ಯೋಜನೆಗೆ ಚಾಲನೆ ಸಿಕ್ಕ ಬಳಿಕ ನೋಂದಣಿಗೆ ಸರ್ವರ್ ಸಮಸ್ಯೆಯೂ ಕಾಡುತ್ತಿದೆ. ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದೆ. ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ಮೊಬೈಲ್ ಸಂಖ್ಯೆಗೆ ತಕ್ಷಣ ಒಟಿಪಿ ಬರುವುದು ತಡವಾಗುತ್ತಿದೆ. ಹೀಗಾಗಿ ಗ್ರಾಮ ಒನ್ ಕೇಂದ್ರಗಳ ಬಳಿ ಜನಸಂದಣಿ ಸಾಮಾನ್ಯವಾಗಿದೆ. ‘ಮೊಬೈಲ್‌ಗೆ ಒಟಿಪಿ ಬಂದರೂ ಅದನ್ನು ಎಂಟ್ರಿ ಮಾಡುವ ಹೊತ್ತಿಗೆ ಸರ್ವರ್ ಕೈ ಕೊಡುತ್ತಿದೆ. ಇದರಿಂದಾಗಿ ಮತ್ತೆ ಆರಂಭದಿಂದ ಎಲ್ಲಾ ಪ್ರಕ್ರಿಯೆ ಮಾಡಬೇಕಾಗುತ್ತದೆ. ಹಾಗಾಗಿ ಮಹಿಳೆಯರು ಸೆಂಟರ್ ಮುಂದೆ ಅನಿವಾರ್ಯವಾಗಿ ಕಾಯುತ್ತಾ ಕೂರಬೇಕಾಗುತ್ತದೆ’ ಎಂದು ಗ್ರಾಮ ಒನ್ ಸೇವಾ ಕೇಂದ್ರದ ಸಿಬ್ಬಂದಿ ಹೇಳಿದರು. ‘ಇನ್ನು ಕೆಲವರು ತಮ್ಮ ಬ್ಯಾಂಕ್ ಖಾತೆಗೆ ಮತ್ತು ಪಡಿತರ ಚೀಟಿಗೆ ಆಧಾರ್ ನಂಬರ್ ಲಿಂಕ್ ಮಾಡಿಸದಿರುವುದಿಲ್ಲ. ಕೇಂದ್ರಕ್ಕೆ ನೋಂದಣಿಗಾಗಿ ಬಂದಾಗ ವಿಷಯ ಗೊತ್ತಾಗುತ್ತಿದ್ದಂತೆ ಆಧಾರ್ ಲಿಂಕ್ ಮಾಡಿಸಲು ಬ್ಯಾಂಕ್‌ಗೆ ಕಳಿಸುತ್ತೇವೆ’ ಎಂದರು. ಪ್ರಜಾ ಪ್ರತಿನಿಧಿಯಾಗಲು ನಿರಾಸಕ್ತಿ ಯೋಜನೆಗೆ ಫಲಾನುಭವಿಗಳ ನೋಂದಣಿಗೆ ನೆರವಾಗಲು ಗೌರವಧನದ ಆಧಾರದ ಮೇಲೆ ಪ್ರಜಾ ಪ್ರತಿನಿಧಿಗಳನ್ನು ನೇಮಿಸುವುದಾಗಿ ಸರ್ಕಾರ ಹೇಳಿದೆ. ಆದರೆ ಗೌರವಧನ ಸಿಗುವುದಿಲ್ಲ ಎಂಬ ಕಾರಣಕ್ಕೆ ಪ್ರಜಾ ಪ್ರತಿನಿಧಿಯಾಗಿ ಕೆಲಸ ಮಾಡಲು ಅಭ್ಯರ್ಥಿಗಳು ನಿರಾಸಕ್ತಿ ತೋರುತ್ತಿದ್ದಾರೆ. ‘ಗೌರವಧನ ಕೊಡುತ್ತೇವೆ ಎಂದು ಹೇಳಿ ಕೆಲಸ ಮಾಡಿಸಿಕೊಳ್ಳುತ್ತಾರೆ. ಆದರೆ ಎಷ್ಟೊ ತಿಂಗಳಾದ ಮೇಲೆ ಪಾವತಿಸುತ್ತಾರೆ. ಅದಕ್ಕೂ ನಾವು ಕಚೇರಿಗಳನ್ನು ಸುತ್ತಿ ಅಧಿಕಾರಿಗಳಿಗೆ ಸಲಾಂ ಹೊಡೆಯಬೇಕು’ ಎಂದು ಹೆಸರು ಹೇಳಲಿಚ್ಛಿಸದ ವ್ಯಕ್ತಿಯೊಬ್ಬರು ಅಭಿಪ್ರಾಯಪಟ್ಟರು.