ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಕೀಲರ ವಿರುದ್ಧ ‘ಜಾತಿನಿಂದನೆ’ ಆರೋಪ

ದಲಿತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ತಮಟೆ ಚಳವಳಿ; ಪ್ರಕರಣ ದಾಖಲಿಸಲು ಆಗ್ರಹ
Published 21 ಫೆಬ್ರುವರಿ 2024, 5:08 IST
Last Updated 21 ಫೆಬ್ರುವರಿ 2024, 5:08 IST
ಅಕ್ಷರ ಗಾತ್ರ

ರಾಮನಗರ: ನಲವತ್ತು ವಕೀಲರ ವಿರುದ್ಧ ಪ್ರಕರಣ ದಾಖಲಿಸಿರುವ ಇಲ್ಲಿನ ಐಜೂರು ಪೊಲೀಸ್ ಠಾಣೆ ಪಿಎಸ್‌ಐ ಅಮಾನತಿಗೆ ಆಗ್ರಹಿಸಿ ವಕೀಲರು ಡಿ.ಸಿ ಕಚೇರಿ ಬಳಿ ಅಹೋರಾತ್ರಿ ಧರಣಿ ನಡೆಸುತ್ತಿದ್ದರೆ, ಮತ್ತೊಂದೆಡೆ ವಕೀಲರ ವಿರುದ್ಧ ಜಾನಿನಿಂದನೆ ಆರೋಪ ಮಾಡಿರುವ ದಲಿತ ಮುಖಂಡರು ಎಫ್‌ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿ ನಗರದಲ್ಲಿ ಮಂಗಳವಾರ ತಮಟೆ ಚಳವಳಿ ನಡೆಸಿದರು.

ದಲಿತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನಗರದ ಐಜೂರು ವೃತ್ತದಲ್ಲಿ ಜಮಾಯಿಸಿದ ದಲಿತ ಮುಖಂಡರು ಹಾಗೂ ಕಾರ್ಯಕರ್ತರು, ತಮಟೆ ಮತ್ತು ನಗಾರಿ ಬಡಿಯುತ್ತಾ ಜಿಲ್ಲಾಧಿಕಾರಿ ಕಚೇರಿಯತ್ತ ಮೆರವಣಿಗೆ ಹೊರಟರು. ಕೆಂಗಲ್ ಹನುಮಂತಯ್ಯ ವೃತ್ತ, ಎಂ.ಜಿ. ರಸ್ತೆ, ವಾಟರ್ ಟ್ಯಾಂಕ್ ವೃತ್ತ, ಎಸ್ಪಿ ಕಚೇರಿ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಯತ್ತ ಹೆಜ್ಜೆ ಹಾಕಿದರು.

ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ದಲಿತ ಸಂಘಟನೆಗಳ ಕಾರ್ಯಕರ್ತರು ಮಾರ್ಗದುದ್ದಕ್ಕೂ ಪ್ರತಿಭಟನಾ ಫಲಕಗಳನ್ನು ಪ್ರದರ್ಶಿಸಿದರು. ಡಿ.ಸಿ ಕಚೇರಿ ಎದುರಿನ ಬಿ.ಎಂ ರಸ್ತೆಯನ್ನು ಕೆಲ ಹೊತ್ತು ತಡೆದು ಘೋಷಣೆಗಳನ್ನು ಕೂಗಿದರು. ನಂತರ, ಜಿಲ್ಲಾಧಿಕಾರಿ ಕಚೇರಿ ಆವರಣ ಪ್ರವೇಶಿಸಿದರು.

ಈ ವೇಳೆ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಶಿವಕುಮಾರ ಸ್ವಾಮಿ, ‘ವಕೀಲ ಚಾನ್‌ ಪಾಷ ಅವರು ಫೇಸ್‌ಬುಕ್‌ ಪೋಸ್ಟ್ ಪ್ರಕರಣದಲ್ಲಿ ಕೋಮು ಸೌಹಾರ್ದ ಕದಡದೆ, ಸೌಹಾರ್ದಯುತವಾಗಿ ಬಗೆಹರಿಸಿ ಎಂದು ಮನವಿ ಕೊಡಲು ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ವಕೀಲರ ಸಂಘದ ಕಾರ್ಯದರ್ಶಿ ಅನುಮತಿ ಪಡೆದುಕೊಂಡೇ ಹೋಗಿದ್ದರು. ಮನವಿ ಸ್ವೀಕರಿಸುವಾಗ ಬಂದ ಕೆಲ ಕಿಡಿಗೇಡಿ ವಕೀಲರು ಮುಖಂಡರ ವಿರುದ್ಧ ಅವಾಚ್ಯವಾಗಿ ಮಾತನಾಡಿದ್ದಾರೆ’ ಎಂದರು.

‘ನಾವು ಮನವಿ ಸಲ್ಲಿಸುವುದಕ್ಕಾಗಿ ಅನುಮತಿ ಪಡೆದೇ ಬಂದಿದ್ದೇವೆ ಎಂದರೂ ಕೇಳದೆ, ಜಾತಿ ನಿಂದನೆ ಮಾಡಿದರು. ನೀವ್ಯಾರೂ ಇಲ್ಲಿ ಬರಬಾರದು ಎಂದು ಅಸ್ಪೃಶ್ಯತೆ ಆಚರಿಸುವಂತೆ ಮಾತುಗಳನ್ನಾಡಿದರು. ತಳ್ಳಾಡಿ ಅವಮಾನ ಮಾಡಿದರು. ಅದೇ ಬಿಜೆಪಿ, ಜೆಡಿಎಸ್ ಹಾಗೂ ಆರ್‌ಎಸ್‌ಎಸ್‌ನವರು ಬಂದಾಗ ನಗುನಗುತ್ತಾ ಮನವಿ ಸ್ವೀಕರಿಸಿ ಕಳಿಸಿದರು. ದಲಿತರು ಬಂದಾಗ ಅವಮಾನ ಮಾಡಿದರು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಸಂಘದಲ್ಲಿ ದಲಿತ ಮುಖಂಡರನ್ನು ನಡೆಸಿಕೊಂಡ ರೀತಿ ಖಂಡನೀಯ. ಇದು ನಮ್ಮ ಸ್ವಾಭಿಮಾನದ ಪ್ರಶ್ನೆಯಾಗಿದೆ. ಇಷ್ಟಕ್ಕೂ ಕೋರ್ಟ್ ಆವರಣ ಸಾರ್ವಜನಿಕ ಆಸ್ತಿ. ಎಲ್ಲಿಗೆ ಬರಬಾರದು ಎನ್ನಲು ಅದೇನು ವಕೀಲರ ಆಸ್ತಿಯೇ? ವಕೀಲರ ಈ ಸರ್ವಾಧಿಕಾರ ಧೋರಣೆ ಖಂಡಿಸುತ್ತೇವೆ. ಅಲ್ಲದೆ, ಮುಖಂಡರ ವಿರುದ್ಧ ವಕೀಲರ ನಡೆದುಕೊಂಡ ರೀತಿ ಕುರಿತು ದೂರು ಕೊಟ್ಟರೂ ಐಜೂರು ಪಿಎಸ್‌ಐ ಎಫ್‌ಐಆರ್ ದಾಖಲಿಸದಿರುವುದು ಖಂಡನೀಯ. ಹಾಗಾಗಿ, ಅವರನ್ನು ಅಮಾನತು ಮಾಡಬೇಕು’ ಎಂದು ಆಗ್ರಹಿಸಿದರು.

ನಂತರ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದ ಮೂರ್ತಿ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ವಿ. ಸುರೇಶ್ ಅವರಿಗೆ ತಕ್ಷಣ ಪ್ರಕರಣ ದಾಖಲಿಸುವಂತೆ ಮನವಿ ಸಲ್ಲಿಸಿದರು.

ದಲಿತ ಮುಖಂಡರಾದ ದಿನೇಶ್, ಸದಾಕುಮಾರ್, ಶಿವಕುಮಾರ್, ಕೋಟೆ ಕುಮಾರ್ ರುದ್ರೇಶ್, ಚೆಲುವರಾಜು, ಹರೀಶ್ ಕುಮಾರ್, ಅಪ್ಪಗೆರೆ ಶ್ರೀನಿವಾಸ್, ಬಿವಿಎಸ್ ಹರೀಶ್, ವೆಂಕಟೇಶ್ ಬಿವಿಎಸ್, ಪಟ್ಲಿ ಗೋವಿಂದರಾಜು, ಜಗದೀಶ್, ಎಂ. ಕಿರಣಸಾಗರ್, ಕಿರಣ್‌ಕುಮಾರ್, ಹರೀಶ್ ಬಾಲು, ಲೋಕೇಶ್ ಮೌರ್ಯ, ಶೇಖರ್, ಸುರೇಶ್, ನಿಖಿಲ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಇದ್ದರು.

ವಕೀಲರ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಿಸಬೇಕು ಮತ್ತು ಪಿಎಸ್‌ಐ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟದಿಂದ ರಾಮನಗರದ ಐಜೂರು ವೃತ್ತದಿಂದ ಡಿ.ಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು
ವಕೀಲರ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲಿಸಬೇಕು ಮತ್ತು ಪಿಎಸ್‌ಐ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟದಿಂದ ರಾಮನಗರದ ಐಜೂರು ವೃತ್ತದಿಂದ ಡಿ.ಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು

‘ಶಾಂತಿ ಕದಡಲು ಬಿಡುವುದಿಲ್ಲ’

‘ಜೆಡಿಎಸ್ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಮತ್ತು ವಿರೋಧ ಪಕ್ಷದ ನಾಯಕ ಬಿಜೆಪಿಯ ಆರ್. ಅಶೋಕ ಅವರು ವಕೀಲರು ಮತ್ತು ಪೊಲೀಸರ ನಡುವೆ ಎದುರಾಗಿರುವ ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸುವ ಬದಲು ಪ್ರತಿಭಟನೆಗೆ ಕುಮ್ಮಕ್ಕು ನೀಡಿದ್ದಾರೆ. ದೇಶಕ್ಕೆ ಸಂವಿಧಾನ ಕೊಟ್ಟ ಡಾ.ಬಿ.ಆರ್. ಅಂಬೇಡ್ಕರ್ ಕುಲದವರಾದ ನಾವು ರಾಮನಗರದ ಶಾಂತಿ ಕದಡಲು ನಾವು ಬಿಡುವುದಿಲ್ಲ’ ಎಂದು ದಲಿತ ಸಂಘಟನೆಗಳ ಒಕ್ಕೂಟದ ಶಿವಕುಮಾರ ಸ್ವಾಮಿ ಗುಡುಗಿದರು. ‌‘ಕಾನೂನು ಪ್ರಕಾರ ಕೆಲಸ ಮಾಡಿ’ ‘ವಕೀಲರು ದಲಿತ ಮುಖಂಡರ ವಿರುದ್ಧ ದೂರು ಕೊಟ್ಟಾಗ ಕಾನೂನು ಪ್ರಕಾರ ಎಫ್‌ಐಆರ್ ಮಾಡಿದ ಪೊಲೀಸರು ನಾವು ಕೊಟ್ಟಾಗ ಯಾಕೆ ಮಾಡಲಿಲ್ಲ? ವಕೀಲರಿಗೆ ಮತ್ತು ದಲಿತರಿಗೆ ಬೇರೆ ಬೇರೆ ಕಾನೂನಿದೆಯೇ? ಪೊಲೀಸರು ಈ ವಿಷಯದಲ್ಲಿ ತಾರತಮ್ಯ ಮಾಡದೆ ದಲಿತರ ಮುಖಂಡರು ಕೊಟ್ಟಿರುವ ಜಾತಿನಿಂದನೆ ಆರೋಪದ ದೂರಿನ ಮೇರೆಗೆ ವಕೀಲರ ವಿರುದ್ಧ ಪ್ರಕರಣ ದಾಖಲಿಸಬೇಕು. ಇಲ್ಲದಿದ್ದರೆ ನಾವು ಸಹ ಅಹೋರಾತ್ರಿ ಪ್ರತಿಭಟನೆ ಮಾಡುತ್ತೇವೆ’ ಎಂದು ದಲಿತ ಮುಖಂಡ ಗುಡ್ಡೆ ವೆಂಕಟೇಶ್ ಆಗ್ರಹಿಸಿದರು. ‘ಅವರಿಗೆ ಗೌರವ ನಮಗೆ ಅವಮಾನ’ ‘ವಕೀಲ ಚಾನ್ ಪಾಷ ವಿಚಾರದಲ್ಲಿ ಬಿಜೆಪಿ ಜೆಡಿಎಸ್ ಹಾಗೂ ಆರ್‌ಎಸ್‌ಎಸ್‌ನವರು ಮನವಿ ಕೊಟ್ಟಾಗ ಗೌರವದಿಂದ ಸ್ವೀಕರಿಸಿ ಭಾಷಣ ಮಾಡಿಸಿದ ವಕೀಲರ ಸಂಘದವರು ನಾವು ಮನವಿ ಕೊಟ್ಟಾಗ ತಿರಸ್ಕರಿಸಿ ಜಾತಿನಿಂದನೆ ಮಾಡಿದರು. ಈ ಅವಮಾನದ ವಿರುದ್ಧ ನಮ್ಮ ಹೋರಾಟ. ನಮಗೆ ನ್ಯಾಯಾಂಗ ಮತ್ತು ವಕೀಲರ ಬಗ್ಗೆ ಅಪಾರ ಗೌರವ ಇದೆ. ಗೂಂಡಾಗಳಂತೆ ನಮ್ಮೊಂದಿಗೆ ವರ್ತಿಸಿದ ಜಾತಿ ಮತ್ತು ಅಸ್ಪೃಶ್ಯತೆ ಮನಸ್ಥಿತಿಯ ಕೆಲ ಕಿಡಿಗೇಡಿ ವಕೀಲರ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಬೇಕು’ ಎಂದು ದಲಿತ ಮುಖಂಡ ಶಿವಶಂಕರ್ ಒತ್ತಾಯಿಸಿದರು.

- 2ನೇ ದ್ವಾರದಲ್ಲಿ ಪ್ರವೇಶ; ಪೊಲೀಸ್ ಕಟ್ಟೆಚ್ಚರ

ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆಯಲ್ಲಿ ಬಂದ ದಲಿತ ಮುಖಂಡರಿಗೆ ಎರಡನೇ ದ್ವಾರದಲ್ಲಿ ಒಳಕ್ಕೆ ಬಿಡಲಾಯಿತು. ಅದಾಗಲೇ ಡಿ.ಸಿ ಕಚೇರಿ ಆವರಣದಲ್ಲಿ ವಕೀಲರು ಧರಣಿ ನಡೆಸುತ್ತಿದ್ದರಿಂದ ಮೊದಲ ದ್ವಾರದಲ್ಲಿ ಒಕ್ಕೂಟದ ಮುಖಂಡರು ಒಳ ಪ್ರವೇಶಿಸದಂತೆ ಪೊಲೀಸರು ಬೀಗ ಹಾಕಿದ್ದರು. ವಕೀಲರ ಧರಣಿ ಸ್ಥಳದ ಸುತ್ತಲೂ ಬ್ಯಾರಿಕೇಡ್ ಹಾಕಿ ನೆರೆದಿದ್ದರು. ವಕೀಲರ ಜೊತೆಗೆ ದಲಿತ ಮುಖಂಡರ ಪ್ರತಿಭಟನೆ ಇದ್ದಿದ್ದರಿಂದಾಗಿ ಡಿ.ಸಿ ಕಚೇರಿ ಸುತ್ತ ಹೆಚ್ಚಿನ ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ 6 ಆಂಬುಲೆನ್ಸ್ 7 ಪೊಲೀಸ್ ವಾಹನಗಳು ಸ್ಥಳದಲ್ಲಿದ್ದವು. ಸಿಸಿಟಿವಿ ಕ್ಯಾಮೆರಾ ಡ್ರೋನ್ ಕ್ಯಾಮೆರಾ ಹ್ಯಾಂಡಿಕ್ಯಾಮ್ ಹಾಗೂ ಬಾಡಿ ಕ್ಯಾಮೆರಾ ನಿಗಾ ಇಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT