ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ | ಸ್ನೇಹಿತರ ಜಗಳಕ್ಕೆ ‘ರಾಜಕೀಯ’ ಸ್ವರೂಪ

ಎಫ್‌ಐಆರ್‌ನಲ್ಲಿ ಇರೋದೆ ಬೇರೆ; ಹೊರಗಡೆ ಹರಿದಾಡುತ್ತಿರುವುದೇ ಬೇರೆ
Published 11 ಏಪ್ರಿಲ್ 2024, 15:34 IST
Last Updated 11 ಏಪ್ರಿಲ್ 2024, 15:34 IST
ಅಕ್ಷರ ಗಾತ್ರ

ರಾಮನಗರ: ತಾಲ್ಲೂಕಿನ ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯ ಕೆಂಪಶೆಟ್ಟಿದೊಡ್ಡಿಯಲ್ಲಿ ಸ್ನೇಹಿತರಿಬ್ಬರ ನಡುವೆ ನಡೆದ ಜಗಳದಲ್ಲಿ ಚೌಕಹಳ್ಳಿಯ ನವೀನ್ ಎಂಬಾತನಿಗೆ ಗಾಯವಾಗಿರುವ ಘಟನೆ ರಾಜಕೀಯ ಸ್ವರೂಪ ಪಡೆದಿದೆ. ಮೂರು ದಿನಗಳ ಹಿಂದಿನ ಘಟನೆಯನ್ನು ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಹಂಚಿಕೊಂಡಿರುವುದು ಇದಕ್ಕೆ ಕಾರಣ.

‘ರೇಷ್ಮೆ ಬೆಳೆಗಾರ ಹಾಗೂ ಬಿಜೆಪಿ ಕಾರ್ಯಕರ್ತ‌ ನವೀನ್ ಅವರ ಮೇಲೆ ಕಾಂಗ್ರೆಸ್ಸಿನ ಗೂಂಡಾ ವ್ಯಕ್ತಿಯೊಬ್ಬ ಮಾರಣಾಂತಿಕ ಹಲ್ಲೆ ಮಾಡಿದ್ದರೂ ಆತನನ್ನು ಬಂಧಿಸದೇ ಇರುವುದು ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿದೆ. ಜಿಲ್ಲೆಯನ್ನು ತಮ್ಮ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡಿರುವ ಡಿ.ಕೆ. ಬ್ರದರ್ಸ್ ಅಧಿಕಾರ ದರ್ಪ ನೆತ್ತಿಗೇರಿದಂತಿದೆ’ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಗುರುವಾರ ತಮ್ಮ ‘ಎಕ್ಸ್‌’ ಖಾತೆಯಲ್ಲಿ ಗಾಯಾಳು ನವೀನ್ ಚಿತ್ರ ಸಮೇತ ಪೋಸ್ಟ್ ಮಾಡಿದ್ದಾರೆ. ಬಿಜೆಪಿ ಕರ್ನಾಟಕ ಖಾತೆಯಲ್ಲೂ ಘಟನೆ ಕುರಿತು ಪೋಸ್ಟ್ ಮಾಡಲಾಗಿದೆ.

ಏಪ್ರಿಲ್ 9ರಂದು ಗ್ರಾಮದ ಕಬ್ಬಡಿ ಬಾಬು ಎಂಬುವರ ತೋಟದಲ್ಲಿ ಬೆಳಿಗ್ಗೆ 10.30ರ ಸುಮಾರಿಗೆ ನವೀನ್ ಮತ್ತು ಸ್ನೇಹಿತ ಅದೇ ಗ್ರಾಮದ ಶೇಖರ್ ಜಗಳವಾಡುತ್ತಿದ್ದರು. ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಸಹೋದರ ಶಿವಕುಮಾರ್ ಮತ್ತು ತಂದೆ ಶೇಷಾದ್ರಿ ಜಗಳ ಬಿಡಿಸಲು ಯತ್ನಿಸಿದ್ದರು. ಜಗಳ ವಿಕೋಪಕ್ಕೆ ತಿರುಗಿದಾಗ ಶೇಖರ್ ದೊಣ್ಣೆಯಿಂದ ನವೀನ್ ತಲೆಗೆ ಹೊಡೆದಿದ್ದಾನೆ. ಬಿಡಿಸಲು ಬಂದ ಶೇಷಾದ್ರಿ ಅವರ ಕೈಗೂ ಹೊಡೆದ ಎಂದು ಶಿವಕುಮಾರ್ ದೂರಿನಲ್ಲಿ ಆರೋಪಿಸಿದ್ದರು.

ವೈಯಕ್ತಿಕ ವಿಚಾರಕ್ಕೆ ಸ್ನೇಹಿತರ ನಡುವೆ ಜಗಳ ನಡೆದಿದೆಯೇ ಹೊರತು ಇದಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ಘಟನೆಗೆ ಸಂಬಂಧಿಸಿದಂತೆ ಹಲ್ಲೆ ನಡೆಸಿದ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ.
ಟಿ.ವಿ. ಸುರೇಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ

ಶೇಖರ್ ಜೊತೆಗಿದ್ದ ವಯಸ್ಸಾದ ವ್ಯಕ್ತಿಯೊಬ್ಬರು ಕುಡುಗೋಲಿನಿಂದ ನವೀನ್‌ಗೆ ಹೊಡೆಯಲು ಯತ್ನಿಸಿದರು. ಶೇಖರ್ ಸ್ಥಳಕ್ಕೆ ಮತ್ತಷ್ಟು ಹುಡುಗರನ್ನು ಕರೆಯಿಸಲು ಮುಂದಾದಾಗ, ಬೈಕ್‌ನಲ್ಲಿ ನವೀನ್‌ ಮತ್ತು ತಂದೆಯನ್ನು ಕೂರಿಸಿಕೊಂಡು ಸ್ಥಳದಿಂದ ತೆರಳಿದೆ. ಬಿಡದಿಯ ಸುಭಾಷ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ದಾಖಲಿಸಿದೆ. ಹಲ್ಲೆ ನಡೆಸಿದ ಶೇಖರ್ ಮತ್ತು ವಯಸ್ಕ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದರು. ಆ ಮೇರೆಗೆ ಬಿಡದಿ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು.

‘ಹಲ್ಲೆಗೊಳಗಾದ ನವೀನ್ ಮತ್ತು ಶೇಖರ್ ಇಬ್ಬರು ಸ್ನೇಹಿತರು. ಇಬ್ಬರು ಒಟ್ಟಿಗೆ ಮದ್ಯ ಸೇವಿಸಿ ಮಾತನಾಡುವಾಗ ಮಾತಿನ ಚಕಮಕಿ ನಡೆದು ಜಗಳವಾಗಿದೆ. ಆಗ ಶೇಖರ್ ಹಲ್ಲೆ ನಡೆಸಿದ್ದಾನೆ. ತೀರಾ ವೈಯಕ್ತಿಕ ಕಾರಣಕ್ಕೆ ಜಗಳ ನಡೆದಿದ್ದು, ಇದಕ್ಕೆ ಯಾವುದೇ ರಾಜಕೀಯ ನಂಟಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ನೇಹಿತರ ನಡುವಿನ ಜಗಳವನ್ನು ಬಳಸಿಕೊಂಡು ಬಿಜೆಪಿಯವರು ಕೀಳುಮಟ್ಟದ ರಾಜಕೀಯ ಮಾಡಲು ಮುಂದಾಗಿದ್ದಾರೆ. ಇಂತಹ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದಕ್ಕೂ ಮುಂಚೆ ಬಿಜೆಪಿಯವರು ಸತ್ಯಾಸತ್ಯತೆ ಅರಿತುಕೊಳ್ಳಬೇಕಿತ್ತು.
ಗಾಣಕಲ್ ನಟರಾಜ್, ಅಧ್ಯಕ್ಷ, ಬಿಡದಿ ಬ್ಲಾಕ್ ಕಾಂಗ್ರೆಸ್

ವಿಜಯೇಂದ್ರ ಪೋಸ್ಟ್‌ನಲ್ಲಿ ಏನಿದೆ?

‘ಹಣ ಹೆಂಡ ಹಾಗೂ ತೋಳ್ಬಲದ ಗೂಂಡಾಗಿರಿ ರಾಜಕೀಯಕ್ಕೆ ಹೆಸರಾಗಿರುವ @INCKarnataka ಬೆಂಗಳೂರು ಗ್ರಾಮಾಂತರದಲ್ಲಿ ಬಂಡೆ ಪುಡಿ ಪುಡಿಯಾಗುವ ವಾತಾವರಣ ಉದ್ಭವಿಸಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ಸಿಗರು ಹತಾಶರಾಗಿದ್ದಾರೆ. ಇವರಿಗೆ ವಿರುದ್ಧವಾಗಿ ನಿಂತಿರುವ ಮತದಾರರು ಹಾಗೂ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಮೇಲೆ ಅಮಾನುಷ ಹಲ್ಲೆ ನಡೆಸಿ ಕ್ಷೇತ್ರದಲ್ಲಿ ಭಯ ಮೂಡಿಸುವ ಕೃತ್ಯ ಆರಂಭಿಸಿದ್ದಾರೆ. ರೇಷ್ಮೆ ಬೆಳೆಗಾರ ಹಾಗೂ ಬಿಜೆಪಿ ಕಾರ್ಯಕರ್ತ‌ ನವೀನ್ ಅವರ ಮೇಲೆ ಕಾಂಗ್ರೆಸ್ಸಿನ ಗೂಂಡಾ ವ್ಯಕ್ತಿಯೊಬ್ಬ ಮಾರಣಾಂತಿಕ ಹಲ್ಲೆ ಮಾಡಿದ್ದರೂ ಆತನನ್ನು ಬಂಧಿಸದೇ ಇರುವುದು ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿದೆ. ಜಿಲ್ಲೆಯನ್ನು ತಮ್ಮ ಕಪಿಮುಷ್ಠಿಯಲ್ಲಿ ಹಿಡಿದಿಟ್ಟುಕೊಂಡಿರುವ ಡಿ.ಕೆ. ಬ್ರದರ್ಸ್ ಅಧಿಕಾರ ದರ್ಪ ನೆತ್ತಿಗೇರಿದಂತಿದೆ. ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿ ಮತದಾರರನ್ನು ಬೆದರಿಸುವ ಕೆಲಸ ಮುಂದಾಗಿರುವುದು ಅಕ್ಷಮ್ಯ ಅಪರಾಧ. ಕೂಡಲೇ ಚುನಾವಣಾ ಆಯೋಗ ಹಾಗೂ ಪೊಲೀಸ್ ಇಲಾಖೆ ಕಾಂಗ್ರೆಸ್ ಗೂಂಡಾಗಳ ವಿರುದ್ಧ ಕ್ರಮ ಕೈಗೊಂಡು ನಿಷ್ಪಕ್ಷಪಾತ ತನಿಖೆ ನಡೆಸಿ ಶಾಂತಿಯುತ ಮತದಾನ ನಡೆಸಲು ಅಗತ್ಯವಿರುವ ಎಲ್ಲಾ ರೀತಿಯ ಕ್ರಮಗಳನ್ನು ಜರುಗಿಸಿ ಗ್ರಾಮಾಂತರ ಮತದಾರರ ರಕ್ಷಣೆಗೆ ಮುಂದಾಗಬೇಕೆಂದು ಆಗ್ರಹಿಸುತ್ತೇನೆ’ ಎಂದು ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ‘ಎಕ್ಸ್‌’ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT