ಶನಿವಾರ, ಆಗಸ್ಟ್ 17, 2019
24 °C

ಇ-ಸ್ವತ್ತು ಆಂದೋಲನ: 153 ಮಂದಿಗೆ ಅನುಕೂಲ

Published:
Updated:
Prajavani

ಕನಕಪುರ: ನಗರಸಭೆ ವ್ಯಾಪ್ತಿಯ 19ನೇ ವಾರ್ಡ್‌ನ ನಿವಾಸಿಗಳ ಸ್ವತ್ತುಗಳಿಗೆ ಸಂಬಂಧಿಸಿದ ಇ-ಸ್ವತ್ತನ್ನು, ನಗರಸಭೆ ನಾಮ ನಿರ್ದೇಶನ ಸದಸ್ಯ ಎಸ್‌.ಗಂಗಾಧರ್‌ ಮಾಡಿಸಿ ಮನೆ ಮಾಲೀಕರಿಗೆ ಬುಧವಾರ ಹಂಚಿಕೆ ಮಾಡಿದರು.

ಹಲವು ವರ್ಷಗಳಿಂದ ತಮ್ಮ ಸ್ವತ್ತುಗಳಿಗೆ ಖಾತೆ ಮಾಡಿಸದೆ, ಕಂದಾಯ ಕಟ್ಟದೆ ಬಾಕಿ ಉಳಿಸಿಕೊಂಡಿದ್ದ ಮಾಲೀಕರ ಖಾತೆ ಮತ್ತು ಇ-ಸ್ವತ್ತು ಮಾಡಿಸಿಕೊಡುವ ಆಂದೋಲನಕ್ಕೆ ಸಂಸದ ಡಿ.ಕೆ.ಸುರೇಶ್‌, ನಗರಸಭೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ 2018ರ ಡಿಸೆಂಬರ್‌ 26 ರಂದು ಚಾಲನೆ ನೀಡಿದ್ದರು.

ಅದರಂತೆ ಗಂಗಾಧರ್‌ ಚಾಮುಂಡೇಶ್ವರಿ ಕಲ್ಯಾಣ ಮಂಟಪದ ರಸ್ತೆಯಿಂದ ಶ್ರೀರಾಮಪುರದವರೆಗಿನ ಮದ್ದೂರಮ್ಮ ಬೀದಿ, ಟ್ರಾನ್ಸ್‌ ಫಾರ್ಮರ್‌ ಬೀದಿ, ಹೆಂಚಿನ ಫ್ಯಾಕ್ಟರಿ ಹಿಂಭಾಗದ ರಸ್ತೆಯ 153 ಮಾಲೀಕರ ಸ್ವತ್ತಿಗೆ 2019-20ನೇ ಸಾಲಿನ ಕಂದಾಯ ಕಟ್ಟಿಸಿ, ಇ-ಸ್ವತ್ತು ಮಾಡಲು ಬೇಕಿರುವ ಅಗತ್ಯ ದಾಖಲೆಗಳನ್ನು ತಾವೇ ಪೂರೈಸಿದ್ದಾರೆ.

ಇ-ಸ್ವತ್ತು ಆಂದೋಲನವನ್ನು ನಗರಸಭೆ ವ್ಯಾಪ್ತಿಯ 27 ವಾರ್ಡ್‌ಗಳಲ್ಲಿಯೂ ಮಾಡಬೇಕು ಎಂದು ಸಂಸದರು ತಿಳಿಸಿದ್ದರು. ಅದರಲ್ಲಿ 19ನೇ ವಾರ್ಡಿನ ಗಂಗಾಧರ್‌ ತಮ್ಮ ವಾರ್ಡಿನ ಬಹುತೇಕ ಮಾಲೀಕರ ಸ್ವತ್ತಿಗೆ ಇ-ಸ್ವತ್ತು ಮಾಡಿಸಿದ್ದಾರೆ.

 

 

Post Comments (+)