ಬುಧವಾರ, ಏಪ್ರಿಲ್ 14, 2021
24 °C
ಭ್ರಷ್ಟಾಚಾರ, ಅಧಿಕಾರಿಗಳ ರೈತ ವಿರೋಧಿ ನೀತಿಗೆ ಖಂಡನೆ

ತಾಲ್ಲೂಕು ಆಡಳಿತದ ವಿರುದ್ಧ ರೈತರ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ರೈತರ ಬಗ್ಗೆ ತಾಲ್ಲೂಕು ಆಡಳಿತದ ನಿರ್ಲಕ್ಷ್ಯ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ಇಲ್ಲಿನ ಮಿನಿ ವಿಧಾನಸೌಧದ ಎದುರು ಶುಕ್ರವಾರ ಧರಣಿ ಸತ್ಯಾಗ್ರಹ ನಡೆಯಿತು.

ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಮೆರವಣಿಗೆ ಹೊರಟ ರೈತರು ಮಿನಿ ವಿಧಾನಸೌಧದ ಮುಂಭಾಗ ಧರಣಿ ಕುಳಿತರು. ತಾಲ್ಲೂಕು ಮಟ್ಟದ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ರೈತ ಸಂಘದ ರಾಜ್ಯ ವಿಭಾಗೀಯ ಉಪಾಧ್ಯಕ್ಷ ಎಂ. ರಾಮು ಮಾತನಾಡಿ, ಅನ್ನದಾತರ ಬಗ್ಗೆ ಅಧಿಕಾರಿಗಳಿಗೆ ಗೌರವ ಎಂಬುದು ಇಲ್ಲ. ವಿವಿಧ ಕೆಲಸಗಳಿಗಾಗಿ ತಹಶೀಲ್ದಾರ್‌ ಕಚೇರಿಗೆ ಬರುವ ರೈತರನ್ನು ಸತಾಯಿಸಲಾಗುತ್ತಿದೆ. ತಾಲ್ಲೂಕು ಕಚೇರಿಯಲ್ಲಿನ ಭ್ರಷ್ಟಾಚಾರ, ಲಂಚಗುಳಿತನ, ವಿಳಂಬ ಧೋರಣೆಗಳಿಂದಾಗಿ ಜನರು ಬೇಸತ್ತಿದ್ದಾರೆ. ಅಧಿಕಾರಿಗಳು ಇನ್ನಾದರೂ ಎಚ್ಚೆತ್ತು ಜನಪರವಾಗಿ ಕೆಲಸ ಮಾಡಬೇಕು. ಇಲ್ಲವಾದಲ್ಲಿ ರೈತರಿಂದ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಮಲ್ಲಯ್ಯ ಮಾತನಾಡಿ ‘ದೇವೇಗೌಡರು, ಎಚ್‌.ಡಿ. ಕುಮಾರಸ್ವಾಮಿ, ಅನಿತಾರಂತಹ ಘಟಾನುಘಟಿಗಳು ಈ ಕ್ಷೇತ್ರದ ಶಾಸಕರಾಗಿದ್ದರೂ ರಾಮನಗರದಲ್ಲಿ ಭ್ರಷ್ಟಾಚಾರ ನಿಯಂತ್ರಿಸಲು ಆಗಿಲ್ಲ. ಪ್ರತಿ ದಾಖಲೆಗಳನ್ನು ನೀಡಲು ರೈತರನ್ನು ಅಲೆಸಲಾಗುತ್ತಿದ್ದು, ಲಂಚಕ್ಕಾಗಿ ಒತ್ತಾಯಿಸಲಾಗುತ್ತಿದೆ’ ಎಂದು ದೂರಿದರು.

ರೈತ ಮುಖಂಡ ಸಿದ್ದೇಗೌಡ ಮಾತನಾಡಿ ‘ಸರ್ಕಾರ ಸ್ವಾಮಿನಾಥನ್‌ ಆಯೋಗವನ್ನು ರಚನೆ ಮಾಡಿ 15 ವರ್ಷ ಕಳೆದಿದೆ. ಆದರೆ ಅದರ ಶಿಫಾರಸುಗಳನ್ನು ಜಾರಿಗೊಳಿಸಲು ಇನ್ನೂ ಆಗಿಲ್ಲ. ಕೇಂದ್ರ ಬಿಜೆಪಿ ಸರ್ಕಾರವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಈ ವಿಚಾರ ಸೇರಿಸಿದ್ದರೂ ಬೇಡಿಕೆ ಈಡೇರಿಸಲಿಲ್ಲ. 2022ರ ವೇಳೆಗೆ ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂಬುದೂ ಬರೀ ಸುಳ್ಳಿನ ಭರವಸೆ ಅಷ್ಟೇ’ ಎಂದು ಟೀಕಿಸಿದರು.

ಬೇಡಿಕೆಗಳು: ಖಾತೆ ಬದಲಾವಣೆ ಮಾಡಿ ಸಲ್ಲಿಕೆಯಾಗುವ ಅರ್ಜಿಗಳಿಗೆ ಲಂಚ ಕೇಳದೇ ಕಾಲಮಿತಿಯೊಳಗೆ ವಿಲೇವಾರಿ ಮಾಡಬೇಕು. ಕಂದಾಯ ನಿರೀಕ್ಷಕರು ಮತ್ತು ಗ್ರಾಮಲೆಕ್ಕಿಗರ ಮಟ್ಟದಲ್ಲಿ ನಡೆಯುತ್ತಿರುವ ಕಡು ಭ್ರಷ್ಟಾಚಾರವನ್ನು ನಿಯಂತ್ರಿಸಬೇಕು. ಅರ್ಹ ಫಲಾನುಭವಿಗಳಿಗೆ ಸಾಗುವಳಿ ಚೀಟಿ ವಿತರಿಸಬೇಕು. ಕಾಡು ಪ್ರಾಣಿಗಳಿಂದ ಆಗುತ್ತಿರುವ ಹಾನಿಯ ಪರಿಹಾರ ವಿತರಿಸಬೇಕು. ಹೆಚ್ಚುವರಿ ಪಹಣಿ ಕೇಂದ್ರಗಳನ್ನು ತೆರೆಯಬೇಕು. ಬಾಪೂಜಿ ಸೇವಾ ಕೇಂದ್ರಗಳಿಗೆ ಮೂಲ ಸೌಕರ್ಯ ಒದಗಿಸಬೇಕು. ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಕೇಂದ್ರ ಸ್ಥಾನದಲ್ಲಿಯೇ ಇರಬೇಕು.

ರೈತರಿಗೆ ನೀಡಲಾಗುವ ಪಹಣಿಯಲ್ಲಿ ಕಡ್ಡಾಯವಾಗಿ ಬೆಳೆಯನ್ನು ನಮೂದಿಸಬೇಕು. ರೇಷ್ಮೆ ಬೆಳೆಗಾರರ ಹಿತರಕ್ಷಣೆಗೆ ಬಸವರಾಜು ಸಮಿತಿ ವರದಿ ಜಾರಿಗೊಳಿಸಬೇಕು. ಅಧಿಕಾರಿಗಳ ಹಂತದಲ್ಲಿನ ನ್ಯಾಯಾಲಯಗಳ ಭೂವ್ಯಾಜ್ಯಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು. ಬಗರ್‌ಹುಕುಂ ಸಾಗುವಳಿದಾರರಿಗೆ ಆಗುತ್ತಿರುವ ಅನ್ಯಾಯ ತಪ್ಪಿಸಬೇಕು. ತಾಲ್ಲೂಕು ಕಚೇರಿಯಲ್ಲಿ ಜನರಿಗಾಗಿ ಶೌಚಾಲಯ ನಿರ್ಮಿಸಬೇಕು. ಸರ್ವೆ ಇಲಾಖೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಬೇಕು ಎಂಬುದು ಸೇರಿದಂತೆ ಒಟ್ಟು 72 ಬೇಡಿಕೆಗಳ ಮನವಿ ಪತ್ರವನ್ನು ತಹಶೀಲ್ದಾರ್‌ಗೆ ನೀಡಲಾಯಿತು.

ರೈತ ಸಂಘದ ಜಿಲ್ಲಾ ಘಟಕದ ಗೌರವ ಅಧ್ಯಕ್ಷ ತಿಮ್ಮೇಗೌಡ, ಕಾರ್ಯಾಧ್ಯಕ್ಷ ಮುನಿರಾಜು, ಕಾರ್ಯದರ್ಶಿ ಎಂ. ಪುಟ್ಟಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ರೇಖಾ, ಮಾಗಡಿ ತಾಲ್ಲೂಕು ಅಧ್ಯಕ್ಷ ಲೋಕೇಶ್‌, ಚನ್ನಪಟ್ಟಣ ತಾಲ್ಲೂಕು ಅಧ್ಯಕ್ಷ ರಾಮೇಗೌಡ, ಗೌರವ ಅಧ್ಯಕ್ಷ ಎಚ್.ಸಿ. ಕೃಷ್ಣಯ್ಯ, ಕಾರ್ಯದರ್ಶಿ ಎಚ್‌. ನಾಗೇಶ್‌, ಕನಕಪುರ ತಾಲ್ಲೂಕು ಅಧ್ಯಕ್ಷ ಶಶಿಕುಮಾರ್, ಮುಖಂಡರಾದ ಸೀಬೆಕಟ್ಟೆ ಕೃಷ್ಣಪ್ಪ, ಎಂ.ಡಿ. ಶಿವಕುಮಾರ್‌, ಡಿ.ಕೆ. ನಾಗರಾಜು, ರಾಮಯ್ಯ, ಕೆ. ನಾಗರಾಜು, ನಂಜಪ್ಪ, ವಿ.ಎ. ಚಂದ್ರಶೇಖರಯ್ಯ, ಸುಶೀಲಮ್ಮ ಇದ್ದರು.

ಪ್ರಮುಖ ಬೇಡಿಕೆಗಳು
* ಕಚೇರಿಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು
* ಪಹಣಿ ವಿತರಣೆ, ಸರ್ವೆ ಕಾರ್ಯದಲ್ಲಿನ ವಿಳಂಬ ತಪ್ಪಬೇಕು
* ಆರ್‌ಐ, ವಿಎಗಳು ಕೇಂದ್ರ ಸ್ಥಾನದಲ್ಲಿಯೇ ಇರಬೇಕು
* ಅರ್ಹರಿಗೆ ಸಾಗುವಳಿ ಚೀಟಿ ವಿತರಣೆ ಮಾಡಬೇಕು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು