ಅವಮಾನಿಸಿದ್ದಾರೆ ಎಂದು ಆರೋಪಿಸಿರುವ ದಲಿತ ಮುಖಂಡರು, ರಾಮನಗರ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಫೆ. 20ರಂದು ವಕೀಲರ ವಿರುದ್ಧ ನಗರದಲ್ಲಿ ತಮಟೆ ಚಳವಳಿ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ.

ಈ ಕುರಿತು ನಗರದಲ್ಲಿ ಭಾನುವಾರ ಸಂಜೆ ವಾಟರ್ ಟ್ಯಾಂಕ್ ವೃತ್ತದಲ್ಲಿರುವ ದಲಿತ ಸಂಘರ್ಷ ಸಮಿತಿಯ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಿದ ಜಿಲ್ಲೆಯ ವಿವಿಧ ದಲಿತ ಸಂಘಟನೆಗಳ ಮುಖಂಡರು, ವಕೀಲರು ಮತ್ತು ಐಜೂರು ಪೊಲೀಸ್ ಠಾಣೆ ಎಸ್‌ಐ ತನ್ವೀರ್ ಹುಸೇನ್ ಅವರ ವಿರುದ್ಧ ಪ್ರತಿಭಟನೆಗೆ ಒಕ್ಕೊರಲ ತೀರ್ಮಾನ ಕೈಗೊಂಡರು.

ಮುಖಂಡರ ವಿರುದ್ಧ ವಕೀಲರು ಜಾನಿ ನಿಂದನೆ ದೂರು ಕೊಟ್ಟರೂ, ಐಜೂರು ಠಾಣೆ ಸಬ್‌ ಇನ್‌ಸ್ಪೆಕ್ಟರ್ ತನ್ವೀರ್ ಹುಸೇನ್ ಅವರು ವಕೀಲರ ವಿರುದ್ಧ ಎಫ್‌ಐಆರ್ ದಾಖಲಿಸಿಲ್ಲ. ಈ ಕುರಿತು ಮುಖಂಡರ ಮನವಿಗೂ ಕಿವಿಗೊಟ್ಟಿಲ್ಲ. ಪ್ರಭಾವಿಗಳ ಒತ್ತಡಕ್ಕೆ ಮಣಿದು ನಮ್ಮ ದೂರನ್ನು ತಿರಸ್ಕರಿಸಿದ್ದಾರೆ. ಹಾಗಾಗಿ, ತನ್ವೀರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒಕ್ಕೂಟದ ಮುಖಂಡರೊಬ್ಬರು ತಿಳಿಸಿದರು.

20ರಂದು ಬೆಳಿಗ್ಗೆ ಐಜೂರು ವೃತ್ತದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿಯಿಂದ ತಮಟೆ ಚಳವಳಿ ಆರಂಭಿಸಲಾಗುವುದು. ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ಜಿಲ್ಲೆಯಲ್ಲಿರುವ ದಲಿತ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಡಿ.ಸಿ ಕಚೇರಿ ಎದುರು ವಕೀಲರ ಧರಣಿ

ಇಂದು ವಕೀಲರ ವಿರುದ್ಧ ಸುಳ್ಳು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಐಜೂರು ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ವಿರುದ್ಧ ಆರೋಪಿಸಿ ಎಸ್‌ಐ ಅಮಾನತಿಗೆ ಪಟ್ಟು ಹಿಡಿದಿರುವ ಜಿಲ್ಲಾ ವಕೀಲರ ಸಂಘವು ಸೋಮವಾರ ಜಿಲ್ಲಾಡಳಿತದ ವಿರುದ್ಧ ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸಿದೆ. ಧರಣಿಯಲ್ಲಿ ಜಿಲ್ಲೆಯಷ್ಟೇ ಅಲ್ಲದೆ ರಾಜ್ಯದ ವಿವಿಧ ಭಾಗಗಳಿಂದಲೂ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT