ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಷ್ಕರದ ಬಿಸಿ: ರಾಶಿ ಬಿದ್ದ ಕಸ

ತ್ಯಾಜ್ಯ ವಿಲೇವಾರಿಗೆ ಅಡ್ಡಿ; ಮನೆ ಮನೆ ಕಸ ಸಂಗ್ರಹವೂ ಬಂದ್‌
Last Updated 5 ಜುಲೈ 2022, 4:20 IST
ಅಕ್ಷರ ಗಾತ್ರ

ರಾಮನಗರ/ಕನಕಪುರ/ಬಿಡದಿ: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಹೊರ ಗುತ್ತಿಗೆ ಪೌರ ಕಾರ್ಮಿಕರ ಮುಷ್ಕರದಿಂದಾಗಿ ಸ್ವಚ್ಛತಾ ಸೇವೆಯಲ್ಲಿ ವ್ಯತ್ಯಯ ಆಗಿದೆ. ಅಲ್ಲಲ್ಲಿ ಕಸದ ರಾಶಿ ಬಿದ್ದಿದ್ದು, ಸಾರ್ವಜನಿಕರು ತೊಂದರೆ ಅನುಭವಿಸುವಂತೆ ಆಗಿದೆ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೌರ ಕಾರ್ಮಿಕರೂ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ಸಿಬ್ಬಂದಿ ಕಳೆದ ನಾಲ್ಕು ದಿನದಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇವಲ ಕಾಯಂ ಪೌರಕಾರ್ಮಿಕರಷ್ಟೇ ಸ್ವಚ್ಛತಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಕಸ ಸಂಗ್ರಹಣೆ ಮತ್ತು ವಿಲೇವಾರಿಯಲ್ಲಿವ್ಯತ್ಯಯವಾಗಿದೆ.

ರಾಮನಗರ ನಗರಸಭೆ ಒಂದರಲ್ಲಿಯೇ ನೇರ ಪಾವತಿ ವ್ಯವಸ್ಥೆ ಅಡಿ ನೇಮಿಸಿಕೊಳ್ಳಲಾದ 70 ಪೌರ ಕಾರ್ಮಿಕರು ಇದ್ದಾರೆ. ಇವರಲ್ಲದೆ ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿಯ 25 ಹಾಗೂ ಕಿಯೋನಿಕ್ಸ್ ಮೂಲಕ ನೇಮಿಸಿಕೊಳ್ಳಲಾದ 28 ಆಟೊ ಚಾಲಕರೂ ಕೈ ಜೋಡಿಸಿದ್ದರೆ. ಇದರಿಂದಾಗಿ ಮನೆಮನೆಯಿಂದ ಕಸ ಸಂಗ್ರಹಣೆ ಕಾರ್ಯವೂ ಸರಾಗವಾಗಿ ನಡೆದಿಲ್ಲ. ಕಳೆದ ಒಂದು ವಾರದಿಂದಲೂ ಕಸ ವಿಲೇವಾರಿಯಲ್ಲಿ ಸಮಸ್ಯೆ ಉಂಟಾಗಿದೆ.

‘ಮನೆಮನೆಯಿಂದ ಕಸ ಸಂಗ್ರಹಣೆ ಸರಿಯಾದ ರೀತಿಯಲ್ಲಿ ನಡೆದಿದೆ. ಎಷ್ಟು ದಿನ ಎಂದು ಮನೆಯಲ್ಲಿ ಕಸ ಇಟ್ಟುಕೊಳ್ಳುವುದು. ಹೀಗಾಗಿ ಅನಿವಾರ್ಯವಾಗಿ ಕಸದ ತೊಟ್ಟಿಗಳು ಇರುವ ಕಡೆಗಳಲ್ಲಿ ಚೆಲ್ಲಿ ಬರುತ್ತಿದ್ದೇವೆ’ ಎಂದು ಐಜೂರು ನಿವಾಸಿ ಲಕ್ಷ್ಮಿ ತಿಳಿಸಿದರು.

ಉಳಿದೆಡೆಯೂ ಇದೇ ಸ್ಥಿತಿ: ಜಿಲ್ಲೆಯ ಉಳಿದ ನಾಲ್ಕು ನಗರ ಸ್ಥಳೀಯ ಸಂಸ್ಥೆಗಳಲ್ಲಿಯೂ ಇದೇ ಪರಿಸ್ಥಿತಿ ಇದೆ. ಅಲ್ಲಿಯೂ ಹೆಚ್ಚಿನವರು ಗುತ್ತಿಗೆ ಸಿಬ್ಬಂದಿ ಇದ್ದು, ಅವರೆಲ್ಲ ಮುಷ್ಕರದಲ್ಲಿ ಪಾಲ್ಗೊಂಡಿರುವ ಕಾರಣ ಸ್ವಚ್ಛತೆ ಸೇರಿದಂತೆ ವಿವಿಧ ಸೇವೆಗಳಲ್ಲಿ ವ್ಯತ್ಯಯ ಆಗಿದೆ.

ಬಿಡದಿ ಪುರಸಭೆ ವ್ಯಾಪ್ತಿಯ ಅಲ್ಲಲ್ಲಿ ಕಸದ ರಾಶಿ ಬಿದ್ದಿದೆ. ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ತ್ಯಾಜ್ಯದ ಗುಡ್ಡ ಕಾಣತೊಡಗಿದೆ. ಇದರಿಂದ ಜನರು ಮೂಗು ಮುಚ್ಚಿಕೊಂಡು ಓಡಾಡುವಂತೆ ಆಗಿದೆ. ಬೀದಿ ನಾಯಿಗಳ ಹಾವಳಿ ಹೆಚ್ಚಿದ್ದು, ಅವು ಕಸವನ್ನು ಎಳೆದಾಟುವ ದೃಶ್ಯ ಸಾಮಾನ್ಯವಾಗಿದೆ.

ಕಸ ವಿಲೇವಾರಿ ಸಮಸ್ಯೆ ಎದುರಾಗಿದೆ. ಸಾರ್ವಜನಿಕರು ರಾಶಿ ರಾಶಿ ಕಸ ಗುಡ್ಡೆಯನ್ನು ಮುಖ್ಯ ರಸ್ತೆಯಲ್ಲಿ ಬಿದ್ದಿದ್ದು, ಸಾರ್ವಜನಿಕರ ಓಡಾಟಕ್ಕೆ ವೃದ್ಧರು, ಮಕ್ಕಳು ತೊಂದರೆಯಾಗಿದೆ. ಇದೇ ರೀತಿ ಮುಂದುವರೆದರೆ ಜನ ಸಾಮಾನ್ಯರು ರಸ್ತೆಯಲ್ಲಿ ಓಡಾಡುವುದು ತುಂಬ ಕಷ್ಟಕರವಾಗುತ್ತದೆ. ಕಸದ ರಾಶಿಯನ್ನು ನಾಯಿಗಳ ಹಾವಳಿಯಿಂದ ರಸ್ತೆ ತುಂಬಾ ಎಳೆದಾಡುತ್ತಿರುವ ದೃಷ್ಯ ಸಾಮಾನ್ಯವಾಗಿದೆ.

‘ಸರ್ಕಾರದ ಅನುಮತಿಯಿಲ್ಲದೆ ನಾವು ಯಾವುದೇ ಕಾರ್ಮಿಕರನ್ನು ನೇಮಿಸಿಕೊಳ್ಳಲು ಅವಕಾಶ ಇಲ್ಲ. ಇದು ಮುಷ್ಕರ ನಿರತರಿಗೂ ಗೊತ್ತಿದೆ. ಅವರ ಮನವೊಲಿಸುವ ಪ್ರಯತ್ನ ನಡೆದಿದೆ’ ಎಂದು ಬಿಡದಿ ಪುರಸಭೆ ಮುಖ್ಯಾಧಿಕಾರಿ ಅಮರ್ ನಾಥ್ ತಿಳಿಸಿದರು.

ಕನಕಪುರದಲ್ಲೂ ಅದೇ ಕಥೆ: ಇಲ್ಲಿನ ನಗರಸಭೆ ಗುತ್ತಿಗೆ ಪೌರ ಕಾರ್ಮಿಕರ ಪ್ರತಿಭಟನೆಯಿಂದ ನಗರದಲ್ಲಿ ಮನೆ ಮನೆ ಕಸ ಸಂಗ್ರಹಣೆಗೆ ಮಾತ್ರ ಹೆಚ್ಚು ತೊಂದರೆ ಆಗಿದ್ದು ಉಳಿದಂತೆ ಬೇರೆ ಕೆಲಸಗಳನ್ನು ಕಾಯಂ ಪೌರ ಕಾರ್ಮಿಕರು, ನೌಕರರು, ಸಿಬ್ಬಂದಿಗಳಿಂದ ನಿರ್ವಹಣೆ ಮಾಡಲಾಗಿದೆ.

‘ಸದ್ಯ ಪೌರ ಕಾರ್ಮಿಕರ ಮುಷ್ಕರ ಮುಕ್ತಾಯದ ಹಂತ ತಲುಪಿದ್ದು, ಮಂಗಳವಾರ ಬೆಳಿಗ್ಗೆಯಿಂದ ಅವರು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗುವ ನಿರೀಕ್ಷೆ ಇದೆ’ ಎಂದು ಕನಕಪುರ ನಗರಸಭೆ ಅಧ್ಯಕ್ಷ ಕೋಟೆ ಕಿರಣ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT