ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಂತರ ಚುನಾವಣೆಗೆ ಸಿದ್ಧ; ಎಚ್.ಡಿ. ಕುಮಾರಸ್ವಾಮಿ

ಜಾಲಮಂಗಲ ಗ್ರಾಮದಲ್ಲಿ ಕಾರ್ಯಕ್ರಮ: ‘ಪಂಚರತ್ನ’ ಯೋಜನೆ ಘೋಷಣೆ
Last Updated 15 ಜನವರಿ 2021, 14:38 IST
ಅಕ್ಷರ ಗಾತ್ರ

ರಾಮನಗರ: ಮಧ್ಯಂತರ ಚುನಾವಣೆಗೆ ಜೆಡಿಎಸ್ ಸಿದ್ಧವಿದ್ದು, ಮತ್ತೆ ಅಧಿಕಾರಕ್ಕೆ ಬಂದಲ್ಲಿ ರಾಜ್ಯದಲ್ಲಿ ‘ಪಂಚರತ್ನ’ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ತಾಲ್ಲೂಕಿನ ಜಾಲಮಂಗಲ ಗ್ರಾಮದ ದೇವಾಲಯದ ಆವರಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮುಂದಿನ ಚುನಾವಣೆ ನನ್ನ ಪಾಲಿನ ಕೊನೆ ಹೋರಾಟ. ಐದು ವರ್ಷಗಳ ಪೂರ್ಣ ಆಡಳಿತ ನೀಡಿದರೆ ಪಂಚರತ್ನ ಯೋಜನೆ ಮೂಲಕ ಪ್ರತಿ ಗ್ರಾಪಂಗೊಂದು ಕರ್ನಾಟಕ ಪಬ್ಲಿಕ್ ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ. ಯುವಕರಿಗೆ ಉದ್ಯೋಗ ನೀಡಲು ಪೈಲೆಟ್ ಪ್ರಾಜೆಕ್ಟ್ ಮಾದರಿಯಲ್ಲಿ ಯೋಜನೆ ಆರಂಭಿಸಲಾಗುವುದು. ಸರ್ಕಾರ ಮನಸ್ಸು ಮಾಡಿದರೆ ಏನು ಅಭಿವೃದ್ಧಿ ಬೇಕಿದ್ದರೂ ಮಾಡಬಹುದು ಎಂಬುದನ್ನು ಸಾಧಿಸಿ ತೋರಿಸುತ್ತೇನೆ ಎಂದರು.

ಬೆಟ್ಟ ಅಭಿವೃದ್ಧಿ: ಲಕ್ಷ್ಮೀ ನಾರಾಯಣ ಸ್ವಾಮಿ ಬೆಟ್ಟದ ಅಭಿವೃದ್ಧಿಗೆ ನಾನು ಟೊಂಕ ಕಟ್ಟಿದ್ದೇನೆ. ಇಲ್ಲಿನ ಗ್ರಾಮಸ್ಥರು ದೇಣಿಗೆ ರೂಪದಲ್ಲಿ ₨42 ಲಕ್ಷ ಸಂಗ್ರಹಿಸಿ ಬೆಟ್ಟಕ್ಕೆ ಕಚ್ಚಾ ರಸ್ತೆ ನಿರ್ಮಿಸಿದ್ದಾರೆ. ಇಡೀ ಬೆಟ್ಟದ ರಸ್ತೆಗೆ ಡಾಂಬರೀಕರಣ ಸೇರಿದಂತೆ ಬೆಟ್ಟದ ಸಂಪೂರ್ಣ ಅಭಿವೃದ್ಧಿ, ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸುವುದಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ನಾನೇ ಭರಿಸುತ್ತೇನೆ ಎಂದು ಎಚ್‌ಡಿಕೆ ಭರವಸೆ ನೀಡಿದರು.
‌ಮಾಗಡಿ ಶಾಸಕ ಎ.ಮಂಜುನಾಥ್ ಮಾತನಾಡಿ ‘ ಶ್ರೀಸಾಮಾನ್ಯರ ಸರ್ಕಾರ ನೀಡಿದ ಕೀರ್ತಿ ಕುಮಾರಣ್ಣ ಅವರದ್ದು. ಅವರ ಅನಿವಾರ್ಯತೆ ಮತ್ತೊಮ್ಮೆ ಜನರಿಗೆ ಮನವರಿಕೆ ಆಗಿದೆ. ಯಾವ ರಾಷ್ಟ್ರೀಯ ಪಕ್ಷಗಳು ರೈತರ, ಬಡವರ ಪರವಾಗಿ ದುಡಿಯಲು ಸಾಧ್ಯವಿಲ್ಲ. ಅದೆಲ್ಲದಕ್ಕೂ ಅವರಿಗೆ ಪಕ್ಷದ ಹೈಕಮಾಂಡ್‌ ಆದೇಶ ಬೇಕು. ಆದರೆ ಕುಮಾರಣ್ಣ ಅವರಿಗೆ ರಾಜ್ಯದ ಆರೂವರೆ ಕೋಟಿ ಜನರೇ ಹೈಕಮಾಂಡ್‌’ ಎಂದರು.
‘ಮುಂದೆ ತಾಲ್ಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗಳು ಬರಲಿವೆ. ಈ ಹಿನ್ನೆಲೆಯಲ್ಲಿ ಕುಮಾರಣ್ಣ ಹಾಗೂ ನಿಖಿಲ್‌ ಪ್ರತಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಪ್ರಚಾರ ಕೈಗೊಳ್ಳಲಿದ್ದಾರೆ’ ಎಂದರು.

'ಜಿಲ್ಲೆಯಲ್ಲಿ 540 ಕೋಟಿ ವೆಚ್ಚದಲ್ಲಿ ಸತ್ತೇಗಾಲದಿಂದ ವೈ.ಜಿ. ಗುಡ್ಡ, ಮಂಚನಬೆಲೆ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ರೂಪಿಸಿದ್ದೇ ಕುಮಾರಸ್ವಾಮಿ. ಮಾಗಡಿಗೆ1,560 ಕೋಟಿ ವೆಚ್ಚದ ನಾಲ್ಕು ಪಥದ ರಸ್ತೆ ಕಾಮಗಾರಿಗೆ ಶಂಕುಸ್ಥಾ‍ಪನೆ ನಿರ್ಮಿಸಿದ್ದು ಇದೇ ಕುಮಾರಸ್ವಾಮಿ. ಮಂಚನಬೆಲೆ ಬಳಿ 120 ಕೋಟಿ ವೆಚ್ಚದಲ್ಲಿ ಉದ್ಯಾನ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು ಅವರೇ. ರಾಮನಗರಕ್ಕೆ ಜಿಲ್ಲಾ ಕೇಂದ್ರದ ಸ್ಥಾನಮಾನ ಬರಲು ಕುಮಾರಣ್ಣ ಕಾರಣ’ ಎಂದರು.

‘ಬಿಜೆಪಿ–ಜೆಡಿಎಸ್ ಹೊಂದಾಣಿಕೆಯ ಪ್ರಶ್ನೆಯೇ ಇಲ್ಲ. ಬಿಜೆಪಿಯವರು ಅವರಾಗಿಯೇ ಸಂಯಮದಿಂದ ನಮ್ಮ ಕೆಲಸಗಳನ್ನು ಮಾಡಿಕೊಟ್ಟಿದ್ದಾರೆ. ಕೂಟಗಲ್ ಹಾಗೂ ಜಾಲಮಂಗಲ ಬೆಟ್ಟ ಅಭಿವೃದ್ಧಿಗೆ ತಲಾ ₨25 ಲಕ್ಷ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಅನುದಾನ ಬರಲಿದೆ’ ಎಂದರು.

ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ ‘ ಮಾಗಡಿ ಕ್ಷೇತ್ರದಲ್ಲಿ ಸಿಕ್ಕ ಬಹುಮಯ ದೇಶದ ಇತಿಹಾಸದಲ್ಲೇ ರೈತರ ಸಂಪೂರ್ಣ ಸಾಲ ಮನ್ನಾ ಮಾಡಿದ ಇತಿಹಾಸ ಇಲ್ಲ. ಆದರೆ ಬಹುಮತ ಬರದೇ ಹೋದರೂ ಕುಮಾರಣ್ಣ ತಾವು ನುಡಿದಂತೆ ಸಾಲ ಮನ್ನಾ ಮಾಡಿ ಮಾತು ಉಳಿಸಿಕೊಂಡಿದ್ದಾರೆ. ಜೆಡಿಎಸ್‌ ಉಳಿದಿರುವುದೇ ರೈತರು, ಶೋಷಿತರಿಗೋಸ್ಕರ. ಮುಂದಿನ ದಿನಗಳಲ್ಲಿ ಯುವಜನರಿಗೆಹೆಚ್ಚಿನ ಅವಕಾಶ ನೀಡಲಾಗುವುದು’ ಎಂದರು.

ಶಾಸಕಿ ಅನಿತಾ ಕುಮಾರಸ್ವಾಮಿ, ರೇವತಿ ನಿಖಿಲ್‌, ಪಕ್ಷದ ಮುಖಂಡರಾದ ಸುಬ್ಬಾಶಾಸ್ತ್ರಿ, ಪೂಜಾರಿಪಾಳ್ಯ ಕೃಷ್ಣಮೂರ್ತಿ, ರಾಜಶೇಖರ್, ಬೋರೇಗೌಡ, ಸುಮಿತ್ರಮ್ಮ, ಅಜಯ್‌ ದೇವೇಗೌಡ

ಹೋರಾಟದ ಹೆಸರಲ್ಲಿ ಕಿರುಕುಳ

‘ಕೇತಗಾನಹಳ್ಳಿಯಲ್ಲಿ ಜಮೀನು ಖರೀದಿಸಿರುವ ಮೂಲಕ ಈ ನೆಲದ ಋಣ ಆರಂಭ ಆಯಿತು. ಆದರೆ ಈ ವಿಚಾರದಲ್ಲಿ ರವಿಕೃಷ್ಣಾರೆಡ್ಡಿ, ಹಿರೇಮಠ್ ಅಂತಹವರು ನನಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಈ ಭೂಮಿಯನ್ನು ಕಾನೂನು ರೀತಿ ಕೊಂಡುಕೊಂಡಿದ್ದರೂ, ಇಲ್ಲಸಲ್ಲದ ಆರೋಪಗಳಿಂದಾಗಿ ರೋಸಿ ಹೋಗಿದ್ದೆನೆ. ಎಷ್ಟೋ ಬಾರಿ ಈ ‘ಭೂಮಿಯನ್ನು ಬಡವರಿಗೆ ಹಂಚಿ ನೆಮ್ಮದಿಯಾಗಿರಬೇಕು ಎಂದಿಕೊಂಡಿದ್ದೇನೆ. ನಾನು ಭೂಮಿ ಖರೀದಿ ಮಾಡಿದ ವೇಳೆ ರವಿಕೃಷ್ಣಾ ರೆಡ್ಡಿ ಹುಟ್ಟಿಯೇ ಇರಲಿಲ್ಲ ಅನ್ನಿಸುತ್ತದೆ. ನನ್ನಂತಹವರಿಗೆ ಈ ರೀತಿ ಹಿಂಸೆ ಮಾಡುವ ಅವರುಗಳು ಬಡವರಿಗೆ ಇನ್ನೆಷ್ಟು ಕಿರುಕುಳ ನೀಡಿರಬಹುದು’ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ಒಕ್ಕಲಿಗರಿಗೆ ಪೂರ್ಣ ಅಧಿಕಾರವಿಲ್ಲ

ರಾಜ್ಯದಲ್ಲಿ ಒಕ್ಕಲಿಗ ಸಮುದಾಯಕ್ಕೆ ಒಂದು ರೀತಿಯ ಶಾಪ ಅಂಟಿದೆ. ಕೆಂಗಲ್ ಹನುಮಂತಯ್ಯ, ಎಚ್.ಡಿ.ದೇವೇಗೌಡ ಆದಿಯಾಗಿ ಈ ಸಮುದಾಯದ ಯಾವ ನಾಯಕರೂ ಐದು ವರ್ಷ ಆಡಳಿತ ಪೂರ್ಣಗೊಳಿಸಿಲ್ಲ ಎಂದು ಎಚ್‌ಡಿಕೆ ಬೇಸರ ವ್ಯಕ್ತಪಡಿಸಿದರು. ವಿಧಾನಸೌಧ ಕಟ್ಟಿದವರಿಗೆ ಐದು ವರ್ಷ ಆಡಳಿತ ಮಾಡಲು ಬಿಡಲಿಲ್ಲ. ಹೀಗಿರುವಾಗ ನನಗೆ ಬಿಡುತ್ತಾರಾ? ಈ ರೀತಿ ರಾಜಕೀಯ ಕಿರುಕುಳವನ್ನು ಸಾಕಷ್ಟು ಎದುರಿಸಿದ್ದೇನೆ. ಆದರೆ ಮುಂದಿನ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದು, ಜನರು ಐದು ವರ್ಷ ಅಧಿಕಾರದ ಅವಕಾಶ ನೀಡಬೇಕು ಎಂದು ಕೋರಿದರು.

ಪಟಾಕಿ ಸಿಡಿಸಿ ಸಂಭ್ರಮ: ಗ್ರಾಮಸ್ಥರಿಂದ ಮನವಿ

ಗ್ರಾಮಕ್ಕೆ ಕುಟುಂಬದ ಸಮೇತರಾಗಿ ಬಂದ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಸ್ಥಳೀಯರು ಪಟಾಕಿ ಸಿಡಿಸಿ ಅದ್ದೂರಿಯಾಗಿ ಬರಮಾಡಿಕೊಂಡರು. ಹೂ ಎರಚಿ ಸಂಭ್ರಮಿಸಿದರು. ಅಲ್ಲಿಂದ ಕಲಾ ತಂಡಗಳ ಜೊತೆಯಲ್ಲಿ ಮೆರವಣಿಗೆಯಲ್ಲಿ ಅವರನ್ನು ದೇವಸ್ಥಾನಕ್ಕೆ ಕೊಂಡೊಯ್ಯಲಾಯಿತು. ಗ್ರಾಮದ ಜನರಿಗೆ ಹೋಳಿಗೆ ಊಟದ ವ್ಯವಸ್ಥೆಯೂ ಇತ್ತು. ಕಾರ್ಯಕ್ರಮದ ವೇದಿಕೆಯಲ್ಲಿಯೇ ಗ್ರಾಮಸ್ಥರು ಕುಮಾರಸ್ವಾಮಿಗೆ ಹತ್ತಾರು ಮನವಿ ಸಲ್ಲಿಸಿದರು. ಎಲ್ಲದಕ್ಕೂ ಸಮಾಧಾನವಾಗಿ ಉತ್ತರಿಸಿದ ಎಚ್‌ಡಿಕೆ, ಎಲ್ಲದಕ್ಕೂ ಸ್ಪಂದಿಸುವ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT