ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ದಿನ ಶೇ 33ರಷ್ಟು ವಿದ್ಯಾರ್ಥಿಗಳು ಹಾಜರ್‌

6ರಿಂದ 10ನೇ ತರಗತಿವರೆಗೆ ಪೂರ್ಣಾವಧಿ ಪಾಠ ಆರಂಭ
Last Updated 22 ಫೆಬ್ರುವರಿ 2021, 13:55 IST
ಅಕ್ಷರ ಗಾತ್ರ

ರಾಮನಗರ: ಜಿಲ್ಲೆಯಾದ್ಯಂತ ಸೋಮವಾರ 6ರಿಂದ 10ನೇ ತರಗತಿವರೆಗೆ ಪೂರ್ಣಾವಧಿ ತರಗತಿಗಳು ಆರಂಭವಾದವು. ಆದರೆ ಮೊದಲ ದಿನದಂದು ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ದೊರೆಯಲಿಲ್ಲ.

ಶಾಲೆಗೆ ಮೊದಲ ದಿನ ಶೇ 33ರಷ್ಟು ವಿದ್ಯಾರ್ಥಿಗಳು ಮಾತ್ರವೇ ಹಾಜರಾದರು. ಕೋವಿಡ್ ಭೀತಿ ಮೊದಲಾದ ಕಾರಣಗಳಿಗೆ ಶೇ 77ರಷ್ಟು ವಿದ್ಯಾರ್ಥಿಗಳು ಮನೆಯಲ್ಲೇ ಉಳಿದರು. ಇದು ಆರಂಭವಾಗಿರುವ ಕಾರಣ ಮಾಹಿತಿ ಕೊರತೆಯಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಶಾಲೆಗೆ ಬಂದಿಲ್ಲ. ಮುಂದಿನ ದಿನಗಳಲ್ಲಿ ಸಹಜವಾಗಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಲಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದರು.

11 ತಿಂಗಳ ಬಳಿಕ ಆರಂಭ: ಕೋವಿಡ್‌ ಕಾರಣಕ್ಕೆ ಕಳೆದ ಮಾರ್ಚ್‌ನಲ್ಲಿ ಶಾಲೆಗಳು ಬಾಗಿಲು ಮುಚ್ಚಿದ್ದವು. ಬರೋಬ್ಬರಿ 11 ತಿಂಗಳ ಬಳಿಕ ಶೈಕ್ಷಣಿಕ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡವು. ಸೀಮಿತ ಅವಧಿಯಲ್ಲಿ ಈ ಶೈಕ್ಷಣಿಕ ವರ್ಷ ಪೂರ್ಣಗೊಳಿಸುವ ಸಲುವಾಗಿ ಸರ್ಕಾರ ಸೋಮವಾರದಿಂದ ಪೂರ್ಣಾವಧಿ ತರಗತಿ ಆರಂಭಕ್ಕೆ ಅವಕಾಶ ನೀಡಿತ್ತು,

ಎಷ್ಟು ಹಾಜರಿ: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 6ನೇ ತರಗತಿಗೆ 14,865 ಮಕ್ಕಳು ದಾಖಲಾಗಿದ್ದು, ಇವರಲ್ಲಿ ಗುರುವಾರ 4891 ವಿದ್ಯಾರ್ಥಿಗಳು ಶಾಲೆಗೆ ಬಂದಿದ್ದರು. 7 ನೇ ತರಗತಿಗೆ 15,197 ವಿದ್ಯಾರ್ಥಿಗಳು ದಾಖಲಾಗಿದ್ದು, 4198 ಮಾತ್ರ ಬಂದಿದ್ದರು. 8ನೇ ತರಗತಿಗೆ 14,737 ಮಕ್ಕಳು ಪ್ರವೇಶ ಪಡೆದಿದ್ದು, ಇದರಲ್ಲಿ 4474 ವಿದ್ಯಾರ್ಥಿಗಳು ಬಂದಿದ್ದರು. 9 ತರಗತಿಗೆ 14,430 ಮಕ್ಕಳ ಪೈಕಿ 5151 ಹಾಗೂ ಎಸ್ಸೆಸ್ಸೆಲ್ಸಿ ತರಗತಿಗೆ 13,687 ವಿದ್ಯಾರ್ಥಿಗಳ ಪೈಕಿ 5288 ಮಂದಿ ಹಾಜರಾದರು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ನಿಯಮ ಪಾಲನೆ: ಶಾಲೆಗೆ ಬರುವ ಪ್ರತಿ ವಿದ್ಯಾರ್ಥಿಗೂ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಕೆಯನ್ನು ಕಡ್ಡಾಯ ಮಾಡಲಾಗಿತ್ತು. ವಿದ್ಯಾರ್ಥಿಗಳಿಗೆ ಶಿಕ್ಷಕರು ಪರಸ್ಪರ ಅಂತರ ಪಾಲನೆ ನಿಯಮದ ಪಾಠ ಹೇಳಿದರು. ಬಿಸಿಯೂಟ ಯೋಜನೆಗೆ ಸರ್ಕಾರ ಇನ್ನೂ ಹಸಿರು ನಿಶಾನೆ ತೋರಿಲ್ಲ. ಹೀಗಾಗಿ ಮಧ್ಯಾಹ್ನದ ಊಟವನ್ನು ಮನೆಯಿಂದಲೇ ತರುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT