ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ | ಸರ್ಕಾರಿ ವಸತಿ ಗೃಹಗಳು ನಿರುಪಯುಕ್ತ

ಕೆಲ ವಸತಿಗಳ ಕಿಟಕಿ, ಬಾಗಿಲುಗಳು ಮಾಯ
Last Updated 13 ಫೆಬ್ರುವರಿ 2023, 0:47 IST
ಅಕ್ಷರ ಗಾತ್ರ

ಮಾಗಡಿ: ಪಟ್ಟಣದಲ್ಲಿನ ಲೋಕೋಪಯೋಗಿ, ರೇಷ್ಮೆ, ತಾಲ್ಲೂಕು ಪಂಚಾಯಿತಿ ನೌಕರರ ವಸತಿ ಗೃಹಗಳು ಕಳೆದ 12 ವರ್ಷಗಳಿಂದ ಬಳಕೆಯಾಗದೆ ನಿರುಪಯುಕ್ತವಾಗಿದ್ದು, ಭೂತ ಬಂಗಲೆಯಂತಾಗಿವೆ.

ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಿಸಿರುವ ನೌಕರರ ವಸತಿ ಗೃಹಗಳಲ್ಲಿ ನೌಕರರು ವಾಸವಿಲ್ಲದ ಕಾರಣ, ಗೃಹಗಳು ಶಿಥಿಲಾವಸ್ಥೆ ತಲುಪಿದ್ದು, ದೂಳು ತುಂಬಿಕೊಂಡು ವಿನಾಶದತ್ತ ಸಾಗಿವೆ. ವಸತಿ ಗೃಹಗಳ ಗೋಡೆ ಮೇಲೆ ಬೆಳೆದಿರುವ ಗಿಡಗಳು ಪೊದೆಗಳಂತೆ ಹಬ್ಬಿಕೊಂಡಿವೆ. ಅಲ್ಲದೆ, ನಿರುಪಯುಕ್ತವಾದ ಈ ವಸತಿ ಗೃಹಗಳು ಅನೈತಿಕ ಚಟುವಟಿಕೆಗಳ ತಾಣಗಳಾಗಿವೆ ಮಾರ್ಪಟ್ಟಿವೆ.

ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮತ್ತು ಎಂಜಿನಿಯರ್‌ಗಳ ವಸತಿ ನಿಲಯಗಳಲ್ಲಿ ಯಾವುದೇ ಅಧಿಕಾರಿಗಳು ವಾಸವಾಗಿಲ್ಲ. ಬೆಂಗಳೂರು ಸಮೀಪ ಇರುವ ಕಾರಣ, ತಾಲ್ಲೂಕು ಮಟ್ಟದ ಯಾವೊಬ್ಬ ಅಧಿಕಾರಿಗಳು ಸಹ ತಾಲ್ಲೂಕು ಕೇಂದ್ರದಲ್ಲಿ ವಾಸವಾಗಿಲ್ಲ. ವಸತಿ ಗೃಹಗಳು ಖಾಲಿಯಾಗಿಯೇ ಉಳಿದಿರುವ ಕಾರಣ ಕಸಕಡ್ಡಿ, ತರಗೆಲೆಗಳು ತುಂಬಿವೆ. ಕೆಲವು ಕಟ್ಟಡಗಳ ಚಾವಣಿ ಕುಸಿದಿದೆ. ಕೃಷಿ ಇಲಾಖೆಯ ನೌಕರರ ಮೂರು ವಸತಿ ಗೃಹಗಳು, ರೇಷ್ಮೆ ಇಲಾಖೆಯ ಎಂಟು, ಲೋಕೋಪಯೋಗಿ ಇಲಾಖೆಯ ಮೂರು, ತಾಲ್ಲೂಕು ಪಂಚಾಯಿತಿಗೆ ಸೇರಿರುವ ಎಂಟು ಮನೆಗಳು ಬಳಕೆಯಾಗದೆ ಕುಸಿಯುವ ಹಂತ ತಲುಪಿವೆ.

ತಾಲ್ಲೂಕಿನ ಅಗಲಕೋಟೆ ಹ್ಯಾಂಡ್ ಪೋಸ್ಟ್ ದೋಣಕುಪ್ಪೆ ಬಳಿ ಬಹುಕೋಟಿ ವೆಚ್ಚದಲ್ಲಿ ನೌಕರರು ಮತ್ತು ಸ್ಥಳೀಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರೇಷ್ಮೆ ಇಲಾಖೆ ಕಚೇರಿ ಮತ್ತು 18 ವಸತಿ ಗೃಹಗಳನ್ನು ನಿರ್ಮಿಸಲಾಗಿತ್ತು. ಆದರೆ, ಕೆಲವು ವರ್ಷಗಳ ನಂತರ ರೈತರು ರೇಷ್ಮೆ ಬೆಳೆಗಳಿಗೆ ತಿಲಾಂಜಲಿ ಹೇಳಿ, ಹಾಲು ಡೇರಿಗಳತ್ತ ಹೆಚ್ಚಿನ ಗಮನ ಹರಿಸಿದ ಹಿನ್ನೆಲೆಯಲ್ಲಿ ರೇಷ್ಮೆ ವಹಿವಾಟು ಕುಂಠಿತವಾಯಿತು. ಇದರಿಂದಾಗಿ ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ರೇಷ್ಮೆ ಇಲಾಖೆ ಕಚೇರಿಯನ್ನು ಮುಚ್ಚಲಾಯಿತು. ಇದರಿಂದ ಯಾವುದೇ ನೌಕರರಿಲ್ಲದೆ 18 ವಸತಿ ಗೃಹಗಳು ಖಾಲಿಯಾಗಿಯೇ ಉಳಿದಿವೆ. ಜತೆಗೆ ಕೆಲವು ವಸತಿ ಗೃಹಗಳ ಕಿಟಕಿ, ಬಾಗಿಲುಗಳನ್ನು ಕಳ್ಳರು ಕಿತ್ತುಕೊಂಡು ಹೋಗಿದ್ದಾರೆ. ಕೆಲವು ವಸತಿ ನಿಲಯಗಳ ಕಿಟಕಿ, ಬಾಗಿಲು ಮುರಿದು ಬಿದ್ದಿವೆ.

ಅಗತ್ಯವಿರುವ ನೌಕರರಿಗೆ ನೀಡಲು ಸಲಹೆ

ತಾಲ್ಲೂಕಿನಲ್ಲಿ ಬಳಕೆಯಾಗದೆ ನಿರುಪಯುಕ್ತವಾಗಿರುವ ರೇಷ್ಮೆ ಇಲಾಖೆ ಮತ್ತು ತಾಲ್ಲೂಕು ಪಂಚಾಯಿತಿ ನೌಕರರ ವಸತಿ ನಿಲಯಗಳನ್ನು ಅನ್ಯ ಇಲಾಖೆಯ ನೌಕರರು ಅಥವಾ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಬಾಡಿಗೆಗೆ ನೀಡಬಹುದು ಎಂಬ ಕೂಗು ಎದ್ದಿದೆ. ಈ ರೀತಿ ಬಾಡಿಗೆಗೆ ನೀಡುವುದರಿಂದ ವಸತಿ ನಿಲಯಗಳು ಸುಸ್ಥಿತಿಯಲ್ಲಿರುತ್ತವೆ. ಜತೆಗೆ ಇಲಾಖೆಗೆ ಬಾಡಿಗೆ ರೂಪದಲ್ಲಿ ಆದಾಯವೂ ಬರುತ್ತದೆ.

ಪಟ್ಟಣದ ಎನ್ಇಎಸ್ ಬಡಾವಣೆಯಲ್ಲಿ ಇದ್ದ ಪೌರಸೇವಾ ನೌಕರರ ವಸತಿ ಗೃಹಗಳನ್ನು ಕೆಡವಿ ಉದ್ಯಾನವನ ನಿರ್ಮಿಸಲಾಗಿದೆ. ಇದರಿಂದಾಗಿ ಪೌರಸೇವಾ ನೌಕರರು ಕೊರೆಯುವ ಚಳಿ ಮತ್ತು ಮಳೆಯನ್ನೂ ಲೆಕ್ಕಿಸದೆ ಬೆಳಿಗ್ಗೆ ಐದು ಗಂಟೆಗೆ ದೂರದ ಹಳ್ಳಿಗಳಿಂದ ಕೆಲಸಕ್ಕೆ ಬರುವಂತಾಗಿದೆ. ಬಳಕೆಯಾಗದೆ ಭೂತ ಬಂಗಲೆಯಂತಾಗಿರುವ ವಿವಿಧ ಇಲಾಖೆಗಳ ವಸತಿ ಗೃಹಗಳನ್ನು ಈ ನೌಕರರಿಗೆ ಸೂಕ್ತವಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT