ಶುಕ್ರವಾರ, ಆಗಸ್ಟ್ 19, 2022
25 °C
ಸುಗ್ಗನಹಳ್ಳಿ: ಕಸ ವಿಲೇವಾರಿ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಶಾಸಕ ಮಂಜುನಾಥ್‌

'ಗ್ರಾ.ಪಂ. ಮಟ್ಟದಲ್ಲಿ ಕಸ ನಿರ್ವಹಣೆಗೆ ಆದ್ಯತೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುದೂರು (ಮಾಗಡಿ): ಕಣ್ಣೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸುಗ್ಗನಹಳ್ಳಿಯಲ್ಲಿ ಬಹುಕೋಟಿ ವೆಚ್ಚದಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಘಟಕ ಸ್ಥಾಪನೆ ಆಗಲಿದೆ. ಇದು ಜಿಲ್ಲೆಯಲ್ಲೇ ಮೊದಲ ಪ್ರಯತ್ನವಾಗಿದೆ ಎಂದು ಶಾಸಕ ಎ.ಮಂಜುನಾಥ್‌ ತಿಳಿಸಿದರು.

ಕುದೂರು ಹೋಬಳಿಯಲ್ಲಿ 3.09 ಕೋಟಿ ರೂಪಾಯಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು. ರಾಮನಗರ ಜಿಲ್ಲೆಯಲ್ಲೇ ಮೊಟ್ಟಮೊದಲ ಬಾರಿಗೆ ಬಹುಕೋಟಿ ವೆಚ್ಚದ ಕಸವಿಲೇವಾರಿ ಘಟಕ ನಿರ್ಮಾಣ ಆಗುತ್ತಿದೆ. ಇದಕ್ಕಾಗಿ ಸುಗ್ಗನಹಳ್ಳಿಯಲ್ಲಿ ಎರಡು ಎಕರೆ ಜಾಗ ನೀಡಲಾಗಿದೆ. ಕಣ್ಣೂರು, ಹುಲಿಕಲ್, ಚಿಕ್ಕಳ್ಳಿ ಮತ್ತು ಶ್ರೀಗಿರಿಪುರ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸವನ್ನು ವಾಹನಗಳಲ್ಲಿ ಸಂಗ್ರಹಿಸಲಾಗುವುದು. ಇದನ್ನು ಸುಗ್ಗನಹಳ್ಳಿ ಘಟಕದಲ್ಲಿ ಸಂಸ್ಕರಿಸಿ ಮರುವಿಂಗಡಣೆ ಮಾಡಲಾಗುವುದು ಎಂದರು.

ಕಸದಿಂದ ರಸ ಎಂಬಂತೆ ಕಸವಿಲೇವಾರಿ ಸಂಸ್ಕರಣಾ ಘಟಕದಿಂದ ಉತ್ತಮ ಗುಣಮಟ್ಟದ ಗೊಬ್ಬರ ಉತ್ಪಾದಿಸಬಹುದು, ಈ ಘಟಕದಿಂದಾಗಿ ಈ ಭಾಗದ ರೈತರಿಗೆ ಕಡಿಮೆ ದರದಲ್ಲಿ ರಸಗೊಬ್ಬರ ವಿತರಣೆಗೆ ಅನುಕೂಲ ಮಾಡಿಕೊಡುತ್ತೇವೆ. ಸಂಸ್ಕರಣಾ ಘಟಕವನ್ನ ಮುಂದಿನ ದಿನಗಳಲ್ಲಿ ಜಿಲ್ಲೆಯ ಪ್ರಮುಖ ಗ್ರಾಮ ಪಂಚಾಯತಿಗಳಲ್ಲಿ ವಿಸ್ತರಣೆ ಮಾಡಲಾಗುವುದು ಎಂದರು.

ವಿವಿಧ ಕಾಮಗಾರಿಗೆ ಚಾಲನೆ: ನಾರಸಂದ್ರ ಗ್ರಾಮ ಪಂಚಾಯತಿ ಏಸಪ್ಪನಪಾಳ್ಯಕ್ಕೆ ರಸ್ತೆ ಡಾಂಬರೀಕರಣ , ಕುದೂರು ಕೆಪಿಎಸ್ ಪ್ರಾಥಮಿಕ ಶಾಲೆಯಲ್ಲಿ ನೂತನ ಕೊಠಡಿ ನಿರ್ಮಾಣಕ್ಕೆ ಭೂಮಿಪೂಜೆ , ಕಾಗಿಮಡು ಕಾಲೊನಿಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿ, ಹೊಸಹಳ್ಳಿ ಸರ್ಕಾರಿ ಶಾಲೆಗೆ ಕೊಠಡಿ ನಿರ್ಮಾಣಕ್ಕೆ ಭೂಮಿಪೂಜೆ , ಸುಗ್ಗನಹಳ್ಳಿ ಮತ್ತು ಹುಲಿಕಲ್ ಗ್ರಾಮದಲ್ಲಿ ಸಂಜೀವಿನಿ ಶೆಡ್ ನಿರ್ಮಾಣ ಸೇರಿದಂತೆ ಅಭಿವೃದ್ದಿ ಕಾಮಗಾರಿಗಳಿಗೆ ಮಂಜುನಾಥ್  ಚಾಲನೆ ನೀಡಿದರು.

ತಾಲ್ಲೂಕು ಪಂಚಾಯತಿ ಇಒ ಟಿ.ಪ್ರದೀಪ್, ತಾ.ಪಂ. ಅಧ್ಯಕ್ಷ ನಾರಾಯಣಪ್ಪ , ಮುಖಂಡರಾದ ಗಿರಿಯಪ್ಪ, ಎಂ.ಜಿ.ನರಸಿಂಹಮೂರ್ತಿ , ಕುದೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕೆ.ಎಂ.ರಾಘವೇಂದ್ರ ಮತ್ತಿತರಿದ್ದರು .

ಕೆರೆಗೆ ಬಾಗಿನ

ಶ್ರೀಗಿರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ವೀರಸಾಗರ ಕೆರೆಗೆ ಶಾಸಕ ಮಂಜುನಾಥ್‌ ಬಾಗಿನ ಅರ್ಪಿಸಿದರು.ಈ ಕೆರೆಯು ಸುಮಾರು 16 ಎಕರೆ ವಿಸ್ತೀರ್ಣದಲ್ಲಿದೆ. ಕಳೆದ ವರ್ಷ ಮಳೆ ಹೆಚ್ಚಾಗಿದ್ದರಿಂದ ಕೆರೆ ಏರಿ ಒಡೆದು ,ನೀರು ಹೊಲಗದ್ದೆಗಳಿಗೆ ನುಗ್ಗಿತ್ತು. ನಂತರದಲ್ಲಿ ನರೇಗಾ ಯೋಜನೆ ಅಡಿ ಕೆರೆ ದುರಸ್ತಿ ಕಾಮಗಾರಿ ನಡೆದಿತ್ತು. ಸದ್ಯ ಕೆರೆ ಭರ್ತಿಯಾಗಿದ್ದು, ಮೊದಲಿನಂತೆ ಜೀವಕಳೆ ತುಂಬಿರುವುದನ್ನು ನೋಡುವುದಕ್ಕೆ ಸಂತಸವಾಗುತ್ತಿದೆ ಎಂದು ಮಂಜುನಾಥ್‌ ಹರ್ಷ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.