ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ.ಮಣಿಯಂಬಾಳ್‌ನಲ್ಲಿ ವಾಂತಿಭೇದಿ: ಕಾಲರಾ ಶಂಕೆ

Last Updated 26 ಏಪ್ರಿಲ್ 2020, 15:24 IST
ಅಕ್ಷರ ಗಾತ್ರ

ಮರಳವಾಡಿ (ಕನಕಪುರ): ತಾಲ್ಲೂಕಿನ ಮರಳವಾಡಿ ಹೋಬಳಿ ಬನವಾಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಟಿ.ಮಣಿಯಂಬಾಳ್‌ ಗ್ರಾಮದಲ್ಲಿ ವಾಂತಿ ಬೇಧಿ ಕಾಣಿಸಿಕೊಂಡಿದ್ದು, ಕಾಲರಾ ಶಂಕೆ ವ್ಯಕ್ತವಾಗಿದೆ. ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಕೆಲವು ದಿನಗಳ ಹಿಂದೆಯಷ್ಟೇ ತಾಲ್ಲೂಕಿನ ಪರುವಯ್ಯನಪಾಳ್ಯದಲ್ಲಿ ವಾಂತಿ ಭೇದಿ ಕಾಣಿಸಿಕೊಂಡು ಜನರಲ್ಲಿ ಭಯಹುಟ್ಟಿಸಿತ್ತು. ನಂತರದಲ್ಲಿ ನಿಯಂತ್ರಣಕ್ಕೆ ಬಂದು ಪರಿಸ್ಥಿತಿ ಸುಧಾರಿಸಿದೆ ಎನ್ನವಷ್ಟರಲ್ಲಿ ಟಿ.ಮಣಯಂಬಾಳ್‌ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಸುಮಾರು 18 ಮಂದಿಗೆ ವಾಂತಿಭೇದಿ ಕಾಣಿಸಿಕೊಂಡಿದೆ.
ಇಲ್ಲಿಯೂ ಕಾಲರಾ ಕಾಣಿಸಿಕೊಂಡಿರಬಹುದೆಂದು ಭಯಭೀತರಾದ ಜನತೆ ತಾಲ್ಲೂಕು ಆರೋಗ್ಯಾಧಿಕಾರಿ ಹಾಗೂ ಪಂಚಾಯಿತಿ ಪಿಡಿಒ ಅವರ ಗಮನಕ್ಕೆ ತಂದಿದ್ದಾರೆ.ವಾಂತಿ ಭೇದಿ ಆಗಿದ್ದವರು ಹಾರೋಹಳ್ಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದು ಗುಣಮುಖರಾಗಿ ಗ್ರಾಮಕ್ಕೆ ವಾಪಸ್ಸಾಗಿದ್ದಾರೆ.
ಆರೋಗ್ಯಾಧಿಕಾರಿ ಡಾ.ಭುಜಬಲಿ ಮತ್ತು ಆರೋಗ್ಯ ಸಿಬ್ಬಂದಿಗಳ ತಂಡವು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕುಡಿಯುವ ನೀರಿನ ಕೊಳವೆ ಬಾವಿಯ ನೀರನ್ನು ಸಂಗ್ರಹಿಸಿ ಪರೀಕ್ಷೆಗೆ ಕಳಿಸಿಕೊಟ್ಟಿದ್ದಾರೆ.ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವಂತೆ ಪಿಡಿಒ ಅವರಿಗೆ ತಿಳಿಸಿ ನೀರಿನ ಮಾದರಿ ಪರೀಕ್ಷೆಯ ಫಲಿತಾಂಶ ಬರುವ ತನಕ ಗ್ರಾಮಕ್ಕೆ ಬೇರೆ ಕಡೆಯಿಂದ ಕುಡಿಯುವ ನೀರಿನ ಪೂರೈಕೆ ಮಾಡುವಂತೆ ಸೂಚನೆ ನೀಡಿದ್ದಾರೆ.
‘ಗ್ರಾಮದಲ್ಲಿ ಕೊಳವೆ ಬಾವಿ ನೀರಿನ ಸಮಸ್ಯೆ ಇರುಬಹುದೆಂದು ನೀರಿನ ಸ್ಯಾಂಪಲ್‌ ಕಳುಹಿಸಲಾಗಿದೆ. ಸದ್ಯಕ್ಕೆ ಹೊರಗಡೆಯಿಂದ ನೀರು ಪೂರೈಕೆ ಮಾಡುತ್ತಿರುವುದರಿಂದ ವಾಂತಿ ಭೇದಿ ನಿಯಂತ್ರಣಕ್ಕೆ ಬಂದಿದೆ. ಗ್ರಾಮದಲ್ಲಿ ನಮ್ಮ ಆರೋಗ್ಯ ಸಿಬ್ಬಂದಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಟಿಎಚ್‌ಒ ಡಾ.ಭುಜಬಲಿ ಹೇಳಿದರು.

‘ಕೊರೊನಾ ವೈರಸ್‌ ತಡೆಗಟ್ಟುವಿಕೆಗಾಗಿ ಗ್ರಾಮದಲ್ಲಿ ಸೋಂಕು ನಿವಾರಕ ಸಿಂಪಡಣೆ ಮಾಡಿ ಚರಂಡಿಯಲ್ಲಿ ಹೂಳು ತೆಗೆಸಿ ಸ್ವಚ್ಛತೆ ಕಾಪಾಡಲಾಗಿದೆ’ ಎಂದು ಪಿಡಿಒ ಶಿವರುದ್ರಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT