ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯದಲ್ಲಿ ಆದಿವಾಸಿಗಳ ಅವಹೇಳನ: ರೋಹಿತ್ ಚಕ್ರತೀರ್ಥ ವಿರುದ್ಧ ದೂರು

Last Updated 5 ಜೂನ್ 2022, 6:04 IST
ಅಕ್ಷರ ಗಾತ್ರ

ರಾಮನಗರ: ಪರಿಷ್ಕೃತ ಪಠ್ಯದಲ್ಲಿ ಆದಿವಾಸಿ ಕಾಡು ಜನಾಂಗದ ಬಗ್ಗೆ ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ ರೋಹಿತ್ ಚಕ್ರತೀರ್ಥ ವಿರುದ್ಧ ರಾಮನಗರ ಪೊಲೀಸ್ ವರಿಷ್ಠಾಧಿಕಾರಿಗೆ ಶನಿವಾರ ದೂರು ಸಲ್ಲಿಕೆ ಆಗಿದೆ.

ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

‘10ನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿ ನಮ್ಮ ಆದಿವಾಸಿ ಕಾಡು ಜನಾಂಗದ ಬಗ್ಗೆ ಅವಹೇಳನಕಾರಿಯಾಗಿ ಪಠ್ಯ ಮುದ್ರಿಸಿರುವ ರೋಹಿತ್ ಚಕ್ರತೀರ್ಥ ಮತ್ತು ಇತರ ಸದಸ್ಯರನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು’ ಎಂದು ಇರುಳಿಗ (ಅರಣ್ಯವಾಸಿ) ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ದೂರು ಸಲ್ಲಿಸಿದ್ದಾರೆ.

ಹೊಸ ಪಠ್ಯದಲ್ಲಿ ಏನಿದೆ?:

ಹತ್ತನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿ ಸ್ವಾಮಿ ವಿವೇಕಾನಂದರ ಚಿಂತನೆಗಳು ಎಂಬ ಶೀರ್ಷಿಕೆಯಲ್ಲಿ ‘ಸಂಸ್ಕೃತಿಯು ರಕ್ತದಲ್ಲಿ ಹರಿಯಬೇಕು. ಆಧುನಿಕ ಕಾಲದಲ್ಲಿ ಬೇಕಾದಷ್ಟು ಜ್ಞಾನಸಂಪತ್ತನ್ನು ಪಡೆದ ದೇಶಗಳನ್ನು ನೋಡಿರುವೆವು. ಆದರೆ ಅದರಿಂದ ಏನು ಪ್ರಯೋಜನ? ಅವರು ಕಾಡುಜನರಂತೆ ಇರುವರು. ಅವರಲ್ಲಿ ಸಂಸ್ಕೃತಿ ಇಲ್ಲ’ ಎಂಬುದಾಗಿ ಅವಹೇಳನಕಾರಿಯಾಗಿ ಮುದ್ರಿಸಿ ಆದಿವಾಸಿಗಳನ್ನು (ಕಾಡುವಾಸಿ) ಉದ್ದೇಶಪೂರ್ವಕವಾಗಿ ಅನಾಗರಿಕರೆಂದು ನಿಂದಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

‘ಆದಿವಾಸಿಗಳ ಘನತೆ, ಸಂಸ್ಕೃತಿಯನ್ನು ಅಲ್ಲಗೆಳೆದು ನಮ್ಮನ್ನು ಮನುಷ್ಯರಂತೆ ಕಾಣದ ವಿಕೃತ ಮನೋ ಧೋರಣೆಯ ರೋಹಿತ್ ಚಕ್ರತೀರ್ಥ ಮತ್ತು ಇತರ ಸದಸ್ಯರನ್ನು ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ 1989ರ ಅಡಿಯಲ್ಲಿ ಬಂಧಿಸಬೇಕು’ ಎಂದು ಮನವಿ ಮಾಡಲಾಗಿದೆ.

ಪ್ರಧಾನ ಕಾರ್ಯದರ್ಶಿಗೆ ಪತ್ರ:

ದೂರು ಸ್ವೀಕರಿಸಿರುವ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಸದರಿ ವಿಚಾರದ ಬಗ್ಗೆ ಪರಿಶೀಲಿಸಿ ಸಂಬಂಧಪಟ್ಟ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಹಾಗೂ ಇತರ ಸದಸ್ಯರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಸ್. ಸೆಲ್ವಕುಮಾರ್‌ ಅವರಿಗೆ ಪತ್ರ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT