ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ನಾಯಕರ ಮಕ್ಕಳು ಹೋರಾಟ ಮಾಡುತ್ತಿದ್ದಾರ?–ಕುಮಾರಸ್ವಾಮಿ

Last Updated 10 ಫೆಬ್ರುವರಿ 2022, 7:43 IST
ಅಕ್ಷರ ಗಾತ್ರ

ರಾಮನಗರ: ‘ಬಿಜೆಪಿ ನಾಯಕರ ಮಕ್ಕಳ್ಯಾರೂ ಕಳೆದ 15 ದಿನದಿಂದ ಕೇಸರಿ ಶಾಲು ಹಾಕಿಕೊಂಡು ಹೋರಾಟ ಮಾಡುತ್ತಿಲ್ಲ. ಅಮಾಯಕ ಮಕ್ಕಳಿಗೆ ಕೇಸರಿ ಶಾಲು ಹಾಕಿಸಿಕೊಂಡು ಗದ್ದಲ ಎಬ್ಬಿಸುವುದು ಸರಿಯಲ್ಲ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು.

ಚನ್ನಪಟ್ಟಣದಲ್ಲಿ ಗುರುವಾರ ಪತ್ರಕರ್ತರಿಗೆ ಅವರು ಪ್ರತಿಕ್ರಿಯೆ ನೀಡಿದರು. ಉಡುಪಿಯ ಒಂದು ಶಾಲೆಯಲ್ಲಿ ಆರಂಭವಾದ ಈ ಪ್ರಕರಣ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ದೊಡ್ಡ ದೊಡ್ಡ ಖಾಸಗಿ ಶಾಲೆಗಳಲ್ಲಿ ಈ ಸಂಘರ್ಷ ನಡೆದಿಲ್ಲ. ಸರ್ಕಾರಿ ಶಾಲೆಗಳಲ್ಲೇ ಈ ವಿವಾದ ಬುಗಿಲೆದ್ದಿದೆ. ಬಿಜೆಪಿ–ಕಾಂಗ್ರೆಸ್ ನಾಯಕರ ಮಕ್ಕಳ್ಯಾರೂ ಈ ಶಾಲೆಗಳಲ್ಲಿ ಓದುತ್ತಿಲ್ಲ. ಅವರೆಲ್ಲ ಕಂಡವರ ಮಕ್ಕಳನ್ನು ಬಾವಿಗೆ ತಳ್ಳಿ ತಮಾಷೆ ನೋಡುತ್ತಿದ್ದಾರೆ. ಸರ್ಕಾರಿ ಶಾಲೆಗೆ ಕಳುಹಿಸಿದ ತಮ್ಮ ಮಕ್ಕಳನ್ನು ಈ ರೀತಿ ದುರುಪಯೋಗಪಡಿಸಿಕೊಳ್ಳುವುದನ್ನು ಪೋಷಕರು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.

ಪಕ್ಷ–ಸಂಘಟನೆಗಳು ತಮ್ಮ ತೆವಲಿಗೆ ಈ ಮಕ್ಕಳನ್ನು ಉಪಯೋಗಪಡಿಸಿಕೊಳ್ಳುತ್ತಿವೆ. ಬೀದಿಗೆ ಇಳಿದು ಪ್ರತಿಭಟನೆ ಮಾಡುತ್ತಿರುವವರ ವಿಡಿಯೊಗಳು ಈಗಾಗಲೇ ದಾಖಲಾಗಿವೆ. ಈಗಾಗಲೇ 10–12 ಮಕ್ಕಳ ಮೇಲೆ ಎಫ್‌ಐಆರ್ ಸಹ ದಾಖಲಾಗಿರುವುದು ಆತಂಕದ ವಿಚಾರ. ಈ ವಿಡಿಯೊಗಳನ್ನು ಇಟ್ಟುಕೊಂಡು ಮುಂದೆ ಇಂತಹ ಸಾವಿರಾರು ಮಕ್ಕಳನ್ನು ಕೋರ್ಟು–ಕಚೇರಿ ಎಂದು ಅಲೆಸಲಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಹೈಕೋರ್ಟ್ ನ್ಯಾಯಪೀಠವು ಆದಷ್ಟು ಶೀಘ್ರ ಪರಿಸ್ಥಿತಿಯನ್ನು ತಿಳಿಗೊಳಿಸಿ, ಈ ವಿವಾದಕ್ಕೆ ನ್ಯಾಯಯುತ ತೀರ್ಮಾನ ನೀಡಬೇಕು ಎಂದು ಮನವಿ ಮಾಡಿದರು.

ಮಹಿಳೆಯರ ಕುರಿತು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಟ್ವೀಟ್‌ಗೆ ಮಾಜಿ ಸಚಿವ ರೇಣುಕಾಚಾರ್ಯ ಲಘುವಾಗಿ ಪ್ರತಿಕ್ರಿಯೆ ನೀಡಿದ ಬಗ್ಗೆ ಮಾತನಾಡಿ ‘ತಮ್ಮ ತಪ್ಪಿಗೆ ಈಗಾಗಲೇ ಅವರು ಕ್ಷಮೆ ಕೇಳಿದ್ದಾರೆ. ಯಾರೇ ಆದರೂ ಮಹಿಳೆಯರ ಬಗ್ಗೆ ಲಘುವಾಗಿ ಮಾತನಾಡಬಾರದು’ ಎಂದರು.

‘ಮಂಡ್ಯದಲ್ಲಿ ಒಬ್ಬಳೇ ಹೋರಾಟ ಮಾಡಿದ ವಿದ್ಯಾರ್ಥಿನಿಗೆ ಕೆಲವು ಸಂಘಟನೆಗಳು ಬಹುಮಾನ ಘೋಷಣೆ ಮಾಡಿವೆ. ಇದೂ ಕೂಡ ಒಂದರ್ಥದಲ್ಲಿ ಪ್ರಚೋದನಾಕಾರಿಯೇ. ಪೋಷಕರು ತಮ್ಮ ಮಕ್ಕಳ ಬಗ್ಗೆ ಎಚ್ಚರ ವಹಿಸಬೇಕು’ ಎಂದರು.

ಶಿವಮೊಗ್ಗದಲ್ಲಿ ಸಚಿವರ ಪುತ್ರನೇ ಕೇಸರಿ ಶಾಲು ಹಂಚಿದ್ದಾನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿ ‘ಅವರಿಗೆ ಮಾಹಿತಿ ಇದ್ದರೆ ಅದನ್ನು ಸಾರ್ವಜನಿಕರ ಮುಂದೆ ಇಡಲಿ’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT