ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯ ಅನ್ನೋದು ಇದ್ರೆ ಡಿಕೆಶಿ ಸಿ.ಎಂ ಆಗಬೇಕು: ಶಾಸಕ ಇಕ್ಬಾಲ್ ಹುಸೇನ್

Published 3 ನವೆಂಬರ್ 2023, 12:45 IST
Last Updated 3 ನವೆಂಬರ್ 2023, 12:45 IST
ಅಕ್ಷರ ಗಾತ್ರ

ರಾಮನಗರ: ‘ಡಿ.ಕೆ. ಶಿವಕುಮಾರ್ ಅವರು ರಾಜ್ಯದಲ್ಲಿ ಪ್ರಬಲವಾಗಿ ಪಕ್ಷವನ್ನು ಕಟ್ಟಿದ್ದಾರೆ. ಸತ್ಯ, ನ್ಯಾಯ, ಧರ್ಮ ಅಂತ ಇದ್ರೆ ಅವರು ಮುಖ್ಯಮಂತ್ರಿಯಾಗಬೇಕು. ಅವರ ಪರ ನಿಲ್ಲುವಂತೆ ನನಗೆ ಯಾವುದೇ ಒತ್ತಡವಿಲ್ಲ. ಅವರನ್ನು ಭೇಟಿಯಾಗಿಯೇ ಮೂರು ತಿಂಗಳಾಗಿದೆ. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿಷಯದಲ್ಲಿ ಯಾವುದೇ ಅಸಮಾಧಾನವಿಲ್ಲ’ ಎಂದು ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಹೇಳಿದರು.

ನಗರದಲ್ಲಿ ಶುಕ್ರವಾರ ಕಾರ್ಯಕ್ರಮವೊಂದರಲ್ಲಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಪಕ್ಷಕ್ಕಾಗಿ ದುಡಿದವರಿಗೂ ಅವಕಾಶ ಕೊಡಿ ಎಂದು ಕೇಳುವುದರಲ್ಲಿ ತಪ್ಪೇನಿದೆ. ಸತ್ಯ ಮತ್ತು ನ್ಯಾಯಕ್ಕೆ ಬೆಲೆ ಇದೆ. ನಾನು ಅದರ ಪರವಾಗಿದ್ದೇನೆಯೇ ಹೊರತು, ವ್ಯಕ್ತಿ ಪರವಾಗಿ ಹೋರಾಟ ಮಾಡುತ್ತಿಲ್ಲ’ ಎಂದರು.

‘ತಮ್ಮ ಶ್ರಮ, ಹೋರಾಟ ಹಾಗೂ ನಿಷ್ಠೆಯಿಂದಾಗಿ ಪಕ್ಷವನ್ನು ಅಧಿಕಾರಕ್ಕೆ ತಂದಿರುವ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಬೇಕು. ಇದು ಕೇವಲ ನನ್ನೊಬ್ಬನ ಅಭಿಪ್ರಾಯವಲ್ಲ. ರಾಜ್ಯದ ಕಾರ್ಯಕರ್ತರು ಹಾಗೂ ಮುಖಂಡರ ಅಭಿಲಾಷೆ ಕೂಡ ಆಗಿದೆ. ಪಕ್ಷದೊಳಗೆ ಎಲ್ಲರಿಗೂ ಅವಕಾಶ ಸಿಗಬೇಕು. ಆ ಕುರಿತು ಹೈಕಮಾಂಡ್ ಸೂಕ್ತ ಸಂದರ್ಭದಲ್ಲಿ ನಿರ್ಧಾರ ಕೈಗೊಂಡು ಅವಕಾಶ ಮಾಡಿಕೊಡುತ್ತದೆ ಎಂಬ ವಿಶ್ವಾಸವಿದೆ. ಈ ವಿಷಯದಲ್ಲಿ ನಮ್ಮ ನಡುವೆ ಯಾವುದೇ ಗೊಂದಲವಿಲ್ಲ. ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ನಾವೆಲ್ಲರೂ ಒಗ್ಗಟ್ಟಾಗಿ ದುಡಿಯುತ್ತಿದ್ದೇವೆ’ ಎಂದು ತಿಳಿಸಿದರು.

‘ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರು ಒಂದು ಸಮುದಾಯಕ್ಕೆ ಸೀಮಿತರಲ್ಲ. ಅವರು ಎಲ್ಲಾ ಸಮುದಾಯಗಳ ನಾಯಕರಾಗಿದ್ದಾರೆ. ಈ ವಿಷಯದಲ್ಲಿ ಒಬ್ಬರನ್ನು ಇನ್ನೊಬ್ಬರ ಮೇಲೆ ಎತ್ತಿ ಕಟ್ಟುವ ಮಾತನಾಡಬಾರದು. ನಾನು ಸಹ ಯಾವುದೇ ವರ್ಗಕ್ಕೆ ಸೀಮಿತವಾಗಿಲ್ಲ. ಎಲ್ಲಾ ವರ್ಗಕ್ಕೆ ಸೇರಿರುವ ಎಲ್ಲರ ಮನೆ ಮಗ. ಎಲ್ಲರೂ ನನ್ನನ್ನು ಸಾಕಿದ್ದರಿಂದಲೇ, ಅವರ ಸೇವೆ ಮಾಡುವುದಕ್ಕೆ ಅವಕಾಶ ಸಿಕ್ಕಿದೆ’ ಎಂದು ತಿಳಿಸಿದರು.

‘ತಮ್ಮ ಸಮುದಾಯದ ಕಷ್ಟ–ಸುಖ ಕುರಿತು ಧರ್ಮದ ಮುಖಂಡರು ಮತ್ತು ಸ್ವಾಮೀಜಿಗಳು ಸಭೆ–ಸಮಾರಂಭ ಮಾಡುತ್ತಾರೆ. ಅಲ್ಪಸಂಖ್ಯಾತರಲ್ಲೂ ಕೆಲವರು ನೇತೃತ್ವ ವಹಿಸಿಕೊಂಡು ಆ ಕೆಲಸ ಮಾಡುತ್ತಾರೆ. ಇದರಲ್ಲಿ ಯಾವುದೇ ತಪ್ಪಿಲ್ಲ. ಇದರಲ್ಲಿ ರಾಜಕೀಯ ಬೆರೆಸುವುದು ಸರಿಯಲ್ಲ. ಅಂತಹ ಸಭೆ–ಸಮಾರಂಭಗಳಲ್ಲಿ ಕರಪತ್ರ ಹಂಚಿದರೆ ಮಾತ್ರ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಪ್ರಿಯಾಂಕ್ ಮಾತು ಶೋಭೆ ತರುವುದಿಲ್ಲ’
‘ಹೈಕಮಾಂಡ್ ಹೇಳಿದರೆ, ನಾನು ಸಹ ಮುಖ್ಯಮಂತ್ರಿ ಆಗುತ್ತೇನೆ’ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಮಾತಿಗೆ ಪ್ರತಿಕ್ರಿಯಿಸಿದ ಇಕ್ಬಾಲ್ ಅವರು, ‘ಮಹಾನ್ ನಾಯಕರು ಕೂತಿರುವ ಜಾಗ ಅದು. ಅದಕ್ಕೆ ತನ್ನದೇ ಆದ ಸ್ಥಾನಮಾನಗಳಿವೆ. ನಾವೆಲ್ಲರೂ ಮುಖ್ಯಮಂತ್ರಿ ಆಗುತ್ತೇವೆ ಎನ್ನೋ ಮಾತು ಶೋಭೆ ತರುವುದಿಲ್ಲ’ ಎಂದು ಟಾಂಗ್ ಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT