ಸೋಮವಾರ, ಜುಲೈ 26, 2021
26 °C
ಅರಣ್ಯ ಇಲಾಖೆಗೆ ತಾ.ಪಂ ಅಧ್ಯಕ್ಷ ನಾರಾಯಣಪ್ಪ ಮನವಿ l ಪಿಡಿಒ, ಸದಸ್ಯರ ಮಧ್ಯೆ ಮಾತಿನ ಚಕಮಕಿ

ಚಿರತೆ ಉಪಟಳ; ಭೀತಿ ಹೋಗಲಾಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ಭಂಟರಕುಪ್ಪೆ ಅರಣ್ಯ ಪ್ರದೇಶದ ಸುತ್ತಮುತ್ತ ಚಿರತೆ ಉಪಟಳವನ್ನು ಶಾಶ್ವತವಾಗಿ ನಿಯಂತ್ರಿಸಲು ಅರಣ್ಯ ಇಲಾಖೆ ಮುಂದಾಗಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನಾರಾಯಣಪ್ಪ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. 

ಅರಣ್ಯದಲ್ಲಿ ಅಗತ್ಯ ಆಹಾರ ಕೊರತೆ ಇರುವುದರಿಂದ ನಾಡಿನತ್ತ ಚಿರತೆಗಳು ಬರುತ್ತಿವೆ. ಲಾಕ್‌ಡೌನ್‌ ವೇಳೆ ಮಾನವ ಸಂಚಾರ ಕಡಿಮೆ ಇದ್ದರಿಂದ ಸ್ವಚ್ಚಂದವಾಗಿ ಓಡಾಡುತ್ತಿದ್ದವು. ಇದೀಗ ಲಾಕ್‌ಡೌನ್‌ ಸಡಿಲಗೊಂಡಿರುವುದರಿಂದ ಜನರಿಗೆ ಕಾಣಿಸಿಕೊಳ್ಳುತ್ತಿವೆ. ಅರಣ್ಯ ಇಲಾಖೆ ಜನರ ಆತಂಕ ದೂರ ಮಾಡಬೇಕು ಎಂದು ಹೇಳಿದರು. 

ಕೋವಿಡ್-19 ಹರಡದಂತೆ ತಡೆಗಟ್ಟಲು ಕ್ವಾರಂಟೈನ್ ನಲ್ಲಿ ಇರುವವರಿಗೆ ಸೂಕ್ತ ಊಟೋಪಚಾರ ಮಾಡಿಕೊಡಬೇಕು. ಕೋಳಿ ಸಾಕಾಣಿಕೆ ಕೇಂದ್ರ, ಇಟ್ಟಿಗೆ ಕಾರ್ಖಾನೆ ಸೇರಿದಂತೆ ಹಲವೆಡೆ ಕೆಲಸ ಮಾಡುತ್ತಿರುವ ವಲಸೆ ಕಾರ್ಮಿಕರಿಗೆ ಮಾಲೀಕರೆ ಸವಲತ್ತು ಕೊಡಬೇಕು. ಮಳೆಗಾಲ ಆರಂಭವಾಗುವ ಮುನ್ನ ಕೆರೆಕಟ್ಟೆ, ಕಲ್ಯಾಣಿಗಳನ್ನು ದು‌ರಸ್ತಿ ಪಡಿಸಲು ಗ್ರಾಮ ಪಂಚಾಯಿತಿಗಳು ಮುಂದಾಗಬೇಕು. ಜಲಮೂಲ ರಕ್ಷಣೆಗೆ ನರೇಗಾ ಯೋಜನೆಯಡಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು. 

ಜೂನ್ 5ರಂದು ವಿಶ್ವಪರಿಸರ ದಿನದ ಅಂಗವಾಗಿ ಎಲ್ಲಾ ಪಂಚಾಯಿತಿಗಳಲ್ಲೂ ರಸ್ತೆ ಬದಿ ಸಸಿ ನೆಡುವ ಅಭಿಯಾನ ಹಮ್ಮಿಕೊಳ್ಳಬೇಕು.  ರೈತರ ಸಹಕಾರದೊಂದಿಗೆ ಕೆರೆಯಂಗಳದಲ್ಲಿ ಸಸಿ ನೆಡಬೇಕು. ನರೇಗಾ ಕಾಮಗಾರಿಯಲ್ಲಿ ಅಕ್ರಮ ನಡೆದರೆ ಪಿಡಿಒ ಜವಾಬ್ದಾರರಾಗಿರುತ್ತಾರೆ. ಕೆರೆಗಳನ್ನು ಅಕ್ರಮವಾಗಿ ಒತ್ತುವರಿ ತೆರವುಗೊಳಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು. 

ತಾ.ಪಂ. ಇಒ ಟಿ.ಪ್ರದೀಪ್ ಮಾತನಾಡಿ, ತಾಲ್ಲೂಕಿನಲ್ಲಿ ನರೇಗಾ ಯೋಜನೆಯಡಿ ಶೇ 88 ರಷ್ಟು ಕಾಮಗಾರಿಗಳು ನಡೆದಿವೆ. ಅಂತರ್ಜಲ ವೃದ್ಧಿಗೆ ಒತ್ತು ನೀಡಲಾಗಿದೆ. ನರೇಗಾ ಕಾಮಗಾರಿಗೆ ಸಾಮಗ್ರಿ ಖರೀದಿಗೆ ವ್ಯಯಿಸಿರುವ ₹ 70 ಕೋಟಿ ಬಾಕಿ ಹಣ ಬರಬೇಕಿದೆ ಎಂದು ಮಾಹಿತಿ ನೀಡಿದರು. 

ಮಾತಿನ ಚಕಮಕಿ: ನರೇಗಾ ಯೋಜನೆಯ ಕಾಮಗಾರಿಯ ನಾಮಫಲಕ ವಿಚಾರವಾಗಿ ಸದಸ್ಯರು ಮತ್ತು ಪಿಡಿಒ ಮಧ್ಯೆ ಮಾತಿನ ಚಕಮಕಿ ನಡೆಯಿತು. ಸೀಗೇಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷರು 15 ಕಾಮಗಾರಿಗಳಿಗೆ ನಾಮಫಲಕ ಹಾಕಿಸಿದ್ದಾರೆ. ಇದರಲ್ಲಿ ಪಿಡಿಒ ಅವರ ಪಾತ್ರವಿದೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ವೆಂಕಟೇಶ್ ಆರೋಪಿಸಿದರು.

ಸಭೆಯಲ್ಲಿದ್ದ ಪಿಡಿಒಗಳೆಲ್ಲರೂ ವೆಂಕಟೇಶ್ ಅವರ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದರು. ಚುನಾಯಿತ ಪ್ರತಿನಿಧಿಗಳೇ ನರೇಗಾ ಯೋಜನೆಯಡಿ ಜೆಸಿಬಿ ಬಳಸಿ ಕಾಮಗಾರಿ ಮಾಡಿಸಿದ್ದಾರೆ. ವಿನಾಕಾರಣ ಪಿಡಿಒ ಅವರು ತಪ್ಪಿತಸ್ಥರೆಂದು ದೂರುವುದು ಸರಿಯಲ್ಲ ಎಂದರು. ಸಭೆಯಲ್ಲಿ ತಾ.ಪಂ.ಸದಸ್ಯರು ಮತ್ತು ಪಿಡಿಒ ಗಳ ನಡುವೆ ಗದ್ದಲ ನಡೆಯಿತು. ಅಧ್ಯಕ್ಷ ನಾರಾಯಣಪ್ಪ ಸಮಾಧಾನ ಪಡಿಸಿದರು. ಸೀಗೇಕುಪ್ಪೆಗೆ ಭೇಟಿ ನೀಡಿ ಕಾಮಗಾರಿ ನಾಮಪಲಕಗಳನ್ನು ಪರಿಶೀಲನೆ ಮಾಡುವುದಾಗಿ ತಿಳಿಸಿದರು.

ಆರೋಗ್ಯ, ಅರಣ್ಯ, ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿಗಳು, ತಾ.ಪಂ.ಸದಸ್ಯರು, 23 ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.