ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ | ಮತಯಂತ್ರಗಳೊಂದಿಗೆ ತೆರಳಿದ ಸಿಬ್ಬಂದಿ: ಗ್ರಾಮಸ್ಥರ ಅನುಮಾನ

Published 26 ಏಪ್ರಿಲ್ 2024, 19:45 IST
Last Updated 26 ಏಪ್ರಿಲ್ 2024, 19:45 IST
ಅಕ್ಷರ ಗಾತ್ರ

ರಾಮನಗರ: ಚನ್ನಪಟ್ಟಣ ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ಮತದಾನ ಮುಗಿದ ಬಳಿಕ ಮತಗಟ್ಟೆ ಅಧಿಕಾರಿಗಳು ಕೆಲಕಾಲ ಮತಯಂತ್ರವನ್ನು ಕಾರಿನಲ್ಲಿ ತೆಗದುಕೊಂಡು ಹೋಗಿ ಆತಂಕ ಸೃಷ್ಟಿಸಿದ ಪ್ರಸಂಗ ಶುಕ್ರವಾರ ನಡೆಯಿತು.

ರಾಂಪುರ ಗ್ರಾಮದಲ್ಲಿ ಎರಡು ಮತಗಟ್ಟೆಯಲ್ಲಿ ಮತದಾನ ನಡೆದಿತ್ತು. 46ನೇ ಮತಗಟ್ಟೆಯಲ್ಲಿ 6 ಗಂಟೆಗೆ ಮತದಾನ ಮುಕ್ತಾಯಗೊಂಡಿತ್ತು. ಮತ್ತೊಂದು ಮತಗಟ್ಟೆಯಲ್ಲಿ (ಸಂಖ್ಯೆ 45) ಇನ್ನೂ ಮತದಾನ ನಡೆಯುತ್ತಿತ್ತು. ಗ್ರಾಮದ ಮತಗಟ್ಟೆಯ ಬಳಿ ಬಸ್ಸು ಹೋಗುವುದಕ್ಕೆ ಸಾಧ್ಯವಿಲ್ಲದ ಕಾರಣ ಗ್ರಾಮದ ಮುಂಭಾಗ ಬಸ್ ಗೆ ಮತಯಂತ್ರವನ್ನು ಜೀಪಿನ ಮೂಲಕ ತಂದು ತಲುಪಿಸುವ ವ್ಯವಸ್ಥೆ ಮಾಡಲಾಗಿತ್ತು.

ಮತದಾನ ಮುಗಿಯುತ್ತಿದ್ದಂತೆ ಮತಗಟ್ಟೆ ಸಂಖ್ಯೆ 46ರ ಸಿಬ್ಬಂದಿ ಪೊಲೀಸರ ಬೆಂಗಾವಲು ಇಲ್ಲದೆ ಏಕಾಏಕಿ ಮತಯಂತ್ರವನ್ನು ತೆಗೆದುಕೊಂಡು ಜೀಪಿನಲ್ಲಿ ಹೊರಟಿದ್ದಾರೆ. ಬಸ್‌ಗೆ ಮತಯಂತ್ರ ತಲುಪಿಸದೆ ಬೇರೆ ಕಡೆ ತೆರಳಿದ್ದಾರೆ. ಇದರಿಂದ ಅನುಮಾನಗೊಂಡ ಗ್ರಾಮಸ್ಥರು ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಮತಗಟ್ಟೆ ಸಿಬ್ಬಂದಿ ಕರೆ ಮಾಡಿದರೂ ಸ್ವೀಕರಿಸದ ಕಾರಣ ಗ್ರಾಮಸ್ಥರು ಮತ್ತಷ್ಟು ಅನುಮಾನ ಗೊಂಡಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಗ್ರಾಮದಲ್ಲಿ ನಿಂತಿದ್ದ ಬಸ್ ಬಳಿ ಬಂದ ಸಿಬ್ಬಂದಿ ಮತಯಂತ್ರ ಬಸ್‌ನಲ್ಲಿ ಇಡಲು ಹೋಗಿದ್ದಾರೆ.

‘ನಮಗೆ ಸಿಬ್ಬಂದಿ ವರ್ತನೆ ಮೇಲೆ ಸಂದೇಹವಿದೆ. ಅವರು ಮತಯಂತ್ರ ಎಲ್ಲಿಗೆ ಮತ್ತು ಏಕೆ ತೆಗೆದುಕೊಂಡು ಹೋಗಿದ್ದರು’ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.

‘ತಹಶೀಲ್ದಾರ್ ಸ್ಥಳಕ್ಕೆ ಬರುವವರೆಗೂ ನಾವು ಮತಯಂತ್ರ ತೆಗೆದುಕೊಂಡು ಹೋಗಲು ಬಿಡುವುದಿಲ್ಲ’ ಎಂದು ಪಟ್ಟು ಹಿಡಿದು ಬಸ್‌ಗೆ ಅಡ್ಡ ಹಾಕಿ ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಬಂದ ತಹಶೀಲ್ದಾರ್ ನರಸಿಂಹಮೂರ್ತಿ ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸಿದರು. ‘ಇವಿಎಂಗೆ ಯಾವುದೇ ಹಾನಿಯಾಗಿಲ್ಲ ಮತದಾನದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ’ ಎಂದು ಮನವೊಲಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ.

ಕೊನೆಗೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗ್ರಾಮಸ್ಥರನ್ನು ಚದುರಿಸಿದರು. ಮತಯಂತ್ರಗಳನ್ನು ಸ್ಟ್ರಾಂಗ್ ರೂಂ ಗೆ ಸ್ಥಳಾಂತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT