ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಪುರ | ಗ್ರಾಮೀಣ ಭಾಗದಲ್ಲೊಂದು ಹೈಟೆಕ್ ಸರ್ಕಾರಿ ಶಾಲೆ

ಏಳಗಳ್ಳಿ: ಖಾಸಗಿ ಶಾಲೆಯನ್ನು ಮೀರಿಸುವಂತಿದೆ ಪಂಚಾಯಿತಿ ಪಬ್ಲಿಕ್‌ ಶಾಲೆ
ಬರಡನಹಳ್ಳಿ ಕೃಷ್ಣಮೂರ್ತಿ
Published 6 ಮೇ 2024, 4:50 IST
Last Updated 6 ಮೇ 2024, 4:50 IST
ಅಕ್ಷರ ಗಾತ್ರ

ಕನಕಪುರ: ಅತ್ಯಾಧುನಿಕ ವ್ಯವಸ್ಥೆಯ ಶಾಲಾ-ಕೊಠಡಿಗಳು, ಕಂಪ್ಯೂಟರ್ ಮತ್ತು ವಿಜ್ಞಾನ ಪ್ರಯೋಗಾಲಯ, ಆಕರ್ಷಕ ಸಮವಸ್ತ್ರಗಳು, ಸುಸಜ್ಜಿತವಾದ ಶಾಲಾ ಆವರಣ, ಮೈದಾನ, ಗುಣಮಟ್ಟದ ಶಿಕ್ಷಣ, ಸ್ಪೋಕನ್ ಇಂಗ್ಲಿಷ್ ತರಬೇತಿ, ಅತ್ಯುತ್ತಮ ಬೋಧನಾ ತಂಡ ಹಾಗೂ ವಿದ್ಯಾರ್ಥಿಗಳನ್ನು ಶಾಲೆಗೆ ಕರೆದುಕೊಂಡು ಬಂದು ಕಳಿಸಲು ಬಸ್ ವ್ಯವಸ್ಥೆ...

– ಇದ್ಯಾವುದೊ ಹೈಟೆಕ್ ಶಾಲೆಯಲ್ಲಿ ಸಿಗುವ ಸೌಲಭ್ಯಗಳಲ್ಲ. ಬದಲಿಗೆ, ಹೈಟೆಕ್ ಆಗಿರುವ ತಾಲ್ಲೂಕಿನ ಏಳಗಳ್ಳಿಯ ಸರ್ಕಾರಿ ಗ್ರಾಮ ಪಂಚಾಯಿತಿ ಪಬ್ಲಿಕ್ ಶಾಲೆಯಲ್ಲಿರುವ ಸೌಕರ್ಯಗಳು.

ತಿಂಗಳುಗಳ ಹಿಂದೆ ಇತರ ಶಾಲೆಗಳಂತಿದ್ದ ಏಳಗಳ್ಳಿ ಸರ್ಕಾರಿ ಶಾಲೆಗೆ ಸ್ಥಳೀಯ ಶಾಸಕರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಂಸದ ಡಿ.ಕೆ. ಸುರೇಶ್ ಅವರು ನೀಡಿರುವ ಹೊಸ ಕಾಯಕಲ್ಪವಿದು. ಖಾಸಗಿ ಶಾಲೆಗಳನ್ನು ಮೀರಿಸುವಂತಿರುವ ಈ ಹೈಟೆಕ್ ಶಾಲೆಯು, ಗ್ರಾಮೀಣ ವಿದ್ಯಾರ್ಥಿಗಳ ಪಾಲಿಗೆ ಸಂಜೀವಿನಿಯಾಗಿದೆ.

ಸರಿಯಾದ ಸೌಲಭ್ಯಗಳಿಲ್ಲ ಎಂದು ಸರ್ಕಾರಿ ಶಾಲೆಗಳತ್ತ ಬೆನ್ನು ತಿರುಗಿಸಿದ್ದ ಪೋಷಕರು, ಇದೀಗ ಈ ಶಾಲೆಗೆ ತಮ್ಮ ಮಕ್ಕಳನ್ನು ದಾಖಲಿಸು ಮುಗಿ ಬೀಳುತ್ತಿದ್ದಾರೆ. ಸರ್ಕಾರಿ ಶಾಲೆಗಳಿಗೆ ಸೌಲಭ್ಯಗಳನ್ನು ಕಲ್ಪಿಸಿ ಸಬಲೀಕರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡರೆ ಪರಿಣಾಮ ಹೇಗಿರಬಹುದು ಎಂಬುದಕ್ಕೆ ಈ ಶಾಲೆ ನಿದರ್ಶನವಾಗಿದೆ.

4 ಶಾಲೆ ವಿಲೀನ: ‘ರಾಜ್ಯದಾದ್ಯಂತ ಸುಸಜ್ಜಿತ ಪಬ್ಲಿಕ್ ಶಾಲೆಗಳನ್ನು ನಿರ್ಮಿಸುವ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯ ಭಾಗವಾಗಿ ಏಳಗಳ್ಳಿ ಶಾಲೆ ತಲೆ ಎತ್ತಿದೆ. ಗ್ರಾಮದ ಜೊತೆಗೆ ಸುತ್ತಮುತ್ತಲ ಐದು ಹಳ್ಳಿಗಳ ಸರ್ಕಾರಿ ಶಾಲೆಗಳನ್ನು ಈ ಹೈಟೆಕ್ ಶಾಲೆಯಲ್ಲಿ ವಿಲೀನಗೊಳಿಸಲಾಗಿದೆ.  2024–25ನೇ  ಶೈಕ್ಷಣಿಕ ವರ್ಷದಲ್ಲಿ ಶಾಲೆಗೆ 175 ವಿದ್ಯಾರ್ಥಿಗಳು ದಾಖಲಾಗಿದ್ದಾರೆ’ ಎಂದು ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

‘ಶಾಲೆ ಆವರಣದಲ್ಲಿ ಸ್ಮಾರ್ಟ್‌ ಅಂಗನವಾಡಿ ಸಹ ತೆರೆಯಲಾಗಿದೆ. 1ರಿಂದ 8ನೇ ತರಗತಿವರೆಗೆ ಹೈಯರ್ ಪ್ರೈಮರಿ ಶಾಲೆ ಇದಾಗಿದ್ದು, 1ನೇ ತರಗತಿಯಿಂದಲೇ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಇಲ್ಲಿ ಲಭ್ಯವಿದೆ. ಶಾಲೆಯಲ್ಲಿ 12 ಕೊಠಡಿಗಳಿವೆ. ಏಳಗಳ್ಳಿ, ಬೆಂಡುಗೋಡು, ನಲ್ಲಳ್ಳಿ ದೊಡ್ಡಿ, ಚುಂಚಿ ಕಾಲೊನಿ ಹಾಗೂ ಹಾರೋಶಿವನಹಳ್ಳಿ ಗ್ರಾಮಗಳಿಂದ ವಿದ್ಯಾರ್ಥಿಗಳು ಈ ಶಾಲೆಗೆ ಬರುತ್ತಾರೆ. ಅದಕ್ಕಾಗಿ ಪಂಚಾಯಿತಿ ವತಿಯಿಂದಲೇ ಉಚಿತವಾಗಿ ಬಸ್ಸಿನ ವ್ಯವಸ್ಥೆ ಮಾಡಲಾಗಿದೆ’ ಎಂದು ಹೇಳಿದರು.

11 ಶಿಕ್ಷಕರ ತಂಡ: ಶಾಲೆಯಲ್ಲಿ ಕಂಪ್ಯೂಟರ್ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು ಸೇರಿದಂತೆ 11 ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಈ ಪೈಕಿ ಮೂವರು ಕಾಯಂ ಶಿಕ್ಷಕರಿದ್ದರೆ, ಉಳಿದ 8 ಮಂದಿ ಅತಿಥಿ ಶಿಕ್ಷಕರಾಗಿದ್ದಾರೆ. ಮಕ್ಕಳಿಗೆ ಸ್ಫೋಕನ್ ಇಂಗ್ಲಿಷ್ ತರಬೇತಿ ಇಲ್ಲಿನ ವಿಶೇಷಗಳಲ್ಲೊಂದು.

ಆಯಾ ಶಾಲೆಗಳ ಶಿಕ್ಷಕರು ಮತ್ತು ಅಡುಗೆ ತಯಾರಕರು ತಮ್ಮ ವಿದ್ಯಾರ್ಥಿಗಳನ್ನು ಶಾಲೆ ಶುರುವಾಗುವ ಹೊತ್ತಿಗೆ ಕರೆತಂದು ಮುಕ್ತಾಯದ ಸಮಯಕ್ಕೆ ತಮ್ಮ ಗ್ರಾಮಗಳಿಗೆ ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಬಿಡುತ್ತಾರೆ. ಇದರಿಂದಾಗಿ, ತಂದೆ–ತಾಯಿಗಳಿಗೂ ಶಾಲೆಗೆ ಹೋಗಿ ಬರುವ ತಮ್ಮ ಮಕ್ಕಳ ಸುರಕ್ಷತೆ ಕುರಿತು ಖಾತ್ರಿ ಸಿಕ್ಕಿದೆ.

ಕಾನ್ವೆಂಟ್ ಹಣ ಉಳಿಯಿತು: ‘ಮಕ್ಕಳ ಭವಿಷ್ಯಕ್ಕಾಗಿ ಸಾವಿರಾರು ಶುಲ್ಕವನ್ನು ಕೊಟ್ಟು, ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದೆವು. ಇದೀಗ ನಮ್ಮೂರ ಪಕ್ಕದಲ್ಲೇ ಸುಸಜ್ಜಿತ ಸರ್ಕಾರಿ ಶಾಲೆ ಇರುವುದರಿಂದ ನಮ್ಮ ಮಕ್ಕಳನ್ನು ಅಲ್ಲಿಗೆ ಕಳಿಸುತ್ತಿದ್ದೇವೆ. ಇದರಿಂದ ಹಣವೂ ಉಳಿಯಿತು. ಗುಣಮಟ್ಟದ ಶಿಕ್ಷಣವೂ ಸಿಕ್ಕಿತು’ ಎಂದು ಸ್ಥಳೀಯ ನಿವಾಸಿ ಮಹದೇವ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಏಳಗಳ್ಳಿ ಶಾಲೆ ಹೈಟೆಕ್ ಆಗುವುದಕ್ಕೆ ಮುಂಚೆ ನಮ್ಮೂರಿನವರು ಸುತ್ತಮುತ್ತಲಿನ ದೊಡ್ಡಆಲಳ್ಳಿ, ಕೋಡಿಹಳ್ಳಿ, ಸಾತನೂರು, ಕನಕಪುರ ನಗರಕ್ಕೆ ತಮ್ಮ ಮಕ್ಕಳನ್ನು ಕಳಿಸುತ್ತಿದ್ದರು. ಈಗ ಅವರೆಲ್ಲರೂ ತಮ್ಮ ಮಕ್ಕಳನ್ನು ಬಿಡಿಸಿ ಈ ಶಾಲೆಗೆ ಸೇರಿಸುತ್ತಿದ್ದಾರೆ. ಇದಲ್ಲವೇ ಶಿಕ್ಷಣದ ಕ್ರಾಂತಿ ಎಂದರೆ. ಇಂತಹ ಶಾಲೆಗಳಲ್ಲಿ ರಾಜ್ಯದಾದ್ಯಂತ ತಲೆ ಎತ್ತಿದ್ದರೆ ಮಕ್ಕಳಿಗೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಸಿಗುವುದರಲ್ಲಿ ಅನುಮಾನವೇ ಇಲ್ಲ’ ಎಂದು ಅಭಿಪ್ರಾಯಪಟ್ಟರು.

ಪಂಚಾಯಿತಿಗಳ ಮಟ್ಟದಲ್ಲಿ ಸುಸಜ್ಜಿತ ಪಬ್ಲಿಕ್ ಶಾಲೆಗಳನ್ನು ತೆರೆದು ಅವರಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಈಗಾಗಲೇ ಕನಕಪುರ ತಾಲ್ಲೂಕಿಗೆ ಐದು ಶಾಲೆಗಳು ಮಂಜೂರಾಗಿವೆ. ತಲಾ ₹10 ಕೋಟಿ ವೆಚ್ಚದಲ್ಲಿ ಶಾಲೆಗಳು ನಿರ್ಮಾಣವಾಗಲಿವೆ.

ಶಾಲೆ ಕುರಿತು ಪ್ರತಿಕ್ರಿಯೆ ಪಡೆಯಲು ಸಂಸದ ಡಿ.ಕೆ. ಸುರೇಶ್ ಅವರಿಗೆ ಕರೆ ಮಾಡಿದಾಗ ಸ್ವೀಕರಿಸಲಿಲ್ಲ. ಪ್ರತಿಕ್ರಿಯೆಗಾಗಿ ಡಿಡಿಪಿಐ, ಬಿಇಒ ಅವರಿಗೆ ಕರೆ ಮಾಡಿದಾಗಲೂ ಪ್ರತಿಕ್ರಿಯಿಸಲಿಲ್ಲ.

ಹುಲ್ಲುಹಾಸಿನ ಶಾಲಾವರಣ
ಹುಲ್ಲುಹಾಸಿನ ಶಾಲಾವರಣ
ಶಾಲೆಯ ಗೋಡೆಗಳ ಮೇಲೆ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಆಕರ್ಷಕ ಚಿತ್ರಗಳು
ಶಾಲೆಯ ಗೋಡೆಗಳ ಮೇಲೆ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಆಕರ್ಷಕ ಚಿತ್ರಗಳು
ಶಾಲೆಯಲ್ಲಿರುವ ಕಂಪ್ಯೂಟರ್‌ ಕೊಠಡಿ
ಶಾಲೆಯಲ್ಲಿರುವ ಕಂಪ್ಯೂಟರ್‌ ಕೊಠಡಿ
ಶಾಲೆಯ ಮಕ್ಕಳು ಕುಳಿತಕೊಳ್ಳಲು ತರಿಸಿರುವ ಹೈಟೆಕ್‌ ಡೆಸ್ಕ್‌ಗಳು
ಶಾಲೆಯ ಮಕ್ಕಳು ಕುಳಿತಕೊಳ್ಳಲು ತರಿಸಿರುವ ಹೈಟೆಕ್‌ ಡೆಸ್ಕ್‌ಗಳು
ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಉಪಾಹಾರ ಮತ್ತು ಮಧ್ಯಾಹ್ನದ ಊಟಕ್ಕಾಗಿ ನಿರ್ಮಿಸಿರುವ ದಾಸೋಹ ಭವನ
ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಉಪಾಹಾರ ಮತ್ತು ಮಧ್ಯಾಹ್ನದ ಊಟಕ್ಕಾಗಿ ನಿರ್ಮಿಸಿರುವ ದಾಸೋಹ ಭವನ
ಶಾಲೆಯಲ್ಲಿ ಹೊಸದಾಗಿ ನಿರ್ಮಿಸಿರುವ ಹೊಸ ಕೊಠಡಿ
ಶಾಲೆಯಲ್ಲಿ ಹೊಸದಾಗಿ ನಿರ್ಮಿಸಿರುವ ಹೊಸ ಕೊಠಡಿ
ದೀಪು ಮುಖ್ಯ ಶಿಕ್ಷಕಿ ಪಂಚಾಯಿತಿ ಪಬ್ಲಿಕ್‌ ಶಾಲೆ ಏಳಗಳ್ಳಿ
ದೀಪು ಮುಖ್ಯ ಶಿಕ್ಷಕಿ ಪಂಚಾಯಿತಿ ಪಬ್ಲಿಕ್‌ ಶಾಲೆ ಏಳಗಳ್ಳಿ
ಚೇತನ್‌ ಹಿರಿಯ ವಿದ್ಯಾರ್ಥಿ ಅತಿಥಿ ಶಿಕ್ಷಕ ಏಳಗಳ್ಳಿ
ಚೇತನ್‌ ಹಿರಿಯ ವಿದ್ಯಾರ್ಥಿ ಅತಿಥಿ ಶಿಕ್ಷಕ ಏಳಗಳ್ಳಿ
ಮಹದೇವ್‌ ಸ್ಥಳೀಯ ನಿವಾಸಿ
ಮಹದೇವ್‌ ಸ್ಥಳೀಯ ನಿವಾಸಿ

ಶಾಲೆಯಲ್ಲಿರುವ ಸವಲತ್ತುಗಳು – ವಿದ್ಯಾರ್ಥಿಗಳಿಗೆ 3 ಜೊತೆ ಸಮವಸ್ತ್ರ – ಒಂದು ಜೊತೆ ಟ್ರ್ಯಾಕ್ ಸೂಟ್ – ಒಂದು ಜೊತೆ ಬ್ಲೇಝರ್ ಸಮವಸ್ತ್ರ – ಸುಸಜ್ಜಿತ ಕಂಪ್ಯೂಟರ್ ಮತ್ತು ವಿಜ್ಞಾನ ಪ್ರಯೋಗಾಲಯ – ಹೈಟೆಕ್ ಶೌಚಾಲಯ – ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಬಿಸಿಯೂಟ – ಸುಸಜ್ಜಿತ ಆಟದ ಮೈದಾನ – ಹೈಟೆಕ್ ಡೆಸ್ಕ್ ವ್ಯವಸ್ಥೆ – ವಿದ್ಯಾರ್ಥಿಗಳನ್ನು ಗ್ರಾಮಗಳಿಂದ ಕರೆತರಲು ಬಸ್ ವ್ಯವಸ್ಥೆ – ಶಾಲೆಯ ಸುತ್ತಲು ಕಾಂಪೌಂಡ್ – ಸುಸಜ್ಜಿತ ಗ್ರಂಥಾಲಯ

ನಾವು ಓದುವಾಗ ಸರ್ಕಾರಿ ಶಾಲೆಗಳಲ್ಲಿ ಯಾವುದೇ ಸವಲತ್ತುಗಳಿರಲಿಲ್ಲ. ಈಗಿನ ಮಕ್ಕಳಿಗೆ ಇಷ್ಟೊಂದು ಅತ್ಯಾಧುನಿಕ ಸೌಲಭ್ಯ ಸಿಗುತ್ತಿರುವುದು ನಿಜಕ್ಕೂ ಮಕ್ಕಳ ಸೌಭಾಗ್ಯ

– ಚೇತನ್ ಶಾಲೆಯ ಹಿರಿಯ ವಿದ್ಯಾರ್ಥಿ ಹಾಗೂ ಅತಿಥಿ ಶಿಕ್ಷಕ

ಶಾಲೆಯನ್ನು ಮೇಲ್ದರ್ಜೆಗೇರಿಸುವ ಮೊದಲು ನಮ್ಮ ಮಕ್ಕಳನ್ನು ಕಾನ್ವೆಂಟ್‌ಗೆ ಕಳಿಸುತ್ತಿದ್ದೆವು. ಈಗ ಇಲ್ಲಿ ಬಿಡಿಸಿ ಇಲ್ಲಿಗೆ ಸೇರಿಸಿದ್ದೇವೆ. ಇಂತಹದ್ದೊಂದು ಮಾದರಿ ಶಾಲೆ ನಮ್ಮೂರಲ್ಲಿರುವುದು ಹೆಮ್ಮೆ ಎನಿಸುತ್ತದೆ

– ಮಹದೇವ್ ಸ್ಥಳೀಯ ನಿವಾಸಿ

‘ಗುಣಮಟ್ಟದ ಶಿಕ್ಷಣವೇ ಆದ್ಯತೆ’ ‘ಸರ್ಕಾರಿ ಶಾಲೆ ಮಕ್ಕಳಿಗೆ ಅತ್ಯುತ್ತಮ ಕಲಿಕಾ ಸೌಕರ್ಯಗಳು ವಾತಾವರಣದೊಂದಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಉಪ ಮುಖ್ಯಮಂತ್ರಿಗಳು ಮತ್ತು ಸಂಸದರು ಈ ಶಾಲೆಗೆ ಹೊಸ ಸ್ಪರ್ಶ ನೀಡಿದ್ದಾರೆ. ಇಲ್ಲಿ ಮಕ್ಕಳಿಗೆ ಉಚಿತವಾಗಿ ಕಂಪ್ಯೂಟರ್ ಶಿಕ್ಷಣದ ಜೊತೆಗೆ ಸ್ಪೋಕನ್ ಇಂಗ್ಲಿಷ್ ತರಬೇತಿ ನೀಡಲಾಗುತ್ತದೆ. ಈ ಶಾಲೆಯಲ್ಲಿ ಐದು ಶಾಲೆಗಳನ್ನು ವಿಲೀನಗೊಳಿಸಿರುವುದರಿಂದ ಶಿಕ್ಷಕರ ಕೊರತೆಯೂ ನಿವಾರಣೆಯಾಗಿದೆ. ಮಕ್ಕಳು ಒಂದು ರೂಪಾಯಿ ಖರ್ಚಿಲ್ಲದೆ ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ. ಶಾಲೆಯಲ್ಲಿ 8ಅತಿಥಿ ಶಿಕ್ಷಕರಿದ್ದು ನಮ್ಮ ಶಾಲೆ ನಮ್ಮ ಮಕ್ಕಳು ಎಂಬ ಅಭಿಮಾನದಿಂದ ಕೆಲಸ ನಿರ್ವಹಿಸುತ್ತಿದ್ದಾರೆ’ ಎಂದು ಎಳಗಳ್ಳಿ ಗ್ರಾಮ ಪಂಚಾಯಿತಿ ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕಿ ದೀಪು ಹೇಳಿದರು. ‘ಶಿಕ್ಷಣ ಕ್ರಾಂತಿಗೆ ನಾಂದಿ’ ‘ನಮ್ಮೂರ ಸರ್ಕಾರಿ ಶಾಲೆಗೆ ಹೈಟೆಕ್ ಸ್ಪರ್ಶ ನೀಡಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಂಸದ ಡಿ.ಕೆ. ಸುರೇಶ್ ಅವರು ಶಿಕ್ಷಣ ಕ್ರಾಂತಿಗೆ ನಾಂದಿ ಹಾಡಿದ್ದಾರೆ. ಬಡವರ ಮಕ್ಕಳು ಸಹ ಐಶಾರಾಮಿ ಶಾಲೆಗಳಲ್ಲಿ ಓದುವಂತಹ ವಾತಾವರಣವಿರುವ ಸೌಕರ್ಯಗಳನ್ನು ಒದಗಿಸಿದ್ದಾರೆ. ಇದರಿಂದ ನಮ್ಮ ಊರಷ್ಟೇ ಅಲ್ಲದೆ ಅಕ್ಕಪಕ್ಕದ ಗ್ರಾಮಗಳ ಮಕ್ಕಳಿಗೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಸಿಗಲಿದೆ. ಶಾಲೆಯ ಹಿರಿಯ ವಿದ್ಯಾರ್ಥಿಗಳಿಂದ ಮಕ್ಕಳಿಗೆ ಸಮವಸ್ತ್ರ ವಿತರಣೆ ಶ್ರೀ ಸತ್ಯಸಾಯಿ ಭಕ್ತ ವತ್ಸಲಂ ಟ್ರಸ್ಟ್‌ನಿಂದ ಬೆಳಗಿನ ಉಪಾಹಾರ ಪಂಚಾಯಿತಿ ವತಿಯಿಂದ ಬಸ್ಸಿನ ವ್ಯವಸ್ಥೆ ಹಾಗೂ ಜ್ಞಾನ ವೃದ್ಧಿಗೆ ಸುಸಜ್ಜಿತ ಗ್ರಂಥಾಲಯ ಸಹ ಶಾಲೆಯಲ್ಲಿದೆ. ಒಟ್ಟಿನಲ್ಲಿ ನಮ್ಮೂರ ಶಾಲೆಯು ನಗರದ ಯಾವ ಖಾಸಗಿ ಶಾಲೆಗೂ ಕಮ್ಮಿ ಇಲ್ಲದಂತಿದೆ’ ಎಂದು ಗ್ರಾಮದ ಮುಖಂಡ ಎಚ್‌.ಕೆ. ರವಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT