ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್: ಬಿಕೋ ಎಂದ ರಸ್ತೆಗಳು

ಅಗತ್ಯ ವಸ್ತು ಖರೀದಿ ನೆಪದಲ್ಲಿ ಪೇಟೆಯಲ್ಲಿ ಜನರ ಓಡಾಟ
Last Updated 12 ಜುಲೈ 2020, 14:19 IST
ಅಕ್ಷರ ಗಾತ್ರ

ರಾಮನಗರ: ಕೊರೊನಾ ನಿಯಂತ್ರಣದ ಸಲುವಾಗಿ ರಾಜ್ಯ ಸರ್ಕಾರವು ಕರೆ ನೀಡಿದ್ದ ಎರಡನೇ ಭಾನುವಾರದ ಲಾಕ್‌ಡೌನ್‌ಗೆ ಜಿಲ್ಲೆಯಾದ್ಯಂತ ಉತ್ತಮ ಸ್ಪಂದನೆ ದೊರೆಯಿತು. ಆದರೆ ಅನೇಕ ಕಡೆ ಜನರು ಅಗತ್ಯ ವಸ್ತು ಖರೀದಿ ನೆಪದಲ್ಲಿ ಬೀದಿಗೆ ಇಳಿದಿದ್ದರು.

ಸಂಪೂರ್ಣ ಲಾಕ್‌ಡೌನ್ ಕರೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ಮೂರು ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಗಳಿಗೂ ರಜೆ ಘೋಷಿಸಲಾಗಿತ್ತು. ಹೀಗಾಗಿ ಈ ದಿನ ಯಾವುದೇ ವಹಿವಾಟು ನಡೆಯಲಿಲ್ಲ. ರೈತರಿಗೆ ಮೊದಲೇ ಮಾಹಿತಿ ಸಿಕ್ಕಿದ್ದರಿಂದ ಯಾರೂ ಮಾರುಕಟ್ಟೆಗೆ ಗೂಡು ತಂದಿರಲಿಲ್ಲ. ಕೃಷಿ ಉತ್ಪನ್ನ ಮಾರುಕಟ್ಟೆಗೆ ಸಹ ರಜೆ ಘೋಷಣೆಯಾಗಿತ್ತು.

ರಾಮನಗರದಲ್ಲಿ ಬೆಳಗ್ಗೆಯಿಂದಲೇ ಹೆಚ್ಚು ಜನರು ಬೀದಿಗೆ ಇಳಿಯಲಿಲ್ಲ. ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಸ್ತಬ್ಧವಾಗಿದ್ದು, ಇಡೀ ಬಸ್ ನಿಲ್ದಾಣ ಬಿಕೋ ಎನ್ನುತಿತ್ತು. ಖಾಸಗಿ ವಾಹನಗಳ ಓಡಾಟಕ್ಕೂ ಕಡಿವಾಣ ಹಾಕಲಾಗಿತ್ತು. ಆಟೊಗಳ ಸಂಚಾರ ಸಹ ಇರಲಿಲ್ಲ. ಹೀಗಾಗಿ ಬೆಂಗಳೂರು-ಮೈಸೂರು ಹೆದ್ದಾರಿ ಪೂರ ಖಾಲಿಖಾಲಿಯಾಗಿತ್ತು. ದಿನಬಳಕೆ ವಸ್ತು ಹಾಗೂ ಆರೋಗ್ಯ ಸೇವೆ ಹೊರತುಪಡಿಸಿ ಉಳಿದೆಲ್ಲ ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದವು. ಹೋಟೆಲ್‌ಗಳು ಸಹ ಬಾಗಿಲು ತೆರೆಯಲು ಅನುಮತಿ ಇರಲಿಲ್ಲ. ಮದ್ಯದಂಗಡಿಗಳ ಬಾಗಿಲಿಗೂ ಬೀಗ ಬಿದ್ದಿತ್ತು.
ಅತ್ಯಗತ್ಯ ವಸ್ತುಗಳ ಮಾರಾಟಕ್ಕೆ ಜಿಲ್ಲಾಡಳಿತ ಅವಕಾಶ ನೀಡಿತ್ತು. ಹಾಲು, ಹಣ್ಣು, ತರಕಾರಿ, ದಿನಸಿ ಮಾರಾಟದ ಅಂಗಡಿಗಳು ತೆರೆದಿದ್ದವು. ಈ ನೆಪದಲ್ಲಿ ಕೆಲವರು ಪೇಟೆಯತ್ತ ಧಾವಿಸಿದ ಕಾರಣ ಕೆಲವೆಡೆ ಜನಸಂದಣಿ ಉಂಟಾಯಿತು. ಆಸ್ಪತ್ರೆ, ಕ್ಲಿನಿಕ್‌ಗಳು, ಔಷಧದ ಅಂಗಡಿಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಪೆಟ್ರೋಲ್‌ ಬಂಕ್‌ಗಳೂ ತೆರೆದಿದ್ದವು. ನಗರದ ಪ್ರಮುಖ ವೃತ್ತಗಳಲ್ಲಿ ಪೊಲೀಸ್ ಕಣ್ಗಾವಲು ಇತ್ತಾದರೂ ಅನಗತ್ಯವಾಗಿ ಓಡಾಡುವವರನ್ನು ತಡೆಯುವ ಕೆಲಸವನ್ನು ಪೊಲೀಸರು ಮಾಡಲಿಲ್ಲ.

ಬಾಗಿಲು ತೆರೆದ ಕಾರ್ಖಾನೆ: ಲಾಕ್‌ಡೌನ್‌ ಅವಧಿಯಲ್ಲಿ ಜಿಲ್ಲಾಧಿಕಾರಿಗಳು ನಿಷೇಧಾಜ್ಞೆ ಹೇರಿರುವ ನಡುವೆಯೂ ರಾಮನಗರದ ಸೇನಾಪತಿ ವೈಟ್ಲೆ ಕಾರ್ಖಾನೆಯು ಭಾನುವಾರ ಕಾರ್ಯ ನಿರ್ವಹಿಸಿದೆ. ಈ ಸಂಬಂಧ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT