ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕು ಗೆದ್ದವರ ಮೊಗದಲ್ಲಿ ಮಂದಹಾಸ

ಗುಣಮುಖರಾಗಿ ಸಂತಸದಿಂದ ಮನೆಯತ್ತ ಹೆಜ್ಜೆ ಹಾಕಿದ ಸೋಂಕಿತರು
ಅಕ್ಷರ ಗಾತ್ರ

ಕನಕಪುರ: ‘ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಮನೆ ರೀತಿಯಲ್ಲೇ ನಮ್ಮನ್ನು ಕುಟುಂಬದ ಸದಸ್ಯರಂತೆ ನೋಡಿಕೊಂಡಿದ್ದರಿಂದ ನಾವು ಬೇಗನೆ ಗುಣಮುಖರಾಗಿದ್ದೇವೆ’

ಹೀಗೆಂದು ಖುಷಿ ಹಂಚಿಕೊಂಡಿದ್ದು,ಕೊರೊನಾ ಸೋಂಕಿನಿಂದ ಗುಣಮುಖರಾದ ಎಚ್‌.ಆರ್‌. ವಿಠಲ, ರಕ್ಷಿತಾ, ಗಟ್ಟಿಗುಂದ ರಘು.

ತಾಲ್ಲೂಕಿನ ಕೋಡಿಹಳ್ಳಿಯ ವಸತಿ ನಿಲಯವೊಂದರಲ್ಲಿ ನಿರ್ಮಾಣ ಮಾಡಿರುವ ಕೋವಿಡ್‌ ಆರೈಕೆ ಕೇಂದ್ರದಲ್ಲಿ 10 ದಿನಗಳಿಂದ ಇದ್ದು ಗುಣಮುಖರಾಗಿ ತಮ್ಮ ಮನೆಗಳಿಗೆ ತೆರಳಿದ ವೇಳೆ ಅನುಭವ ಹಂಚಿಕೊಂಡರು.

‘ಸೋಂಕು ಬಂದಾಗ ತುಂಬಾ ಭಯವಾಯಿತು. ಈ ರೋಗ ಬಂದರೆ ಗುಣಮುಖರಾಗುವುದಿಲ್ಲವೇನೋ ಎಂಬ ಭಯ ಕಾಡಿತ್ತು. ಯಾರಿಗೂ ಹೇಳುವುದು ಬೇಡವೆಂದು ಸುಮ್ಮನಿದ್ದಾಗ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆಗೆ ಬಂದು ಪರೀಕ್ಷಿಸಿದರು. ಸೋಂಕಿನ ಬಗ್ಗೆ ಧೈರ್ಯ ತುಂಬಿ ಇಲ್ಲಿನ ಆರೈಕೆ ಕೇಂದ್ರಕ್ಕೆ ಸೇರಿಸಿದರು’ ಎಂದು ನೆನಪಿಗೆ ಜಾರಿದರು.

‘ಆಗಲೂ ನಮಗೆ ಭಯವಾಯಿತು. ಮನೆಯಲ್ಲಿದ್ದರೆ ಕುಟುಂಬದವರು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಕೇಳಿದ್ದನ್ನು ಮಾಡಿಕೊಡುತ್ತಾರೆ. ಆರೈಕೆ ಕೇಂದ್ರದಲ್ಲಿ ಏನೋ, ಎಂಥೋ ಎಂಬ ಭಯದಿಂದಲೇ ಇಲ್ಲಿಗೆ ಬಂದೆವು. ಇಲ್ಲಿಗೆ ಬಂದ ಮೇಲೆ ನಮಗೆ ಎಲ್ಲವೂ ಚೆನ್ನಾಗಿದೆ ಅನಿಸಿತು. ಸಮಯಕ್ಕೆ ಸರಿಯಾಗಿ ತಿಂಡಿ, ಊಟ, ಬಿಸಿನೀರು, ಹಣ್ಣು, ಕಷಾಯ ಎಲ್ಲವನ್ನೂ ಇಲ್ಲಿ ಕೊಡುತ್ತಿದ್ದಾರೆ’ ಎಂದು ಆರೈಕೆ ಕೇಂದ್ರದ ಸೌಲಭ್ಯದ ಬಗ್ಗೆ ವಿವರಿಸಿದರು.

ಮನೆಯಲ್ಲೇ ಇದ್ದರೆ ನಮ್ಮಿಂದ ನಮ್ಮ ಕುಟುಂಬದ ಸದಸ್ಯರಿಗೂ ಸೋಂಕು ಹರಡುತ್ತದೆ. ಆರೋಗ್ಯದ ಏರುಪೇರನ್ನು ಯಾರು ನೋಡುವುದಿಲ್ಲ. ಇಲ್ಲಿಯಾದರೆ ವೈದ್ಯರು, ನರ್ಸ್‌ಗಳು, ಆರೋಗ್ಯ ಇಲಾಖೆ ಸಿಬ್ಬಂದಿ ಇರುತ್ತಾರೆ. ಬೆಳಿಗ್ಗೆ ಮತ್ತು ಸಂಜೆ ಪಲ್ಸ್‌, ‍‍‍ಷುಗರ್‌, ಆಮ್ಲಜನಕ ಮತ್ತು ಟೆಂಪರೇಚರ್‌ ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆ ಅವಶ್ಯಕತೆಯಿದ್ದರೆ ಅವರೇ ಕಳಿಸುತ್ತಾರೆ. ಈ ಎಲ್ಲಾ ಅನುಕೂಲಗಳೂ ಇಲ್ಲಿವೆ ಎಂದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್‌.ಎಂ. ಕೃಷ್ಣಮೂರ್ತಿ ಮಾತನಾಡಿ, ‘ಸೋಂಕು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾದ ಹಿನ್ನೆಲೆಯಲ್ಲಿ ಸರ್ಕಾರದ ಆದೇಶ ಮತ್ತು ಸಂಸದರ ಸೂಚನೆ ಮೇರೆಗೆ ಇಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ಪ್ರಾರಂಭ ಮಾಡಿದ್ದೇವೆ. ಪಂಚಾಯಿತಿಯಿಂದಲೇ ನಿರ್ವಹಣೆ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.

‘ಆರೈಕೆ ಕೇಂದ್ರದಲ್ಲಿ ಸ್ವಚ್ಛತೆ, ಸೋಂಕು ನಿವಾರಕ ದ್ರಾವಣ ಸಿಂಪಡಣೆ, ನೀರಿನ ವ್ಯವಸ್ಥೆಗಾಗಿ ಪಂಚಾಯಿತಿಯ 4 ಸಿಬ್ಬಂದಿ ಇಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಕೋಡಿಹಳ್ಳಿ ಪಿಎಚ್‌ಸಿ ವೈದ್ಯರು ಮತ್ತು ಬೆಂಗಳೂರಿನಿಂದ ಒಬ್ಬ ವೈದ್ಯರು ಪ್ರತಿದಿನ ಕೇಂದ್ರಕ್ಕೆ ಭೇಟಿ ನೀಡಿ ಸೋಂಕಿತರ ಆರೋಗ್ಯ ಪರೀಕ್ಷಿಸಿ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ’ ಎಂದು ಹೇಳಿದರು.

ಅಡುಗೆ ಭಟ್ಟ ಪ್ರಕಾಶ್‌ ಎಂಬುವರು ಕೇಂದ್ರಕ್ಕೆ ಬಿಸಿ ಬಿಸಿಯಾಗಿ ಅಡುಗೆ ಮಾಡಿ ಕೊಡುತ್ತಿದ್ದಾರೆ. ಸೋಂಕಿತರಿಗೆ ಪೌಷ್ಟಿಕ ಆಹಾರ, ಹಣ್ಣು, ಕಷಾಯವನ್ನು ದಾನಿಗಳು ಪ್ರತಿದಿನ ಕೊಡುತ್ತಿದ್ದಾರೆ. ಎಲ್ಲರ ಸಹಕಾರದಿಂದ ಕೋವಿಡ್‌ ಕೇರ್‌ ಸೆಂಟರ್‌ ಉತ್ತಮವಾಗಿ ನಡೆಯುತ್ತಿದೆ. ಈಗಾಗಲೇ 110 ಮಂದಿ ಇಲ್ಲಿ ಆರೈಕೆ ಪಡೆದುಕೊಂಡಿದ್ದು ಎಲ್ಲರೂ ಗುಣಮುಖರಾಗುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT