ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬ್ಬರವಿಲ್ಲದೆ ಮುಗಿಯಲಿದೆ ಬಹಿರಂಗ ಪ್ರಚಾರ; ಮತಯಾಚನೆಗೆ ಇನ್ನೆರಡೇ ದಿನ ಬಾಕಿ

18ರಂದು ನಡೆಯಲಿದೆ ಮತದಾನ
Last Updated 14 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ಮುಖ್ಯಾಂಶಗಳು

* ತಾರಾ ಪ್ರಚಾರಕರಿಲ್ಲದೆ ಪ್ರಚಾರ ಮುಂದುವರಿಕೆ

* ಆಕರ್ಷಣೆಯ ಕೊರತೆ: ಕಾರ್ಯಕರ್ತರಲ್ಲಿ ನಿರುತ್ಸಾಹ

* ರೋಡ್‌ ಶೋ ಭಾಷಣಗಳಿಗೆ ಹೆಚ್ಚಿನ ಒತ್ತು

ರಾಮನಗರ: ಬೆಂಗಳೂರು ಲೋಕಸಭಾ ಕ್ಷೇತ್ರದಲ್ಲಿನ ಈ ಬಾರಿಯ ಚುನಾವಣಾ ಪ್ರಚಾರವು ಯಾವುದೇ ಅಬ್ಬರ ಇಲ್ಲದೆಯೇ ಮುಗಿಯಲಿದೆ.

ಬಹಿರಂಗ ಪ್ರಚಾರ ಅಂತ್ಯಕ್ಕೆ ಇನ್ನೆರಡೇ ದಿನ ಬಾಕಿ ಉಳಿದಿದೆ. ಮಂಗಳವಾರ ಸಂಜೆ 6ಕ್ಕೆ ಪ್ರಚಾರಕ್ಕೆ ತೆರೆ ಬೀಳಲಿದೆ. ಈವರೆಗೆ ಯಾವುದೇ ದೊಡ್ಡ ಮಟ್ಟದ ಚುನಾವಣಾ ಸಮಾವೇಶಗಳು ಜಿಲ್ಲೆಯಲ್ಲಿ ನಡೆದಿಲ್ಲ. ನಾಮಪತ್ರ ಸಲ್ಲಿಕೆಯ ಕಡೆಯ ದಿನದಂದು ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಪರ ಅದ್ದೂರಿ ಮೆರವಣಿಗೆ ನಡೆದಿತ್ತು. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಸಚಿವ ಡಿ.ಕೆ. ಶಿವಕುಮಾರ್‌ ಸೇರಿ ಕಾಂಗ್ರೆಸ್‌–ಜೆಡಿಎಸ್‌ ಕಾರ್ಯಕರ್ತರ ಸಮಾವೇಶ ನಡೆಸಿ ‘ನಾವೇ ಜೋಡೆತ್ತುಗಳು’ ಎಂದು ಬೀಗಿ ಹೋಗಿದ್ದರು. ಅದಾದ ಬಳಿಕ ಇಬ್ಬರೂ ರಾಮನಗರಕ್ಕೆ ಕಾಲಿಟ್ಟಿಲ್ಲ.

ಡಿ.ಕೆ. ಶಿವಕುಮಾರ್ ಸಹ ಬೇರೆ ಬೇರೆ ಕ್ಷೇತ್ರಗಳಲ್ಲಿನ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಸಹೋದರನ ಪರ ಕೆಲವು ದಿನವಷ್ಟೇ ಪ್ರಚಾರ ನಡೆಸಿ ಹೋಗಿದ್ದಾರೆ. ಚನ್ನಪಟ್ಟಣದಲ್ಲಿ ಬಿಟ್ಟರೆ ಜಿಲ್ಲೆಯ ಉಳಿದ ಕ್ಷೇತ್ರಗಳಲ್ಲಿ ಹೆಚ್ಚು ಕಾಣಿಸಿಕೊಂಡಿಲ್ಲ.

ಸ್ವಕ್ಷೇತ್ರಕ್ಕೆ ಬರದ ಮುಖ್ಯಮಂತ್ರಿ: ಎಚ್‌.ಡಿ. ಕುಮಾರಸ್ವಾಮಿ ಅವರು ತಮ್ಮ ಸ್ವಕ್ಷೇತ್ರವಾದ ಚನ್ನಪಟ್ಟಣದಲ್ಲಿ ಮೈತ್ರಿ ಅಭ್ಯರ್ಥಿಯ ಪರವಾಗಿ ಪ್ರಚಾರ ನಡೆಸಿಲ್ಲ. ಅವರ ಬದಲಿಗೆ ಶಾಸಕಿ ಅನಿತಾ ಕುಮಾರಸ್ವಾಮಿ ಮತಯಾಚನೆ ಮಾಡಿ ಹೋಗಿದ್ದಾರೆ. ಸೋಮವಾರ ಹಾಗೂ ಮಂಗಳವಾರ ಕುಮಾರಸ್ವಾಮಿ ಮಂಡ್ಯದಲ್ಲಿ ಪುತ್ರನ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದು, ಇತ್ತ ಬರುವುದು ಅನುಮಾನವಾಗಿದೆ.

ಉಳಿದಂತೆ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಸಹಿತ ಯಾವ ನಾಯಕರೂ ಜಿಲ್ಲೆಯತ್ತ ತಿರುಗಿ ನೋಡಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಚುನಾವಣೆಯ ಕಾವು ಅಷ್ಟಕ್ಕಷ್ಟೇ ಎಂಬಂತೆ ಆಗಿದೆ. ಡಿ.ಕೆ. ಸುರೇಶ್ ಏಕಾಂಗಿಯಾಗಿ ರೋಡ್‌ ಶೋ ನಡೆಸಿ ಮತಯಾಚನೆ ಮಾಡಿ ಹೋಗಿದ್ದಾರೆ.

ಬಿಜೆಪಿಯದ್ದೂ ಇದೇ ಕಥೆ: ಬಿಜೆಪಿ ಅಭ್ಯರ್ಥಿ ಅಶ್ವಥ್‌ ನಾರಾಯಣ ಪರವೂ ಯಾವ ಸ್ಟಾರ್ ಪ್ರಚಾರಕರು ಪ್ರಚಾರ ನಡೆಸಿಲ್ಲ. ಜಿಲ್ಲೆಯಲ್ಲಿ ಸಿ.ಪಿ. ಯೋಗೇಶ್ವರ್‌ ಮಾತ್ರವೇ ಬೆನ್ನಿಗೆ ನಿಂತಿದ್ದಾರೆ.

ಪಕ್ಷದ ಕ್ಷೇತ್ರದ ಉಸ್ತುವಾರಿ ಕಟ್ಟಾ ಸುಬ್ರಹ್ಮಣ್ಯನಾಯ್ಡು, ಜಿಲ್ಲಾ ಘಟಕದ ಅಧ್ಯಕ್ಷ ಎಂ. ರುದ್ರೇಶ್‌ ಪ್ರಚಾರದಲ್ಲಿ ಹೆಚ್ಚು ಕಾಣಿಸಿಕೊಂಡಿದ್ದಾರೆ. ಆರ್. ಅಶೋಕ್, ಈಶ್ವರಪ್ಪ, ಶ್ರುತಿ, ಮಾಳವಿಕಾ ಮೊದಲಾದವರು ಒಮ್ಮೊಮ್ಮೆ ಬಂದು ಹೋಗಿದ್ದಾರೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಒಮ್ಮೆಯೂ ಇತ್ತ ಮುಖ ಮಾಡಿಲ್ಲ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಪ್ರಚಾರಕ್ಕೆ ಬಂದು ಹೋಗುತ್ತಾರೆ ಎಂದು ಪಕ್ಷದ ಮುಖಂಡರು ಈ ಹಿಂದೆ ಹೇಳಿದ್ದು, ಅದೂ ರದ್ದಾಗಿದೆ. ಜಿಲ್ಲೆಯಲ್ಲಿ ಯಾವುದೇ ಬಹಿರಂಗ ಸಮಾವೇಶ ನಡೆಸದೇ ಬಿಜೆಪಿ ತನ್ನ ಪ್ರಚಾರವನ್ನು ಮುಗಿಸಲಿದೆ.

ಕಡೆಯ ಎರಡು ದಿನದಂದು ರೋಡ್ ಶೋಗಳಿಗೆ ಅಭ್ಯರ್ಥಿಗಳು ಹೆಚ್ಚಿನ ಸಮಯ ನೀಡಲಿದ್ದಾರೆ. ‘ಲೋಕಸಭಾ ಕ್ಷೇತ್ರವು ತುಂಬಾ ವಿಸ್ತಾರವಾಗಿರುವ ಕಾರಣ ಎಲ್ಲ ಜನರನ್ನು ತಲುಪುವುದು ಆಗದ ಮಾತು. ಮೆರವಣಿಗೆಗಳ ಮೂಲಕವೇ ಅಭ್ಯರ್ಥಿಗಳು ಹೆಚ್ಚಿನ ಪ್ರಚಾರ ಮಾಡುತ್ತಾರೆ. ಇದರಿಂದ ಸಮಯದ ಉಳಿತಾಯವೂ ಆಗುತ್ತದೆ. ಭೇಟಿ ನೀಡಬೇಕಾದ ಪ್ರಮುಖ ಪಟ್ಟಣ, ಹಳ್ಳಿಗಳನ್ನು ಗುರುತಿಸಿ ವೇಳಾಪಟ್ಟಿ ಮಾಡಿಕೊಂಡು ಅದರಂತೆಯೇ ಪ್ರಚಾರ ನಡೆಸಲಾಗಿದೆ’ ಎಂದು ಪಕ್ಷವೊಂದರ ಮುಖಂಡರು ತಿಳಿಸಿದರು.

ನಗರ ಮತದಾರರತ್ತ ಚಿತ್ತ
ಎರಡೂ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಈ ಬಾರಿಯ ಚುನಾವಣೆಯಲ್ಲಿ ನಗರ ಮತದಾರರತ್ತಲೇ ಹೆಚ್ಚು ಗಮನ ಕೇಂದ್ರೀಕರಿಸಿದ್ದಾರೆ.

ಬೆಂಗಳೂರು ನಗರ ವ್ಯಾಪ್ತಿಯ ರಾಜರಾಜೇಶ್ವರಿ ನಗರ, ಆನೇಕಲ್‌ ಹಾಗೂ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 14 ಲಕ್ಷ ಮತದಾರರು ಇದ್ದಾರೆ. ಇವರನ್ನು ಹೆಚ್ಚು ಸೆಳೆಯುವವರಿಗೆ ವಿಜಯದ ಮಾಲೆ ಒಲಿಯಲಿದೆ. ಹೀಗಾಗಿ ಈ ಮೂರು ಕ್ಷೇತ್ರಗಳತ್ತ ಅಭ್ಯರ್ಥಿಗಳು ಓಡಾಟ ಹೆಚ್ಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT