ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರುಚಿ ಸಂತೆ: ನಾಲಿಗೆ ಚಪ್ಪರಿಸಿದ ಗ್ರಾಹಕರು

ಕನ್ನಿಕಾ ಮಹಲ್‌ನಲ್ಲಿ ತಿನಿಸುಗಳ ಮೇಳ : ನೂರಾರು ಮಂದಿ ಭಾಗಿ
Last Updated 6 ಜುಲೈ 2019, 12:14 IST
ಅಕ್ಷರ ಗಾತ್ರ

ರಾಮನಗರ: ನಾಲಿಗೆಗೆ ರುಚಿ ಎನಿಸುವ ಬಗೆಬಗೆ ಖಾದ್ಯಗಳು. ಮಕ್ಕಳು, ಹಿರಿಯರಿಗೂ ಮುದ ನೀಡುವಂತಹ ತಿನಿಸುಗಳು...

ಇವೆಲ್ಲ ಶನಿವಾರ ಒಂದೇ ವೇದಿಕೆಯಲ್ಲಿ ಮಾರಾಟವಾದವು. ನೂರಾರು ಸಂಖ್ಯೆಯಲ್ಲಿ ಗ್ರಾಹಕರನ್ನು ತನ್ನತ್ತ ಸೆಳೆದವು. ವಾಸವಿ ವನಿತಾ ಸಂಘವು ರೋಟರಿ ಸಿಲ್ಕ್‌ಸಿಟಿ ಕ್ಲಬ್‌ ಸಹಯೋಗದಲ್ಲಿ ಕನ್ನಿಕಾ ಮಹಲ್‌ನಲ್ಲಿ ಶನಿವಾರ ಆಯೋಜಿಸಿದ್ದ ರುಚಿ ಸಂತೆಯಲ್ಲಿ ಆರ್ಯ ವೈಶ್ಯ ಸಮುದಾಯದ ಜನರು ಮಳಿಗೆಗಳನ್ನು ತೆರೆದು ಗ್ರಾಹಕರಿಗೆ ವಿವಿಧ ಖಾದ್ಯಗಳ ರುಚಿಯನ್ನು ಉಣಬಡಿಸಿದರು.

ಏನೆಲ್ಲ ಇತ್ತು: ಮಧಾಹ್ನ 1ಕ್ಕೆ ಆರಂಭವಾದ ರುಚಿ ಸಂತೆಯಲ್ಲಿ ಬಗೆಬಗೆಯ ಸ್ಟಾರ್ಟರ್‌ಗಳು, ಕೇಕ್‌, ಜ್ಯೂಸ್‌, ಐಸ್‌ಕ್ರೀಮ್‌ ಸೇರಿದಂತೆ ಎಲ್ಲ ಬಗೆಯ ತಿನಿಸುಗಳನ್ನು ಮಾರಾಟಕ್ಕೆ ಇಡಲಾಗಿತ್ತು. ಕೆಲವನ್ನು ಮೊದಲೇ ಮಾಡಿ ತಂದಿದ್ದರೆ, ಇನ್ನೂ ಕೆಲವನ್ನು ಸ್ಥಳದಲ್ಲಿಯೇ ತಯಾರಿಸಿ ಕೊಡಲಾಯಿತು. ಪಾವ್‌ ಭಾಜಿ. ಗಿರಮಿಟ್‌, ಚುರಮುರಿ, ಸ್ಯಾಂಡ್‌ ವಿಚ್‌, ಸಮೋಸಾ, ಪಾನಿಪುರಿ, ಮಸಾಲೆಪುರಿಯಂತಹ ತಿನಿಸುಗಳ ಜೊತೆಗೆ ಪಡ್ಡು, ವೆಜ್‌ ಬಿರಿಯಾನಿಯಂತಹ ಉಪಹಾರಗಳೂ ಇದ್ದವು. ಸಿಹಿ ಪ್ರಿಯರಿಗಾಗಿ ಬಾದಾಮಿ ಹಲ್ವ, ಬೇಸನ್‌ ಲಡ್ಡು, ಪೇಸ್ಟ್ರಿ ಕೇಕ್, ಹೋಳಿಗೆ ಮೊದಲಾದ ಪದಾರ್ಥಗಳು ಇದ್ದವು.

ಉತ್ತರ ಕರ್ನಾಟಕದ ಜೋಳದ ರೊಟ್ಟಿ, ಸಜ್ಜೆ ರೊಟ್ಟಿಯನ್ನೂ ಸಹ ಇಲ್ಲಿ ಮಾಡಲಾಗಿತ್ತು. ನೆಂಚಿಕೊಳ್ಳಲು ಬದನೆ ಪಲ್ಯ, ಚಟ್ನಿ ಪುಡಿಯ ವ್ಯವಸ್ಥೆಯೂ ಇತ್ತು. ಜೊತೆಗೆ ಚಕ್ಕುಲಿ, ನಿಪ್ಪಟ್ಟು, ಕೋಡುಬಳೆ, ಹಪ್ಪಳ ಸಹಿತ ಖರಿದ ತಿನಿಸುಗಳ ಮಾರಾಟವೂ ನಡೆಯಿತು. ರಾತ್ರಿವರೆಗೆ ನಡೆದ ಮೇಳದಲ್ಲಿ ನೂರಾರು ಮಂದಿ ಪಾಲ್ಗೊಂಡರು. ಜ್ಯೂಸ್ ಪ್ರಿಯರಿಗಾಗಿ ನಿಂಬೆ, ನೆಲ್ಲಿ, ಮೊಜಿಟೊ, ಹರ್ಬಲ್‌ ರಸ ಇಡಲಾಗಿತ್ತು.

‘ನಗರದ ಮಂದಿ ಬಾಯಿ ರುಚಿಗಾಗಿ ಹೊರಗಿನ ತಿಂಡಿಗಳ ಮೊರೆ ಹೋಗುತ್ತಾರೆ. ಆದರೆ ಅಲ್ಲಿ ಆಹಾರದ ಗುಣಮಟ್ಟ ಇರುವುದಿಲ್ಲ. ಸ್ವಚ್ಚತೆಯೂ ಇರುವುದಿಲ್ಲ. ಹೀಗಾಗಿ ಶುದ್ಧ ಮತ್ತು ಸ್ವಚ್ಚ ಪರಿಸರದಲ್ಲಿ ತಯಾರಿಸಲಾದ ಆಹಾರಗಳ ಅರಿವು ಮೂಡಿಸಲು ರಾಮನಗರದಲ್ಲಿ ಮೊದಲ ಬಾರಿಗೆ ಈ ಮೇಳವನ್ನು ಆಯೋಜಿಸಲಾಗಿದೆ. ಒಟ್ಟು 15 ಮಳಿಗೆಗಳಿಗೆ ಅವಕಾಶ ನೀಡಲಾಗಿದ್ದು, ರಾಮನಗರದವರೇ ಹೆಚ್ಚಿನ ಮಂದಿ ಪಾಲ್ಗೊಂಡಿದ್ದರು ’ ಎಂದು ವಾಸವಿ ವನಿತಾ ಸಂಘದ ಪದಾಧಿಕಾರಿಗಳು ತಿಳಿಸಿದರು.

**
ಒಂದು ವಾರದಿಂದ ಆಹಾರ ಮೇಳಕ್ಕೆ ಸಿದ್ಧತೆ ಮಾಡಿಕೊಂಡಿದ್ದೇವೆ. ಹತ್ತಕ್ಕೂ ಹೆಚ್ಚು ಬಗೆಯ ತಿನಿಸುಗಳನ್ನು ಮಾಡಿದ್ದು, ಗ್ರಾಹಕರಿಗೂ ಮೆಚ್ಚುಗೆಯಾಗಿದೆ
- ಕವಿತಾ, ವ್ಯಾಪಾರಿ

**
ಹೊರಗೆ ಹೋಲಿಸಿದರೆ ಇಲ್ಲಿ ಸಿಗುವ ಆಹಾರ ರುಚಿಯಾಗಿಯೂ, ಸ್ವಚ್ಛವಾಗಿಯೂ ಇದೆ. ಆಹಾರ ಜಾಗೃತಿ ಮತ್ತು ಮನೋರಂಜನೆಗೆ ಇಂತಹ ಮೇಳಗಳು ಸಹಕಾರಿ
ಟಿ.ಜೆ. ಅನುರಾಧಾ,ಕಾರ್ಯದರ್ಶಿ, ರೋಟರಿ ಸಿಲ್ಕ್‌ ಸಿಟಿ ಕ್ಲಬ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT