ಬುಧವಾರ, ಸೆಪ್ಟೆಂಬರ್ 22, 2021
22 °C
ಬರಡನಹಳ್ಳಿಯಲ್ಲಿ 5 ವರ್ಷದ ಹಿಂದೆ ನಿರ್ಮಾಣ; ತುರ್ತುಸೇವೆ ನೀಡಲು ಗ್ರಾಮಸ್ಥರ ಆಗ್ರಹ

ಉದ್ಘಾಟನೆಯಾಗದ ಆರೋಗ್ಯ ಕೇಂದ್ರ

ಬರಡನಹಳ್ಳಿ ಕೃಷ್ಣಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಕನಕಪುರ: ಗ್ರಾಮೀಣ ಪ್ರದೇಶದಲ್ಲಿನ ಜನತೆಗೆ ಸ್ಥಳೀಯವಾಗಿ ತುರ್ತು ಸೇವೆ ಸಿಗಬೇಕೆಂಬ ಮಹತ್ವಕಾಂಕ್ಷೆಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಬರಡನಹಳ್ಳಿ ಗ್ರಾಮದಲ್ಲಿ ನಿರ್ಮಾಣವಾಗಿರುವ ಎಎನ್‌ಎಂ ಉಪಕೇಂದ್ರ 5 ‌ವ‍ರ್ಷ ಕಳೆದರೂ ಬಳಕೆಯಾಗುತ್ತಿಲ್ಲ.

ತಾಲ್ಲೂಕಿನ ಕಸಬಾ ಹೋಬಳಿ ಚಾಕನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಬರಡನಹಳ್ಳಿ ಗ್ರಾಮದಲ್ಲಿ ಕರ್ನಾಟಕ ಆರೋಗ್ಯ ಪದ್ಧತಿಗಳ ಅಭಿವೃದ್ಧಿ ಹಾಗೂ ಸುಧಾರಣೆ ಯೋಜನೆಯಡಿ ಈ ಆರೋಗ್ಯ ಉಪ ಕೇಂದ್ರವನ್ನು ನಿರ್ಮಾಣ ಮಾಡಲಾಗಿದೆ. ಸುಮಾರು ₹18 ಲಕ್ಷ ವೆಚ್ಚದಲ್ಲಿ ಆರೋಗ್ಯ ಉಪಕೇಂದ್ರ ಮತ್ತು ಎಎನ್‌ಎಂ ಉಳಿದು ಕೊಳ್ಳಲು ಕ್ವಾರ್ಟಸ್‌ ನಿರ್ಮಾಣವಾಗಿದೆ.

ಬರಡನಹಳ್ಳಿ ಗ್ರಾಮದಲ್ಲಿ ಇದೇ ಜಾಗದಲ್ಲಿ 40 ವರ್ಷಗಳಿಂದ ಎಎನ್‌ಎಂ ಉಪ ಕೇಂದ್ರವಿದ್ದು ಬರಡನಹಳ್ಳಿ, ಬೂದುಗುಪ್ಪೆ, ಆಡನಕುಪ್ಪೆ, ಜವನಮ್ಮನದೊಡ್ಡಿ, ಲಕ್ಷ್ಮೀಪುರ ಗ್ರಾಮದ ಜನತೆ ಇಲ್ಲಿ ತುರ್ತು ಆರೋಗ್ಯ ಸೇವೆ ಪಡೆದುಕೊಳ್ಳುತ್ತಿದ್ದರು. ಕ್ವಾರ್ಟಸ್‌ನಲ್ಲೇ ಎಎನ್‌ಎಂ ಉಳಿದುಕೊಂಡು ಎಲ್ಲರಿಗೂ ಅಗತ್ಯ ಚಿಕಿತ್ಸೆ ಕೊಡುತ್ತಿದ್ದರು.

ನಂತರದ ದಿನಗಳಲ್ಲಿ ಕಟ್ಟಡ ಹಾಳಾಗಿ ಯಾವ ನರ್ಸ್‌ಗಳು ಇಲ್ಲಿಗೆ ಬರುತ್ತಿರಲಿಲ್ಲ. ಬಂದರೂ ಕ್ವಾರ್ಟಸ್‌ನಲ್ಲಿ ಉಳಿಯುತ್ತಿರಲಿಲ್ಲ. ಅಂತಿಮವಾಗಿ 5 ವರ್ಷಗಳ ಹಿಂದೆ ಹಳೆಯ ಕಟ್ಟಡವನ್ನು ಕೆಡವಿ ಹೊಸ ಕಟ್ಟಡವನ್ನು ಕಟ್ಟಲಾಯಿತು. ಆದರೆ ಈವರೆಗೂ ಹೊಸ ಕಟ್ಟಡ ಕಾರ್ಯಾರಂಭ ಮಾಡಿಲ್ಲ. ಹೀಗಾಗಿ, ಕಿಟಿಕಿ ಗಾಜು, ಬಾಗಿಲು, ನಲ್ಲಿ ಹಾಳಾಗಿ, ಕಟ್ಟಡ ಉದ್ಘಾಟನೆಗೂ ಮುನ್ನವೇ ನಾಶವಾಗುತ್ತಿದೆ.

‘ಸಾರ್ವಜನಿಕರ ಉಪಯೋಗಕ್ಕಾಗಿ ನಿರ್ಮಾಣ ಮಾಡಿರುವ ಉಪ ಕೇಂದ್ರವನ್ನು ಆರೋಗ್ಯ ಇಲಾಖೆಯವರು ಬಳಕೆ ಮಾಡದೆ ಖಾಲಿ ಬಿಟ್ಟುರುವುದೇ ಕಟ್ಟಡ ಹಾಳಾಗಲು ಕಾರಣವಾಗಿದೆ. ನಾವು ಸಾಕಷ್ಟು ಬಾರಿ ಆರೋಗ್ಯ ಇಲಾಖೆ ಹಾಗೂ ಚಾಕನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಗಮನಕ್ಕೆ ತಂದಿದ್ದೇವೆ’ ಎನ್ನುತ್ತಾರೆ ಬರಡನಹಳ್ಳಿ ಗ್ರಾಮಸ್ಥರು.

‘ಸಂಬಂಧಪಟ್ಟವರ ಗಮನಕ್ಕೆ ತಂದರೂ ಏನು ಪ್ರಯೋಜನವಾಗಿಲ್ಲ. ನಮ್ಮ ಊರಿಗೆ ಕಾಯಂ ಎಎನ್‌ಎಂ ಬಂದಿಲ್ಲ. ಯಾರದರು ಬಂದು ಉಪ ಕೇಂದ್ರದಲ್ಲಿ ವಾಸವಿದ್ದರೆ ಕೊರೊನಾದಂತ ಪರಿಸ್ಥಿತಿಯಲ್ಲಿ ಅನುಕೂಲವಾಗುತ್ತಿತ್ತು. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಇಲ್ಲಿಯೆ ಚಿಕಿತ್ಸೆ ಪಡೆದುಕೊಳ್ಳಬಹುದಾಗಿತ್ತು’ ಎನ್ನುತ್ತಾರೆ ಸ್ಥಳೀಯರು.

ಕೇಂದ್ರದ ಮಾಹಿತಿಯೇ ಇಲ್ಲ
‘ಬರಡನಹಳ್ಳಿ ಗ್ರಾಮದಲ್ಲಿ ಸುಸಜ್ಜಿತವಾಗಿ ಹೊಸದಾಗಿ ಎಎನ್‌ಎಂ ಆರೋಗ್ಯ ಉಪಕೇಂದ್ರ ನಿರ್ಮಾಣ ಮಾಡಿದ್ದಾರೆ ಎಂಬ ವಿಚಾರವನ್ನೇ ಇಂದು ಕೇಳುತ್ತಿದ್ದೇನೆ. ಸಂಬಂಧಪಟ್ಟವರಿಂದ ನಮಗೆ ಹಸ್ತಾಂತರವಾಗಿದೆಯೇ, ಇಲ್ಲವೇ ಎಂಬ ಮಾಹಿತಿ ಪಡೆದು, ಕಟ್ಟಡವನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ತಾಲ್ಲೂಕಿನಲ್ಲಿ ಸಿಬ್ಬಂದಿ ಕೊರತೆಯಿದ್ದು ಅಲ್ಲಿಗೆ ಯಾರು ರೆಗ್ಯೂಲರ್‌ ಎಎನ್‌ಎಂ ಬಂದಿಲ್ಲ. ಇಲ್ಲಿಗೆ ರೆಗ್ಯೂಲರ್‌ ಎಎನ್‌ಎಂ ಕೊಡುವಂತೆ ಹಿರಿಯ ಅಧಿಕಾರಿಗಳಲ್ಲಿ ಮನವಿ ಮಾಡುತ್ತೇನೆ’ ಎನ್ನುತ್ತಾರೆ ಟಿಎಚ್‌ಒ ಡಾ. ಬಿ.ನಂದಿನಿ.

ಸಣ್ಣಪುಟ್ಟ ರಿಪೇರಿ ಇದೆ
‘ಬರಡನಹಳ್ಳಿ ಆರೋಗ್ಯ ಉಪ ಕೇಂದ್ರಕ್ಕೆ ದೊಂಬರದೊಡ್ಡಿಯ ಎಎನ್‌ಎಂ ಎನ್‌.ಪಿ. ಸುಧಾ ಅವರನ್ನು ಒಒಡಿ ಮೇಲೆ ನಿಯೋಜಿಸಲಾಗಿದೆ. ಅಲ್ಲಿನ ಕಟ್ಟಡ ಹೊಸದಾಗಿ ನಿರ್ಮಾಣ ಮಾಡಿದ್ದರೂ ಅಗತ್ಯ ಮೂಲ ಸೌಕರ್ಯಗಳ ಕೊರತೆಯಿಂದ ಉಳಿದುಕೊಳ್ಳಲು ಆಗುತ್ತಿಲ್ಲ. ಸಣ್ಣಪುಟ್ಟ ರಿಪೇರಿಯಿದ್ದು ಅದನ್ನು ಮಾಡಿಸಿಕೊಡುವಂತೆ ತಿಳಿಸಿದ್ದೇವೆ ಮತ್ತು ಇಲಾಖೆಗೂ ದುರಸ್ತಿ ಬಗ್ಗೆ ಮಾಹಿತಿ ನೀಡಿದ್ದೇವೆ. ಕೊರೊನಾ ಕಾರಣದಿಂದ ಯಾವುದೇ ಕೆಲಸಗಳು ಆಗಿಲ್ಲ’ ಎಂದು ಚಾಕನಹಳ್ಳಿ ಪಿಎಚ್‌ಸಿ ಎಎಂಒ ಡಾ. ಎಂ.ಎಸ್‌.ಛಾಯ ಹೇಳಿದರು.

ಗ್ರಾ.ಪಂಗೆ ಮನವಿ
‘ಎರಡು ಕಡೆ ಕೆಲಸ ಮಾಡುತ್ತಿದ್ದು, ಸದ್ಯಕ್ಕೆ ಜವನಮ್ಮನದೊಡ್ಡಿ ಗ್ರಾಮದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಮಾಡುತ್ತಿದ್ದೇನೆ. ಬರಡನಹಳ್ಳಿಯಲ್ಲಿ ಕ್ವಾರ್ಟಸ್‌ ರಿಪೇರಿ ಮಾಡಿ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಟ್ಟರೆ ಅದೇ ಕ್ವಾರ್ಟಸ್‌ನಲ್ಲಿ ಉಳಿಯುತ್ತೇನೆ. ನಮಗೂ ಬಾಡಿಗೆ ಉಳಿಯುತ್ತದೆ. ರಿಪೇರಿ ಮಾಡಿಕೊಡುವಂತೆ ಗ್ರಾಮಸ್ಥರು ಮತ್ತು ಪಂಚಾಯಿತಿಗೆ ಮನವಿ ಕೊಟ್ಟಿದ್ದೇನೆ’ ಎಂದು ಎಎನ್‌ಎಂ ಎನ್‌.ಪಿ.ಸುಧಾ ನುಡಿದರು.

‘ಗ್ರಾಮದಲ್ಲಿ ಹಳೆಯದಾಗಿದ್ದ ಆರೋಗ್ಯ ಉಪ ಕೇಂದ್ರವನ್ನು ಕೆಡವಿ ಹೊಸದಾಗಿ ನಿರ್ಮಾಣ ಮಾಡಿ ಆರೋಗ್ಯ ಇಲಾಖೆಗೆ 5 ವರ್ಷದ ಹಿಂದೆ ಹಸ್ತಾಂತರವಾಗಿದೆ. ಪ್ರಾರಂಭದಲ್ಲೇ ಉದ್ಘಾಟನೆ ಮಾಡಿ ಬಳಕೆ ಮಾಡಿದ್ದರೆ ಬಿಲ್ಡಿಂಗ್‌ ಹಾಳಾಗುತ್ತಿರಲಿಲ್ಲ. ಸಣ್ಣಪುಟ್ಟ ಮೂಲ ಸೌಕರ್ಯ ಮಾಡಿಕೊಂಡರೆ ಈಗಲೂ ಕಟ್ಟಡವನ್ನು ಬಳಕೆ ಮಾಡಬಹುದು’ ಎಂದು ಬರಡನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ನೇತ್ರಾವತಿ ಚಂದ್ರಶೇಖರ್‌ ಮಾಹಿತಿ ನೀಡಿದರು.

ತುರ್ತುಸೇವೆಗೆ ಸಿಗಲಿ
‘ಬರಡನಹಳ್ಳಿ ಗ್ರಾಮದಲ್ಲಿ 1,200ಕ್ಕೂ ಹೆಚ್ಚಿನ ಜನಸಂಖ್ಯೆಯಿದ್ದು ಇಲ್ಲಿ ಎಲ್ಲಾ ವ್ಯವಸ್ಥೆಯಿರುವ ಆರೋಗ್ಯ ಉಪ ಕೇಂದ್ರಕ್ಕೆ ಎಎನ್‌ಎಂ ನೇಮಕ ಮಾಡಿದರೆ ಗ್ರಾಮದಲ್ಲಿ ಎಲ್ಲರಿಗೂ ತುರ್ತು ಆರೋಗ್ಯ ಸೇವೆ ಸಿಗಲಿದೆ. ಮಕ್ಕಳು ಮತ್ತು ತಾಯಂದಿರ ಆರೈಕೆ ಹಾಗೂ ಲಸಿಕೆ ಕೊಡಲು ಸಹಕಾರಿಯಾಗುತ್ತದೆ. ಆರೋಗ್ಯ ಇಲಾಖೆ ಕಾರ್ಯಕ್ರಮ ನಡೆಸಲು ಉಪಯುಕ್ತವಾಗಲಿದೆ. ಆರೋಗ್ಯ ಇಲಾಖೆ ಕಟ್ಟಡವನ್ನು ಶೀಘ್ರವಾಗಿ ಸರಿಮಾಡಿಸಿ ಎಎನ್‌ಒ ಅವರನ್ನು ನೇಮಕ ಮಾಡಿ ಬರಡನಹಳ್ಳಿ ಜನತೆಗೆ ಆರೋಗ್ಯ ಸೇವೆ ದೊರಕುವಂತೆ ಮಾಡಬೇಕು’ ಎಂದು ಗ್ರಾಮದ ಯುವ ಮುಖಂಡ ಹರೀಶ್‌ ಆಗ್ರಹಿಸಿದರು.

ರಿಪೇರಿಗೆ ಸಿದ್ಧ
‘ಗ್ರಾಮದ ಜನರಿಗಾಗಿಯೇ ಸರ್ಕಾರ ಆರೋಗ್ಯ ಉಪ ಕೇಂದ್ರವನ್ನು ಮಾಡಿದೆ. ಆದರೆ ಈವರೆಗೂ ಕಟ್ಟಡವನ್ನು ಬಳಸದಿರುವುದು ಕಟ್ಟಡ ಹಾಳಾಗಲು ಕಾರಣವಾಗಿದ್ದು ಸಣ್ಣಪುಟ್ಟ ರಿಪೇರಿಯನ್ನು ಪಂಚಾಯಿತಿಯಿಂದ ಮಾಡಿಕೊಡಲು ಸಿದ್ಧರಿದ್ದೇವೆ. ಸರ್ಕಾರ ಕೂಡಲೆ ಇಲ್ಲಿಗೆ ಒಬ್ಬರು ಎಎನ್‌ಎಂ ನಿಯೋಜನೆ ಮಾಡಬೇಕು. ಈ ವಿಚಾರವಾಗಿ ಸಂಸದ ಡಿ.ಕೆ.ಸುರೇಶ್‌ ಅವರ ಗಮನಕ್ಕೆ ತಂದಿದ್ದೇವೆ. ಆರೋಗ್ಯ ಇಲಾಖೆಗೂ ಮನವಿ ಮಾಡಿದ್ದೇವೆ’ ಎಂದು ಬರಡನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಸುಮಂತ್‌ಗೌಡ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು