ಭಾನುವಾರ, ಮೇ 22, 2022
27 °C
₹ 60 ಲಕ್ಷ ಅನುದಾನ ನಿಗದಿ: ಶಾಸಕ ಎಚ್‌.ಡಿ. ಕುಮಾರಸ್ವಾಮಿ ಭರವಸೆ

ಹೊಸ ಟ್ಯಾಂಕ್ ನಿರ್ಮಾಣಕ್ಕೆ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಪಟ್ಟಣ: ‘ಚನ್ನಪಟ್ಟಣದಲ್ಲಿ ₹ 60 ಲಕ್ಷ ವೆಚ್ಚದಲ್ಲಿ ಹೊಸ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ’ ಎಂದು ಶಾಸಕ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ನಗರದ ಕರ್ನಾಟಕ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ಶನಿವಾರ ಬಿಸಿಎಂ ಹಾಸ್ಟೆಲ್ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಮಹಿಳೆಯ ಕಾಲು ಪತ್ತೆಯಾದ ಓವರ್ ಹೆಡ್ ಟ್ಯಾಂಕ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ನಗರದ ಮಾರುತಿ ಬಡಾವಣೆಯ ಓವರ್ ಹೆಡ್ ಟ್ಯಾಂಕ್‌ನಲ್ಲಿ ಮಹಿಳೆಯ ಮೃತದೇಹದ ಕಾಲು ಪತ್ತೆಯಾದ ಕಾರಣ ಅಲ್ಲಿನ ನೀರು ಪೂರೈಕೆ ನಿಲ್ಲಿಸಲಾಗಿದೆ. ಜನರಿಗೆ ಆ ಟ್ಯಾಂಕ್ ಬಗ್ಗೆ ಭರವಸೆ ಇಲ್ಲದ ಕಾರಣ ಹೊಸ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಿ, ಹೊಸ ಪೈಪ್‌ಲೈನ್ ಅಳವಡಿಸಿ, ಅದರಿಂದಲೇ ಜನರಿಗೆ ನೀರು ಪೂರೈಸಲಾಗುವುದು. ಅಲ್ಲಿಯವರೆಗೆ ಟ್ಯಾಂಕರ್‌‌ಗಳ ಮೂಲಕ ನೀರು ಪೂರೈಸಲು ಸೂಚಿಸಿದ್ದೇನೆ’ ಎಂದರು.

‘ಹೊಸ ಟ್ಯಾಂಕ್ ನಿರ್ಮಾಣದ ಬಗ್ಗೆ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದ್ದೇನೆ. ಅಧಿಕಾರಿಗಳು ಹಳೆಯ ಟ್ಯಾಂಕ್‌ನಿಂದಲೇ ನೀರು ಪೂರೈಕೆ ಮಾಡಬಹುದು ಎಂದಿದ್ದಾರೆ. ದೇಹ ಸಿಕ್ಕಿಲ್ಲ, ಕಾಲು ಮಾತ್ರ ಸಿಕ್ಕಿದೆ ಎಂದು ಸಮಜಾಯಿಷಿ ನೀಡಿದ್ದಾರೆ. ಆದರೂ, ಅದರ ನೀರು ಪೂರೈಸುವುದು ಬೇಡ ಎಂದು ಸೂಚಿಸಿದ್ದೇನೆ. ಸದ್ಯ ಟ್ಯಾಂಕರ್‌ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಸದ್ಯ ಬೋರ್‌ವೆಲ್‌ಗಳು ಇರುವ ಹಿನ್ನೆಲೆಯಲ್ಲಿ ನೀರು ಪೂರೈಕೆಗೆ ಯಾವುದೇ ಸಮಸ್ಯೆ ಇಲ್ಲ’ ಎಂದು ತಿಳಿಸಿದರು.

ನಗರದ ಮಹದೇಶ್ವರ ದೇವಸ್ಥಾನದ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ಈ ಹಿಂದೆ ದೇವಸ್ಥಾನದ ಅಭಿವೃದ್ಧಿ ಬಗ್ಗೆ ಚರ್ಚೆಯಾಗಿತ್ತು. ಆದರೆ, ಅಭಿವೃದ್ಧಿಗಾಗಿ ಬಳಸಿದ ಹಣದ ಲೆಕ್ಕ ಪುಸ್ತಕ ಇಟ್ಟಿಲ್ಲ. ಹಿಂದಿನ ಅವಧಿಯಲ್ಲಿ ನಡೆದಿರುವ ವೆಚ್ಚದ ಬಗ್ಗೆ ಮಾಹಿತಿ ಇಲ್ಲ. ನಾನು ಸಿಎಂ ಆಗಿದ್ದಾಗ ಈ ದೇವಸ್ಥಾನಕ್ಕೆ ₹ 2 ಕೋಟಿ ಬಿಡುಗಡೆ ಮಾಡಿದ್ದೆ. ಆದರೆ ನಮ್ಮ ಸರ್ಕಾರ ಹೋದ ನಂತರ ಹಣ ಹಿಂಪಡೆದಿದ್ದಾರೆ. ನಂತರವೂ ಯಡಿಯೂರಪ್ಪ ಅವರಿಗೆ ₹ 2 ಕೋಟಿ ಕೊಡಿ ಎಂದು ಪತ್ರ ಬರೆದಿದ್ದೆ ಎಂದರು.

‘ಈಗಲೂ ಈ ದೇವಸ್ಥಾನದ ಸಂಪೂರ್ಣ ಅಭಿವೃದ್ಧಿಗೆ ಬದ್ಧ. ತಹಶೀಲ್ದಾರ್ ನಾಗೇಶ್ ಜೊತೆ ಈಗಾಗಲೇ ಚರ್ಚೆ ನಡೆಸಿದ್ದೇನೆ. ಆದಷ್ಟು ಬೇಗ ದೇವಸ್ಥಾನದ ಅಭಿವೃದ್ಧಿಗೆ ಕ್ರಮವಹಿಸಲಾಗುವುದು’ ಎಂದು ಭರವಸೆ ನೀಡಿದರು.

‘ರಾಮನಗರದಲ್ಲಿ ರಾಜೀವ್ ಗಾಂಧಿ ವಿ.ವಿ ನಿರ್ಮಾಣ ಮಾಡುವ ವಿಚಾರದಲ್ಲಿ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ. ಆದರೂ ಯಾವುದೇ ಪ್ರಗತಿ ಕಾಣುತ್ತಿಲ್ಲ. ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ ಹಾಗೂ ಸಚಿವ ಸುಧಾಕರ್ ಜೊತೆ ಹಲವಾರು ಬಾರಿ ಸಭೆ  ನಡೆಸಿದ್ದೇನೆ. ಎಲ್ಲರೂ ಈ ವಿಚಾರದಲ್ಲಿ ಸಕಾರಾತ್ಮಕವಾಗಿ ಮಾತನಾಡುತ್ತಿದ್ದಾರೆ. ಆದರೆ, ದ್ವೇಷದ ರಾಜಕೀಯವೋ ಅಥವಾ ನಿರ್ಲಕ್ಷ್ಯವೋ ಅರ್ಥವಾಗುತ್ತಿಲ್ಲ. ಈ ವಿಚಾರವಾಗಿ ಸರ್ಕಾರ ಸ್ಪಷ್ಟವಾದ ನಿರ್ಧಾರ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಸಿ. ಜಯಮುತ್ತು. ನಗರ ಘಟಕದ ಅಧ್ಯಕ್ಷ ರಾಂಪುರ ರಾಜಣ್ಣ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಕ್ಕೂರುದೊಡ್ಡಿ ಜಯರಾಮು, ಮುಖಂಡರಾದ ಹಾಪ್‌ಕಾಮ್ಸ್ ದೇವರಾಜು, ಎಸ್. ಲಿಂಗೇಶ್ ಕುಮಾರ್, ನರ್ಸರಿ ಲೋಕೇಶ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರೇಖಾ ಉಮಾಶಂಕರ್, ನಗರಸಭಾ ಸದಸ್ಯರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.