ಮೈತ್ರಿ ಪ್ರಚಾರ: ಜೆಡಿಎಸ್‌ ನಿರುತ್ಸಾಹ?

ಶುಕ್ರವಾರ, ಏಪ್ರಿಲ್ 26, 2019
35 °C
ಮಂಡ್ಯದತ್ತ ಮುಖ ಮಾಡಿದ ರಾಮನಗರ ಕಾರ್ಯಕರ್ತರು

ಮೈತ್ರಿ ಪ್ರಚಾರ: ಜೆಡಿಎಸ್‌ ನಿರುತ್ಸಾಹ?

Published:
Updated:

ರಾಮನಗರ: ಬಹಿರಂಗ ಚುನಾವಣಾ ಪ್ರಚಾರಕ್ಕೆ ಇನ್ನು ಆರೇ ದಿನ ಬಾಕಿ ಉಳಿದಿದೆ. ಆದರೆ ಜೆಡಿಎಸ್ ಪಾಳಯದಲ್ಲಿ ಮಾತ್ರ ಚುನಾವಣೆಯ ಉತ್ಸಾಹ ಅಷ್ಟಾಗಿ ಕಾಣುತ್ತಿಲ್ಲ.

ನೆರೆಯ ಮಂಡ್ಯ ಜಿಲ್ಲೆಯಲ್ಲಿ ಎಚ್‌.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್‌ ಅಭ್ಯರ್ಥಿ ಆಗಿದ್ದು, ಮುಖ್ಯಮಂತ್ರಿ ಆದಿಯಾಗಿ ಜೆಡಿಎಸ್‌ನ ಎಲ್ಲ ಮುಖಂಡರ ಗಮನವೂ ಅತ್ತ ನೆಟ್ಟಿದೆ. ಮತ್ತೊಂದೆಡೆ, ದೊಡ್ಡಗೌಡರಂದೇ ಖ್ಯಾತಿಯಾದ ಎಚ್‌.ಡಿ. ದೇವೇಗೌಡರು ತುಮಕೂರು ಕ್ಷೇತ್ರದ ಅಭ್ಯರ್ಥಿ ಆಗಿದ್ದಾರೆ. ಹೀಗಾಗಿ ಈ ಇಬ್ಬರ ಅನುಪಸ್ಥಿತಿಯಲ್ಲಿ ಜಿಲ್ಲೆಯಲ್ಲಿನ ಜೆಡಿಎಸ್ ಪಡೆ ಉತ್ಸಾಹ ಕಳೆದುಕೊಂಡಂತಿದೆ.

ಕಾಂಗ್ರೆಸ್‌–ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿರುವ ಡಿ.ಕೆ. ಸುರೇಶ್‌ ಪರವಾಗಿ ಕಾಂಗ್ರೆಸ್‌ ಕಾರ್ಯಕರ್ತರು ಸಕ್ರಿಯವಾಗಿ ಪ್ರಚಾರಕ್ಕೆ ಇಳಿದಿದ್ದಾರೆ. ಜಾತ್ಯತೀತ ಜನತಾದಳದ ಕಾರ್ಯಕರ್ತರು ಅಲ್ಲಲ್ಲಿ ಕೈ ಜೋಡಿಸುತ್ತಿರುವುದು ಬಿಟ್ಟರೆ, ಪಕ್ಷದ ಪ್ರಾಬಲ್ಯ ಇರುವ ಕಡೆ ತಾವೇ ಪ್ರಚಾರದ ನೇತೃತ್ವ ವಹಿಸಿದ್ದು ಕಂಡುಬರುತ್ತಿಲ್ಲ.

‘ಕಳೆದ ರಾಮನಗರ ವಿಧಾನಸಭೆ ಉಪ ಚುನಾವಣೆ ಸಂದರ್ಭ ಡಿ.ಕೆ. ಸುರೇಶ್ ಸ್ವತಃ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಪರ ಪ್ರಚಾರದ ನೇತೃತ್ವ ವಹಿಸಿದ್ದರು. ಒಂದು ವಾರಕ್ಕೂ ಹೆಚ್ಚು ಕಾಲ ಸತತವಾಗಿ ಕ್ಷೇತ್ರ ಸುತ್ತಾಡಿ ಮತಯಾಚನೆ ಮಾಡಿದ್ದರು. ಈಗ ಜೆಡಿಎಸ್‌ನಿಂದಲೂ ಅದೇ ಮಟ್ಟದ ಬೆಂಬಲ ನಿರೀಕ್ಷಿಸುತ್ತಿದ್ದೇವೆ. ಆದರೆ ಬೆಂಬಲ ಮಾತ್ರ ಅಷ್ಟಕ್ಕಷ್ಟೇ ಎಂಬಂತಿದೆ’ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳುತ್ತಾರೆ.

‘ಸುರೇಶ್ ನಾಮಪತ್ರ ಸಲ್ಲಿಸುವ ದಿನ ಎಚ್‌.ಡಿ. ಕುಮಾರಸ್ವಾಮಿ ಸಾಥ್‌ ನೀಡಿದ್ದರು. ಅಂದು ಜೆಡಿಎಸ್‌ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಹಾರೋಹಳ್ಳಿ, ರಾಮನಗರ, ಚನ್ನಪಟ್ಟಣದಲ್ಲಿ ಅನಿತಾ ನೇತೃತ್ವದಲ್ಲಿ ನಡೆದ ಪ್ರಚಾರಕ್ಕೆ ಜನರ ಕೊರತೆ ಇತ್ತು. ಹೀಗಾಗಿ ನಾವೇ ಜನರನ್ನು ಕರೆತರಬೇಕಾಯಿತು’ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

ರಾಮನಗರ ತಾಲ್ಲೂಕಿನಲ್ಲಿ ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಲಿಂಗಪ್ಪ ಕಾಂಗ್ರೆಸ್‌ ಪ್ರಚಾರದ ನೇತೃತ್ವ ವಹಿಸಿದ್ದಾರೆ. ಅವರು ಉಪ ಚುನಾವಣೆಯಿಂದಲೂ ಜೆಡಿಎಸ್ ಕಾರ್ಯಕರ್ತರಿಂದ ಅಂತರ ಕಾಯ್ದುಕೊಂಡೇ ಬಂದಿದ್ದು, ಉಭಯ ಪಕ್ಷಗಳ ಸಮನ್ವಯಕ್ಕೆ ಕೊಂಚ ಅಡಚಣೆಯಾಗಿದೆ.

ರಾಮನಗರ ಕಾರ್ಯಕರ್ತರೂ ಮಂಡ್ಯಕ್ಕೆ: ಜಿಲ್ಲೆಯ ಸಾಕಷ್ಟು ಜನತಾದಳ ಕಾರ್ಯಕರ್ತರು ಮಂಡ್ಯದಲ್ಲಿ ನಿಖಿಲ್‌ ಪರ ಪ್ರಚಾರಕ್ಕೆ ಹೋಗುತ್ತಿದ್ದಾರೆ. ಮೂರ್ನಾಲ್ಕು ದಿನ ಅವರ ಹಿಂದೆಯೇ ಸುತ್ತಿ ಬರುತ್ತಿದ್ದಾರೆ. ಹೀಗೆ ಪ್ರಚಾರ ನಡೆಸಿದ ಫೋಟೊಗಳು, ಸೆಲ್ಫಿಗಳನ್ನು ವ್ಯಾಟ್ಸಪ್‌ನಲ್ಲಿ ಹರಿಬಿಟ್ಟು ತಮ್ಮ ಪಕ್ಷ ನಿಷ್ಠೆ ತೋರ್ಪಡಿಸುತ್ತಿದ್ದಾರೆ. ಆದರೆ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಅಷ್ಟು ಉತ್ಸಾಹ ತೋರುತ್ತಿಲ್ಲ ಎಂಬ ದೂರಿದೆ.

ಆದರೆ ಜೆಡಿಎಸ್ ಮುಖಂಡರು ಈ ಆರೋಪವನ್ನು ನಿರಾಕರಿಸುತ್ತಾರೆ. ‘ನಾವು ಸಹಕಾರ ನೀಡುತ್ತಿಲ್ಲ ಎನ್ನುವುದು ಸುಳ್ಳು. ಈಗಾಗಲೇ ಪ್ರಚಾರ ಆರಂಭಿಸಿದ್ದೇವೆ. ಇನ್ನೇನು ಹಳ್ಳಿಗಳಲ್ಲಿ ಜಂಟಿ ಪ್ರಚಾರವನ್ನೂ ನಡೆಸುತ್ತೇವೆ’ ಎನ್ನುತ್ತಾರೆ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್‌.

‘ಹೋಬಳಿ, ಗ್ರಾಮ ಮಟ್ಟದಲ್ಲಿ ಈಗಾಗಲೇ ಎರಡೂ ಪಕ್ಷಗಳ ಮುಖಂಡರು ಸೇರಿಯೇ ಜಂಟಿಯಾಗಿ ಸಭೆ ನಡೆಸುತ್ತಿದ್ದೇವೆ. ಹಳ್ಳಿಗಳಲ್ಲಿ ಜಂಟಿಯಾಗಿಯೇ ಪ್ರಚಾರಕ್ಕೆ ಹೋಗುತ್ತಿದ್ದೇವೆ. ಡಿ.ಕೆ. ಸುರೇಶ್‌ ಪರ ಪಕ್ಷದ ಕಾರ್ಯಕರ್ತರಲ್ಲಿ ಒಳ್ಳೆಯ ಅಭಿಪ್ರಾಯ ಇದೆ. ರಾಮನಗರದಲ್ಲಿ ಬಿಜೆಪಿ ಅಷ್ಟು ಪ್ರಬಲವಾಗಿಲ್ಲದ ಕಾರಣ ಚುನಾವಣೆಯ ಅಬ್ಬರ ಕಾಣಿಸುತ್ತಿಲ್ಲ ಅಷ್ಟೇ’ ಎಂದು ಸಮಜಾಯಿಷಿ ನೀಡುತ್ತಾರೆ ಪಕ್ಷದ ಜಿಲ್ಲಾ ಪದವೀಧರ ಘಟಕದ ಅಧ್ಯಕ್ಷ ಜಿ.ಟಿ. ಕೃಷ್ಣ.

ನಾಯಕತ್ವದ ಕೊರತೆ
ರಾಮನಗರ ಜೆಡಿಎಸ್‌ನಲ್ಲಿ ಎರಡನೇ ಹಂತದ ನಾಯಕರ ಕೊರತೆ ಇದ್ದು, ಕಾಂಗ್ರೆಸ್‌ ನಡುವೆ ಸಮನ್ವಯ ಸಾಧಿಸಲು ಹೆಣಗಾಡುತ್ತಿದ್ದಾರೆ.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್‌ಕುಮಾರ್ ಹೆಸರಿಗಷ್ಟೇ ಸೀಮಿತವಾಗಿದ್ದು, ಸಂಘಟನೆಯಲ್ಲಿ ಮೂಲೆಗುಂಪಾಗಿದ್ದಾರೆ. ಸದ್ಯ ರಾಮನಗರ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್ ನೇತೃತ್ವ ವಹಿಸಿದ್ದಾರೆ. ಇನ್ನೂ ಕೆಲವು ಮುಖಂಡರು ವರಿಷ್ಠರು ಬಂದಾಗ ಮಾತ್ರ ಮುಖ ತೋರಿಸಿ ನಂತರ ನಾಪತ್ತೆಯಾಗುತ್ತಾರೆ ಎಂದು ಪಕ್ಷದ ಕಾರ್ಯಕರ್ತರು ಆರೋಪಿಸುತ್ತಾರೆ.

ಮೇಡಂಗೆ ಮಗನದ್ದೇ ಚಿಂತೆ!
ಮಗ ನಿಖಿಲ್‌ ಗೆಲುವನ್ನು ಗಂಭೀರವಾಗಿ ಪರಿಗಣಿಸಿರುವ ಶಾಸಕಿ ಅನಿತಾ ಕುಮಾರಸ್ವಾಮಿ ರಾಮನಗರ ಜಿಲ್ಲೆಯಲ್ಲೂ ಮಗನ ಪರ ಪ್ರಚಾರ ಮಾಡಿ ಹೋಗಿದ್ದಾರೆ.

ಈಚೆಗೆ ರಾಮನಗರ ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಲ್ಲಿ ಸುರೇಶ್‌ ಪರ ಮತಯಾಚನೆ ಮಾಡಿದ ಅವರು ‘ಪಕ್ಕದ ಜಿಲ್ಲೆಯಲ್ಲಿ ನಿಖಿಲ್ ಅಭ್ಯರ್ಥಿಯಾಗಿದ್ದಾನೆ. ನಿಮ್ಮ ನೆಂಟರಿಷ್ಟರು ಮಂಡ್ಯದಲ್ಲಿ ಇದ್ದರೆ ಅವರೆಲ್ಲ ಜೆಡಿಎಸ್‌ ಬೆಂಬಲಿಸಲು ಹೇಳಿ’ ಎಂದು ಹೋದಲೆಲ್ಲ ಮನವಿ ಮಾಡಿದ್ದರು. ಸದ್ಯ ಅವರು ಮಂಡ್ಯದಲ್ಲಿಯೇ ಉಳಿಯಲಿದ್ದು, ಅಲ್ಲಿನ ಪ್ರಚಾರದಲ್ಲಿ ಸಕ್ರಿಯವಾಗಿರುವ ಕಾರಣ ರಾಮನಗರಕ್ಕೆ ಬಂದು ಸತತ ಪ್ರಚಾರ ಮಾಡುವುದಕ್ಕೆ ಕಷ್ಟವಾಗಿದೆ.

ಬರಹ ಇಷ್ಟವಾಯಿತೆ?

 • 2

  Happy
 • 3

  Amused
 • 0

  Sad
 • 1

  Frustrated
 • 4

  Angry

Comments:

0 comments

Write the first review for this !